ಹಾಸನ: ಪ್ರತಿ ವರ್ಷ ಹೆಚ್ಚಿನ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆ ಬೆಳೆಯಲಾಗುತ್ತಿದ್ದು, ಬೆಳೆ ಪರಿವರ್ತನೆ ಕೈಗೊಳ್ಳದೆ ಏಕ ಬೆಳೆ ಪದ್ಧತಿ ಅನುಸರಿಸುತ್ತಿರುವ ಕಾರಣ, ಮುಸುಕಿನ ಜೋಳ ಬೆಳೆಯಲ್ಲಿ ರೋಗ/ಕೀಟಬಾಧೆ ಉಲ್ಬಣಗೊಳ್ಳುತ್ತಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ರೈತರು ಇತರೆ ಬೆಳೆಗಳು ಬೆಳೆಯುವ ಜಾಗದಲ್ಲೆ ಮುಸುಕಿನ ಜೋಳ ಬೆಳೆಯನ್ನು ಕೈಗೊಳ್ಳುತ್ತಿರುವುದರಿಂದ ಕಳೆದ ನಾಲ್ಕೈದು ವರ್ಷದಲ್ಲಿ ಸೈನಿಕ ಹುಳುವಿನ ಬಾಧೆ ಜೊತೆಗೆ ಕೇದಿಗೆ ರೋಗ ಸಹ ಹೆಚ್ಚಾಗಿ ಕಂಡುಬಂದಿದ್ದು, ರೈತರು ಈಗಾಗಲೇ ಹತೋಟಿ ಕ್ರಮಗಳನ್ನು ಕೈಗೊಂಡಿದ್ದರು ಸಹ ಸದರಿ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ/ಕೀಟಬಾಧೆ ಕಂಡುಬರುವ ಸಾಧ್ಯತೆ ಹೆಚ್ಚಿರುವುದರಿಂದ ರೈತರು ಹೆಚ್ಚು ಜಾಗರೂಕತೆಯಿಂದ ಈ ಕೆಳಕಂಡ ಹತೋಟಿ ಕ್ರಮಗಳನ್ನು ಅನುಸರಿಸುವಂತೆ ಈ ಮೂಲಕ ಕೋರಲಾಗಿದೆ.
ಕೇದಿಗೆ ರೋಗ(ಬೂಜು ರೋಗ): ಮುಸುಕಿನ ಜೋಳಕ್ಕೆ ಬರುವ ರೋಗಗಳಲ್ಲಿ ಅತ್ಯಂತ ಪ್ರಮುಖ ರೋಗ. ಇದು ಬೂಷ್ಟು ಜಾತಿಗೆ ಸೇರಿದ ಶಿಲೀಂಧ್ರದಿಂದ ಉಂಟಾಗುವ ಅಂತರವ್ಯಾಪಿ ರೋಗ. ತಡವಾಗಿ ಬಿತ್ತನೆ ಮಾಡಿದ (ಆಗಸ್ಟ್ ನಂತರದ) ತಾಖುಗಳಲ್ಲಿ ಈ ರೋಗದ ಹಾವಳಿ ಹೆಚ್ಚು. ರೋಗದ ತೀವ್ರತೆ ಜಾಸ್ತಿ ಇದ್ದಾಗ ಶೇಕಡಾ 80-90ರಷ್ಟು ಬೆಳೆ ನಷ್ಟವಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಇದರ ಹಾವಳಿ ಬೆಂಗಳೂರು, ಹಾಸನ, ದಾವಣಗೆರೆ ಮತ್ತು ಕೋಲಾರ ಜಿಲ್ಲೆಗಳಲ್ಲಿ ಜಾಸ್ತಿ. ಈ ರೋಗವು ಪರೆನೋಸ್ಲೀರೋಸ್ಪೋರ ಸೋರ್ಗೈ ಶಿಲೀಂಧ್ರದಿಂದ ಬರುತ್ತದೆ.
ಬೆಳೆಯು ಸುಮಾರು 20 ರಿಂದ 25 ದಿನಗಳ ಸಸಿ ಹಂತದಲ್ಲಿರುವಾಗ ರೋಗದ ಚಿನ್ಹೆಗಳು ಪ್ರಾರಂಭವಾಗುತ್ತವೆ. ತಂಪಾದ ವಾತಾವರಣವಿದ್ದಾಗ ರೋಗ ತಗುಲಿದ ಗಿಡಗಳ ಎಲೆಗಳ ತಳ ಮತ್ತು ಮೇಲ್ಭಾಗದಲ್ಲಿ ಬಿಳಿ ಬಣ್ಣದ ಹತ್ತಿಯಂತಹ ಶಿಲೀಂಧ್ರದ ಪುಡಿ ಕಾಣಿಸಿಕೊಳ್ಳುತ್ತದೆ. ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಇಡೀ ಎಲೆಯನ್ನು ಆವರಿಸುತ್ತದೆ.
