ಬೆಳಗಾವಿ: ಕೇಂದ್ರ ಸರ್ಕಾರ ಕೃಷ್ಣ ನ್ಯಾಯ ಮಂಡಳಿಯ ಐತೀರ್ಪನ್ನು ಅಧಿಸೂಚನೆಯ ಮೂಲಕ ಪ್ರಕಟಿಸದಿರುವ ಹಿನ್ನೆಲೆಯಲ್ಲಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನೀರಾವರಿ ಕಾಮಗಾರಿ ಕೈಗೊಳ್ಳಲು ರಾಜ್ಯಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ನೀರಾವರಿ ಯೋಜನೆಗಳ ಸಂಬಂಧ ಹಲವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ- 3ರ ಅನುಷ್ಠಾನಕ್ಕೆ 2013ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದೆ ಬಾಕಿ ಉಳಿಸಿಕೊಂಡಿದೆ. ಮೊದಲನೇ ಬಾರಿಗೆ ಮಹಾರಾಷ್ಟ ಎರಡನೇ ಬಾರಿಗೆ ಆಂಧ್ರ ಪ್ರದೇಶದ ಅಡ್ಡಗಾಲು ಹಾಕಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೆಹಲಿಯಲ್ಲಿರುವ ತಮ್ಮ ಸ್ನೇಹಿತರ ಮೇಲೆ ಒತ್ತಡ ಹೇರಿ ಈ ಯೋಜನೆಗೆ ಅನುಮತಿ ಕೊಡಿಸಿದರೆ, ಕೂಡಲೇ ಸಾಲ ಮಾಡಿ ಈ ಯೋಜನೆ ಪೂರ್ಣಗೊಳಿಸಲಾಗುವುದು ಎಂದು ಬಿಜೆಪಿ ಶಾಸಕರಿಗೆ ಹೇಳಿದರು.
ಕೇಂದ್ರ ಸಚಿವರಾದ ಸೋಮಣ್ಣ ಅವರ ಜೊತೆ ಮೂರು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿದ್ದೇವೆ. ಕೇಂದ್ರ ಜಲಶಕ್ತಿ ಸಚಿವರು ಈ ಬಗ್ಗೆ ಕರೆದಿದ್ದ ಸಂಬಂಧಪಟ್ಟ ರಾಜ್ಯಗಳ ಸಭೆಯನ್ನು ಕಾರಾಣಾಂತರಗಳಿಂದ ಮುಂದೂಡಿದ್ದೇನೆ ಎಂದು ತಿಳಿಸಿದ್ದರು ಎಂದು ಸಭೆಯ ಗಮನಕ್ಕೆ ತಂದರು.
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರವಾಗಿ ಸಿದ್ದರಾಮಯ್ಯ ಅವರು ಹಾಗೂ ನಾವು ಚರ್ಚೆ ಮಾಡಿ ಭೂ ಪರಿಹಾರದ ಬಗ್ಗೆ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಬಸವರಾಜ ಬೊಮ್ಮಾಯಿ ಅವರ ಕಾಲದಲ್ಲಿ ಆಗಿದ್ದ ಭೂ ಪರಿಹಾರ ತೀರ್ಮಾನವನ್ನ ಮಾರ್ಪಾಡು ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಈ ಯೋಜನೆ ಪೂರ್ಣಗೊಳಿಸಲು ನಾವು ಬದ್ದವಾಗಿದ್ದೇವೆ ಎಂದರು.
ಎಲ್ಲಾದರೂ ಹಣ ತಂದು ವೆಚ್ಚ ಮಾಡಲು ಯೋಜನೆ ರೂಪಿಸಿದ್ದೇವೆ. ವರ್ಷಕ್ಕೆ 15-20 ಸಾವಿರ ಕೋಟಿ ನೀಡಬೇಕು, ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಭೂಸ್ವಾಧೀನ ಪೂರ್ಣಗೊಳಿಸಬೇಕು ಎಂದು ಹೊರಟಿದ್ದೇವೆ. ಕೆಲವು ಕಡೆ ಕೆಲಸವನ್ನೂ ಪ್ರಾರಂಭ ಮಾಡಿದ್ದೇವೆ ಎಂದು ಹೇಳಿದರು.
ಭೂ ಪರಿಹಾರ ವಿಚಾರ ಮಾಫಿಯಾವಾಗಿ ಹೋಗಿದೆ. 10 ಲಕ್ಷ ಭೂಮಿ ಬೆಲೆಯಿದ್ದರೆ 10 ಕೋಟಿ ಅವಾರ್ಡ್ ಮಾಡಲಾಗಿದೆ. ವಕೀಲರು ಹಾಗೂ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕೆ ಇಷ್ಟೊಂದು ಪರಿಹಾರ ನೀಡಲು ಆಗುವುದಿಲ್ಲ. ನಾನು ಇದನ್ನು ಒಪ್ಪುವುದಿಲ್ಲ. ನಾವು ರಾಜ್ಯದ ಹಿತ ಕಾಪಾಡಲು ಬದ್ಧ ಎಂದರು.
1,722 ಕೋಟಿ ಯೋಜನೆ: ಹಿಡಕಲ್ ಜಲಾಶಯದ ಘಟಪ್ರಭಾ ಬಲ ಹಾಗೂ ಎಡ ದಂಡೆ ಕಾಲುವೆಗಳ ಅಭಿವೃದ್ಧಿಗೆ ₹1722 ಕೋಟಿ ಯೋಜನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಇದಕ್ಕೆ ಒಪ್ಪಿಗೆ ಸಿಕ್ಕರೆ ಕೇಂದ್ರ ಸರ್ಕಾರದ ಶೇ. 60, ರಾಜ್ಯ ಸರ್ಕಾರದ ಶೇ.40 ವೆಚ್ಚದ ಸಹಭಾಗಿತ್ವದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ನೀವು ಹಾಗೂ ನಿಮ್ಮ ಸಂಸದರು ಕೇಂದ್ರ ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಬೇಕಿದೆ ಎಂದರು.
ಕಾಲುವೆಗಳಿಗೆ ಅಕ್ರಮ ಪಂಪ್ ಸೆಟ್ ಗಳನ್ನು ಹಾಕುವುದರ ವಿರುದ್ಧ ಹೊಸ ಕಾನೂನು ತರಲಾಗಿದೆ. ಇದರ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ಕಾಲುವೆ ಕೊನೆ ಭಾಗಗಳಿಗೆ ನೀರು ತಲುಪಲೇ ಬೇಕಿದೆ. ಉದಾಹರಣೆಗೆ ಪಾಂಡವಪುರ ಭಾಗದವರೇ ಹೆಚ್ಚು ನೀರು ಬಳಸುತ್ತಾರೆ. ಮಳವಳ್ಳಿ ಭಾಗಕ್ಕೆ ನೀರೇ ತಲುಪುತ್ತಿಲ್ಲ. ಇದರ ಬಗ್ಗೆ ಎಲ್ಲಾ ಶಾಸಕರು ಒಪ್ಪಿಕೊಂಡರೆ ಅಭಿಯಾನವನ್ನೇ ಪ್ರಾರಂಭ ಮಾಡೋಣ ಎಂದರು.
ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಬಾಕಿ ಉಳಿದಿರುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ, 2026 ಮಾರ್ಚ್ ವೇಳೆಗೆ ಲೋಕಾರ್ಪಣೆ ಮಾಡುವಂತೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಸುಮಾರು 3,200 ಹೆಕ್ಟೇರ್ ಗೆ ನೀರು ಒದಗಿಸುವ ಪ್ರಮುಖ ಯೋಜನೆ ಇದಾಗಿದ್ದು, 170 ಕೋಟಿ ವೆಚ್ಚದಲ್ಲಿ ಈ ಯೋಜನೆ ಮುಕ್ತಾಯಗೊಳಿಸಲು 2017ರಲ್ಲಿಯೇ ಅನುಮೋದನೆ ನೀಡಲಾಗಿತ್ತು. ಮೂರು ಪ್ಯಾಕೇಜ್ ಗಳಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸ್ಥಳೀಯ ಸಮಸ್ಯೆಗಳು ಹಾಗೂ ಭೂ ಸ್ವಾಧೀನ ವಿಳಂಬ ಸಮಸ್ಯೆಯಿಂದ ಕಾಮಗಾರಿ ತಡವಾಗಿದೆ. ಇದರ ಬಗ್ಗೆ ಪ್ರತ್ಯೇಕ ತಂಡ ರಚನೆ ಮಾಡಿ ಯೋಜನೆಯನ್ನು ಬೇಗ ಮುಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಉತ್ತರಿಸಿದರು.
110 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಹೇಮಾವತಿ ಎಡದಂಡೆಯ ವಿತರಣಾ ನಾಲೆಗಳ ಅಭಿವೃದ್ದಿಗೆ ಯೋಜನೆ ರೂಪಿಸಲಾಗಿದೆ. ಆದಷ್ಟು ಬೇಗ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು. ವಿತರಣಾ ನಾಲೆ 33 ಕ್ಕೆ 10 ಕೋಟಿ ರೂಪಾಯಿ, 34 ರಿಂದ 40 ರವರೆಗಿನ ನಾಲೆಗಳಿಗೆ 5 ಕೋಟಿ ರೂಪಾಯಿ ನೀಡಲಾಗಿದೆ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಎಡದಂಡೆ ನಾಲೆ ವಿಭಾಗದಲ್ಲಿ ಒಟ್ಟು 14 ವಿತರಣಾ ನಾಲೆಗಳಲ್ಲಿ ಎಂಟು ನಾಲೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಆರು ನಾಲೆಗಳು ಬಾಕಿಯಿವೆ. ಇಲ್ಲಿ ಒಂದಷ್ಟು ಹಳೇ ನಾಲೆಗಳಿವೆ. ಇವುಗಳ ಬಗ್ಗೆ ವರದಿ ತರಿಸಿಕೊಂಡಿದ್ದೇನೆ ಎಂದರು.




