ಕೋಲಾರ: ಕೋಲಾರ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಇರಲಿಲ್ಲ. ನೂರಾರು ಮಂದಿ ಯುವಕರು ರಸ್ತೆ ಅಪಘಾತಗಳಲ್ಲಿ ತಲೆಗೆ ಪೆಟ್ಟು ಮಾಡಿಕೊಂಡು ಬಲಿಯಾಗಿರುವುದನ್ನು ಗಮನಿಸಿ, ಹೆಲ್ಮೆಟ್ ಕಡ್ಡಾಯಗೊಳಿಸಲು ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾರಾಯಣ ಅವರಿಗೆ ಪ್ರೊ.ಶಿವಪ್ಪ ಅರಿವು ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಿವಪ್ಪ ಅರಿವು ಅವರು, ಮುಳಬಾಗಿಲು ನಗರದ ಇಬ್ಬರು ವಿದ್ಯಾರ್ಥಿಗಳು ಇತ್ತೀಚಿಗೆ ಬೈಕ್ ಓಡಿಸುವಾಗ ತಲೆಗೆ ಪೆಟ್ಟು ಮಾಡಿಕೊಂಡು ಸಾವನ್ನಪ್ಪಿದ್ದು ನಮಗೆ ಎಚ್ಚರಿಕೆಯ ಗಂಟೆಯಾಯಿತು ಎಂದು ಹೇಳಿದ್ದಾರೆ.
ಮುಳಬಾಗಿಲು ಅಮರಜ್ಯೋತಿ ಶಾಲೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸಹಿ ಮಾಡಿಸುವಲ್ಲಿ ನನ್ನ ಮಗಳು ನಮನ ಮತ್ತು ಆಕೆಯ ಸ್ನೇಹಿತರು ಯಶಸ್ವಿಯಾಗಿದ್ದರು. ಮಕ್ಕಳ ಸಹಿ ಜೊತೆಗೆ ಕೋಲಾರದ ಯುವಕರ ಬಗ್ಗೆ ಕಳಕಳಿ ಇರುವ ಇತರರು ಕೂಡ ಸಹಿ ಮಾಡಿದ್ದು, ಆ ಸಹಿ ಮಾಡಿದ ಪತ್ರವನ್ನು ಇಂದು ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾರಾಯಣ ಅವರಿಗೆ ತಲುಪಿಸಿದೆವು ಎಂದು ಹೇಳಿದ್ದಾರೆ.
ಬಹು ಪ್ರೀತಿಯಿಂದ ಮನವಿ ಸ್ವೀಕರಿಸಿ, ತಕ್ಷಣವೇ ಅಧೀನ ಅಧಿಕಾರಿ ಮೂಲಕ ಎಲ್ಲಾ ಪೋಲಿಸ್ ಸ್ಟೇಷನ್ ಗಳಿಗೆ ಮಾಹಿತಿ ಕೊಡಲು ಸೂಚಿಸಿದರು. ಎಸ್.ಪಿ. ಅವರ ಸಕಾರಾತ್ಮಕ ಸ್ಪಂದನೆಗೆ ಜೆಲ್ಲೆಯ ಎಲ್ಲರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಈ ವೇಳೆ ರೈತ ಮುಖಂಡ ಅಬ್ಬಣಿ ಶಿವಣ್ಣ, ಪೊ. ರವೀಂದ್ರ, ಡಾ.ಸಿ.ಎ.ರಮೇಶ್ ಹಾಜರಿದ್ದರು.




