ನನಗೆ ನನ್ನ ಟೀಚರ್ ಆದವರು ಹೀಗಿರಬೇಕು ಎಂಬ ಒಂದು ಕನಸಿತ್ತು.
ನನ್ನ ಟೀಚರ್ ನನ್ನ ಜೊತೆ ಪ್ರೀತಿಯಿಂದ ಮಾತಾಡಬೇಕು. ನನ್ನ ಪಕ್ಕದಲ್ಲೇ ಕುಳಿತು ಪಾಟ ಹೇಳಿಕೊಡಬೇಕು. ಆ ಕ್ಷಣ ನನಗೆ ಬರುವ ಅನುಮಾನಗಳನ್ನು ಅಲ್ಲೇ ಪರಿಹರಿಸಬೇಕು. ಅದಕ್ಕಿಂತ ಮುಕ್ಯವಾಗಿ ಅವರು ನನ್ನ ಅಬಿಪ್ರಾಯವನ್ನೂ ಆ ಪಾಟ ವಿಷಯದ ಬಗ್ಗೆ ಕೇಳಬೇಕು. ನನ್ನ ಅಬಿಪ್ರಾಯ ಸರಿ ಇದ್ರೆ ಅವರು ಮೆಚ್ಚುಗೆ ಸೂಚಿಸಬೇಕು. ಹೊಡೆಯದ, ಬಡಿಯದ, ಗದರಿಸದ ಟೀಚರ್ ಅವರಾಗಿರಬೇಕು. ತಮ್ಮ ಪಾಟದ ಬಗ್ಗೆ ದಿನವೂ feedback ಪಡೆಯುವ, ಅದರ ಆದಾರದಲ್ಲಿ ಮರುದಿನ ಉತ್ತಮಪಡಿಸಿಕೊಳ್ಳುವ ಟೀಚರ್ ಅವರಾಗಿರಬೇಕು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ನನಗೊಬ್ಬ ಒಳ್ಳೆಯ ಗಣಿತ ಟೀಚರ್ ಇರಬೇಕು ಅಂತ ಕನಸಿತ್ತು. ಆ ನನ್ನ ಟೀಚರ್ ನನಗೆ ಕಷ್ಟ ಎನಿಸುವ ಗಣಿತವನ್ನು ನನಗೆ ಅರ್ತವಾಗುವಂತೆ ಬಿಡಿಸಿ ಹೇಳಿಕೊಡಬೇಕಾಗಿತ್ತು. ಅವರು ಪಾಟ ಮಾಡುತ್ತಿರುವಾಗ ನನಗೆ ಅರ್ತವಾಗದೇ ಇದ್ದರೆ ಅದನ್ನು ಅವರು ನನ್ನ ಕಣ್ಣುಗಳಲ್ಲೇ ಗುರುತಿಸಿ ನನ್ನ ಬಳಿ ಬಂದು ನನಗೆ ಯಾಕೆ ಅರ್ತವಾಗುತ್ತಿಲ್ಲ ಎಂದು ನೋಡಿ ನನಗೆ ಕಲಿಸಿಕೊಡಬೇಕಾಗಿತ್ತು.
ನಾನು ಎಂಟನೆಯ ತರಗತಿ ಇದ್ದಾಗ ಕಿರುಪರೀಕ್ಷೆಯಲ್ಲಿ ಗಣಿತದಲ್ಲಿ ಇಪ್ಪತ್ತೈದಕ್ಕೆ ಬರೀ ಮೂರು ಐದು ಅಂಕಗಳನ್ನು ತೆಗೆಯುತ್ತಿದ್ದಾಗ ನನ್ನ ಗಣಿತ ಟೀಚರ್ ನನ್ನ ಬಳಿ ಬಂದು ನಾನು ಇಪ್ಪತ್ತೈದಕ್ಕೆ ಇಪ್ಪತ್ತು ಅಂಕ ಗಳಿಸುವ ರೀತಿಯಲ್ಲಿ ನನಗೆ ಹೇಳಿಕೊಡಬೇಕಾಗಿತ್ತು. ಯಾಕೆಂದರೆ ಅವರು ಮಾಡುತ್ತಿದ್ದ ಪಾಟಗಳೇ ನನಗೆ ಅರ್ತವಾಗುತ್ತಿರಲಿಲ್ಲ. ಆದರೆ ಹತ್ತನೇ ತರಗತಿಯಲ್ಲಿ ಪ್ರಿಪರೇಟರಿ ಪರೀಕ್ಷೆಯಲ್ಲಿ ಗಣಿತದಲ್ಲಿ ಪೇಲಾಗಿದ್ದ ನಾನು ಪಬ್ಲಿಕ್ ಪರೀಕ್ಷೆಯಲ್ಲಿ ಗಣಿತದಲ್ಲಿ ಎಪ್ಪತ್ತಾರು ಅಂಕ ಗಳಿಸುವಾಗ ಅದಕ್ಕೆ ಯಾವ ಟೀಚರೂ ಕಾರಣವಾಗಲಿಲ್ಲ ಅನ್ನೋದೇ ಬೇಸರ. ಆದರೆ ಪ್ರತಿಹಂತದಲ್ಲಿ ನನ್ನ ಯಶಸ್ಸಿಗೆ ಕಾರಣವಾಗುವ ಟೀಚರ್ ನನಗೆ ಬೇಕಾಗಿತ್ತು.
ನನಗೊಬ್ಬ ಒಳ್ಳೆಯ ಇಂಗ್ಲಿಷ್ ಟೀಚರ್ ಇರಬೇಕಾಗಿತ್ತು. ಆ ಟೀಚರ್ ಸುಮ್ಮನೇ ಪಾಟ ಓದಿಕೊಂಡು, ಅರ್ತ ಹೇಳಿ, ಪ್ರಶ್ನೆಗೆ ಉತ್ತರ ಹೇಳಿ ಮನೆಗೆ ಓಡುವ ಟೀಚರ್ ಆಗದೇ ಪಾಟ ನನಗೆ ಅರ್ತವಾಗಿದೆಯೋ ಇಲ್ಲವೋ ನೋಡಿಕೊಂಡು ನನಗೆ ಅರ್ತವಾಗದ್ದನ್ನು ಹೇಳಿಕೊಡುವ ಟೀಚರ್ ಆಗಿರಬೇಕಾಗಿತ್ತು. ಆ ಟೀಚರ್ ತಾನು ಇಂಗ್ಲಿಷ್ ಎಂ ಎ ಓದಿಕೊಂಡು ಬಂದ ಬಹಳ ಪ್ರತಿಬಾನ್ವಿತೆ ಎಂಬುದನ್ನು ಮರೆತು ಅವರು ಹೇಳಿಕೊಡುತ್ತಿರುವುದು ಹಳ್ಳಿಯಿಂದ ಅನನುಕೂಲಕರ ಪರಿಸ್ತಿತಿಗಳಲ್ಲಿ ಓದು ಬರೆಹ ಮಾಡುತ್ತಿದ್ದ ಮಕ್ಕಳಿಗೆ ಎಂಬುದನ್ನು ನೆನಪಿಟ್ಟುಕೊಂಡು ಪಾಟ ಮಾಡುವ ಇಂಗ್ಲಿಷ್ ಟೀಚರ್ ಆಗಿರಬೇಕಿತ್ತು. ಆ ಟೀಚರ್ ನನ್ನನ್ನು ಹಂತಹಂತವಾಗಿ ಇಂಗ್ಲಿಷ್ ಬಾಶೆಯ ಮೇಲೆ ಹಿಡಿತ ಹೆಚ್ಚಿಸುವ ಟೀಚರ್ ಆಗಿರಬೇಕಾಗಿತ್ತು. ಆದರೆ ಯಾವ ಪ್ರೈಮರಿ ಟೀಚರ್ ಹಾಗಾಗಲಿಲ್ಲ.
ಹೈಸ್ಕೂಲಿನಲ್ಲಿ ನನ್ನ ಇಂಗ್ಲಿಷ್ ಎಕ್ಸೆಲೆಂಟಾಗಿತ್ತು. ಅದಕ್ಕೆ ಯಾವ ಟೀಚರೂ ಕಾರಣರಾಗಿರಲಿಲ್ಲ. ಹತ್ತನೇ ತರಗತಿಯಲ್ಲಿ ಇಂಗ್ಲಿಷ್ ಪಾಟ ಮಾಡುವ ಮೇಸ್ಟ್ರು ಮಾತ್ರ ಗ್ರಾಮರ್ ಪಾಟದಲ್ಲಿ ಏನೇ ಕೇಳಿದ್ರೂ ಸರಿಯಾಗಿ ಹೇಳ್ತಾ ಇದ್ದುದು ನಾನೊಬ್ಬನೇ. ಸಾಗರ ಪೇಟೆಯ ನನಗಿಂತ ಉತ್ತಮ ಸ್ತಿತಿಗತಿಯ ಕುಟುಂಬದಿಂದ ಬಂದಿದ್ದ ಸಹಪಾಟಿಗಳ ಎದುರು ಅವರೆಲ್ಲರಿಗಿಂತ ನಾನು ಇಂಗ್ಲಿಷ್ ನಲ್ಲಿ ಉತ್ತಮವಾಗಿದ್ದದ್ದು ಒಂತರಾ ಹೆಮ್ಮೆಯೆನಿಸುತ್ತಿತ್ತು ನನಗೆ. ಆದರೆ ಅಂತಹ ಹೆಮ್ಮೆ ನನ್ನಂತ ನನ್ನ ಎಲ್ಲಾ ಸಹಪಾಟಿಗಳಿಗೆ ಮೂಡಿಸುವಂತಾ ಟೀಚರ್ ಸಿಗಬೇಕಿತ್ತು.
ಕಾಲೇಜು ಹಂತದಲ್ಲಿ ನನ್ನ ಸಹಪಾಟಿಗಳಲ್ಲಿ ಹೆಚ್ಚಿನವರಿಗೆ ಇಂಗ್ಲಿಷ್ ಪಾಟಗಳು ಅರ್ತವಾಗುತ್ತಿರಲಿಲ್ಲ. ಅವರಿಗೆ ಅರ್ತವಾಗುತ್ತಿದ್ದುದು ಒಂದೇ, “ಈ ಮೇಸ್ಟ್ರು ಸಕತ್ ಇಂಗ್ಲಿಷ್ ಓದ್ಕಂಡಿದಾನೆʼ ಎಂಬ ವಿಷಯ ಮಾತ್ರ. ಅದೇ ಮೇಸ್ಟ್ರು ನಮ್ಮ ಬೌದ್ದಿಕ ಮಟ್ಟಕ್ಕೆ ಅರ್ತವಾಗುವಂತೆ ಪಾಟ ಮಾಡುವ ನಿರೀಕ್ಷೆಯನ್ನೂ ಅವರು ಇಟ್ಟುಕೊಳ್ಳುವಂತಿರಲಿಲ್ಲ. ಆದರೆ ನಾವು ತುಂಬಾ ನಿರೀಕ್ಷೆ ಇಟ್ಟುಕೊಂಡು ಅದರಂತೆ ನಮ್ಮನ್ನು ಬೆಳೆಸುವ ಟೀಚರ್ ಅವರಾಗಬೇಕಿತ್ತು. ಆ ಟೀಚರ್ ತರಗತಿಯ ಬುದ್ದಿವಂತರನ್ನೇ ಮತ್ತೆ ಮತ್ತೆ ಪ್ರೋತ್ಸಾಹಿಸದೇ ಹೆಚ್ಚಿನ ಎಲ್ಲಾ ಹಿಂದುಳಿದವರ ಇಂಗ್ಲಿಷ್ ಬಾಶಾ ಸಾಮರ್ತ್ಯವನ್ನು ಬೆಳೆಸುವ ಟೀಚರ್ ಅವರಾಗಬೇಕಿತ್ತು. ಅದಕ್ಕಾಗಿ ಹೆಚ್ಚುವರಿ ಸಮಯ ಕಳೆಯುವ ಟೀಚರ್ ಅವರಾಗಬೇಕಿತ್ತು.
ನಾನಾಗ ಪಿಯುಸಿಯಲ್ಲಿ ಹೊಸಹೊಸದನ್ನು ಓದುತ್ತಿದ್ದಾಗ ನಾನು ಓದಿದ್ದನ್ನು ನನ್ನ ಜೊತೆಗೆ ಕುಳಿತು ಚರ್ಚಿಸುವ ಟೀಚರ್ ನನಗೆ ಸಿಗಬೇಕಿತ್ತು. ಅರೆ, ನಮ್ಮ ಪಾಟದಲ್ಲಿರುವುದೇ ಒಂದು, ಸಮಾಜದಲ್ಲಿ ನಡೆಯುವುದೇ ಒಂದು, ಯಾಕೆ ಹೀಗೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡುತ್ತಿದ್ದಾಗ ನನ್ನ ಮನಸಿಗೆ ಸಮಾದಾನದ ಉತ್ತರ ಹೇಳಬಲ್ಲ ಟೀಚರ್ ನನಗೆ ಸಿಗಬೇಕಿತ್ತು. ತಾವು ಮಾಡುವ ಪಾಟದ ಆಚೆಗೆ ಒಂದೇ ಒಂದು ವಿಷಯವನ್ನೂ ತಿಳಿದುಕೊಳ್ಳದಿದ್ದ ಆ ಟೀಚರ್ ಬದಲಿಗೆ ಪ್ರಪಂಚದ ಯಾವುದೇ ವಿಷಯವನ್ನೂ ನನ್ನೊಂದಿಗೆ ಚರ್ಚಿಸುವ ಟೀಚರ್ ಅವರಾಗಬೇಕಿತ್ತು. ನಾನು ಓದಿದ್ದನ್ನು ಅವರೂ ಓದುವ, ಅವರು ಓದಿದ್ದನ್ನು ನನಗೂ ಓದಿಸುವ ನಂತರ ನನ್ನೊಂದಿಗೆ ಚರ್ಚಿಸುವ ಟೀಚರ್ ಅವರಾಗಬೇಕಿತ್ತು.
ಪ್ರೈಮರಿಯಲ್ಲಿ ನನ್ನ ಸ್ನೇಹಿತನೊಬ್ಬ ಕೂಲಿ ಮಾಡುತ್ತಿದ್ದ, ಆದರೆ ನನಗಿಂತಲೂ ಪ್ರತಿಬಾವಂತ. ಐದನೇ ತರಗತಿಯಲ್ಲೆ ಜಂಬಿಟ್ಟಿಗೆ ಕಲ್ಲು ಕೆತ್ತಲು ಹೋಗುತ್ತಿದ್ದ. ಆಗಲೇ ಅವನು ಕವಿತೆಗಳನ್ನು ಬರೆಯುತ್ತಿದ್ದ. ಆಗ ನನಗೆ ಹೊಟ್ಟೆಕಿಚ್ಚಾಗುತ್ತಿತ್ತು ಅವನನ್ನು ಕಂಡು. ಆದರೆ ಮುಂದೆ ಅವನು ಶಾಲೆ ಬಿಟ್ಟ. ನಾನು ಕಾಲೇಜು ಮೆಟ್ಟಿಲು ಹತ್ತಿದೆ. ಈಗ ಯೋಚಿಸುತ್ತೇನೆ ಆ ನನ್ನ ಗೆಳೆಯನನ್ನು ನನ್ನೊಂದಿಗೆ ಕಾಲೇಜು ಮೆಟ್ಟಿಲು ಹತ್ತುವಂತೆ ಮಾಡುವ ಒಬ್ಬ ಟೀಚರ್ ನನಗೆ ಸಿಗಬೇಕಿತ್ತು. ಆಗ ನನ್ನ ಆ ಗೆಳೆಯ ಇಂದು ಒಂದು ದೊಡ್ಡ ಹುದ್ದೆಯಲ್ಲಿರುತ್ತಿದ್ದ. ಹಾಗೆ ಮಾಡುವ ಟೀಚರ್ ನನಗೆ ಸಿಗಲಿಲ್ಲ. ಬೆಳಿಗ್ಗೆ ಹೀಗೆ ಬಂದು ಸಂಜೆ ಹಾಗೆ ಓಡುವ, ತಮ್ಮ ಮಕ್ಕಳನ್ನು ಮಾತ್ರ ಒಳ್ಳೆಯ ಶಾಲೆಗಳಿಗೆ ಕಳಿಸಿ ತಮ್ಮ ವಿದ್ಯಾರ್ತಿಗಳ ಪರಿಸ್ತಿತಿಗಳನ್ನೊಂದೂ ಯೋಚಿಸದೇ ಹೋದ ಆ ಟೀಚರುಗಳ ಬದಲಿಗೆ ಕಾಳಜಿ ಹೊಂದಿದ್ದ ಟೀಚರ್ ನನಗೆ ಸಿಗಬೇಕಿತ್ತು.
ನನಗೆ ಒಳ್ಳೆಯ ವಿಜ್ಞಾನ ಟೀಚರ್ ಸಿಗಬೇಕಿತ್ತು. ವಿಜ್ಞಾನ ಅನ್ನೋದು ಒಂದು ಅದ್ಬುತ ಅನ್ನೋದನ್ನು ಹೇಳಿಕೊಡುವ ಟೀಚರ್ ಸಿಗಬೇಕಿತ್ತು. ಈ ವಿಶ್ವದ ಬಗ್ಗೆ ಅಪಾರ ಕುತೂಹಲ ಹೆಚ್ಚಿಸುವ, ಪ್ರಶ್ನೆ ಮಾಡುವುದನ್ನು ಕಲಿಸುವ, ನನ್ನ ಪ್ರಶ್ನೆಗಳಿಗೆ ಜೊತೆಗೂಡಿ ಉತ್ತರ ಹುಡುಕುವ ಒಬ್ಬ ಒಳ್ಳೆಯ ಸೈನ್ಸ್ ಟೀಚರ್ ನನಗೆ ಸಿಗಬೇಕಿತ್ತು. ಸೈನ್ಸ್ ಪಾಟಗಳನ್ನು ಬರೀ ಅಂಕಗಳಿಸಲು ನೋಟ್ಸ್ ಕೊಡುವುದಕ್ಕೆ, ಸೂತ್ರಗಳನ್ನು ಬಾಯಿಪಾಟ ಮಾಡಿಸುವುದಕ್ಕೆ ಸೀಮಿತವಾಗದೇ ವಿಜ್ಞಾನದ ಆವಿಷ್ಕಾರಗಳನ್ನು ದೈನಂದಿನ ಬದುಕಿನ ರೀತಿಗೆ ಸಂಬಂದಿಸಿ ನೋಡುವುದನ್ನು ಕಲಿಸುವ, ಈ ಸಮಾಜವನ್ನು, ಹೊರಜಗತ್ತನ್ನು, ಮನುಶ್ಯನ ಒಳಜಗತ್ತನ್ನು ಅರಿಯಲು ವಿಜ್ಞಾನ ಹೇಗೆ ಸಹಾಯ ಮಾಡುತ್ತದೆ ಎಂದು ಹೇಳಿಕೊಡುವ ವಿಜ್ಞಾನ ಟೀಚರ್ ನನಗೆ ಸಿಗಬೇಕಿತ್ತು.
ನನಗೆ ಒಳ್ಳೆಯ ಸಮಾಜ ವಿಜ್ಞಾನಿ ಟೀಚರ್ ಸಿಗಬೇಕಿತ್ತು. ರಾಜ ರಾಣಿಯರ ಕತೆಗಳ ಆಚೆಗೆ, ರಾಜಮನೆತನಗಳ ಹೆಸರುಗಳನ್ನು , ಅವರಿದ್ದ ಇಸವಿಗಳನ್ನು ಬಾಯಿಪಾಟ ಮಾಡಿಸುವ ಇತಿಹಾಸದ ಆಚೆಗೆ ಸಮಾಜದ ಚಕ್ರ ಜನಸಾಮಾನ್ಯರಿಂದ ಹೇಗೆ ಕಟ್ಟಲ್ಪಟ್ಟಿತು ಎಂದು ಹೇಳಿಕೊಡುವ ಟೀಚರ್ ನನಗೆ ಸಿಗಬೇಕಿತ್ತು. ಈಜಿಪ್ಟಿನ ಪಿರಮಿಡ್, ಗೋಲಗುಂಬಜ್, ಏಳು ಸುತ್ತಿನ ಕೋಟೆಗಳನ್ನು ಕಟ್ಟುವಾಗ ಕಲ್ಲು ಹೊತ್ತವರು ಯಾರಾಗಿದ್ದರು? ಅವರೇನಾದರು? ಅದ್ಬುತ ದೇವಸ್ತಾನಗಳನ್ನು ಕಟ್ಟಿದ ಶಿಲ್ಪಿಗಳು ಯಾರಾಗಿದ್ದರು, ಅವರೇನಾದರು? ಎಂಬುದನ್ನು ತಿಳಿಸಿಕೊಡುವ ಟೀಚರ್ ನನಗೆ ಸಿಗಬೇಕಿತ್ತು. ವಿಜಯನಗದಲ್ಲಿ ಚಿನ್ನವನ್ನು ಬಳ್ಳದಲ್ಲಿ ಅಳೆಯುತ್ತಿದ್ದಾಗ ಎಲ್ಲರೂ ತಿನ್ನಲು ಅನ್ನವನ್ನು ಬೆಳೆಯುತ್ತಿದ್ದ ರೈತರ ಪಾಡು ಏನಾಗಿತ್ತು ಎಂಬುದನ್ನು ಹೇಳೀಕೊಡುವ ಟೀಚರ್ ನನಗೆ ಸಿಗಬೇಕಿತ್ತು. ಅಮೆರಿಕ ಕಂಡುಹಿಡಿದವನು ಕೊಲಂಬಸ್ ಎಂದು ಹೇಳಿಕೊಟ್ಟ ಟೀಚರ್ ನನಗೆ ಅಲ್ಲಿನ ಆದಿವಾಸಿ ರೆಡ್ ಇಂಡಿಯನ್ನರ ಬದುಕುಗಳು ಹೇಗೆ ದಮನಿಸಲ್ಪಟ್ಟವು, ಸೂರ್ಯ ಮುಳುಗದ ಸಾಮ್ರಾಜ್ಯ ಎಷ್ಟು ಕಡೆಗಳಲ್ಲಿ ಕತ್ತಲೆಯನ್ನೇ ಉಂಟು ಮಾಡಿತು ಎಂದು ತಿಳಿಸಿ ಹೇಳುವ ಟೀಚರ್ ನನಗೆ ಸಿಗಬೇಕಿತ್ತು. ಅಮೆರಿಕದ ನದಿಗಳ ಹೆಸರುಗಳನ್ನು ಬಾಯಿಪಾಟ ಮಾಡಿಸುವ ಬದಲು ನನ್ನ ಜಿಲ್ಲೆಯಲ್ಲಿ ಹರಿಯುವ ನದಿಗಳು ಯಾವುದು? ನನ್ನ ರಾಜ್ಯದಲ್ಲಿ ಯಾವ ನದಿ ಎಲ್ಲಿ ಹುಟ್ಟಿ ಎಲ್ಲಿಗೆ ಹರಿದು ಎಲ್ಲಿ ಸಮುದ್ರ ಸೇರುತ್ತದೆ ಎಂದು ಹೇಳಿಕೊಡುವ ಟೀಚರ್ ನನಗೆ ಸಿಗಬೇಕಿತ್ತು.
ನನಗೊಬ್ಬ ಸಮಾಜ ಶಾಸ್ತ್ರದ ಟೀಚರ್ ಸಿಗಬೇಕಾಗಿತ್ತು. ಆಗಸ್ಟ್ ಕಾಮ್ಟ್, ವೆಬರ್ ವ್ಯಾಕ್ಯಾನಗಳನ್ನು ತಿಳಿಸುವ ಮೊದಲು ನನ್ನ ಊರಿನ ಜಾತಿ ವ್ಯವಸ್ತೆಯನ್ನು, ನಾನು ಅನುಸರಿಸುವ ಅಸ್ಪೃಶ್ಯತೆಯ, ನಾನು ಕೆಲವೊಮ್ಮೆ ಶೋಷಣೆಗೆ ಒಳಗಾಗುವ ಮತ್ತು ಕೆಲವೊಮ್ಮೆ ಶೋಷಣೆ ನಡೆಸುವ ರೀತಿಯನ್ನು ಮನದಟ್ಟು ಮಾಡಿಸಿ ಸಂವಿದಾನದ ಮಹತ್ವವನ್ನು ನನಗೆ ಹೇಳಿಕೊಡುವ ಒಬ್ಬ ಸಮಾಜವಿಜ್ಞಾನಿ ಟೀಚರ್ ನನಗೆ ಸಿಗಬೇಕಿತ್ತು. ನಾನೊಬ್ಬ ಗಂಡು ಹುಡುಗನಾಗಿ ಮನೆಯಲ್ಲಿ ಲಿಂಗಬೇದ ನಡೆಸದೇ ಇರುವುದು ಹೇಗೆ ಎನ್ನುವುದನ್ನು ಹೇಳಿಕೊಡುವ, ಊಟ ಮಾಡಿದ ತಟ್ಟೆಯನ್ನು ತೊಳೆಯದೆ ಹಾಗೇ ಬಿಡುವುದು, ಸ್ನಾನ ಮಾಡಿ ಕಾಚ ತೊಳೆಯದೇ ಅಮ್ಮ ತೊಳೆಯಲಿ ಎಂದು ಬಿಡುವುದು, ನನ್ನ ಬಟ್ಟೆಯನ್ನು ನಾನು ತೊಳೆಯದೇ ಅಮ್ಮ ತೊಳೆಯಲಿ ಬಿಡುವುದು ತಪ್ಪು ಎಂದು ನನಗೆ ಮನವರಿಕೆ ಮಾಡುವ ಟೀಚರ್ ನನಗೆ ಚಿಕ್ಕಂದಿನಲ್ಲೇ ಸಿಗಬೇಕಿತ್ತು.
ನನಗೆ ಒಬ್ಬ ಟೀಚರ್ ಸಿಗಬೇಕಿತ್ತು. ನಮ್ಮ ಊರಿನಲ್ಲಿ ನಾವಾಡುವ ನುಡಿಸೊಗಡನ್ನು ಗೌರವಿಸುವ, ಅದರ ಬಗ್ಗೆ ನಮ್ಮಲ್ಲಿ ಹೆಮ್ಮೆ ಮೂಡಿಸುವ, ನನ್ನ ಊರಿನ ಹಿರಿಮೆಯನ್ನು, ನಮ್ಮ ಆಹಾರ ಸಂಸ್ಕೃತಿಯ ಹಿರಿಮೆಯನ್ನು, ನಮ್ಮ ಜನರ ಹಬ್ಬ ಜಾತ್ರೆಗಳ ಮಹತ್ವವನ್ನು ಹೇಳಿ ʼಇದೇ ಬಾರತೀಯ ಸಂಸ್ಕೃತಿʼ ಎಂದು ಹೇಳಿಕೊಡುವ ಒಬ್ಬ ಟೀಚರ್ ನನಗೆ ಸಿಗಬೇಕಿತ್ತು.
ನನಗೆ ಸಿಕ್ಕಿದ ಟೀಚರುಗಳು ನನಗೆ ಅಕ್ಷರ ಕಲಿಸಿದರು, ನೀನು ಗುಡ್ ಬಾಯ್ ಎಂದರು, ನನ್ನ ಓದು ನೋಡಿ ಹುರಿದುಂಬಿಸಿದರು, ಅಂಕ ಕೊಟ್ಟರು, ಪಾಸ್ ಮಾಡಿದರು… ಒಟ್ಟಿನಲ್ಲಿ ಕಲಿಯುವ ರಾಜಮಾರ್ಗದಲ್ಲಿ ತಂದು ಬಿಟ್ಟರು. ಇದಕ್ಕಾಗಿ ಅವರಿಗೆಲ್ಲರಿಗೂ ನನ್ನಿ.
ಆದರೆ, ನನಗೆ ಎಂದೂ ದೊರಕದ ಆ ನನ್ನ ಕನಸಿನ ಟೀಚರ್ ನನಗೆ ಕಲಿಸಬೇಕಿದ್ದ ಎಲ್ಲವನ್ನೂ ನಾನು ಕಲಿತುಕೊಂಡೆ, ತಿಳಿದುಕೊಂಡೆ, ಬದುಕಿನಲ್ಲಿ ಅನುಸರಿಸಿಕೊಂಡೆ. ಇದು ಸಾದ್ಯವಾಗಿದ್ದೆಲ್ಲಾ ಶಾಲೆ ಕಾಲೇಜುಗಳ ಆಚೆಗೆ ಸಿಕ್ಕಿದ ನಿಜವಾದ ಕಲಿಕೆಯಿಂದ, ಮಹಾನ್ ಅರಿವಿಗರ ಸಹವಾಸದಿಂದ. ಸ್ವಯಂ ಕಲಿಕೆ, ಸ್ವಂತ ಓದು, ಸಮಾಜದಿಂದ ಕಲಿಯುವುದು, ಮಾಡುವ ಕೆಲಸದಿಂದ ಕಲಿಯುವುದು, ಹೋರಾಟದಿಂದ ಕಲಿಯುವುದು, ಅಗತ್ಯದಿಂದ ಕಲಿಯುವುದು, ಹುಡುಕಿಕೊಂಡು ಹೋಗಿ ಕಲಿಯುವುದು, ಲೈಬ್ರರಿಗಳಲ್ಲಿ ಕಲಿಯುವುದು ಇವೆಲ್ಲಾ ಕಲಿಕೆಗಳು ಕ್ರಮೇಣ ಕರಗತವಾದವು. ಅವುಗಳೇ ನನ್ನ ಬೆಳೆಸಿದವು. ಬದುಕಿಸಿದವು.
ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ನಲ್ವಾರಯ್ಕೆಗಳು.
(ಈ ಬರೆಹ ಮಹಾಪ್ರಾಣಗಳನ್ನು ಬಳಸದ ಎಲ್ಲರ ಕನ್ನಡದಲ್ಲಿದೆ)
– ಹರ್ಷಕುಮಾರ್ ಕುಗ್ವೆ, ಸಾಮಾಜಿಕ ಕಾರ್ಯಕರ್ತ