ಹೀಗೆ ರೋಗಗ್ರಸ್ಥ ಗಿಡಗಳ ಬೆಳವಣಿಗೆ ತೀವ್ರವಾಗಿ ಕುಂಠಿತಗೊಂಡು ಎಲೆಗಳು ಹಳದಿ ವರ್ಣಕ್ಕೆ ಮಾರ್ಪಾಡಾಗುತ್ತವೆ. ರೋಗಬಾಧೆ ಹೆಚ್ಚಾದಂತೆಲ್ಲಾ ಎಲೆಯ ಮೇಲೆ ಕಂದು ಬಣ್ಣದ ಗೆರೆಗಳು ಮಧ್ಯದ ದಿಂಡಿಗೆ ಸಮಾನಾಂತರವಾಗಿ ಕಾಣಿಸಿಕೊಳ್ಳುತ್ತವೆ. ರೋಗ ತಗುಲಿದ ಗಿಡಗಳಲ್ಲಿ ತೆನೆಗಳು ಬಿಡುವುದಿಲ್ಲ. ರೋಗಗ್ರಸ್ಥ ಭೂಮಿಯಲ್ಲಿ ಬಿತ್ತನೆ ಮಾಡಿದಾಗ ಶಿಲೀಂಧ್ರದ ಬೀಜಾಣುಗಳು ಬೀಜಕ್ಕೆ ಅಂಟಿಕೊಂಡು ಬೀಜದ ಜೊತೆಯಲ್ಲಿ ಸೇರಿ ಸಸ್ಯ ಅಂತರವ್ಯಾಪಿ ರೋಗದ ಲಕ್ಷಣಗಳನ್ನು ತೋರಿಸುತ್ತದೆ.
ಹತೋಟಿ ಕ್ರಮಗಳು: ಪ್ರತಿ ಕಿ.ಗ್ರಾಂ. ಬೀಜಕ್ಕೆ 3.0 ಗ್ರಾಂ ಮೆಟಾಲಾಕ್ಸಿಲ್+ಮ್ಯಾಂಕೋಜೆಬ್ ಸಂಯುಕ್ತ ಅಂತರ್‌ವ್ಯಾಪಿ ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡಬೇಕು. ಬಿತ್ತನೆ ಮಾಡಿದ 25 ದಿನಗಳ ನಂತರದಲ್ಲಿ ಅಜೋಸ್ಟೊಬಿನ್+ಡೈಫೆನೊಕೊನೋಜೋಲ್ ಪ್ರತಿ ಲೀಟರ್ ನೀರಿಗೆ 1 ಮಿ.ಲಿ. ಪ್ರಮಾಣದಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಶಿಫಾರಸ್ಸು ಮಾಡಿರುವ ಅಂತರದಲ್ಲಿ ಬಿತ್ತನೆ ಮಾಡಬೇಕು. ತಾಕುಗಳಲ್ಲಿ ಹೆಚ್ಚಿಗೆ ತೇವಾಂಶವಿರದಂತೆ ಎಚ್ಚರ ವಹಿಸಬೇಕು. ತಾಕುಗಳಲ್ಲಿ ಅಲ್ಲಲ್ಲಿ ಕೇದಿಗೆ ರೋಗ ಕಂಡ ಕೂಡಲೇ ರೋಗಗ್ರಸ್ಥ ಗಿಡಗಳನ್ನು ಬೇರು ಸಹಿತ ಕಿತ್ತು ನಾಶ ಮಾಡುವುದು.
ಹಿಂದಿನ ವರ್ಷ ಬೂಜು ರೋಗ ಕಂಡುಬಂದ ತಾಕುಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ಬಿತ್ತನೆ ತಪ್ಪಿಸಬೇಕು. ಹಿಂದಿನ ವರ್ಷ ಯಥೇಚ್ಛವಾಗಿ ಕೇದಿಗೆ ರೋಗ ಕಾಣಿಸಿಕೊಂಡಿದ್ದ ತಾಕುಗಳಲ್ಲಿ ಮತ್ತೆ ಮುಸುಕಿನ ಜೋಳವನ್ನು ಬೆಳೆಯಬಾರದು ಹಾಗೂ ಬೆಳೆ ಪರಿವರ್ತನೆ ಮಾಡುವುದರಿಂದ ಈ ರೋಗ ಹರಡಿ ಉಲ್ಬಣಗೊಳ್ಳುವುದನ್ನು ತಡೆಗಟ್ಟಬಹುದು.
ಸೈನಿಕ ಹುಳುವಿನ ನಿಯಂತ್ರಣ: ಈ ಕೀಟವು ಮೆಕ್ಕೆಜೋಳ ಬೆಳೆ ಅಲ್ಲದೇ ಭತ್ತ, ಹೈಬ್ರೀಡ್ ಜೋಳ, ರಾಗಿ ಮುಂತಾದ ಬೆಳೆಗಳಲ್ಲಿ ಕಾಣಿಸಿಕೊಳ್ಳಲಿದ್ದು, ಮುಖ್ಯವಾಗಿ ಬೆಳೆಯ ಎಲೆ, ಕಾಂಡ, ತೆನೆಯ ಭಾಗವನ್ನು ಕೊರೆದು ತಿನ್ನುವುದಲ್ಲದೇ, ಎಲೆಯ ಭಾಗದಲ್ಲಿ ಸರಣಿ ತೂತುಗಳನ್ನು ಕೊರೆಯುತ್ತದೆ.
ಒಂದು ಚಿಟ್ಟೆಯು 1500 ಮೊಟ್ಟೆಯವರಗೆ ತತ್ತಿಗಳನ್ನಿಟ್ಟು, ಬೆಳೆಗಳಿಗೆ ತೀರ್ವ ಹಾನಿ ಮಾಡುತ್ತದೆ. ಪೈರು ಬೆಳೆಯುವ ಹಂತದಲ್ಲಿ ಕಾಂಡ ಕೊರಕ ಮತ್ತು ಸೈನಿಕ ಹುಳದ ಬಾಧೆ ಕಂಡುಬಂದಿದೆ. ಇದು ಮುಸುಕಿನ ಜೋಳದ ಸುಳಿಯಲ್ಲಿ ಇರುವುದರಿಂದ ಸುಳಿಯನ್ನು ಕೊರೆಯುತ್ತದೆ. ಇದರಿಂದ ಎಲೆಗಳು ಹೊರಬಂದಾಗ ಗರಿಯಲ್ಲಿ ಸರಣಿಯಾಗಿ ರಂಧ್ರಗಳು ಕಂಡುಬರುತ್ತವೆ.
ಹುಳು ಬೆಳೆದಂತೆಲ್ಲ ಸುರುಳಿಯಲ್ಲಿ ಎಲೆಯನ್ನು ತಿಂದು ತ್ಯಾಜ್ಯವನ್ನು ಬಿಡುವುದರಿಂದ ಸುಳಿ ಕೈಯಿಂದ ಎಳೆದಾಗ ಸುಲಭವಾಗಿ ಹೊರಬರುವುದು. ಇದಕ್ಕೆ ಸೂಕ್ತ ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿದಲ್ಲಿ ಕೀಟವನ್ನು ಸಂಪೂರ್ಣವಾಗಿ ಹತೋಟಿ ಮಾಡಬಹುದು.
ಕೀಟವನ್ನು ನಿರ್ವಹಣೆ ಮಾಡಲು (10-20% ಹಾನಿಯಾಗಿದ್ದಲ್ಲಿ) ಎಮೊಮೆಕ್ಟಿನ್ ಬೆಂಜೊಯೇಟ್ 0.4 ಗ್ರಾಂ ಅಥವಾ ಸ್ಪೆಂನೋಟೋರಮ್ 1ಮಿ.ಲೀ ಅಥವಾ ಕ್ಲೋರೋಂಟ್ರಾನಿಲಿಪ್ರೋಲ್ 0.4 ಮಿ ಲೀ ಅಥವಾ ಥಯೋಡಿಕಾರ್ಬ್ 1 ಗ್ರಾಂ ನಂತೆ ಪ್ರತಿ ಲೀಟರ್ ನೀರಿಗೆ ಬೆರೆಸಿ ಜೌಷಧಿಯ ಮಿಶ್ರಣ ಬೆಳೆಯ ಸುಳಿಗೆ ಬೀಳುವಂತೆ ಸಿಂಪಡಿಸಬೇಕು.
ಮೊದಲ ಸಿಂಪರಣೆಯನ್ನು ಬಿತ್ತನೆಯಾದ 15-20 ದಿನದೊಳಗೆ ತೆಗೆದುಕೊಳ್ಳಬೇಕು ಹಾಗೂ ಎರಡನೇ ಸಿಂಪರಣೆಯನ್ನು ಮೊದಲನೆ ಸಿಂಪರಣೆಯ 10 ರಿಂದ 15 ದಿನಗಳ ನಂತರ ತೆಗೆದುಕೊಳ್ಳವುದು.
ಪ್ರತಿ ಸಿಂಪರಣೆಯನ್ನು ಮುಂಜಾನೆ ಅಥವಾ ಸಾಯಂಕಾಲದ ಸಮಯದಲ್ಲಿ ಕೈಗೊಳ್ಳುಬೇಕು. ಪ್ರತಿ ಸಲವು ಒಂದೇ ತೆರನಾದ ಕೀಟನಾಶಕಗಳನ್ನು ಸಿಂಪರಣೆ ಮಾಡಬಾರದು. ಕೃಷಿ ಇಲಾಖೆ ಹೋಬಳಿ ಮಟ್ಟದ ಎಲ್ಲಾ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕೀಟನಾಶಕಗಳು ಶೇ 50 ರ ರಿಯಾಯ್ತಿ ದರದಲ್ಲಿ ಲಭ್ಯವಿದ್ದು, ತಕ್ಷಣ ಸಿಂಪರಣೆ ಕೈಗೊಳ್ಳಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.




