ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ನೀಡಲಾಗುತ್ತಿರುವ ತೆರಿಗೆ ಪಾಲು ಕುರಿತಂತೆ ವಿಧಾನ ಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿರುವ ವೇಳೆ ಪ್ರತಿಪಕ್ಷ ಸದಸ್ಯರನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆ ಗದ್ದಲ, ಕೋಲಾಹಲಕ್ಕೆ ಕಾರಣವಾಯಿತು.
ಸಿದ್ದರಾಮಯ್ಯ ಬೆಂಬಲಕ್ಕೆ ಆಡಳಿತ ಪಕ್ಷ ಸದಸ್ಯರು ನಿಂತರೆ, ವಿಪಕ್ಷಗಳು ಒಟ್ಟಾಗಿ ಸಿದ್ದರಾಮಯ್ಯ ಕ್ಷಮೆ ಯಾಚನೆಗೆ ಪಟ್ಟು ಹಿಡಿದು ಧರಣಿ ನಡೆಸಿದ ಪರಿಣಾಮ ದಿನದ ಬಹುತೇಕ ಕಲಾಪ ಗದ್ದಲಕ್ಕೆ ಬಲಿಯಾಯಿತು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಅವರು ಕೇಂದ್ರದಿಂದ ರಾಜ್ಯಕ್ಕೆ ನೀಡುವ ತೆರಿಗೆ ಪಾಲಿನ ಮೊತ್ತದ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆಸುದೀರ್ಘ ಉತ್ತರ ನೀಡಿದ ಹಣಕಾಸು ಖಾತೆ ಹೊಂದಿರುವ ಸಿದ್ದರಾಮಯ್ಯ, ಕೇಂದ್ರದಿಂದ ನಮಗೆ ಒಟ್ಟು 11,495 ಕೋಟಿ ರೂ. ಹಣ ಬರಬೇಕು. ಆದರೆ ಒಂದೇ ಒಂದು ರೂಪಾಯಿಯೂ ಕೊಡದಿರುವ ಕಾರಣ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗಿವೆ ಎಂದು ಆರೋಪಿಸಿದರು.
ಈ ವೇಳೆ ಬಿಜೆಪಿ ಸದಸ್ಯ ರುದ್ರಗೌಡ ಅವರು ಎದ್ದುನಿಂತು ಮಾತನಾಡಲು ಮುಂದಾಗುತ್ತಿದ್ದಂತೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ನಾನಿನ್ನು ಉತ್ತರವನ್ನೇ ಮುಗಿಸಿಲ್ಲ. ಏಯ್ ಕುಳಿತುಕೊಳ್ಳಿ ಎಂದು ಏರಿದ ಧ್ವನಿಯಲ್ಲಿ ಗದರಿಸಲು ಮುಂದಾದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಈ ರೀತಿ ಮಾತನಾಡುವುದು ಸರಿಯಲ್ಲ. ಸದಸ್ಯರಿಗೆ ನಿರ್ದೇಶನ ನೀಡುವ ಅಧಿಕಾರ ಸಭಾಪತಿಗಳಿಗೆ ಮಾತ್ರ ಇರುತ್ತದೆ. ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮುಖ್ಯಮಂತ್ರಿ ಬೆಂಬಲಕ್ಕೆ ಕಾಂಗ್ರೆಸ್ ಸದಸ್ಯರು ನಿಂತರೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒಂದಾಗಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ್ ಮಾತನಾಡಿ, ಒಂದು ಪ್ರಶ್ನೆಗೆ 5ಕ್ಕಿಂತ ಹೆಚ್ಚು ನಿಮಿಷ ಸಮಯ ಉತ್ತರ ನೀಡುವಂತಿಲ್ಲ. ಇದು ಉತ್ತರವೋ ಇಲ್ಲ ಭಾಷಣವೋ, ಅವರ ಪ್ರತಿಯೊಂದು ಮಾತಿನಲ್ಲೂ ಕೇಂದ್ರ ಸರ್ಕಾರವನ್ನು ಗುರಿಯಾಗಿಟ್ಟುಕೊಂಡೇ ಮಾತನಾಡುತ್ತಿದ್ದಾರೆ. ನಮ್ಮ ಬಳಿಯೂ ದಾಖಲೆಗಳಿವೆ. ಮುಖ್ಯಮಂತ್ರಿಗಳು ಸುಳ್ಳು ಹೇಳಿ ಸದನದ ದಿಕ್ಕು ತಪ್ಪಿಸುವುದು ಬೇಡ ಎಂದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ನಿಮ್ಮ ಬಳಿ ದಾಖಲೆಗಳಿದ್ದರೆ ಹಣಕಾಸು ಆಯೋಗಕ್ಕೆ ಕೊಡಿ. ನೀವು ಏಳು ಕೋಟಿ ಕನ್ನಡಿಗರ ಪರವಾಗಿ ಇದ್ದೀರೋ ಇಲ್ಲವೇ ಕನ್ನಡಿಗರ ವಿರೋಧಿಗಳೋ? ಮೊದಲು ಅದನ್ನು ಬಹಿರಂಗಪಡಿಸಿ. ಸತ್ಯ ಸತ್ಯವೇ. ಸುಳ್ಳು ಸುಳ್ಳೇ. ನೀವು ಎದ್ದು ನಿಂತು ಮಾತನಾಡಿದರೆ ನಾವು ಬಾಯಿಮುಚ್ಚಿಕೊಂಡು ಕೂರುವುದಿಲ್ಲ. ಇಂತಹ ಗೂಂಡಾಗಿರಿ ವರ್ತನೆಗೆ ನಾನು ಜಗ್ಗುವುದಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕದ ಜನತೆ ನಿಮಗೆ ಛೀ, ತೂ ಎಂದು ಉಗಿಯುತ್ತಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಜನ ನಂಬುವುದಿಲ್ಲ. ಸದನದಲ್ಲಿ ನೀವು ಜೋರು ಮಾಡಿದ ತಕ್ಷಣ ನಾನು ಬಾಯಿ ಮುಚ್ಚಿಕೊಂಡು ಕೂರುವುದಿಲ್ಲ. ಸತ್ಯವನ್ನು ಯಾರಿಂದಲೂ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಇನ್ನು ಎಷ್ಟು ದಿನ ಇಂಥ ಸುಳ್ಳು ಹೇಳಿಕೊಂಡು ತಿರುಗುತ್ತೀರಿ. ನಿಮ್ಮ ಗೂಂಡಾ ವರ್ತನೆಗೆ ನಾನು ಸುಮ್ಮನಿರಬೇಕೇ? ಎಂದು ಪ್ರಶ್ನಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷದವರನ್ನು ಗೂಂಡಾಗಳು ಎಂದು ಮುಖ್ಯಮಂತ್ರಿಗಳು ಸಂಬೋಧಿಸಿರುವುದು ತಪ್ಪು. ಇದಕ್ಕಾಗಿ ಅವರು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಆಡಳಿತ ಪಕ್ಷದ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದರೆ, ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ಆರಂಭಿಸಿ ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಮೊಳಗಿಸಿದರು. ಇದರಿಂದ ಸದನದಲ್ಲಿ ವಾತಾವರಣ ನಿರ್ಮಾಣವಾಗಿ ಸಭಾಪತಿ ಹೊರಟ್ಟಿ ಅವರು ಕಲಾಪವನ್ನು ಅಲ್ಪಕಾಲಾವಧಿಗೆ ಮುಂದೂಡಿದರು.
ಮತ್ತೆ ಸದನ ಸಮಾವೇಶಗೊಂಡಾಗ ಪ್ರತಿಪಕ್ಷ ಸದಸ್ಯರು ಧರಣಿ ಮುಂದುವರಿಸಿದರು. ಇದರ ನಡುವೆ ಸಭಾಪತಿ ಹೊರಟ್ಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸಿದ ಶಬ್ದವನ್ನು ಕಡತದಿಂದ ತೆಗೆದು ಹಾಕಿರುವುದಾಗಿ ಪ್ರಕಟಿಸಿದರು. ಪುನಃ ಅದೇ ವಿಷಯದ ಬಗ್ಗೆ ಚರ್ಚೆಮಾಡುವುದು ಬೇಡ. ಈಗಾಗಲೇ ಸಾಕಷ್ಟು ಸಮಯ ವ್ಯರ್ಥವಾಗಿದೆ ಎಂದರು.
ಮಾತು ಮುಂದುವರೆಸಿದ ಕೋಟಾ ಶ್ರೀನಿವಾಸ್ ಪೂಜಾರಿ, ನಾಳೆ ಯಾರು ಏನು ಬೇಕಾದರೂ ಮಾತನಾಡಲಿ ಕಡತದಿಂದ ತೆಗೆದು ಹಾಕಿದ್ದೇನೆ ಎಂದರೆ, ಆಡಿದ ಮಾತಿಗೆ ವಿಷಾದ ಬೇಡವೇ? ಕನಿಷ್ಠಪಕ್ಷ ಮುಖ್ಯಮಂತ್ರಿಗಳು ವಿಷಾದವನ್ನು ವ್ಯಕ್ತಪಡಿಸಲಿ ಎಂದರು.
ಆಗ ಸಿದ್ದರಾಮಯ್ಯ ನಾನು ಯಾವುದೇ ದುರುದ್ದೇಶ ಇಟ್ಟುಕೊಂಡು ಆ ಪದ ಬಳಕೆ ಮಾಡಿಲ್ಲ. ಉತ್ತರಿಸುವ ವೇಳೆ ಸದಸ್ಯ ರುದ್ರೇಗೌಡ ಅವರು ಎದ್ದು ನಿಂತು ಮಾತನಾಡುತ್ತಿದ್ದ ವೇಳೆ ಹಾಗೆ ಹೇಳಿದೆ. ನೀವು ಪದೇ ಪದೇ ನಾನು ಉತ್ತರಿಸುವಾಗ ಎದ್ದು ನಿಂತು ನನ್ನ ಭಾಷಣಕ್ಕೆ ಅಡ್ಡಿಪಡಿಸಿದರೆ ಹೇಗೆ? ಈಗಾಗಲೇ ಸಭಾಪತಿಗಳು ಆ ಪದವನ್ನು ಕಡತದಿಂದ ತೆಗೆದಿದ್ದೇನೆ ಎಂದು ಹೇಳಿದ ಮೇಲೆಯೂ ನೀವು ಸದನಕ್ಕೆ ಅಡ್ಡಿಪಡಿಸಿದರೆ ಹೇಗೆ? ಪರೋಕ್ಷವಾಗಿ ಕ್ಷಮೆ ಇಲ್ಲವೇ ವಿಷಾದ ವ್ಯಕ್ತಪಡಿಸುವುದಿಲ್ಲ ಎಂದರು.
ಈ ಹಂತದಲ್ಲೂ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಗದ್ದಲ ಮುಂದುವರೆಯಿತು. ಸಭಾಪತಿಯವರು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಅವಕಾಶ ನೀಡುತ್ತಿದ್ದಂತೆ ಪ್ರತಿಪಕ್ಷದ ಸದಸ್ಯರು ಸದನವನ್ನು ಸಭಾತ್ಯಾಗ ಮಾಡಿದರು.




