ಎಸ್.ದಿವಾಕರ್ ಗೆ ಎಂಬತ್ತರ ಸಂಭ್ರಮ

3 years ago

#SDiwakar #celebrates #birthday #jagadishkoppa

ಹಿರಿಯ ಮಿತ್ರರಾದ ಎಸ್.ದಿವಾಕರ್ ಅವರಿಗೆ ಈಗ ಎಂಬತ್ತರ ಸಂಭ್ರಮ. ಇವರು ಡಿ.ವಿ.ಜಿ.ಯವರ ಸಹೋದರಿಯ ಮೊಮ್ಮಗ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ.

1976 ರಲ್ಲಿ ನನಗೆ ಬೆಂಗಳೂರಿನಲ್ಲಿ ಪ್ರಥಮವಾಗಿ ಪರಿಚಯವಾದ ಲೇಖಕರಲ್ಲಿ ದಿವಾಕರ್ ಮೊದಲಿಗರು. ಇವರು ಚಾಮರಾಜಪೇಟೆಯ ಮುಖ್ಯರಸ್ತೆಯಲ್ಲಿದ್ದ ಬೆಂಗಳೂರು ಪ್ರೆಸ್ ಕಟ್ಟಡದ ಮೊದಲ ಮಹಡಿಯಲ್ಲಿದ್ದ ಮಲ್ಲಿಗೆ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಹೈಸ್ಕೂಲ್ ದಿನಗಳಿಂದಲೂ ಓದುತ್ತಿದ್ದ ಮಾಸಪತ್ರಿಕೆಯಾದ ಮಲ್ಲಿಗೆ ಕಚೇರಿ ನನ್ನ ಅಕ್ಕನ ಮನೆ ಸಮೀಪವಿದ್ದ ಕಾರಣ ಹೋಗಿ ಅವರನ್ನು ಭೇಟಿಯಾಗಿದ್ದೆ.

ಅವರಿಂದ ಮುಂದಿನ ದಿನಗಳಲ್ಲಿ ಸುಮತೀಂದ್ರ ನಾಡಿಗ್ ಪರಿಚಯವಾದರು. ಅವರು ಬಸವನಗುಡಿಯ ಗಾಂಧಿಬಜಾರ್ ಬಳಿ ಒಂದು ಪುಸ್ತಕದ ಅಂಗಡಿ ಹೊಂದಿದ್ದರು. ಪ್ರತಿ ಭಾನುವಾರ ನ್ಯಾಷನಲ್ ಹೈಸ್ಕೂಲ್ ಕಟ್ಟಡದಲ್ಲಿ ಸಾಹಿತ್ಯ ಕುರಿತಂತೆ ಹೊಸ ಕೃತಿಗಳ ಕುರಿತಂತೆ ವಿಚಾರ ವಿನಿಮಯ ನಡೆಯುತ್ತಿತ್ತು. ಕಂಬಾರರು, ಅನಂತಮೂರ್ತಿ ಎಲ್ಲರನ್ನೂ ಮೊದಲಿಗೆ ಅಲ್ಲಿ ಭೇಟಿ ಮಾಡಿದ್ದೆ.

ಎಸ್. ದಿವಾಕರ್, ಸುಧಾ ವಾರಪತ್ರಿಕೆಗೆ ಬಂದಾಗ ನಾನು ಸುದ್ಧಿಸಂಗಾತಿಯಲ್ಲಿದ್ದೆ. ಹಾಗಾಗಿ ವಾರಕ್ಕೆ ಎರಡು ಬಾರಿ ಅವರನ್ನೂ ಭೇಟಿ ಮಾಡಿ ಎಂ.ಜಿ.ರಸ್ತೆಯ ಇಂಡಿಯನ್ ಕಾಫಿ ಹೌಸ್ ನಲ್ಲಿ ಕಾಫಿ ಕುಡಿಯುವುದು ಕಡ್ಡಾಯವಾಗಿತ್ತು.

ಅವರು ಪತ್ರಕರ್ತರಾಗಿದ್ದುಕೊಂಡು ಕಥಾಜಗತ್ತು ಶೀರ್ಷಿಕೆಯಡಿ ಜಗತ್ತಿನ ಹಲವು ಉತ್ತಮ ಕಥೆಗಳ ಬೃಹತ್ ಕೃತಿಯೊಂದನ್ನು ಹೊರತಂದಿದ್ದರು. ನನಗೆ ನೆನಪಿರುವ ಹಾಗೆ ಅದನ್ನು ಮಾವಿನಕೆರೆ ರಂಗನಾಥ್ ಪ್ರಕಟಿಸಿದ್ದರು. ಅವರ ಅನುವಾದದ ಶಕ್ತಿ ಜ್ಞಾನಕ್ಕೆ ನಾನು ಬೆರಗಾಗಿದ್ದೆ. ಅಲ್ಲಿಯವರೆಗೆ ಅವರ ಕ್ರೌರ್ಯ ಎಂಬ ಕಥೆಯನ್ನು ಓದಿ ಕಥೆಗಾರರು ಎಂದು ಮಾತ್ರ ಭಾವಿಸಿದ್ದೆ.

1987ರಲ್ಲಿ ಅವರು ಸುಧಾ ಪತ್ರಿಕೆಯನ್ನು ತ್ಯಜಿಸಿ ಚೆನ್ನೈ ನಗರದಲ್ಲಿ ಇರುವ ಅಮೇರಿಕಾ ರಾಯಭಾರಿ ಕಚೇರಿಯ ಸ್ವಾನ್ ಎಂಬ ಇಂಗ್ಲಿಷ್ ಮಾಸಪತ್ರಿಕೆಯ ಕನ್ನಡ ಭಾಷೆಯ ಅನುವಾದದ ಪತ್ರಿಕೆಗೆ ಹೊರಟಾಗ ನಾನು ಬೇಡ ಸಾರ್ ಎಂದು ತಡೆಯೊಡ್ಡಿದ್ದೆ. ಆದರೆ, ಒಳ್ಳೆಯ ಅವಕಾಶ ತಪ್ಪಿಸಿಕೊಳ್ಳಲು ಇಚ್ಛಿಸದ ದಿವಾಕರ್ ಚೆನ್ನೈಗೆ ಹೋದರು.

ಅವರಿಗೆ ಅಲ್ಲಿ ವಿಸ್ತೃತವಾದ ಓದಿಗೆ ಹೇರಳವಾದ ಅವಕಾಶ ದೊರೆಯಿತು. ಅಲ್ಲಿನ ಮೌಂಟ್ ರೋಡ್ ನಲ್ಲಿದ್ದ ರಾಯಭಾರಿ ಕಚೇರಿಗೆ ಹೊಂದಿಕೊಂಡಂತೆ ಬ್ರಿಟಿಷ್ ಲೈಬ್ರರಿಯ ಕಟ್ಟಡವಿತ್ತು. 1981 ರಿಂದ 84 ರವರೆಗೆ ನಾನು ಚೆನ್ನೈನಲ್ಲಿ ಇದ್ದ ಕಾರಣ ಪ್ರತಿ ವರ್ಷಕ್ಕೆ ಎರಡು ಮೂರು ಬಾರಿ ಅಲ್ಲಿಗೆ ಹೋಗಿ ಬರುವುದು ವಾಡಿಕೆ.

ಚೆನ್ನೈಗೆ ಹೋದಾಗ ದಿವಾಕರ್ ಅವರನ್ನು ಭೇಟಿ ಮಾಡಿ ಬರುತ್ತಿದ್ದೆ. ಅವರ ಕಚೇರಿಯ ಮೇಲಿದ್ದ ರೂಫ್ ಗಾರ್ಡನ್ ಕ್ಯಾಂಟಿನ್ ನಲ್ಲಿ ಮಧ್ಯಾಹ್ನದ ಊಟ, ತೈರ್ ವಡೆ ಎಂದು ಕರೆಯುವ ಮೊಸರಿನಲ್ಲಿ ಅದ್ದಿದ ಉದ್ದಿನ ವಡೆಯನ್ನು ತಿಂದು, ಫಿಲ್ಟರ್ ಕಾಫಿ ಕುಡಿಯುತ್ತಾ ಸಾಹಿತ್ಯದ ಬಗ್ಗೆ ಚರ್ಚೆ ಮಾಡಿ ಅವರಿಂದ ಹೊಸ ವಿಷಯ ತಿಳಿದುಕೊಂಡು ಬರುವುದು ಸಾಮಾನ್ಯವಾಗಿತ್ತು.

ಅವರು ಅಲ್ಲಿಂದ ನಿವೃತ್ತಿಯಾಗಿ ಬರುವುದರೊಳಗೆ ನಾನು ಉದಯ ಟಿ.ವಿ. ಸೇರಿ ಧಾರವಾಡದಲ್ಲಿ ವಾಸವಾಗಿದ್ದೆ. ಸಾಹಿತ್ಯದ ಕಾರ್ಯಕ್ರಮದ ನೆಪದಲ್ಲಿ ವರ್ಷದಲ್ಲಿ ಕನಿಷ್ಠ ಎರಡು ಮೂರು ಬಾರಿ ಧಾರವಾಡಕ್ಕೆ ಬರುತ್ತಿದ್ದ ಎಸ್.ದಿವಾಕರ್ ಜೊತೆಗೆ ರಾತ್ರಿ ಊಟ ಮಾಡುವುದು ನನ್ನ ದಿನಚರಿ ಎಂಬಂತಿತ್ತು.

ಅಪಾರ ನೆನಪಿನ ಶಕ್ತಿಯುಳ್ಳ ದಿವಾಕರ್ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಅರವತ್ತು ವರ್ಷದ ಚರಿತ್ರೆಯ ಒಳ ಹೊರಗನ್ನು ಬಣ್ಣಿಸುವ ಶಕ್ತಿ ಉಳ್ಳವರು. ಅವರು ನೋಬೆಲ್ ಪ್ರಶಸ್ತಿ ವಿಜೇತರ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟವರು. ಅದರ ಮಹತ್ವವನ್ನು ನಾವು ಮರೆಯಲಾಗದು. ಕಳೆದುಹೋದ ಗ್ರಾಮೊಫೋನು ಎಂಬ ಅವರ ಪ್ರಬಂಧ ಸಂಕಲನ ಕೂಡಾ ಕನ್ನಡದ ಒಂದು ಅತ್ಯುತ್ತಮ ಕೃತಿ.

ಕಳೆದ ವಾರ ಕರ್ನಾಟಕ ಸಂಗೀತದ ವಿದ್ವಾನ್ ಸೆಮ್ಮಂಗುಡಿಯವರ ಬಗ್ಗೆ ಲೇಖನ ಬರೆಯುವಾಗ ದಿವಾಕರ್ ಅವರನ್ನು ಜ್ಞಾಪಿಸಿಕೊಂಡೆ. ಅವರಿಗೆ ಈಗ 75 ವರ್ಷವಾಗಿರಬೇಕು ಎಂದುಕೊಂಡಿದ್ದೆ. ದಿವಾಕರ್ ನಾನು ಬಲ್ಲಂತೆ ಒಂದು ರೀತಿಯಲ್ಲಿ ಮೌನಿ ಮತ್ತು ಏಕಾಂಗಿ. ಯಾರನ್ನೂ ಅಥವಾ ಏನನ್ನೂ ಬೆಂಬತ್ತಿ ಹೋದವರಲ್ಲ. ಅವರ ಜ್ಞಾನವನ್ನು ಈಗಲಾದರೂ ಕನ್ನಡದ ಜಗತ್ತು ಸದುಪಯೋಗಪಡಿಸಿಕೊಳ್ಳಬೇಕಿದೆ.

  • ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply