ಸಿಎಂ ಹುದ್ದೆಯ ಬದಲಿಗೆ ದಕ್ಷತೆ ಮತ್ತು ಗುಣಮಟ್ಟದ ಆಡಳಿತಕ್ಕಾಗಿ ಪೈಪೋಟಿ ನಡೆಯಲಿ 

2 years ago

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇರುವಾಗಲೇ ಅನೇಕರು ಮುಂದಿನ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಜನರಿಗೆ ಬೇಕಿರುವುದು ಗುಣಮಟ್ಟದ ಆಡಳಿತ ಮತ್ತು ಸ್ಪಂದನ ಶೀಲ ಆಡಳಿತ ವ್ಯವಸ್ಥೆ. ಪೈಪೋಟಿಯನ್ನ ನಡೆಸಬೇಕಾದದ್ದು ಮಂತ್ರಿಗಳು ತಮ್ಮ ನಡುವೆ ದಕ್ಷತೆಯಲ್ಲಿ ಮತ್ತು ಪ್ರಾಮಾಣಿಕತೆಯಲ್ಲಿ ಹೊರತು ,ಮುಖ್ಯಮಂತ್ರಿ ಸ್ಥಾನಕ್ಕಾಗಿಯಲ್ಲ .

ಹಿಂದೆ ಅನೇಕ ಸರ್ಕಾರಗಳಲ್ಲಿ ಮಂತ್ರಿಗಳಾಗಿದ್ದವರು ಮುಂದಿನ ಮುಖ್ಯಮಂತ್ರಿಗಳಾಗಬಲ್ಲ ಸಮರ್ಥರು ಎನ್ನುವ ರೀತಿಯಲ್ಲಿ ಜನರ ಮನಸ್ಸಿನಲ್ಲಿ ಭಾವನೆ ಮೂಡಿತ್ತು. ಆ ರೀತಿಯಲ್ಲಿ ಮಂತ್ರಿಗಳು ಕೆಲಸವನ್ನು ಮಾಡಿದರೆ ಜನರೇ ಗುರುತಿಸಿ ಸ್ಥಾನಮಾನವನ್ನು ಕೊಡುತ್ತಾರೆ. ಕೇವಲ ಯಾರೋ ಹಿಂಬಾಲಕರು ಹೇಳಿದ ಮಾತ್ರಕ್ಕೆ ಅವರ ಕಡೆಯ ಒಂದಷ್ಟು ಮಂದಿ ಕೂಗಿದ ಮಾತ್ರಕ್ಕೆ ಯಾರೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ .

ಮಂತ್ರಿಗಳಲ್ಲಿ ಹೆಚ್ಚುಹೆಚ್ಚು ಯೋಜನೆಗಳನ್ನು ಜಾರಿಗೊಳಿಸಿ, ಸರ್ಕಾರದ ಕಾರ್ಯಕ್ರಮಗಳನ್ನ ಅನುಷ್ಠಾನಗೊಳಿಸಿ, ತಮ್ಮ ಇಲಾಖೆಗಳಲ್ಲಿ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಿ, ಸಂಪನ್ಮೂಲವನ್ನು ಕ್ರೂಡೀಕರಿಸುವ ನಿಟ್ಟಿನಲ್ಲಿ, ತಮ್ಮ ಬುದ್ಧಿವಂತಿಕೆಯನ್ನ ಪ್ರದರ್ಶಿಸಬೇಕೆ ಹೊರತು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿಯಲ್ಲಲ್ಲ .

ಇಂದಿಗೂ ಅನೇಕ ಸರ್ಕಾರಗಳಲ್ಲಿ ಮಂತ್ರಿಗಳಾಗಿದ್ದ ಕೆಲವರನ್ನು ಅವರು ಮುಖ್ಯಮಂತ್ರಿ ಆಗದಿದ್ದರೂ ಜನರು ಅವರ ಕಾರ್ಯಗಳಿಗಾಗಿ ನೆನಪು ಮಾಡಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಅನೇಕರು ಮುಖ್ಯಮಂತ್ರಿಗಳಾಗಿದ್ದರು ಯಾವ ಹೆಜ್ಜೆ ಗುರುತುಗಳು ಬಿಟ್ಟು ಹೋಗದ ಕಾರಣದಿಂದ ಜನ ಅವರ ಮನಸ್ಸಿನಲ್ಲಿ ಅವರು ಉಳಿದುಕೊಂಡಿಲ್ಲ.

ಕರ್ನಾಟಕ ರಾಜ್ಯ ರಾಜ್ಯದ ಜನತೆ 136 ಸ್ಥಾನಗಳನ್ನು ಕೊಟ್ಟಿರುವುದು ಆಡಳಿತವನ್ನು ನಡೆಸಿಕೊಂಡು ಜನರಿಗೆ ಅನುಕೂಲ ಮಾಡಿಕೊಡಲಿ ಎಂದು. ಪದೇಪದೇ ಪ್ರತಿಯೊಬ್ಬರು ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮಾತನಾಡುವುದು ಶೋಭೆ ತರುವುದಿಲ್ಲ. ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರತಿಯೊಬ್ಬ ಜನರಿಗೂ ತಮ್ಮದೇ ಆದಂತಹ ದುಃಖಗಳಿವೆ. ಸಮಸ್ಯೆ ಇವೆ. ಅವುಗಳನ್ನ ಪರಿಹರಿಸುವ ನಿಟ್ಟಿನಲ್ಲಿ ಹೆಚ್ಚು ಗಮನವನ್ನು ನೀಡಬೇಕೆ ಹೊರತು ಮುಖ್ಯಮಂತ್ರಿ ವಿಚಾರದಲ್ಲಿ ಅಲ್ಲ. ಮಂತ್ರಿಗಳು ತಮ್ಮ ಇಲಾಖೆಗಳ ಬಗ್ಗೆ ಮಾತನಾಡಿದರೆ ಅದು ಒಪ್ಪುವಂತೆ ಮಾತಾಗಿರುತ್ತದೆ. ಕೆಲಸಕ್ಕೆ ಬಾರದ ವಿಚಾರವನ್ನು ಮಾತನಾಡಬಾರದು.

ಹಾಲಿ ರಾಮಲಿಂಗ ರೆಡ್ಡಿಯವರು ತಮ್ಮ ಇಲಾಖೆಯಲ್ಲಿ ಪ್ರತಿದಿನವೂ ಅನೇಕ ಯೋಜನೆಗಳನ್ನು ಜಾರಿಗೊಳಿಸುವುದರ ಮೂಲಕ ತಾವು ವಹಿಸಿಕೊಂಡಂತಹ ಖಾತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಸದಾ ಜನ ಪರವಾದಂತಹ ನಿಲುವುಗಳಿಂದ ಜನರ ಮನಸ್ಸಿನಲ್ಲಿ ಹೆಚ್ಚು ಗೌರವಕ್ಕೆ ಪಾತ್ರರಾಗಿದ್ದಾರೆ.

ಅದೇ ರೀತಿಯಲ್ಲಿ ಕೃಷ್ಣಬೈರೇಗೌಡ ಅವರು ಅನೇಕ ಬದಲಾವಣೆಗಳನ್ನು ಕಂದಾಯ ಇಲಾಖೆಯಲ್ಲಿ ತರುವಂತಹ ಪ್ರಯತ್ನಗಳನ್ನ ಮಾಡುತ್ತ ತಮ್ಮ ಖಾತೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಆರೋಗ್ಯ ಸಚಿವರಾದಂತಹ ದಿನೇಶ್ ಗುಂಡೂರಾವ್ ಸಹ ತಮ್ಮ ಇಲಾಖೆಯ ವಿಚಾರದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಆರೋಗ್ಯ ಇಲಾಖೆಯಲ್ಲಿನ ಅನಾರೋಗ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಆಸಕ್ತಿಯಿಂದ ದುಡಿಯುತ್ತಿದ್ದಾರೆ.

ಶರಣಪ್ರಕಾಶ್ ಪಾಟೀಲ್ ರವರು ಸಹ ತಮ್ಮ ಇಲಾಖೆಯ ಬಗ್ಗೆ ಗಮನವನ್ನು ಹರಿಸಿದ್ದಾರೆ. ಹಿರಿಯರಾದ ಜಾರ್ಜ್ ರವರು ಯಾವುದೇ ರೀತಿಯ ಗೊಂದಲಗಳಿಲ್ಲದೆ ತಮ್ಮ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಉಪಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರು ನಾಡಿನ ಬಹುತೇಕ ನೀರಾವರಿ ಯೋಜನೆಗಳ ಕಡೆ ಹೆಚ್ಚಿನ ಆಸಕ್ತಿಯಿಂದ ದುಡಿಯುತ್ತಾ ಅವುಗಳನ್ನ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶ್ರಮವನ್ನ ವಹಿಸಿ ಈಗಾಗಲೇ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಲೋಕಾರ್ಪಣೆಯನ್ನು ಮಾಡುವುದರ ಮೂಲಕ ಜನರಲ್ಲಿ ವಿಶ್ವಾಸವನ್ನು ಗಳಿಸಿದ್ದಾರೆ.

ಹಿರಿಯ ಸಚಿವರಾದ ಎಚ್ ಕೆ ಪಾಟೀಲರು ಗಾಂಭೀರ್ಯದಿಂದ ಖಾತೆಯನ್ನು ನಿರ್ವಹಿಸುತ್ತಿದ್ದಾರೆ. ಉತ್ಸಾಹದಿಂದ ಸಂತೋಷ್ ಲಾಡ್ ರವರು ಮತ್ತು ಪ್ರಿಯಾಂಕ ಖರ್ಗೆ ಅವರು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಹೀಗೆ ಅನೇಕರು ತಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿದ್ದಾರೆ. ಇದರ ನಡುವೆ ಕೆಲವು ಸಚಿವರು ತಮ್ಮ ಇಲಾಖೆಯ ಬಗ್ಗೆ ಮಾತನಾಡುವುದಕ್ಕಿಂತ ಗೊಂದಲದ ಹೇಳಿಕೆಗಳನ್ನು ಕೊಡುವುದರಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಪಡೆಯಬೇಕಾದರೆ ಹಿರಿತನದ ಜೊತೆಗೆ ಶ್ರಮ ಲೆಕ್ಕಕ್ಕೆ ಬರುತ್ತದೆ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಕಾರ್ಯಕರ್ತರಲ್ಲಿ ಉತ್ಸಾಹವನ್ನು ತುಂಬುವಲ್ಲಿ ವಿನೂತನವಾದ  ಸಂಘಟನಾತ್ಮಕವಾದ ಯೋಜನೆಗಳ ಮೂಲಕ, ಪಕ್ಷವನ್ನು ಹಳ್ಳಿಹಳ್ಳಿಗೆ ಮುಟ್ಟಿಸಿದಂತಹ ನಾಯಕರು ಯಾರು ಎನ್ನುವ ವಿಚಾರವೂ ಸಹ ಇಲ್ಲಿ ಪರಿಗಣಿಸಲ್ಪಡುತ್ತದೆ.

ಸರ್ಕಾರವನ್ನು ತುರುವಲ್ಲಿ ಯಾರ ಯಾರ ಶ್ರಮ ಎಷ್ಟು ಇದೆ, ಎಷ್ಟರಮಟ್ಟಿಗೆ ಬೆವರು ಸುರಿಸಿದ್ದಾರೆ, ತಮ್ಮ ಕ್ಷೇತ್ರ, ಜಿಲ್ಲೆ, ತಮ್ಮ ಭಾಗವನ್ನ ಮೀರಿ, ಯಾರು ದುಡಿದಿದ್ದಾರೆ ಎನ್ನುವುದು ವರಿಷ್ಠರು ಗಮನಿಸಿಯೆ ಅಗತ್ಯವಾದ ಸಂದರ್ಭದಲ್ಲಿ ಮಾತ್ರ ಕ್ರಮಗಳನ್ನು ಕೈಗೊಳ್ಳುತ್ತಾರೆ. ಅನಾವಶ್ಯಕವಾದಂತಹ ವಿಚಾರಗಳನ್ನ ಅಗತ್ಯವಿಲ್ಲದ ಸಂದರ್ಭದಲ್ಲಿ ಮಾತನಾಡುವುದು ವಿರೋಧ ಪಕ್ಷದವರ ಬಾಯಿಗೆ ಆಹಾರವನ್ನು ಕೊಟ್ಟಂತಾಗುತ್ತದೆ. ಜನರ ಮನಸ್ಸಿನಲ್ಲಿ ಸರ್ಕಾರದ ಬಗ್ಗೆ ಬೇಸರಿಕೆ ಉಂಟಾಗುತ್ತದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply