ಬೆಳಗಾವಿ: ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು ಸೋಲಿಸಲು ಹಣ ಕಳುಹಿಸುವ ಮೂಲಕ ಬಿ.ವೈ.ವಿಜಯೇಂದ್ರ ಷಡ್ಯಂತ್ರ ನಡೆಸಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಬಸನಗೌಡ ಯತ್ನಾಳ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ತಮ್ಮನ್ನು ಸೋಲಿಸಲು ವಿಜಯೇಂದ್ರ ಹಣ ಕಳುಹಿಸಿದ್ದಾರೆ ಎಂದು ನನಗೆ ಹೇಳಿದ್ದರು. ಸತ್ಯ ಹೊರ ಬರಬೇಕು. ರಾಜ್ಯದಲ್ಲಿ ಅಪ್ಪ-ಮಕ್ಕಳು ಏನು ಮಾಡಿದ್ದಾರೆ ಎಂಬುದು ಗೊತ್ತಾಗಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಸೋಮಣ್ಣ ಅವರನ್ನು ಸೋಲಿಸಿದ್ದು ಯಾರು, ವಿಜಯೇಂದ್ರ ತಮ್ಮ ಆಪ್ತರಾದ ಕೆಲವರನ್ನು ಚಾಮರಾಜನಗರಕ್ಕೆ ಕಳುಹಿಸಿ ಸೋಮಣ್ಣ ಅವರನ್ನು ಬಲಿ ಕೊಟ್ಟರು. ಯಡಿಯೂರಪ್ಪ ತಮ್ಮ ಪುತ್ರರ ವಿರುದ್ಧ ವಿಧಾನಸಭೆಯಲ್ಲಿ ದುರ್ಬಲ ಅಭ್ಯರ್ಥಿಯನ್ನು ಹಾಕಿಸಿಕೊಂಡು ವರುಣಾದಲ್ಲಿ ಸಿದ್ದರಾಮಯ್ಯಗೆ ಬೆಂಬಲ ನೀಡಿದರು. ಕನಕಪುರದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳಲಾಗಿತ್ತು. ಹೀಗೆಲ್ಲಾ ಮಾಡಿ ನಮ್ಮ ಹೆಸರು ಕೆಡಿಸುವ ಪ್ರಯತ್ನ ಮಾಡಿದ್ದರು. ಅಪ್ಪ-ಮಕ್ಕಳ ಬಗ್ಗೆ ವರಿಷ್ಠರಿಗೆ ಎಲ್ಲವನ್ನೂ ತಿಳಿಸುತ್ತೇನೆ ಎಂದರು
ಯಡಿಯೂರಪ್ಪ ವರಿಷ್ಠರನ್ನು ಬ್ಲಾಕ್‌ಮೇಲ್ ಮಾಡಿ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ತಮ್ಮ ಮಗನನ್ನು ರಾಜ್ಯಾಧ್ಯಕ್ಷ ಮಾಡದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲಿಯೂ ಪ್ರಚಾರಕ್ಕೆ ಹೋಗಲ್ಲ. ಶಿವಮೊಗ್ಗ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ವರಿಷ್ಠರನ್ನು ಬಲವಂತ ಮಾಡಿ ವಿಜೇಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿಕೊಂಡರು ಎಂದು ಆರೋಪಿಸಿದರು.
ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆ ನಂತರ ಪಕ್ಷದ ನಾಯಕತ್ವದ ವಿರುದ್ಧ ಸಮರ ಸಾರಿರುವ ಯತ್ನಾಳ್ ಇದೀಗ ಪಕ್ಷದ ಅಧ್ಯಕ್ಷ ವಿಜಯೇಂದ್ರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದಂತಾಗಿದೆ.




