ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ ಆಗಬೇಕಾಗಿರುವ ವಿಚಾರಗಳು ಎಷ್ಟೋ?

1 year ago

ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆಯಾಗಬೇಕಾಗಿರುವುದು ವಿಚಾರಗಳು ಎಷ್ಟೋ.  ಆದರೆ ಪ್ರಥಮ ಬಾರಿಗೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವಿಚಾರದಲ್ಲಿ ಚರ್ಚೆಯಾಗುತ್ತಿದೆ. ಸಮ್ಮೇಳನಕ್ಕೆ ಬರುವವರಿಗೆ ಯಾವ ಊಟ ಬೇಕಾದರೂ ಮಾಡುವಂತಹ ಸ್ವಾತಂತ್ರವಿದೆ.

ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಾಹಿತ್ಯದ ವಿಚಾರಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುವ ಸಲುವಾಗಿ. ಇಲ್ಲಿ ಯಾವ, ಯಾವ ವಿಚಾರಗಳು ಚರ್ಚೆಯಾಗುತ್ತದೆ, ಕವಿಗೋಷ್ಠಿಯಲ್ಲಿ ಯಾರು ಭಾಗವಹಿಸುತ್ತಾರೆ, ಸಾಹಿತ್ಯದ ಯಾವ ವಿಚಾರಗಳು ಮಂಡನೆಯಾಗುತ್ತವೆ, ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಯಾವ ಹೊಸ ವಿಚಾರಗಳಿರುತ್ತವೆ, ಉದ್ಘಾಟಕರು ಮತ್ತು ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವವರು ಯಾವ ರೀತಿಯಲ್ಲಿ ಸಮ್ಮೇಳನದಲ್ಲಿ ಪ್ರಸ್ತಾಪವಾಗುವ ವಿಚಾರಗಳಿಗೆ ಸ್ಪಂದಿಸುತ್ತಾರೆ ಎನ್ನುವಂತಹ ವಿಚಾರಗಳಿಗೆ ಹೆಚ್ಚು ಆಸಕ್ತಿಯನ್ನು ಹೊಂದಿರುತ್ತಾರೆ.

ಸಾಹಿತ್ಯ ಸಮ್ಮೇಳನ ಸಮಸ್ತ ಕನ್ನಡಿಗರ ಸಂಭ್ರಮದ ಸಮಾವೇಶವಾಗಿರುತ್ತದೆ. ಪರಸ್ಪರ ವಿಚಾರ ವಿನಿಮಯ ಸಾಹಿತ್ಯದ ಸಂಗತಿಗಳನ್ನು ಹಂಚಿಕೊಳ್ಳುವಂತಹ ಪ್ರಮುಖವಾದಂತಹ ಕ್ಷಣಗಳಾಗಿರುತ್ತದೆ. ಇಲ್ಲಿ ಊಟಕ್ಕೆ ಹೆಚ್ಚಿನ ಮಹತ್ವವನ್ನು ಕೊಡುತ್ತಾ ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶವನ್ನೇ ನಿರ್ಲಕ್ಷಿಸುವಂತಾಗಬಾರದು.

ಈ ವಿಚಾರದಲ್ಲಿ ಹೆಚ್ಚು ಚರ್ಚೆಯನ್ನ ಮಾಡುವುದು ಸಹ ಅವಶ್ಯವಿಲ್ಲ. ಯಾರಿಗೆ ಯಾವ ಊಟ ಇಷ್ಟವಾಗುತ್ತದೆ ಅದನ್ನು ಅವರು ಸ್ವೀಕರಿಸಿ ಸಂಭ್ರಮದಿಂದ ಸಮ್ಮೇಳನದಲ್ಲಿ ಭಾಗವಹಿಸಿ ಕನ್ನಡದ ಧ್ವಜವನ್ನ ಮತ್ತಷ್ಟು ಎತ್ತರಕ್ಕೆ ಏರಿಸಿ.

ಪ್ರಕಾಶಕರು ಮತ್ತು ಮುದ್ರಕರು ಹಾಗೂ ಲೇಖಕರು ತಮ್ಮ ಕೃತಿಗಳನ್ನ ಮಾರಾಟ ಮಾಡಿ ತಮ್ಮ ಶ್ರಮಕ್ಕೆ ಒಂದಷ್ಟು ಫಲವನ್ನ ಪಡೆದುಕೊಂಡು ಅವರ ಸಾಧನೆ ಮತ್ತು ಸೇವೆಗೆ ಸೂಕ್ತವಾದಂತಹ ಗೌರವ ಐದೊರೆಯುವಂತಾದರೆ ಸಾರ್ಥಕವಾಗುತ್ತದೆ.

ಪ್ರತಿ ವರ್ಷವೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಅವರಿಗೊಂದು, ಕಾರು ನೀಡಿ ಒಬ್ಬ ಸಹಾಯಕರ ವ್ಯವಸ್ಥೆಯನ್ನು ಮಾಡಿಕೊಟ್ಟು ಒಂದು ವರ್ಷಗಳ ಕಾಲ ಕನ್ನಡದ ವಿಚಾರವನ್ನು ರಾಜ್ಯದಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡುವ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು ಕೇಳುತ್ತಲೇ ಇರುತ್ತಾರೆ. ಸರ್ಕಾರಗಳು ಈ ದಿಕ್ಕಿನಲ್ಲಿ ಗಮನ ಹರಿಸುವುದಿಲ್ಲ. ಈ ಬಾರಿಯಾದರೂ ಸಮ್ಮೇಳನದ ಅಧ್ಯಕ್ಷರಿಗೆ ಮುಂದಿನ ಒಂದು ವರ್ಷಗಳ ಕಾಲ ರಾಜ್ಯದಾದ್ಯಂತ ಪ್ರವಾಸ ಮಾಡಿ ಕನ್ನಡದ ವಿಚಾರವನ್ನು ಹಳ್ಳಿಹಳ್ಳಿಗೆ ಮುಟ್ಟಿಸಲು ಬೇಕಾಗುವ ಸಾರಿಗೆ ಮತ್ತು ಸಿಬ್ಬಂದಿ ವ್ಯವಸ್ಥೆಯನ್ನು ಮಾಡಿಕೊಡುವಂತಹ ಕೆಲಸವನ್ನ ಮಾಡಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply