ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ನೇಮಕ ಮಾಡಿದಾಗಿನಿಂದ ನಾಯಕತ್ವದ ವಿರುದ್ಧ ಸಮರ ಸಾರಿರುವ ಹಿರಿಯ ನಾಯಕ ಬಸವನಗೌಡ ಪಾಟೀಲ್ ಯತ್ನಾಳ ಅವರಿಗೆ ಪಕ್ಷದ ರಾಷ್ಟ್ರೀಯ ಮಟ್ಟದ ಹಿರಿಯ ನಾಯಕರ ಆಶೀರ್ವಾದ ಇರುವ ಸಂಗತಿ ಬಹಿರಂಗವಾಗಿದೆ.
ನೆನೆಗುದಿಗೆ ಬಿದ್ದಿದ್ದ ಪಕ್ಷದ ಅಧ್ಯಕ್ಷ ಮತ್ತು ವಿಧಾನಸಭೆ ಪ್ರತಿಪಕ್ಷ ನಾಯಕನ ನೇಮಕ ಆದೇಶ ಹೊರಬೀಳುತ್ತಿದ್ದಂತೆ ಬಸನಗೌಡ ಪಾಟೀಲ್ ಯತ್ನಾಳ ಈ ತೀರ್ಮಾನದ ವಿರುದ್ಧ ಸಮರ ಸಾರಿದ್ದರು. ವಿಧಾನಸಭೆ ವಿಪಕ್ಷ ನಾಯಕ ಅಥವಾ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯತ್ನಾಳ ಅವರಿಗೆ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಸಹಕಾರವಿತ್ತು. ಅವರು ಹೈಕಮಾಂಡ್ ಮಟ್ಟದಲ್ಲಿ ಇವರ ಪರವಾಗಿ ಲಾಬಿ ಕೂಡ ಮಾಡಿದ್ದರು. ಆದರೆ ಇದರ ನಡುವೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಉರುಳಿಸಿದ ದಾಳದ ಮುಂದೆ ಬಿ.ಎಲ್.ಸಂತೋಷ್ ಲಾಬಿ ಕೆಲಸ ಮಾಡದೆ ನೇಮಕ ಆದೇಶ ಹೊರಬಿದ್ದಿವೆ. ಈ ಆದೇಶಗಳು ಹೊರಬೀಳುತ್ತಿದ್ದಂತೆ ಕಿಡಿಕಿಡಿಯಾದ ಯತ್ನಾಳ, ವಿಧಾನಸಭೆಯ ಒಳಗೆ ಮತ್ತು ಹೊರಗೆ ಹೊಸದಾಗಿ ಆಯ್ಕೆಯಾದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ವಿಪಕ್ಷಗಳ ಮಾದರಿಯಲ್ಲಿ ಕಿಡಿಕಾರತೊಡಗಿದ್ದರು. ಈ ಮೂಲಕ ನಾಯಕತ್ವವನ್ನು ಮುಜುಗರಕ್ಕೆ ಸಿಲುಕಿಸಿದ್ದರು.
ಇದೀಗ ಪದೇ ಪದೇ ಹೈಕಮಾಂಡ್ ಸೂಚನೆ ಆಧಾರದಲ್ಲಿ ನೇಮಕವಾದ ನಾಯಕತ್ವದ ವಿರುದ್ಧವೇ ಯತ್ನಾಳರು ನೀಡುತ್ತಿರುವ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದೆ ಎಂದು ಆರೋಪಿಸಿ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಕೆಲವು ಜಿಲ್ಲಾ ಘಟಕಗಳು ರಾಜ್ಯ ಸಮಿತಿಗೆ ಪತ್ರ ಬರೆದಿವೆ.
ಇದರ ಆಧಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿಗೆ ತೆರಳಿ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ಯತ್ನಾಳ ವಿರುದ್ಧ ಮೌಖಿಕವಾಗಿ ದೂರು ನೀಡಿದ್ದಾರೆ. ಅವರ ವಿರುದ್ಧ ಹೈಕಮಾಂಡ್ ಕ್ರಮ ಜರುಗಿಸದೆ ಹೋದರೆ ಪಕ್ಷದ ನಾಯಕತ್ವ ಕರ್ನಾಟಕದಲ್ಲಿ ಪದೇ ಪದೇ ಮುಜುಗರ ಎದುರಿಸುವ ಪರಿಸ್ಥಿತಿ ಉಂಟಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.
ಆದರೆ ಹೈಕಮಾಂಡ್ ಈ ದೂರಿನ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಯತ್ನಾಳ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಇರುವ ಆಶೀರ್ವಾದ. ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರೇ ಯತ್ನಾಳರ ಪರವಾಗಿದ್ದು, ಯಾವುದೇ ಕ್ರಮಕ್ಕೆ ಅವಕಾಶ ನೀಡುತ್ತಿಲ್ಲ ಎಂದು ವರದಿಯಾಗಿದೆ.
ಜೊತೆಗೆ, ವಿಜಯೇಂದ್ರ ಮತ್ತು ಯಡಿಯೂರಪ್ಪ ವಿರುದ್ಧ ಪ್ರಹಾರ ನಡೆಸಲು ಚಿತಾವಣೆ ಮಾಡುತ್ತಿದ್ದಾರೆ ಎಂಬ ದೂರು ಸಹ ಕೇಳಿ ಬಂದಿದ್ದು ಈ ವಿದ್ಯಮಾನಗಳು ಕುತೂಹಲ ಮೂಡಿಸಿವೆ.




