ಜಮೀರ್ ಅಹಮದ್ ಖಾನ್ ಗೈರು ವಿಷಯದಲ್ಲಿ ಸದನದಲ್ಲಿ ಗದ್ದಲ

2 years ago

#Uproar #House #JamirAhmedKhan #absence #Session

ಬೆಳಗಾವಿ: ವಸತಿ ಸಚಿವ ಜಮೀರ್ ಅಹಮದ್ ಖಾನ್ ತೆಲಂಗಾಣದ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದಾರೆ. ಇದೇ ಕಾರಣದಿಂದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿಲ್ಲ. ಈ ವಿಷಯ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪವಾಯಿತು.

ತೆಲಂಗಾಣದ ಚುನಾವಣಾ ಪ್ರಚಾರದ ವೇಳೆ ವಿಧಾನಸಭೆ ಸ್ಪೀಕರ್ ಕುರಿತ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ವಿಪಕ್ಷಗಳು ಅವರನ್ನು ಸದನ ಪ್ರವೇಶಿಸಲು ಬಿಡುವುದಿಲ್ಲ ಎಂದು ಹೇಳಿರುವುದು ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಗದ್ದಲಕ್ಕೆ ಕಾರಣವಾಗಿದೆ.

ಪರಿಷತ್ತಿನಲ್ಲಿ ಇವರ ಗೈರು ಹಾಜರಿ ಪ್ರಸ್ತಾಪಿಸಿದ ಸಭಾಪತಿ ಬಸವರಾಜ ಹೊರಟ್ಟಿ, ಸ್ವಲ್ಪ ಸಚಿವ ಜಮಿರ್ ಅಹ್ಮದ್ ಖಾನ್ ಗೆ ಮುಖ ತೋರಿಸಲು ಹೇಳಿ. ಕಲಾಪಕ್ಕೆ ಬರುತ್ತಿಲ್ಲ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕರಿಗೆ ಸೂಚಿಸಿದರು.

ಜಮೀರ್ ಹೆಸರು ಪ್ರಸ್ತಾಪ ಆಗುತ್ತಿದ್ದಂತೆ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಜಮೀರ್ ಅವರಿಗೆ ಸ್ಪೀಕರ್ ಸ್ಥಾನದ ಮೇಲೆ ವಿಶ್ವಾಸ ಇಲ್ಲ. ಸ್ಪೀಕರ್ ಸ್ಥಾನಕ್ಕೆ ಧರ್ಮದ ಲೇಪನ ಮಾಡಿ ಮಾತನಾಡಿದ್ದಾರೆ. ಸ್ಪೀಕರ್, ಸಭಾಪತಿ ಸ್ಥಾನಕ್ಕೆ ಗೌರವ ಇಲ್ಲ ಅಂತಾ ಅವರು ಬಂದಿಲ್ವಾ ಎಂದು ಎಂದು ಕೋಟ ಶ್ರೀನಿವಾಸ್ ಪೂಜಾರಿ ಆಡಳಿತ ಪಕ್ಷವನ್ನು ಪ್ರಶ್ನಿಸಿದರು.

ರಘುನಾಥ್ ರಾವ್ ಮಲ್ಕಾಪುರೆ ಮಾತನಾಡಿ, ಜಮೀರ್ ಅಹ್ಮದ್ ಖಾನ್ ಯಾವ ಕಾರಣಕ್ಕೆ ಗೈರು ಹಾಜರಾಗಲು ತಮ್ಮ ಅನುಮತಿ ಕೇಳಿದ್ದಾರೆ? ಸದನ ನಡೆಯುವ ಸಂದರ್ಭದಲ್ಲಿ ಯಾರಿಗಾದರೂ ಅಪ್ಪಣೆ ಪಡೆಯುವಾಗ ಸೂಕ್ತ ಕಾರಣ ಬೇಕು. ಅವರ ಹೇಳಿಕೆ, ನಡವಳಿಕೆ ನೋಡಿದರೆ ಉದ್ದೇಶಪೂರ್ವಕವಾಗಿ ಸದನದಿಂದ ದೂರ ಉಳಿಯುತ್ತಿದ್ದಾರೆ. ತಮಗೆ ಜಮೀರ್ ಅಹ್ಮದ್ ಖಾನ್ ಕೊಟ್ಟ ಪತ್ರ ಸಭಾಪತಿಗಳು ಬಹಿರಂಗವಾಗಿ ಓದಲಿ ಎಂದು ಮನವಿ ಮಾಡಿದರು.

ಇದಾದ ನಂತರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯ 7ನೇ ವೇತನ ಆಯೋಗದ ವಿಷಯ ಪ್ರಸ್ತಾಪವಾಗಿ, ಆಡಳಿತ ಮತ್ತು ವಿಪಕ್ಷಗಳ ನಡುವೆ ಜಟಾಪಟಿಗೆ ಕಾರಣವಾಯಿತು. ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ 7ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರಿಂದಲೇ ಉತ್ತರ ಕೊಡಿಸಬೇಕು ಎಂದು ಆಗ್ರಹಿಸಿ ಪ್ರತಿಪಕ್ಷ ಸದಸ್ಯರು ಧರಣಿಗೆ ನಿಂತರು.

ವೇತನ ಆಯೋಗ ವರದಿ ಪೂರ್ಣಗೊಂಡಿದ್ದರೂ ಅದನ್ನು ಜಾರಿಗೆ ತರದೆ ವಿನಾಕಾರಣ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ಸದನಕ್ಕೆ ಸೂಕ್ತ ಉತ್ತರ ನೀಡಬೇಕೆಂದು ವಿಪಕ್ಷ ನಾಯಕರು ಒತ್ತಾಯಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮುಖ್ಯಮಂತ್ರಿಗಳ ಪರವಾಗಿ ಸಭಾನಾಯಕ ಎನ್.ಎಸ್.ಬೋಸರಾಜು ಈಗಾಗಲೇ ಸೂಕ್ತ ಉತ್ತರ ನೀಡಿದ್ದಾರೆ. ಹಾಗಾಗಿ, ಮುಖ್ಯಮಂತ್ರಿಗಳ ಅವಶ್ಯಕತೆ ಇಲ್ಲ ಎಂದರು.

ಇದರಿಂದ ಕೆರಳಿದ ವಿಪಕ್ಷ ಸದಸ್ಯರು ಸಭಾಪತಿಗಳ ಪೀಠದ ಮುಂದೆ ಧರಣಿ ಆರಂಭಿಸಿದರು. ಈ ಹಂತದಲ್ಲಿ ಗದ್ದಲ ಉಂಟಾದ ಹಿನ್ನೆಲೆ ಸಭಾಪತಿ ಹೊರಟ್ಟಿ 10 ನಿಮಿಷಗಳ ಕಾಲ ಸದನದ ಕಲಾಪವನ್ನು ಮುಂದೂಡಿದರು.

ಬಳಿಕ ಕಲಾಪ ಆರಂಭವಾದರೂ, ವಿಪಕ್ಷಗಳ ಧರಣಿ ಮುಂದುವರೆಯಿತು. ಈ ವೇಳೆ ಸಚಿವ ಕೃಷ್ಣಭೈರೇಗೌಡ ಮಧ್ಯಪ್ರವೇಶಿಸಿ, ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಹಾಗಾಗಿ ಚರ್ಚೆ, ಪರಿಹಾರಕ್ಕೆ ಸಿದ್ಧವಾಗಿದೆ. ಪ್ರತಿಪಕ್ಷಗಳು ಹೇಳಿದಂತೆ ಮುಖ್ಯಮಂತ್ರಿ ಗಳ ಉತ್ತರಕ್ಕೆ ಪ್ರಯತ್ನ ಮಾಡಲಾಗುವುದು. ನಾವು ನುಡಿದಂತೆ ನಡೆಯುವವರು ಎಂದರು.

ಅಲ್ಲದೆ, ಒಂದು ಹಂತದವರೆಗೂ ನಾವು ಸುಮ್ಮನಿರಬಹುದು ಎಂದ ಅವರು, ಸರ್ಕಾರಿ ನೌಕರರ ಕುರಿತು ನಮಗೆ ಹೆಚ್ಚಿನ ಕಳಾಜಿ ಇದೆ. ಹಾಗಾಗಿ, ಎಲ್ಲವನ್ನೂ ಅರ್ಥಮಾಡಿಕೊಂಡು ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಸಭಾಪತಿ ಬಸವರಾಜ ಹೊರಟ್ಟಿ, ನಾನು 4 ದಶಕಗಳಿಂದ ಈ ಸದನದಲ್ಲಿ ಇದ್ದೇನೆ. ಈ ರೀತಿ ಬಾವಿಗಿಳಿವುದು ಸರಿಯಲ್ಲ. ಸರ್ಕಾರದ ಪರವಾಗಿ ಈಗಾಗಲೇ ಉತ್ತರ ಬಂದಿದೆ. ಇದರ ನಡುವೆಯೂ ಮುಖ್ಯಮಂತ್ರಿ ಅವರ ಬಳಿ ನಾನೇ ಖುದ್ದು ಮಾತನಾಡಿ, ಈ ಕುರಿತು ಉತ್ತರ ಕೊಡಿಸುವೆ ಎಂದು ಭರವಸೆ ನೀಡಿದರು. ಆಗ ಪ್ರತಿಪಕ್ಷ ಸದಸ್ಯರು ಧರಣಿ ಕೈಬಿಟ್ಟು ಕಲಾಪಕ್ಕೆ ಅವಕಾಶ ಮಾಡಿಕೊಟ್ಟರು.

Leave a Reply