ಸುಬ್ರಹ್ಮಣ್ಯ ಭಟ್ ಅಕಾಲಿಕ ಅಗಲಿಕೆ ಆಘಾತ ತಂದಿದೆ: ಡಾ. ಮಹೇಶ ಜೋಶಿ

3 years ago

#SubrahmanyaBhatt #untimely #demise #shocking #MaheshJoshi

ಬೆಂಗಳೂರು: ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಗಡಿನಾಡಿನಲ್ಲಿ ಕನ್ನಡ ಕಟ್ಟುವ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸುಬ್ರಹ್ಮಣ್ಯ ವಿ. ಭಟ್ಟ ಅವರು ಹೃದಯಾಘಾತದಿಂದ ಅಕಾಲಿಕ ನಿಧನರಾಗಿರುವುದು  ಆಘಾತವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಸಂತಾಪ ಸೂಚಿಸಿದ್ದಾರೆ.

ಕಾಸರಗೋಡಿನ ಬೀರಂತಬೈಲು ನಿವಾಸಿಯಾಗಿರುವ ಸುಬ್ರಹ್ಮಣ್ಯ ಭಟ್ಟ ಅರವರು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದರು. ಕುಂಬಳೆ, ಕಾಸರಗೋಡು, ಅಡೂರು ಹಾಗೂ ಜಿಲ್ಲೆಯ ವಿವಿಧ ಕಡೆಗಳ ಶಾಲೆಗಳಲ್ಲಿ ಅಧ್ಯಾಪಕರಾಗಿ  ಉತ್ತಮ ವಿದ್ಯಾರ್ಥಿ ಸಮೂಹವನ್ನು ನಾಡಿಗೆ ಕೊಡುವ ಮೂಲಕ ನಾಡು‌ಕಟ್ಟಿದ್ದವರು. ಕಾಸರಗೋಡು ಜಿಲ್ಲಾ ಸಹಾಯಕ ಶಿಕ್ಷಣ ಅಧಿಕಾರಿಯಾಗಿ ವೃತ್ತಿ ನಿರ್ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಕೇರಳ ಘಟಕದ ಅಧ್ಯಕ್ಷರಾಗಿ ಸತತ ಮೂರು ಬಾರಿ ಆಯ್ಕೆಯಾಗಿ, ಕನ್ನಡ ಪರ ಹೋರಾಟಗಳಲ್ಲಿ, ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸುಬ್ರಹ್ಮಣ್ಯ ಭಟ್ಟರು ಪರಿಷತ್ತಿನ ಎಲ್ಲ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿ ಕೊಂಡವರು ಎಂದು ಅವರು ನೆನೆದುಕೊಂಡಿದ್ದಾರೆ.

ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಹಲವಾರು ಸಾಹಿತ್ಯ, ಸಮ್ಮೇಳನವನ್ನು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಯಶಸ್ವಿಯಾಗಿದ್ದರು. ಕನ್ನಡ- ಕನ್ನಡಿಗ- ಕರ್ನಾಟಕ ಎನ್ನುವ ವಿಷಯ ಬಂದಾಗ ಎಂದೂ ಸುಮ್ಮನೆ ಕುಳ್ಳಿತುಕೊಳ್ಳುವ ಪ್ರಮೇಯವೇ ಇಲ್ಲ ಎನ್ನುತ್ತಾ ಕನ್ನಡದ ಸೇವೆಗೆ ಕಂಕಣ ಬದ್ಧರಾಗಿ ಇರುತ್ತಿದ್ದ ಭಟ್ಟರು ಇಂದು  ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಅರಳಿ ನಾಗರಾಜ ಅವರು ಕಾರ್ಯಕ್ರಮವೊಂದಕ್ಕೆ  ಕಾಸರಗೋಡಿಗೆ ತೆರಳಿದ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಅವರಿಗೆ ಕನ್ನಡದ ಶಾಲು ಹೊದಿಸಿ, ಹಾರಹಾಕಿ ಸ್ಮರಣಿಕೆ ನೀಡುಲುಮುಂದಾಗ ಅವರಿಗೆ  ಹೃದಯಾಘಾತ ಸಂಭವಿಸಿ ಕುಸಿದು ಬಿದ್ದರು. ತಕ್ಷಣ ಅವರನ್ನು  ಕಾಸರಗೋಡಿನ ಇ.ಕೆ ನಾಯ್ನರ್ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲಿಯೇ ಅವರು‌ ನಮ್ಮನ್ನು ಅಗಲಿದ್ದಾರೆ.  ಅವರ  ಅಕಾಲಿಕ ಸಾವಿನಿಂದ  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಘಾತ ಉಂಟಾಗಿದೆ ಎಂದು ಹೇಳಿದ್ದಾರೆ.

ಕೇರಳ ಗಡಿನಾಡ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ  ಭಟ್ ಅವರು ಸಾಹಿತ್ಯ ಲೋಕಕ್ಕೂ ಅಪಾರ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.  ಅವರ ಅಗಲುವಿಕೆ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ನಿಧನಕ್ಕೆ  ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ  ಸೂಚಿಸುತ್ತಿದೆ ಎಂದು ಸಂತಾಪ ಸೂಚಿಸಿ ಮೃತರ  ಆತ್ಮಕ್ಕೆ ಸದ್ಗತಿ ದೊರೆಯಲೆಂದು ಮತ್ತು ಕುಟುಂಬ ವರ್ಗಕ್ಕೆ ಹಾಗೂ ಸಮಸ್ತ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.

Leave a Reply