ಶ್!!!! ಇದು ಆರೆಸ್ಸೆಸ್ ಸರ್ಕಲ್ನ ಇನ್ಸೈಡ್ ಸ್ಟೋರಿ!!
ಬಸನಗೌಡ ಪಾಟೀಲ್ ಯತ್ನಾಳ್ ಈಗ ಬಿಜೆಪಿ ಮತ್ತು ಆರೆಸ್ಸೆಸ್ ಪಾಲಿಗೆ ಅಕ್ಷರಶಃ ಭಸ್ಮಾಸುರನಾಗಿ ರೂಪಾಂತರಗೊಂಡಿದ್ದಾರೆ ಅನ್ನೋದು ಲೇಟೆಸ್ಟ್ ಸುದ್ದಿ. ಯತ್ನಾಳ್ ತಂಡದ ಭಿನ್ನಮತಕ್ಕೆ ಒಳಗೊಳಗೆ ಕುಮ್ಮಕ್ಕು ಕೊಟ್ಟಿದ್ದೇ ಆರೆಸ್ಸೆಸ್ ಪ್ರಭಾವವಿರುವ ಬಿಜೆಪಿ ನಾಯಕರು. ಬಿ ಎಲ್ ಸಂತೋಷ್, ಪ್ರಹ್ಲಾದ್ ಜೋಷಿ ಇದರ ಮುಂಚೂಣಿ ಮಾಸ್ಟರ್ ಮೈಂಡ್ಗಳು. ಇದು ಮಟಮಟ ಮಧ್ಯಾಹ್ನದ ನಗ್ನಸತ್ಯ! ಅದಕ್ಕೇ ಮೊನ್ನೆ, ಯತ್ನಾಳ್ ವಿರುದ್ಧ ಬಾಯಿಗೆ ಬಂದಂತೆ ಬೈದಾಡುವ ಎಂ ಪಿ ರೇಣುಕಾಚಾರ್ಯ ಕೂಡಾ “ಯತ್ನಾಳ್ ಕೂಡಾ ನಮ್ಮವರೇ, ಆದರೆ ಈ ಹಿಂದೆ ನನ್ನನ್ನು ಯಡಿಯೂರಪ್ಪ ವಿರುದ್ಧ ಎತ್ತಿಕಟ್ಟಿದ್ದ ದುಷ್ಟಶಕ್ತಿಗಳೇ ಈಗ ಅವರನ್ನು ತಮ್ಮ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಯತ್ನಾಳ್ ಹೀಗೆಲ್ಲಾ ಮಾಡುತ್ತಿದ್ದಾರೆ. ಯತ್ನಾಳ್ ವಿರುದ್ಧ ನಮಗ್ಯಾವ ವೈಯಕ್ತಿಕ ತಕರಾರಿಲ್ಲ” ಎಂಬ ರಿವರ್ಸ್ ಸ್ವಿಂಗ್ ಹೇಳಿಕೆ ಕೊಟ್ಟರು. ಆ ಹೇಳಿಕೆಯಲ್ಲಿ ಎರಡು ಸಂಗತಿಗಳು ಅಡಗಿವೆ. ಮೊದಲನೆಯದ್ದು, obviously ಯತ್ನಾಳ್ ಬಂಡಾಯದ ಹಿಂದೆ ಬಿಜೆಪಿ-ಆರೆಸ್ಸೆಸ್ ಮೂಲದ ಪ್ರಭಾವಿ ನಾಯಕರ ಚಿತಾವಣೆ ಇದೆ ಅನ್ನೋದು. ಎರಡನೆಯದ್ದು, ಯತ್ನಾಳ್ ಬಣದ ಬಗ್ಗೆ ಯಡಿಯೂರಪ್ಪ-ವಿಜಯೇಂದ್ರ ಬಣವೂ ಒಂದೆರಡು ಹೆಜ್ಜೆ ಹಿಂದೆ ಇಟ್ಟಿರುವುದು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಈ ದಿಢೀರ್ ಬೆಳವಣಿಗೆ ಹಿಂದಿನ ರಹಸ್ಯವೇನು? ತನ್ನ ನೋಟಿಸ್ಗೆ ಉತ್ತರಿಸಿ ಇಷ್ಟುದಿನವಾದರೂ, ಬಿಜೆಪಿ ಹೈಕಮಾಂಡ್ ಯಾಕೆ ಇದುವರೆಗೆ ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಂಡಿಲ್ಲ? ಇಷ್ಟು ದಿನ ಬಿಜೆಪಿ ಭಿನ್ನಮತದಿಂದ ದೂರವೇ ಉಳಿದಿದ್ದ ಆರೆಸ್ಸೆಸ್ ಈಗ ಸಂಧಾನದ ಅಖಾಡಕ್ಕಿಳಿದಿದ್ದು ಯಾಕೆ? ಆರೆಸ್ಸೆಸ್ ಮುಖಂಡ ಸಿ.ಆರ್ ಮುಕುಂದ-ಯತ್ನಾಳ್ ಭೇಟಿಯಲ್ಲಿ ಯತ್ನಾಳ್ ಹಾಕಿರುವ ಧಮಕಿಯೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ, ತಾನೇ ಹುಟ್ಟುಹಾಕಿದ ಯತ್ನಾಳ್ ಎಂಬ ಭಿನ್ನಮತದ ಕಿಡಿ ಹೇಗೆ ಬಿಜೆಪಿ-ಆರೆಸ್ಸೆಸ್ ಬುಡವನ್ನೇ ಸುಡಲು ಸಜ್ಜಾಗಿದೆ ಎಂಬುದು ಮನದಟ್ಟಾಗುತ್ತೆ.
ಒಂದುವೇಳೆ, ಪಕ್ಷ ತನ್ನ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿದ್ದೇ ಆದಲ್ಲಿ ಅಥವಾ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಹಿಂದೇಟು ಹಾಕಿದ್ದೇ ಆದಲ್ಲಿ ತಾನು ಸ್ವತಂತ್ರ ಪ್ರಾದೇಶಿಕ ಪಕ್ಷ ಕಟ್ಟಿ ಸೆಡ್ಡು ಹೊಡೆಯಲಿದ್ದೇನೆ ಎಂದು ಯತ್ನಾಳ್ ಸಿಡಿಸಿರುವ ಹೊಸ ಬಾಂಬು ಬಿಜೆಪಿ ಹೈಕಮಾಂಡ್ ಮತ್ತು ಆರೆಸ್ಸೆಸ್ ಅಡಿಪಾಯಗಳನ್ನು ಒಟ್ಟೊಟ್ಟಿಗೆ ಅಲ್ಲಾಡಿಸಿವೆ!
ಹೌದು, ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಕುಟುಂಬದ ಪ್ರಭಾವವನ್ನು ಕಡಿಮೆ ಮಾಡುವ ಚಿತಾವಣೆಯಿಂದ ಯಾವ ಯತ್ನಾಳ್ರನ್ನು ಆರೆಸ್ಸೆಸ್ ಒಳಗೊಳಗೇ ಪ್ರೋತ್ಸಾಹಿಸಿ, ಬೆಂಬಲಿಸಿತೊ ಅದೇ ಯತ್ನಾಳ್ ಈಗ ಆರೆಸ್ಸೆಸ್ ಬುಡಕ್ಕೇ ಬಾಂಬು ಮಡುಗಿದ್ದಾರೆ. ಯತ್ನಾಳ್ಗೆ ಒಂದು ಸ್ವತಂತ್ರ ಪಾರ್ಟಿಯನ್ನು ಕಟ್ಟಿ survive ಆಗುವ ಸಾಮರ್ಥ್ಯವಿದೆಯಾ? ಯಡಿಯೂರಪ್ಪನಂತಹ ಯಡಿಯೂರಪ್ಪನವರೇ ಕೆಜೆಪಿ ಕಟ್ಟಿ, ನೆಲೆಕಾಣಲಾಗದೆ ವಾಪಾಸು ಬಿಜೆಪಿ ಸೇರಿಕೊಂಡರು. ಗಣಿ ಧೂಳಿನ ಶ್ರೀರಾಮುಲು-ರೆಡ್ಡಿ ಜೋಡಿಯ ಬಿಆರ್ಎಸ್ ಕಾಂಗ್ರೆಸ್ ಕೂಡಾ ದಡ ಸೇರಲಿಲ್ಲ. ಬಂಗಾರಪ್ಪನವರ ಕೆಸಿಪಿಗೂ ಇದೇ ಕಥೆಯಾಯ್ತು. ಅಂತದ್ದರಲ್ಲಿ ಯತ್ನಾಳ್ ಯಾವ ಲೆಕ್ಕ? ಈ ಬ್ಲ್ಯಾಕ್ಮೇಲ್ಗೆ ಆರೆಸ್ಸೆಸ್ ಯಾಕೆ ಇಷ್ಟು ತಡಬಡಿಸಬೇಕು? ಅನ್ನೋ ಪ್ರಶ್ನೆ ನಿಮ್ಮನ್ನು ಕಾಡಬಹುದು. ನಿಜ, ಬಂಗಾರಪ್ಪ, ಯಡಿಯೂರಪ್ಪ, ರೆಡ್ಡಿ-ರಾಮುಲುಗಳಿಗೆ ಹೋಲಿಸಿದರೆ ಯತ್ನಾಳ್ಗೆ ಆ ಆರ್ಥಿಕ ಸಾಮರ್ಥ್ಯವಿಲ್ಲ; ವೈಯಕ್ತಿಕ ವರ್ಚಸ್ಸೂ ಇಲ್ಲ; ಬೆನ್ನಹಿಂದೆ ಜನಬೆಂಬಲವೂ ಇಲ್ಲ. ಆದರೆ ಯತ್ನಾಳ್ ಬಾಯ್ತುಂಬ ಹಿಂದೂತ್ವದ ಉಗ್ರ ಮಾತುಗಳಿವೆ! ಕೇಸರಿ ಶಾಲಿನ ಪಡ್ಡೆ ಹುಡುಗರನ್ನು ರೋಮಾಂಚನಗೊಳಿಸಬಲ್ಲ ಅವಿವೇಕಿ ಐಡಿಯಾಗಳಿವೆ! ಇದೇ ಈಗ ಆರೆಸ್ಸೆಸ್-ಬಿಜೆಪಿ ನಾಯಕರನ್ನು ತಡಬಡಾಯಿಸುವಂತೆ ಮಾಡಿರೋದು.
ಒಂದೊಮ್ಮೆ ಯತ್ನಾಳ್ ಪ್ರಾದೇಶಿಕ ಪಕ್ಷ ಕಟ್ಟಿದರೂ, ಇಂಪ್ರೆಸ್ಸಿವ್ ಎನ್ನಬಹುದಾದಂತಹ ಎಲೆಕ್ಟೋರಲ್ ಸಾಧನೆ ಮಾಡಿ, ಅಧಿಕಾರ ಗದ್ದುಗೆ ಏರುವಲ್ಲಿ ನಿರ್ಣಾಯಕರಾಗಬಹುದು ಅನ್ನೋ ನಿರೀಕ್ಷೆ ಯಾರಿಗೂ ಇಲ್ಲ. ಆದರೆ ಬಿಜೆಪಿಯ ಗೆಲುವಿಗೆ ಯತ್ನಾಳ್ ಖಂಡಿತ ಅಡ್ಡಗಾಲು ಹಾಕಬಲ್ಲರು. ಮಾತೃಪಕ್ಷದಿಂದ ಹೊರಬಂದು 1994ರಲ್ಲಿ ಕೆಸಿಪಿ ಕಟ್ಟಿದ ಬಂಗಾರಪ್ಪ ಗಮನಾರ್ಹ ಸೀಟು ಗಳಿಸದೆ ಹೋದರೂ ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿಗೆ ಕಾರಣವಾಗಿದ್ದರು. ಕೆಸಿಪಿ ಗಳಿಸಿದ್ದು 10 ಸ್ಥಾನವಾದರೂ, 143 ಸ್ಥಾನಗಳಿಂದ ಕಾಂಗ್ರೆಸ್ ಕೇವಲ 34 ಸ್ಥಾನಗಳಿಗೆ ಕುಸಿಯುವಲ್ಲಿ 218 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕೆಸಿಪಿಯ ಕಾಣಿಕೆಯೂ ಇತ್ತು. ಇನ್ನು 2013ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರ ಕೆಜೆಪಿ ಕೂಡಾ ಬಿಜೆಪಿಗೆ ಇಂತದ್ದೇ ದುಸ್ಥಿತಿಯನ್ನು ತಂದಿಕ್ಕಿತ್ತು. ಕೆಜೆಪಿ ಗಳಿಸಿದ್ದು 06 ಸ್ಥಾನವಾದರೂ, ಹಿಂದಿನ ಸಲ 102 ಸ್ಥಾನ ಗಳಿಸಿದ್ದ ಬಿಜೆಪಿಯನ್ನು ಕೇವಲ 40ಕ್ಕೆ ಇಳಿಸಿತ್ತು. ಈ ಕುಸಿತದಲ್ಲಿ ರೆಡ್ಡಿ-ರಾಮುಲು ಜೋಡಿಯ ಬಿಎಸ್ಆರ್ ಪಾರ್ಟಿಯ ಪಾಲೂ ಇತ್ತು. ಇದು ಕರ್ನಾಟಕದ ಮಟ್ಟಿಗೆ ಪ್ರಾದೇಶಿಕ ಪಕ್ಷಗಳ ಅನಾಟಮಿ. ಅವು ತಾವು ಗೆಲ್ಲದೆ ಹೋದರೂ, ತಮ್ಮ ಮಾತೃಪಕ್ಷಗಳನ್ನು ಮಕಾಡೆ ಮಲಗಿಸುವ ತಾಕತ್ತು ಹೊಂದಿವೆ.
ಶತಾಯತಗತಾಯ 2028ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಮರಳಲೇಬೇಕು ಎಂಬ ಹವಣಿಕೆಯಲ್ಲಿರುವ ಬಿಜೆಪಿ-ಆರೆಸ್ಸೆಸ್ ಕೂಟ ಚಿಂತೆಗೀಡಾಗಿರುವುದೇ ಈ ಕಾರಣದಿಂದ. ಯತ್ನಾಳ್ ಬೆನ್ನ ಹಿಂದಿರುವ ನಾಯಕರ ಹಿನ್ನೆಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಅವರಲ್ಲಿ ಲಿಂಗಾಯತರೇ ಹೆಚ್ಚು. ಸ್ವತಃ ಯತ್ನಾಳ್ ಸೇರಿದಂತೆ ಜಿ ಎಂ ಸಿದ್ದೇಶ್ವರ್, ಬಿ ಪಿ ಹರೀಶ್ ಈಗಾಗಲೇ ಲಿಂಗಾಯತ ಮುಖಂಡರ ಸಭೆ ನಡೆಸಿ ವಿಜಯೇಂದ್ರನಿಗೆ ಸಮುದಾಯದೊಳಗೇ ಒಳೇಟು ನೀಡುವ ಸೂಚನೆ ರವಾನಿಸಿದ್ದಾರೆ. ದೊಡ್ಡ ಮಟ್ಟದ ಲಿಂಗಾಯತ ಮತಗಳು ಯತ್ನಾಳ್ರನ್ನು ಅನುಸರಿಸದಿದ್ದರೂ ಸಣ್ಣಪ್ರಮಾಣದಲ್ಲಿ ಬಿಜೆಪಿಯ ಲಿಂಗಾಯತ ಮತಗಳು ಛಿದ್ರಗೊಳ್ಳುವುದು ನಿಶ್ಚಿತ. ಯಾಕೆಂದರೆ ಬಿಜೆಪಿಯಲ್ಲಿ ಉಳಿದುಕೊಂಡೇ ಯತ್ನಾಳ್ಗೆ ಸಪೋರ್ಟ್ ಮಾಡುವ ಹಲವು ಲಿಂಗಾಯತ ಘಟಾನುಘಟಿ ನಾಯಕರಿದ್ದಾರೆ. ಉಪಚುನಾವಣೆಯಲ್ಲಿ ಮಗನ ಸೋಲಿನಿಂದ ಕುದಿಯುತ್ತಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಅಂತವರಲ್ಲಿ ಒಬ್ಬರು. ಇನ್ನು ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಅರವಿಂದ ಲಿಂಬಾವಳಿ, ಪ್ರತಾಪ್ ಸಿಂಹ ತರಹದವರು ಬಿಜೆಪಿಯ ಕ್ಯಾಸ್ಟ್ ಕೆಮಿಸ್ಟ್ರಿಗೆ ಮೈಲ್ಡ್ ಹಾರ್ಟ್ ಅಟ್ಯಾಕ್ ತಂದರೂ ಬಿಜೆಪಿ ಒಂದಷ್ಟು ಸೀಟುಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಕೊನೇ ಕ್ಷಣದಲ್ಲಿ, ರೆಡ್ಡಿಯ ಮಾಜಿ ಮಿತ್ರ – ಹಾಲಿ ಶತ್ರು ರಾಮುಲು ಕೂಡಾ ಯತ್ನಾಳ್ ತಂಡ ಸೇರಬಹುದೆನ್ನುವ ಸುಳಿವುಗಳು ಆರೆಸ್ಸೆಸ್ಗೆ ಲಭಿಸಿವೆ.
ಆದರೆ ಆರೆಸ್ಸೆಸ್ ತಲೆಕೆಡಿಸಿಕೊಂಡಿರೋದು ಈ ಕ್ಯಾಸ್ಟ್ ಕೆಮಿಸ್ಟ್ರಿಯ ಕಾರಣಕ್ಕಲ್ಲ; ಪಡ್ಡೆ ಹುಡುಗರ ಹಿಂದೂತ್ವದ ಓಟ್ ಬ್ಯಾಂಕ್ ಕಾರಣಕ್ಕೆ. ಈಶ್ವರಪ್ಪ ನಿರ್ಗಮಿಸಿದ ನಂತರ, ಅನಂತ್ಕುಮಾರ್ ಹೆಗ್ಡೆ-ಕಟೀಲು ತರಹದ ಮೌತ್ಆರ್ಗನ್ಗಳು ಮೂಲೆ ಸೇರಿದ ನಂತರ ಬಿಜೆಪಿ-ಆರೆಸ್ಸೆಸ್ನ ಯಂಗ್ ಕೇಡರ್ಗೆ ಹಿಂದೂತ್ವದ ಮನರಂಜನೆ ನೀಡ್ತಾ ಇರೋದೆ ಈ ಯತ್ನಾಳ್. ಮಿಥ್ಯಗಳೇ ತುಂಬಿದ್ದ ವಕ್ಫ್ ಹೋರಾಟವನ್ನು ಲೀಡ್ ಮಾಡುವ ಮೂಲಕ ಯತ್ನಾಳ್ `ಹಿಂದೂತ್ವದ ಬ್ಯ್ರಾಂಡ್’ ಅನ್ನು ತಮ್ಮ ಹೆಸರಿಗೆ ಖಾತ್ರಿ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಸದ್ಯದ ಮಟ್ಟಿಗೆ ಸಿ ಟಿ ರವಿ ಕೂಡಾ ಯತ್ನಾಳ್ ಮುಂದೆ ಸಪ್ಪೆ ಎನ್ನಬಹುದು. ಇತ್ತೀಚೆಗೆ ರಾಜ್ಯ ಬಜೆಟ್ ಮೇಲೆ ದಾಳಿ ಮಾಡುವಾಗ, ಆರೆಸ್ಸೆಸ್ ಉರುಹೊಡೆಸಿದ್ದ ಹಲಾಲ್ ಬಜೆಟ್, ಸಾಬರ ಬಜೆಟ್, ಪಾಕಿಸ್ತಾನಿ ಬಜೆಟ್ ಎಂಬ ನಾನ್ಸೆನ್ಸ್ ಸ್ಲೋಗನ್ನುಗಳನ್ನು ಗಟ್ಟಿಯಾಗಿ ಮೊಳಗಿಸಿದ್ದು ಕೂಡಾ ಇದೇ ಯತ್ನಾಳ್.
ಇಂತಹ ಯತ್ನಾಳ್ ಅಕಸ್ಮಾತ್ ಪ್ರಾದೇಶಿಕ ಪಕ್ಷ ಕಟ್ಟಿದ್ದೇ ಆದಲ್ಲಿ, ಆತನ ಪ್ರಧಾನ ಓಟ್ ಬ್ಯಾಂಕ್ ಹಿಂದೂತ್ವದ ಅಮಲೇರಿಸಿಕೊಂಡ ಯುವಮತದಾರರೇ ಆಗಿರಲಿದ್ದಾರೆ. ಈಗಾಗಲೇ ಬಿಜೆಪಿ ವಿರುದ್ಧ ಕುದಿಯುತ್ತಿರುವ ಪ್ರಮೋದ್ ಮುತಾಲಿಕ್ ಅಂತವರೂ ಕೈಜೋಡಿಸಿಬಿಟ್ಟರೆ ಬಿಜೆಪಿಯ ವೋಟ್ ಶೇರ್ಗೆ ದೊಡ್ಡ ಮಟ್ಟದ ಡ್ಯಾಮೇಜ್ ಕಟ್ಟಿಟ್ಟ ಬುತ್ತಿ. ಹೆಸರಿಗೆ ಅದು `ರೀಜನಲ್ ಪಾರ್ಟಿ’ಯಾದರೂ, ವೋಟ್ ಬ್ಯಾಂಕ್ ಆಕ್ರಮಿಸುವ ವಿಚಾರದಲ್ಲಿ ಅದು `ರಿಲೀಜನ್ ಪಾರ್ಟಿ’ (ಹಿಂದೂತ್ವದ ಟ್ರಂಪ್ಕಾರ್ಡ್) ಆಗಿರುತ್ತೆ ಅನ್ನೋದು ಆರೆಸ್ಸೆಸ್ಗೆ ಗೊತ್ತು. ಇದನ್ನೆ ಈಗ ಯತ್ನಾಳ್ ತನ್ನ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಯತ್ನಾಳ್ ಅದೆಷ್ಟು accurate ಆಗಿದ್ದಾರೆಂದರೆ, ಮೊನ್ನೆ ತನ್ನನ್ನು ಸಮಾಧಾನಿಸಲು ಬಂದಿದ್ದ ಆರೆಸ್ಸೆಸ್ ಮುಖಂಡ ಮುಕುಂದ ಅವರ ಬಳಿ ಬಹಳ ಲೆಕ್ಕಾಚಾರದ ಮಾತಾಡಿದ್ದಾರೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಅಥವಾ ಬಂಗಾರಪ್ಪ ಮಾಡಿದಂತೆ ಇಡೀ ರಾಜ್ಯಾದ್ಯಂತ ತನ್ನ ಉದ್ದೇಶಿತ ಪ್ರಾದೇಶಿಕ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬದಲು ಬಿಜೆಪಿಗೆ ಹಿಂದೂತ್ವದ ಓಟು ತಂದುಕೊಡಬಲ್ಲ ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಕೇವಲ 60 ಸ್ಥಾನಗಳಿಗೆ ತನ್ನ ಸ್ಪರ್ಧೆಯನ್ನು ಸೀಮಿತಗೊಳಿಸಿ, ತನ್ನ ಶ್ರಮ ಹಾಕುವುದಾಗಿ ಯತ್ನಾಳ್ ಕಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಹೀಗೆ ರೀಜನಲ್ ಪಾರ್ಟಿಯ ಬ್ಲ್ಯಾಕ್ ಮೇಲ್ ಮಾಡಿದ್ದರಿಂದಲೇ ಬಿಜೆಪಿ ಹೈಕಮಾಂಡ್ ಇದುವರೆಗೆ ಯತ್ನಾಳ್ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕಿರೋದು ಮತ್ತು ವಿಜಯೇಂದ್ರರಿಗೆ ಬಣ ರಾಜಕಾರಣವನ್ನು ಬೆಳೆಸದಂತೆ ತಾಕೀತು ಮಾಡಿರೋದು ಅನ್ನೋದು ಬಿಜೆಪಿ ಇನ್ನರ್ ಸರ್ಕಲ್ಲಿನ ಲೇಟೆಸ್ಟ್ ಸುದ್ದಿ. ಅದೇ ಕಾರಣಕ್ಕೆ, ದಾವಣಗೆರೆಯಲ್ಲಿ ತನ್ನ ಬಲಪ್ರದರ್ಶನ ತೋರಲು ವಿಜಯೇಂದ್ರ ಪ್ಲ್ಯಾನ್ ಮಾಡಿದ್ದ `ಲಿಂಗಾಯತ ಸಮಾವೇಶ’ವನ್ನು ದಿಢೀರ್ ರದ್ದು ಮಾಡಿದ್ದಾರೆ. ‘ನನ್ನ ಪರವಾಗಿ ಯಾವುದೇ ಜಾತಿ ಸಮಾವೇಶ ಮಾಡೋದು ಬೇಡ ಅಂತ ನನ್ನ ಅಭಿಮಾನಿಗಳಿಗೆ ನಾನೇ ಹೇಳಿದ್ದೇನೆ’ ಎಂದು ಸ್ವತಃ ವಿಜಯೇಂದ್ರ ಬಣರಾಜಕಾರಣದ ಎಪಿಸೋಡಿನಿಂದ ಒಂದು ಹೆಜ್ಜೆ ಹಿಂದೆ ಇರಿಸಿದ್ದಾರೆ. ಅದಾದ ನಂತರವೆ, `ಯತ್ನಾಳ್ ಕೂಡಾ ನಮ್ಮವರೇ, ಆದರೆ ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಅಂತ ರೇಣುಕಾಚಾರ್ಯ ಕೂಡಾ ಸಾಫ್ಟ್ ಕಾರ್ನರ್ ಸ್ಟೇಟ್ಮೆಂಟ್ ಕೊಟ್ಟದ್ದು.
ಮುಂದೇನು? ಬಿಜೆಪಿ-ಆರೆಸ್ಸೆಸ್ಗೆ ಈಗ ಧರ್ಮಸಂಕಟ. ಯಾವುದೂ ಸುಲಭವಿಲ್ಲ. ಯತ್ನಾಳ್ರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾದರೆ, ಆತ ಸುತಾರಾಂ ವಿಜಯೇಂದ್ರನ ಅಧ್ಯಕ್ಷಗಿರಿಯನ್ನಾಗಲಿ, ನಾಯಕತ್ವವನ್ನಾಗಲಿ ಒಪ್ಪಲ್ಲ. ಹೊಂದಾಣಿಕೆಗೆ ವಿಜಯೇಂದ್ರ ಮುಂದೆ ಬಂದರೂ ಯತ್ನಾಳ್ ಒಪ್ಪುವ ಸಾಧ್ಯತೆ ಕಮ್ಮಿ. ಯಾಕೆಂದರೆ, ಇಡೀ ಸಂಘರ್ಷವನ್ನು ಯತ್ನಾಳ್ ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಿಯಾಗಿದೆ. ಹಾಗಂತ ವಿಜಯೇಂದ್ರರನ್ನು ದೂರವಿರಿಸುವ ಪ್ರಯತ್ನ ಮಾಡಿದರೆ ಯಡಿಯೂರಪ್ಪನವರ ಕೆಂಗಣ್ಣಿಗೆ ಗುರಿಯಾಗಿ, ಹಿಂದಿನಂತೆ ಲಿಂಗಾಯತ ಮತಗಳನ್ನು ಕಳೆದುಕೊಳ್ಳಬೇಕಾಗುತ್ತೆ. ಯತ್ನಾಳ್ ಒಡ್ಡಿರುವ ಪ್ರಾದೇಶಿಕ ಪಕ್ಷದ ಇಕ್ಕಟ್ಟು ಇಂತದ್ದು. ಹಾಗಾಗಿಯೇ ಯಡಿಯೂರಪ್ಪನವರ ಜನ್ಮದಿನವಾದ ಫೆಬ್ರವರಿ 27ಕ್ಕೆ ಎಲ್ಲಾ ಸರಿ ಹೋಗಿ, ವಿಜಯೇಂದ್ರರನ್ನು ಅಧಿಕೃತ ಅಧ್ಯಕ್ಷರನ್ನಾಗಿ ಹೈಕಮಾಂಡ್ ಘೋಷಿಸಲಿದೆ ಎಂಬ ಆ ಬಣದ ನಿರೀಕ್ಷೆ, ನಿರೀಕ್ಷೆಯಾಗಿಯೇ ಉಳಿಯಿತು. ಭಿನ್ನಮತವನ್ನು ಸರಿಮಾಡುವ ಫಾರ್ಮುಲಾವೇ ಬಿಜೆಪಿ ಹೈಕಮಾಂಡಿಗೆ ಹೊಳೆಯುತ್ತಿಲ್ಲ. ಘೋಷಣೆಯಾಗಿದ್ದ ರಾಜ್ಯಾಧ್ಯಕ್ಷ ಆಯ್ಕೆಯ ಚುನಾವಣೆ ಕೂಡಾ ಪದೇಪದೇ ಮುಂದೂಡಲ್ಪಡುತ್ತಿರುವುದು ಇದೇ ಕಾರಣಕ್ಕೆ.
ಒಂದಂತೂ ಸತ್ಯ, ತಾವೇ ಕುಮ್ಮಕ್ಕು ಕೊಟ್ಟು ಬೆಳೆಸಿದ ಯತ್ನಾಳ್ ಈಗ ಬಿಜೆಪಿ-ಆರೆಸ್ಸೆಸ್ ಪಾಲಿಗೆ not so easy….
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು




