ರಸಋಷಿಯ ಎರಡು ಮಹತ್ವದ ಕಾದಂಬರಿಗಳನ್ನು ಮತ್ತೊಮ್ಮೆ ಓದಬೇಕು…

1 year ago

ಇದೊಂದು ಸಂಭ್ರಮದ ದಿನ ನನಗೆ. ರಸಋಷಿಯ ಎರಡು ಮಹತ್ವದ ಕಾದಂಬರಿಗಳನ್ನು ಮತ್ತೊಮ್ಮೆ ಓದಬೇಕು ಎಂದು ಸಾಕಷ್ಟು ಬಾರಿ ಅಂದುಕೊಂಡಿದ್ದರೂ ಆಗಿರಲಿಲ್ಲ. ನಿರಂತರ ಓದಿಗೆ ಸತತ ಅಡ್ಡಿ‌ಬರುವಂತಹ ಆಧುನಿಕ ಬದುಕು ನಮ್ಮದು. ಚಿಕ್ಕಂದಿನಲ್ಲಿ ಓದಿದ ಕೃತಿಗಳಾದರೂ, ಈಗಿನ ಗ್ರಹಿಕೆ ಬೇರೆ.‌ ನಮ್ಮ ವಯಸ್ಸಿಗೆ ಅನುಗುಣವಾಗಿ ಕ್ಲಾಸಿಕ್ ಕೃತಿಗಳು ಬೇರೆ ಬೇರೆ ದರ್ಶನಗಳನ್ನು ನೀಡುತ್ತವೆ. ಹೊಸ ಅನುಮಾನಗಳನ್ನು ಹುಟ್ಟು ಹಾಕುತ್ತವೆ.

ನಮ್ಮೂರಿನ ಕುಮಾರಸ್ವಾಮಿ ದೇವಸ್ಥಾನದಲ್ಲಿ ಒಂದು ಪ್ರತೀತಿ ಇದೆ. ನಾವು ಎಷ್ಟು ಎತ್ತರ ಬೆಳೆದಿರುತ್ತೇವೋ ಅಷ್ಟು ಎತ್ತರದ ಮೂರ್ತಿ ನಮ್ಮ ಕಣ್ಣಿಗೆ ಕಾಣುತ್ತದೆ ಅಂತ. ಅದನ್ನು ಊರಿನ ಜನರು ಬಹುವಾಗಿ ನಂಬುತ್ತಾರೆ. ಅದರ ಸತ್ಯಾಸತ್ಯತೆ ಏನೇ ಇರಲಿ, ಈ ನಂಬಿಕೆ ಕ್ಲಾಸಿಕ್‌ ಕೃತಿಗಳಿಗೆ ಹೇಳಿ ಮಾಡಿಸಿದ ರೂಪಕ. ನಾವು ಬೆಳೆದಷ್ಟು ಎತ್ತರದ ದರ್ಶನಗಳನ್ನು ಇವು ಕೊಡಬಲ್ಲವು. ಈಗಲೂ ಮೊದಲಿನ ಗಾತ್ರವೇ ಕಂಡರೆ‌ ಅದು ನಮ್ಮ ಬೆಳವಣಿಗೆಯ ಕುಂದೇ ಹೊರತು ಕೃತಿಯದಲ್ಲ.

ಕಳೆದ ಐದು ತಿಂಗಳಿಂದ ವಾಕಿಂಗ್ ಹೊತ್ತಿನಲ್ಲಿ ಈ‌ ಮಹಾಕಾದಂಬರಿಗಳ ಆಡಿಯೋ ಬುಕ್ ಕೇಳಿದೆ. MyLang ನಲ್ಲಿ ಕಾನೂರು ಹೆಗ್ಗಡತಿ ಲಭ್ಯವಿದ್ದರೆ, “ಋತುಮಾನ”ದಲ್ಲಿ ಮಲೆಗಳಲ್ಲಿ ಮದುಮಗಳು ಲಭ್ಯ. ಎರಡೂ‌ ಆಡಿಯೋ ಪುಸ್ತಕಗಳು ಕೇಳಲು ಹಿತವಾಗುವಂತೆ ಇವೆ. ಸೊಗಸಾಗಿ‌ ಓದಿದ್ದಾರೆ. ಈ ದಿನಕ್ಕೆ ಎರಡೂ ಕಾದಂಬರಿಗಳ‌ ಸುದೀರ್ಘ ಶ್ರವಣ ಮುಗಿಯಿತು. ಮೈಮನಸ್ಸಿಗೆ ಹೊಸ ಉತ್ಸಾಹ, ಆಲೋಚನೆಗಳು ಬಂದಂತೆ ಆಗಿದೆ. ಇಂತಹ ಮಹಾ ಕೃತಿಗಳು ಕನ್ನಡದ ಸಾಹಿತಿಗಳಿಗೆ, ಓದುಗರಿಗೆ ಓದಲು ಲಭ್ಯ ಎನ್ನುವುದು ನಮ್ಮ ಅದೃಷ್ಟವಾಗಿದೆ.

ಕುವೆಂಪು ಅವರ ಆಲೋಚನೆಗಳು ಸಂಪೂರ್ಣವಾಗಿ ಈ ಕಾಲಕ್ಕೆ ಒಪ್ಪಿಗೆಯಾಗುತ್ತವೆ ಎಂದೇನೂ ಅಲ್ಲ. ಈಗಿನ ನನ್ನ ಜಾತೀಯತೆ, ಧರ್ಮ, ಆಚರಣೆ, ನಂಬಿಕೆಗಳು ತುಸು ಬೇರೆಯಾಗಿವೆ. ಆದರೆ ಅವು ಚಂದ್ರನ ಹೊಳಪನ್ನು ಮಂಕಾಗಿಸಲು ಸಾಧ್ಯವಾಗದ ಜಿಂಕೆಯ ಕಲೆಯಂತೆ ತೋರುತ್ತವೆ. ಕುವೆಂಪು ಕನ್ನಡ ಕಂಡ ಸಾರ್ವಕಾಲಿಕ ಶ್ರೇಷ್ಠ ಕಾದಂಬರಿಕಾರ ಎಂದು ಮತ್ತೊಮ್ಮೆ ಅನ್ನಿಸಿತು.

ಆಡಿಯೋ ಪುಸ್ತಕಕ್ಕೆ ಕೆಲವು ಸಮಸ್ಯೆಗಳಿವೆ. ಅದು ನಮ್ಮ ಬಹುಚಂಚಲ ನಯನಗಳನ್ನು ಕಟ್ಟಿ ಹಾಕುವುದಿಲ್ಲ. ಪುಸ್ತಕ ಓದುವಾಗ ಕಣ್ಣುಗಳು ಅಕ್ಷರಕ್ಕೆ ಮಾತ್ರ ಸೀಮಿತವಾಗುವುದರಿಂದ ತನ್ನ ಚಂಚಲತೆಯನ್ನು ತೋರಿಸಲು ಸಾಧ್ಯವಾಗುವುದಿಲ್ಲ. ಆದರೆ ಆಡಿಯೋ ಹಾಕಿ ನಡೆವಾಗ ಯಾರು ಅತ್ತಿತ್ತ ಸುಳಿದಾಡಿದಾರೂ ಕಣ್ಣು ಆ ಕಡೆ ತಿರುಗಿ ಶ್ರದ್ಧೆಗೆ ಭಂಗ ತರುತ್ತದೆ. ಆದರೂ ಈ‌ ಸಮಯಾಭಾವದ ಆಧುನಿಕ‌ ಬದುಕಿಗೆ ಆಡಿಯೋ ಬುಕ್ ಒಳ್ಳೆಯ ಸಲಕರಣೆ.

ಇನ್ನು ಮುಂದೆ ಕನ್ನಡದ ಮತ್ತೆರಡು ಕ್ಲಾಸಿಕ್‌ಗಳಾದ ದಾಟು ಮತ್ತು ಕುಸುಮಬಾಲೆ ಕೇಳಿಸಿಕೊಳ್ಳಲು ನಿರ್ಧರಿಸುವೆ. ಮೊದಲನೆಯದು storytel ನಲ್ಲಿಯೂ, ಎರಡನೆಯದು ಋತುಮಾನ ದಲ್ಲಿಯೂ ಇದೆ. ಪುಸ್ತಕದ ಮೂಲ‌ ಬೆಲೆಗೆ ಹೋಲಿಸಿದರೆ ಆಡಿಯೋ ಪುಸ್ತಕಗಳ ಬೆಲೆ ಬಹಳ ಕಡಿಮೆ. ಇಂಗ್ಲೀಷ್‌ನಲ್ಲಿ ಆಡಿಯೋ ಬುಕ್ ಆವೃತ್ತಿ ಪುಸ್ತಕದ ಬೆಲೆಗಿಂತ ನಾಲ್ಕು ಪಟ್ಟು ದುಬಾರಿಯಾಗಿರುತ್ತದೆ.

– ವಸುಧೇಂದ್ರ, ಬರಹಗಾರರು

Leave a Reply