ನಾನೇ ವಿಧಾನಸಭೆಯ ವಿಪಕ್ಷ ನಾಯಕ: ಬಸನಗೌಡ ಪಾಟೀಲ್ ಯತ್ನಾಳ್

4 months ago

ಬೆಳಗಾವಿ: ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಸತತ ಟೀಕೆ ಮಾಡುವ ಮೂಲಕ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆಗೊಂಡಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಾವೇ ವಿಧಾನಸಭೆಯ ವಿಪಕ್ಷ ನಾಯಕ ಎಂದು ಹೇಳಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಲು ಮುಂದಾದ ಯತ್ನಾಳ್ ಅವರಿಗೆ ತಡೆಯೊಡ್ಡಿದ ಸಭಾಧ್ಯಕ್ಷ ಯು.ಟಿ.ಖಾದರ್, ಮೊದಲಿಗೆ ವಿಪಕ್ಷ ನಾಯಕರಿಗೆ ಅವಕಾಶ ನೀಡಲಾಗುವುದು. ತಾವು ವಿಪಕ್ಷ ನಾಯಕರಲ್ಲ ಎಂದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಸಿದ ಬಸನಗೌಡ ಪಾಟೀಲ್ ಯತ್ನಾಳ್, ವಿಧಾನಸಭೆಗೆ ನಾನೇ ನಿಜವಾದ ವಿಪಕ್ಷ ನಾಯಕ. ನಾನು ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿ ಅಲ್ಲ. ನಾನು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳ ಕಚೇರಿಗೂ ಹೋಗಿಲ್ಲ ಎಂದರು.

ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳದೆ ವಿಧಾನಸಭೆಯಲ್ಲಿ ನಿಜವಾದ ವಿಪಕ್ಷದ ನಾಯಕನಾಗಿ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನನಗೆ ಉಪಸಭಾಧ್ಯಕ್ಷರ ಪೀಠದ ಪಕ್ಕದಲ್ಲಿ ಮತ್ತೊಂದು ಆಸನ ಒದಗಿಸಿಕೊಡುವಂತೆ ಮನವಿ ಮಾಡಿದರು.

ಇದಕ್ಕೆ ನಗುತ್ತಲೇ ಸಾಧ್ಯವಿಲ್ಲ ಎಂದು ಸಭಾಧ್ಯಕ್ಷ ಯು ಟಿ ಖಾದರ್ ಉತ್ತರಿಸಿದರೆ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸರ್ಕಾರ ಒಂದು ಕಡೆ ಹೆಣ್ಣುಮಕ್ಕಳ ಪರ ನಾವಿದ್ದೇವೆ ಎಂದು ಹೇಳಿ ಗೃಹಲಕ್ಷ್ಮಿ ಯೋಜನೆಯಡಿ 2,000 ರೂಪಾಯಿ ನೀಡುತ್ತಿದೆ. ಆದರೆ, ಮತ್ತೊಂದೆಡೆ ಕಣ್ಣೀರು ಬರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

ಗಂಡಂದಿರ ಕುಡಿತದ ಚಟದಿಂದ ಮಹಿಳೆಯರು ಹಾಗೂ ಅವರ ಕುಟುಂಬಗಳು ಹಾಳಾಗುತ್ತಿದೆ. ಈಗ ಮಕ್ಕಳಿಂದ ಹಿಡಿದು ಎಲ್ಲರೂ ಕುಡಿತಕ್ಕೆ ದಾಸರಾಗುತ್ತಿದ್ದು, ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳು ಮತ್ತು ಸಣ್ಣ ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಸಿಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಬಗ್ಗೆ ಅಬಕಾರಿ ಸಚಿವರಿಗೆ ಏನಾದರೂ ಚಿಂತನೆ ಇದೆಯೇ ಎಂದು ಪ್ರಶ್ನಿಸಿದರು.

Leave a Reply