ಸಂಸತ್ತಿನ ಕಲಾಪಗಳ ಆರಂಭದಲ್ಲಿ NEET ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದು ವಿಪಕ್ಷಗಳು ಕೇಳಿದಾಗ, ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ನಿರ್ಣಯದ ಕುರಿತು ಚರ್ಚೆಯ ವೇಳೆ “ನೀವು ಏನು ಬೇಕಿದ್ದರೂ ಮಾತನಾಡಬಹುದು, ಅದಕ್ಕೆ ಅಡ್ಡಿ ಇರುವುದಿಲ್ಲ” ಎಂದು ಹೇಳಿ ತಳ್ಳಿ ಹಾಕಿದ್ದ ಸದನ ಸ್ಪೀಕರ್ ಓಂ ಬಿರ್ಲಾ ಅವರು, ನಿನ್ನೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚೊಚ್ಚಲ ಭಾಷಣದ ವೇಳೆ, “ಬೇರೆಲ್ಲ ಸುದ್ದಿ ಯಾಕೆ ಮಾತನಾಡುತ್ತಿದ್ದೀರಿ, ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆ ಮಾಡಿ” ಎಂದು ಅಂಗಲಾಚಿದ್ದು ಮತ್ತು “ನೀವು ಈ ರೀತಿ ಹೆಚ್ಚು ಸಮಯ ತೆಗೆದುಕೊಂಡರೆ, ನಿಮ್ಮ ಪಕ್ಷದ ಬೇರೆ ಸದಸ್ಯರ ಸಮಯವನ್ನೂ ನೀವು ನುಂಗಿದಂತಾಗುತ್ತದೆ” ಎಂದು ಎಚ್ಚರಿಸಿದ್ದು, ಗೃಹಸಚಿವರು ಎದ್ದು ನಿಂತು, “ಪ್ರತಿಪಕ್ಷ ನಾಯಕರಿಗೆ ನಿಯಮ ಮೀರಲು ಯಾಕೆ ಅವಕಾಶ ಮಾಡಿಕೊಡುತ್ತೀರಿ” ಎಂದು ತಮ್ಮದೇ ಪಕ್ಷದ ಸ್ಪೀಕರ್ ಅವರನ್ನೇ ತರಾಟೆಗೆ ತೆಗೆದುಕೊಂಡದ್ದು… ನಿನ್ನೆ ಸದನದಲ್ಲಿ ಏನಾಯಿತು ಎಂಬುದಕ್ಕೆ ಸರಿಯಾದ ಸೂಚನೆಗಳು.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಎರಡು ಭಾರತ ಯಾತ್ರೆಗಳ ಬಳಿಕ, ಚುನಾವಣಾ ಸಾಧನೆಗಳ ಬಳಿಕ, ಬೇರುಮಟ್ಟದಲ್ಲಿ ಸಂಪರ್ಕ ಇರುವ ಹೊಸ ವಿಶ್ವಾಸಭರಿತ ನಾಯಕರಾಗಿ “ರಿಫ್ರೆಷಿಂಗ್” ರೂಪದಲ್ಲಿ ರಾಹುಲ್ ಗಾಂಧಿ ನಿನ್ನೆ ಸದನದಲ್ಲಿ ಕಾಣಿಸಿಕೊಂಡರು. ಸದನದಲ್ಲಿ ಮೈಕ್/ಕ್ಯಾಮರಾ ನಿಯಂತ್ರಣ ವಿಚಾರದಲ್ಲಿ ಹಸಿಹಸಿಯಾಗಿ ಸಿಕ್ಕಿಹಾಕಿಕೊಂಡ ಸ್ಪೀಕರ್, ತಮ್ಮ ಅಧ್ಯಕ್ಷ ಪೀಠ ಸದನದ ನಾಯಕರಿಗೆ ತಲೆಬಾಗಿದ್ದಕ್ಕಾಗಿಯೂ ಮುಜುಗರದ ಕ್ಷಣಗಳನ್ನು ಎದುರಿಸಬೇಕಾಯಿತು. ಇನ್ನು ಐದು ವರ್ಷಗಳು ಈ ಹಿಂದಿನ ಹತ್ತು ವರ್ಷಗಳಂತಿರುವುದಿಲ್ಲ ಎಂಬ ಸಾಕ್ಷಾತ್ಕಾರ ಅವರಿಗೆ ಆಯಿತು.
ರಾಹುಲ್ ನಿನ್ನೆ ದೇವರುಗಳ ಚಿತ್ರ ಹಿಡಿದು ಹೇಳಹೊರಟದ್ದು ಮಾಸ್ಟರ್ ಸ್ಟ್ರೋಕ್. ಪ್ರಧಾನಿ, ಗೃಹಸಚಿವ ಸೇರಿದಂತೆ ಎಲ್ಲರೂ ಆ ತಂತ್ರಕ್ಕೆ ಪಿಗ್ಗಿ ಬಿದ್ದು ಪ್ರತಿಕ್ರಿಯಿಸಿದರು. ಒಂದು ವೇಳೆ ಆ ಚಿತ್ರ ಇಲ್ಲದೇ ರಾಹುಲ್ ತಮ್ಮ ಮಾತುಗಳನ್ನು ಆಡಿದ್ದರೆ, ಅದನ್ನು ಅಲ್ಲೇ ಡಿಸೆಕ್ಷನ್ ಮಾಡಿ “ಹಿಂದೂ ವಿರೋಧಿ” ಪಟ್ಟ ಕಟ್ಟಿಬಿಡುತ್ತಿದ್ದರು! ಸ್ವತಃ ಪ್ರಧಾನಿ ಅದನ್ನು ಪ್ರಯತ್ನಿಸಿದರು ಕೂಡ. ಅದು ಯಶಸ್ವಿ ಆಗಿದ್ದರೆ, ಇಂದು ಮಾಧ್ಯಮಗಳು ಭಾರೀ ಹೆಡ್‌ಲೈನ್‌ನೊದಿಗೆ ರಾಹುಲ್ ಹಿಂದೂಗಳ ಕ್ಷಮೆ ಕೇಳಬೇಕೆಂದು ಬೊಬ್ಬೆ ಹೊಡೆಯುತ್ತಿದ್ದವು! ಆದರೆ ಹಾಗೆ ಹೇಳಲು, “ಶಿವನ ಚಿತ್ರ ಹಿಡಿದಿರುವ ರಾಹುಲ್” ಚಿತ್ರ ಪ್ರಕಟಿಸಬೇಕಾಗುತ್ತಿತ್ತು! ಅದು ಗೊತ್ತಿದ್ದುದರಿಂದ ಇಂದು ಮಾಧ್ಯಮಗಳು ತಣ್ಣಗಿದ್ದು, ಪ್ರತಿಕ್ರಿಯೆಯ ಜವಾಬ್ದಾರಿಯನ್ನು ಪ್ರಧಾನಮಂತ್ರಿಗಳಿಗೇ ಬಿಟ್ಟಂತಿದೆ. ಅವರು ಇಂದು ಸದನದಲ್ಲಿ ಮಾತನಾಡುವುದಿದೆ.
ಕನಿಷ್ಠ ಎರಡು ಮಂದಿ ಸದಸ್ಯರು ರೂಲ್ ಬುಕ್ ಹಿಡಿದು ರಾಹುಲ್ ಎಲ್ಲಿ ತಪ್ಪಿ ಬೀಳುವರೆಂದು ಕಾಯುತ್ತಿದ್ದುದು, ಹಲವು ಬಾರಿ ಪಾಯಿಂಟ್ ಆಫ್ ಆರ್ಡರ್ ಎತ್ತಿದ್ದು, ಪ್ರಧಾನಿ ಸಹಿತ ಎಲ್ಲ ಪ್ರಮುಖ ಸಚಿವರೂ ಕುರ್ಚಿ ಅಂಚಲ್ಲಿ ಕುಳಿತು ಮತ್ತೆ ಮತ್ತೆ ಎದ್ದು ನಿಂತು ಪ್ರತಿಕ್ರಿಯಿಸಿದ್ದು – ಇವೆಲ್ಲವೂ ಹೊಸ ಪ್ರತಿಪಕ್ಷ ನಾಯಕನ ಆಗಮನವನ್ನು ಸಾರಿ ಹೇಳುವಂತಿದ್ದವು. ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಬಾರಿ ಹೀಗಾಗಿತ್ತು?
ಇಷ್ಟು ಹೇಳಿದ ಬಳಿಕ, ರಾಹುಲ್ ಅವರ ಭಾಷಣದ ದೊಡ್ಡ ಕೊರತೆ, ಅದು ಸರ್ಕಾರದ ನೀತಿಗಳ ವಿರುದ್ಧ ಇರುವುದಕ್ಕಿಂತ ಹೆಚ್ಚಾಗಿ, ಗ್ಯಾಲರಿ ಕಡೆ ಇತ್ತು. ಈ ಗ್ಯಾಲರಿ ಭಾಷಣಗಳ ಅಪಾಯ ಎಂದರೆ, ಸದನದ ನಿಯಮಗಳನ್ನು ತಪ್ಪಿದಾಗ ಅಂಥಹವರನ್ನು ಕಟ್ಟಿಹಾಕಲು ಹಲವು ಬಳ್ಳಿಗಳನ್ನು ಆಡಳಿತ ಪಕ್ಷ “ತಮ್ಮದೇ ಸ್ಪೀಕರ್” ಮೂಲಕ ಸಿದ್ಧಪಡಿಸಿ ಇಟ್ಟುಕೊಂಡಿದೆ. ಸದನದಲ್ಲಿ ಆಡಿದ ಮಾತುಗಳಿಗೆ “ದಾಖಲೆ ಸಹಿತ ಸಮರ್ಥನೆ” ನೀಡಬೇಕು ಎಂಬ “ಸ್ಪೀಕರ್ ನಿಯಮ” ಇನ್ನೆರಡು ದಿನಗಳಲ್ಲಿ ಮುನ್ನೆಲೆಗೆ ಬಂದರೆ ಅಚ್ಚರಿ ಇಲ್ಲ. ಸರ್ಕಾರ ಈಗಾಗಲೇ ರಾಹುಲ್ ಭಾಷಣದ ಕುರಿತು ಸ್ಪೀಕರ್‌ಗೆ ಅಧಿಕೃತವಾಗಿ ದೂರು ನೀಡಿದೆ ಎಂಬ ವರದಿಯನ್ನೂ ನೋಡಿದೆ. ಈ ವಿಚಾರದಲ್ಲಿ ರಾಹುಲ್ ಸದನ ವ್ಯವಹಾರಗಳ ತಂತ್ರಗಾರಿಕೆ ರೂಪಿಸುವವರು ಎಚ್ಚರ ವಹಿಸಬೇಕಿದೆ. “ಆನ್ ಪೇಪರ್” ಆಟಗಳಲ್ಲಿ ಈ ಸರ್ಕಾರದ ಪರಿಣತಿ ಈಗಾಗಲೇ ಸಾಬೀತಾಗಿದೆ.
ನಿನ್ನೆ ಸದನದಲ್ಲಿ ಎ.ರಾಜ ಅವರು ಮಾಜೀ CAG ಬಗ್ಗೆ ಎತ್ತಿದ ನೈತಿಕತೆಯ ಪ್ರಶ್ನೆ, ಮೊಹುವಾ ಮೊಯಿತ್ರಾ ಅವರು “ಏಕ್ ಅಕೇಲಾ ಕಿತನೋಂಪೇ ಭಾರೀ ಪಡಾ” ಎಂಬ ಈಗ ಪ್ರಸಿದ್ಧ ವಾಕ್ಯವನ್ನು ಟ್ರೋಲ್ ಮಾಡಿದ್ದು, ಸರ್ಕಾರಕ್ಕೆ ನಿನ್ನೆ LoP ಭಾಷಣದಿಂದ ಆಗಿರುವ ಗಾಯದ ಮೇಲೆ ಉಪ್ಪು-ಖಾರ ಸಿಂಪಡಿಸಿದಂತಾಗಿದೆ. ಇಂದು ಸರ್ಕಾರ ಇದಕ್ಕೆ ಇಷ್ಟೇ ಖಾರವಾಗಿ ಪ್ರತಿಕ್ರಿಯಿಸದೇ ಬೇರೆ ಹಾದಿ ಇಲ್ಲ. ಇದರೊಂದಿಗೆ, ನಾನು ಈಗಾಗಲೇ ಹೇಳಿದಂತೆ, ಮೋದಿ 3.0 ಸರ್ಕಾರಕ್ಕೆ “ಹನಿಮೂನ್ ಅವಧಿ” ಇಲ್ಲದೇ “ಸಂಸಾರ ತಾಪತ್ರಯ” ಶುರು ಆಗಿಬಿಟ್ಟಿದೆ!
– ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತರು



