ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಚರ್ಚೆಗೆ ಪ್ರಧಾನಮಂತ್ರಿಗಳ ಉತ್ತರ “ಖಾರ” ಇರದೇ ಅವರಿಗೆ ಬೇರೆ ಹಾದಿ ಇಲ್ಲ ಎಂದು ಬೆಳಗ್ಗೆ ಹೇಳಿದ್ದೆ. ಆದರೆ ಅದು ಖಾರದ ಬದಲು ಹೆಚ್ಚು “ಕಹಿ” ತುಂಬಿತ್ತು ಅನ್ನಿಸಿತು. ಯಾಕೆಂದು ಮುಂದೆ ವಿವರಿಸುವೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ನಾನು ಬೆಳಗ್ಗೆ ಹೇಳಿದ್ದ ಇನ್ನೊಂದು ಸಂಗತಿ: “ಆನ್ ಪೇಪರ್” ಆಟಗಳಲ್ಲಿ ಈ ಸರ್ಕಾರದ ಪರಿಣತಿ ಈಗಾಗಲೇ ಸಾಬೀತಾಗಿದೆ – ಎಂದು. ಅದನ್ನು ಸರ್ಕಾರ ಇಂದು ಸೆಷನ್ ಕೊನೆಯಲ್ಲಿ ಸಾಬೀತುಪಡಿಸಿತು. ರಕ್ಷಣಾ ಮಂತ್ರಿಗಳು, ಸದನದಲ್ಲಿ ಗದ್ದಲ ಎಬ್ಬಿಸಿದ ಪ್ರತಿಪಕ್ಷಗಳ ವರ್ತನೆಯನ್ನು ಖಂಡಿಸುವ ನಿರ್ಣಯ ಮಂಡಿಸಿದರು. ಅದನ್ನು ಮೊದಲಿಗೆ ಸ್ಪೀಕರ್ ನಿರ್ಲಕ್ಷಿಸಿದರಾದರೂ, ಗೃಹಸಚಿವರು ಅದನ್ನು ಅನುಮೋದಿಸಿ ನಿರ್ಣಯ ಸ್ವೀಕರಿಸಲು ಹೇಳಿದಾಗ, ಸ್ಪೀಕರ್ ಹಾಗೆಯೇ ಮಾಡಿದರು. ಹೀಗೆ ಪ್ರತಿಪಕ್ಷಗಳ “ವರ್ತನೆ” ಕಡತಕ್ಕೆ ಹೋಯಿತು. ಆದರೆ, ನಿನ್ನೆ ಇಡಿಯ ದಿನ ಆಡಳಿತ ಪಕ್ಷಗಳ ಗದ್ದಲ ಗಾಳಿಯಲ್ಲಿ ಹಾರಿ ಹೋಯಿತು ಮತ್ತು ಪ್ರತಿಪಕ್ಷಗಳ ಕಡಕ್ ಮಾತುಗಳನ್ನೆಲ್ಲ ಸದನದ ಕಡತಗಳಿಂದ “ಕಿತ್ತುಹಾಕಲಾಯಿತು”. ಇನ್ನು ಹತ್ತು ವರ್ಷ ಬಿಟ್ಟು ಸದನದ ದಾಖಲೆ ತೆಗೆದರೆ, ಆಡಳಿತಪಕ್ಷದವರದು ದೇವರಂತಹ ವರ್ತನೆ; ಪ್ರತಿಪಕ್ಷಗಳದು ದುರ್ವರ್ತನೆ! ಇದು ದೇಶದ ಚರಿತ್ರೆ ಆಗಲಿದೆ.
ಪ್ರಧಾನಮಂತ್ರಿಗಳು ತಮ್ಮ ಎರಡುಗಂಟೆ ಹದಿನಾಲ್ಕು ನಿಮಿಷಗಳ ಭಾಷಣದಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತು ತಮ್ಮ ಪ್ರತಿಕ್ರಿಯೆ ನೀಡಿದ್ದು ಕೇವಲ 20-25 ನಿಮಿಷ ಮಾತ್ರ. ನಾನು ಅರ್ಥ ಮಾಡಿಕೊಂಡಿರುವಂತೆ, ರಾಷ್ಟ್ರಪತಿಗಳ ಭಾಷಣ ಎಂಬುದು ವರ್ಷಾರಂಭದಲ್ಲಿ ಸರ್ಕಾರದ ನೀತಿಗಳು-ಕಾರ್ಯಕ್ರಮಗಳ ಚೌಕಟ್ಟನ್ನು ವಿವರಿಸುವ ಭಾಷಣ. ಅದಕ್ಕೆ ಸದನದಲ್ಲಿ ಪ್ರತಿಪಕ್ಷಗಳು ತಮ್ಮ ಆಕ್ಷೇಪಗಳನ್ನು ದಾಖಲಿಸುವುದು ಮತ್ತು ಕೊನೆಯಲ್ಲಿ ಪ್ರಧಾನಮಂತ್ರಿಗಳು ಆ ಆಕ್ಷೇಪಗಳಿಗೆ ತಮ್ಮ ಸ್ಪಷ್ಟೀಕರಣ ನೀಡುವುದು ಮತ್ತು ಸದನ ರಾಷ್ಟ್ರಪತಿಗಳ ಭಾಷಣವನ್ನು ಅಂಗೀಕರಿಸುವ ಮೂಲಕ ಆ ವರ್ಷದ ಸರ್ಕಾರದ ಕಾರ್ಯಕ್ರಮಗಳಿಗೆ ಮತ್ತು ಸಂಸದೀಯ ಚಟುವಟಿಕೆಗಳಿಗೆ ಆರಂಭ ನೀಡುವುದು ಈ ಪ್ರಕ್ರಿಯೆಯ ಮೂಲ ಉದ್ದೇಶ.
ಆದರೆ ಸದನದಲ್ಲಿ ನಡೆದದ್ದೇನು? ಪ್ರತಿಪಕ್ಷಗಳು ತಮ್ಮ ಆಕ್ಷೇಪಗಳನ್ನು ಎತ್ತಿದರು. ಉದಾರೀಕರಣದ ಹೆಸರಲ್ಲಿ ಸಂಪತ್ತಿನ ಕ್ರೋಢೀಕರಣ, NEET ಪರೀಕ್ಷೆ, ಅಗ್ನಿವೀರ್, ಮಣಿಪುರದ ನಿರ್ಲಕ್ಷ್ಯ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮೊದಲಾದ ಹಲವು ಪ್ರಶ್ನೆಗಳನ್ನು ವಿವಿಧ ಪ್ರತಿಪಕ್ಷ ನಾಯಕರು ಎತ್ತಿದರು. ಆದರೆ, ಪ್ರಧಾನಮಂತ್ರಿಗಳು ಇವುಗಳಲ್ಲಿ ಎಷ್ಟಕ್ಕೆ ತಮ್ಮ ಉತ್ತರ ನೀಡಿದರು?
ಇಂದು ಪ್ರಧಾನಮಂತ್ರಿಗಳ ಭಾಷಣದ ಉದ್ದಕ್ಕೂ ಪ್ರತಿಪಕ್ಷಗಳು ಮಣಿಪುರದ ಕುರಿತು ಘೋಷಣೆ ಕೂಗಿದರು. ಆದರೆ ಪ್ರಧಾನಮಂತ್ರಿಗಳು ಆ ಕುರಿತು ತಮ್ಮ ಭಾಷಣದಲ್ಲಿ ಚಕಾರ ಎತ್ತಲಿಲ್ಲ. NEET ಕುರಿತು ಗಂಭೀರ ಕ್ರಮ ಎಂದರೇ ಹೊರತು ಸಮಸ್ಯೆಯ ಆಳಕ್ಕೆ ಇಳಿಯಲಿಲ್ಲ. ಅಗ್ನಿವೀರ್/OROPಗಳು ಸೇನೆಯ ವಿರುದ್ಧ ಷಡ್ಯಂತ್ರ ಎಂದರು. ಸುಮಾರು ಒಂದೂ ಮುಕ್ಕಾಲು ಗಂಟೆ ಕಾಲ ಅವರು ತಮ್ಮ ಭಾಷಣದಲ್ಲಿ ಕಾಂಗ್ರೆಸ್‌ನ 10 ವರ್ಷಕ್ಕಿಂತಲೂ ಹಳೆಯ ಹಗರಣಗಳನ್ನೇ ಪ್ರಸ್ತಾಪಿಸಿದರು. ಅವರ ಮಾತುಗಳಲ್ಲಿ ಕಹಿ ಹೆಚ್ಚಿತ್ತು. ಹತ್ತು ವರ್ಷಗಳಲ್ಲಿ ಹಗರಣಕ್ಕೆ ಕಾರಣರನ್ನು ತಮ್ಮ ಸರ್ಕಾರ ಶಿಕ್ಷಿಸಿದ ಬಗ್ಗೆ ಹೇಳುವುದಕ್ಕೆ ಅವರಲ್ಲಿ ಏನೂ ಇರಲಿಲ್ಲ. ತಮ್ಮದೇ ಸರ್ಕಾರದ ಹತ್ತು ವರ್ಷಗಳ ಸಾಧನೆಗಳ ಬಗ್ಗೆಯೂ ಬಗ್ಗೆ ಅವರು ಹೇಳಿದ್ದು ಅತ್ಯಲ್ಪ.
ರಾಹುಲ್ ಗಾಂಧಿ ಅವರ ಇಡಿಯ ಭಾಷಣವನ್ನು “ಬಾಲಬುದ್ಧಿ” ಅನ್ನುವ ಮೂಲಕ ತಳ್ಳಿಹಾಕಿದ ಪ್ರಧಾನಮಂತ್ರಿಗಳು, ಹಳೆಯ ಕಾಂಗ್ರೆಸ್ ಕಾಲದಲ್ಲಿ ಚಾಲ್ತಿಯಲ್ಲಿದ್ದ “ವಿದೇಶೀ ಶಕ್ತಿಗಳ ಷಡ್ಯಂತ್ರ” ವಾದವನ್ನು ಮುಂದಿಟ್ಟರು. ತಮಾಷೆ ಎಂದರೆ, ಎಲ್ಲದಕ್ಕೂ “ಅಥೆಂಟಿಕೇಟ್ ಮಾಡಬೇಕು” ಎನ್ನುವ ಸ್ಪೀಕರ್ ಸಾಹೇಬರು ಇದನ್ನೂ ಮುಗುಳು ನಗುತ್ತಾ ಭಾಷಣ ಎಂಜಾಯ್ ಮಾಡುತ್ತಿದ್ದರೆ, ಪ್ರತಿಪಕ್ಷಗಳು “ನಾರಾಬಾಜಿ” ನಿರತರಾಗಿದ್ದರು. ಈ “ಬಾಲಬುದ್ಧಿ” ಈಗ ಪ್ರಬಲ ಪ್ರತಿಪಕ್ಷದ ನಾಯಕ ಎಂದು ಪ್ರಧಾನಮಂತ್ರಿಯವರು ಮರೆತಂತಿತ್ತು.
ಇದರ ಜೊತೆ ಪ್ರತಿಪಕ್ಷದ ಹೊಸದೊಂದು “ಶಕ್ತಿ”ಯನ್ನು ಪ್ರಧಾನಮಂತ್ರಿಗಳು ಗುರುತಿಸಿದ್ದಾರೆ. ಅದು ಕಾಂಗ್ರೆಸ್‌ನ “ಇಕೊ ಸಿಸ್ಟಮ್!” ಈ ಇಕೊಸಿಸ್ಟಮ್‌ಗೆ ಅವರದೇ ಭಾಷೆಯಲ್ಲಿ ಉತ್ತರ ನೀಡುವ “ಚೇತಾವನಿ”ಯನ್ನೂ ಪ್ರಧಾನಿ ಸದನದಲ್ಲಿ ನೀಡಿದ್ದಾರೆ.
ಅಂತೂ ಅಧಿವೇಶನ ಮುಗಿದಿದೆ. ಮುಂದಿನ “ಬಜೆಟ್” ಅಧಿವೇಶನದ ತನಕ ರಾಜಕೀಯ ಯಾವ ರೂಪ ತಳೆಯಲಿದೆ ಎಂಬುದನ್ನು ಈಗ ಊಹಿಸುವುದು ಕಷ್ಟ. ಈ ಅಧಿವೇಶನದಲ್ಲಿ ಪ್ರಧಾನಮಂತ್ರಿಗಳ ಒಂದು ಯಶಸ್ಸು ಎಂದರೆ, ತನ್ನ ಎರಡು ಊರುಗೋಲುಗಳ ಅಸ್ತಿತ್ವ “ಅದೃಶ್ಯ ರೂಪದಲ್ಲಿ” ಇದ್ದು, ಎದುರು ಎದ್ದು ಕಾಣಿಸದಂತೆ ಸ್ಟೇಜ್ ಮ್ಯಾನೇಜ್ ಮಾಡಿದ್ದು.
– ರಾಜಾರಾಮ್ ತಲ್ಲೂರು, ಹಿರಿಯ ಪತ್ರಕರ್ತರು



