ಬೆಟ್ಟದ ಮದ್ದೆಮ್ಮ ಎಂಬ ನೆಲದೇವತೆಯನ್ನು ಕುರಿತು ಜಾನಪದ ಹಾಡುಗಾರ್ತಿಯರಾದ ವಡ್ಡಗೆರೆ ಕದರಮ್ಮ ಮತ್ತು ವಡ್ಡಗೆರೆ ಮುದ್ದುನಾಗಮ್ಮ ಹಾಡಿರುವ ಹಾಡಿರುವ ಕಥನಗೀತೆಯ ವಿಡಿಯೋ ಇದು.
ಅಲೆಮಾರಿ ಪಶುಪಾಲಕ ಕಾಡುಗೊಲ್ಲರ ಮಗಳಾಗಿ ಹುಟ್ಟಿದ ಮದ್ದೆಮ್ಮ ನಮ್ಮೂರ (ವಡ್ಡಗೆರೆ ಗ್ರಾಮದ) ಕುಂಚಿಟಿಗ ಸಮುದಾಯದ ಸಾಂಸ್ಕೃತಿಕ ನಾಯಕನಾದ ವೀರಕ್ಯಾತರಾಯನಿಗೆ ಒಲಿದು ಹಾಲುಕಾವಡಿಯಲ್ಲಿ ಬಂದು ನಮ್ಮೂರ ಬಳಿಯ (ಈಗಿನ ಎತ್ತಗಾನಹಳ್ಳಿ ಮದ್ದೆಮ್ಮನ ಬೆಟ್ಟದ) ಕಾಡು ಕಲ್ಲುಗವಿಯಲ್ಲಿ ಠಾವುಗೊಂಡಳಂತೆ.
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
ನೆಲದೇವತೆ ಮದ್ದೆಮ್ಮ ಎಲ್ಲೆಲ್ಲಿ ಆವಿನ ಗೂಡುಗಳಲ್ಲಿ (ದನಗಳ ರೊಪ್ಪಗಳಲ್ಲಿ) ಬೀಡುಬಿಟ್ಟಳೋ ಅಲ್ಲೆಲ್ಲಾ ಈ ದೇವತೆಯ ತೋರುಗದ್ದಿಗೆ ಗುಡಿಗಳಿವೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು- ಹಲಗಲದ್ದಿ ಮದ್ದೆಮ್ಮ,, ಸಾಲುಹುಣಸೆ ಮದ್ದೆಮ್ಮ, ತುಮಕೂರು ಶಿರಾ ತಾಲ್ಲೂಕಿನ ಕಾಮಗೊಂಡನಹಳ್ಳಿ ಮದ್ದೆಮ್ಮ, ಮದ್ದಕ್ಕನಹಳ್ಳಿ ಮದ್ದೆಮ್ಮ, ಪಾವಗಡ ತಾಲ್ಲೂಕಿನ ಮರಿದಾಸನಹಳ್ಳಿ ಮದ್ದೆಮ್ಮ, ಕೊರಟಗೆರೆ ತಾಲ್ಲೂಕಿನ ಎತ್ತಗಾನಹಳ್ಳಿ ಮದ್ದೆಮ್ಮ ಹೀಗೆ ಮದ್ದೆಮ್ಮನ ಹಲವಾರು ನೆಲೆಗಳಿವೆ.
ದನಕರು ಕುರಿಮಂದೆ ಕಾಯ್ದುಕೊಂಡು ಹಾಲುಮೊಸರು ವ್ಯಾಪಾರ ಮಾಡುತ್ತಿದ್ದ ಕಾಡುಗೊಲ್ಲರ ಹೆಣ್ಣು ಮಗಳೊಬ್ಬಳು ಹಲವಾರು ತಳಸಮುದಾಯಗಳಿಗೆ ದೇವತೆ ಹೇಗಾದಳೆಂಬುದು ಆಶ್ಚರ್ಯಕರ ಸಂಗತಿ.
ಆಗಿನ ಕಾಲಘಟ್ಟದಲ್ಲಿ ಕುರುಬರು ಕೆಟ್ಟು ಕುಂಚಿಟಿಗರಾದ ಬಳಿಕ, ಕುರುಬ ಸಮುದಾಯದ ಒಂದು ಬಣ ಕುರುಬರ ಜಲಧಿ ಬೊಪ್ಪರಾಯನ ಬಲಿದಾನ ಮತ್ತು ತ್ಯಾಗದಿಂದ ಕುಂಚಿಟಿಗ ಸಮುದಾಯವಾಗಿ 48 ಬೆಡಗುಗಳ ಸ್ವತಂತ್ರ ಜಾತಿಯಾಯಿತು. ಕರುಬರು ಕುಂಚಿಟಿಗರಾಗಿ ಜಾತ್ಯಂತರ ಹೊಂದಿದರು.
ಕರ್ನಾಟಕದ ಮೂಲನಿವಾಸಿ ಕುಲಗಳಲ್ಲೊಂದಾದ ಪಶುಪಾಲಕ ದ್ರಾವಿಡ ಬುಡಕಟ್ಟಿನ ಕಾಡುಗೊಲ್ಲ ಸಮುದಾಯವು ಮತ್ತೊಂದು ದ್ರಾವಿಡ ಪಶುಪಾಲಕ ಸಮುದಾಯವಾದ ಕುಂಚಿಟಿಗರು ಕುಲಸಂಕರವಾದರು. ಮದ್ದೆಮ್ಮ – ವೀರಕ್ಯಾತರಾಯರ ಮದುವೆಯೊಂದಿಗೆ ಕಾಡುಗೊಲ್ಲರು ಮತ್ತು ಕುಂಚಿಟಿಗರು ಪರಸ್ಪರ ಬೆರೆತುಹೋದರು. ಆಗ ಈಗಿನಂತೆ ಜಾತಿಗಳು ಜಿಗುಟಾಗಿರಲಿಲ್ಲ ಅನ್ನಿಸುತ್ತದೆ.
ಕುರುಬರ ಸಾಂಸ್ಕೃತಿಕ ವೀರನಾದ ಜಲಧಿ ಬೊಪ್ಪರಾಯ, ಕುಂಚಿಟಿಗರ ಸಾಂಸ್ಕೃತಿಕ ನಾಯಕ ವೀರಕ್ಯಾತರಾಯ ಮತ್ತು ಕಾಡುಗೊಲ್ಲರ ಸಾಂಸ್ಕೃತಿಕ ನಾಯಕಿ ಮದ್ದೆಮ್ಮ, ಹಾಗೂ ವೀರಕ್ಯಾತರಾಯನ ಸೊಸೆಯಾದ ಮಹಾಸತಿ ವಡ್ಡಗೆರೆ ನಾಗಮ್ಮ (ತಾಡಿ ವೀರನಾಗಮ್ಮ) ಕಾಲವಾದ ಬಳಿಕ ಕುರುಬರಿಗೆ- ಕುಂಚಿಟಿಗರಿಗೆ- ಕಾಡುಗೊಲ್ಲರಿಗೆ- ಮತ್ತಿತರ ಹಲವಾರು ತಳಸಮುದಾಯಗಳಿಗೆ ನೆಲದೇವತೆಯರಾಗಿ ಆರಾಧನೆಗೊಳ್ಳತೊಡಗುತ್ತಾರೆ.
10ನೇ ಶತಮಾನದಷ್ಟು ಪೂರ್ವಕಾಲದಲ್ಲಿಯೇ ಹೀಗೆ ಕುಲಗಳು ಬೆರೆತುಹೋಗಿ, ಆಗಿನ ಕಾಲದಲ್ಲಿ ಜಾತ್ಯಂತರ ನಡಿಗೆಗಳು ಸಾಧ್ಯವಾಗಿವೆಯೆಂದ ಮೇಲೆ ‘ಜಾತಿ’ಯನ್ನು ಕರಗಿಸುವ ಉದಕವು ದುಡಿಯುವ ಜನರ ನೆಲದೇವತೆಯರಲ್ಲಿದೆ ಎಂಬುದು ಕಂಡುಬರುತ್ತದೆ. ಜಾತಿಯನ್ನು ಕರಗಿಸುವ ಈ ದಾರಿಯೂ ನಮಗೆ ದಿಕ್ಕಾಗಬಹುದಲ್ಲವೇ?
- ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು




