ಬೆಂಗಳೂರು: ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಹೊಸ ತಲೆಮಾರಿನ ಲೇಖಕರಲ್ಲಿಯೇ ಹೆಚ್ಚು ಕ್ರಿಯಾಶೀಲರಾದವರು, ಬಹುಮುಖಿ ಪ್ರತಿಭೆಯ ಅವರ ʻಮಾಯಾಲೋಕʼವನ್ನು ಕನ್ನಡಿಗರು ತೇಜಸ್ವಿ ಅವರನ್ನು ಆಸೆಗಣ್ಣುಗಳಿಂದ ನೋಡುವಂತೆ ಮಾಡಿತ್ತು. ಕನ್ನಡಕ್ಕೆ ತೀರ ವಿಶಿಷ್ಟ ಎನ್ನಿಸಬಲ್ಲ ಕೃತಿ `ಅಣ್ಣನ ನೆನಪುʼ ಕೃತಿಯ ಮೂಲಕ ತಮ್ಮ ತಂದೆ ಕುವೆಂಪು ಅವರ ವ್ಯಕ್ತಿತ್ವದ ವಿವಿಧ ಮುಖಗಳ ಅನಾವರಣಗೊಳಿಸುವ ಮೂಲಕ ಕುವೆಂಪು ಅವರ ಜೀವನ ಚರಿತ್ರೆ ಅಪೂರ್ವ ಮನಮೋಹಕ ಬರೆಹ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ಹಮ್ಮಿಕೊಂಡ ಸೃಜನಶೀಲ ಲೇಖಕರಾಗಿದ್ದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ೮೫ನೇ ಜನ್ಮದಿನದ ಹಿನ್ನೆಲೆಯಲ್ಲಿ ಪುಷ್ಪನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತೇಜಸ್ವಿಯವರಿಗೆ 1980ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕರ್ವಾಲೊ ಕೃತಿಗೆ ಸಂದಿತು. ಚಿದಂಬರ ರಹಸ್ಯ ಕೃತಿಗೆ 1985ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1988ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಚಿದಂಬರ ರಹಸ್ಯಕ್ಕಾಗಿ ಕಲ್ಕತ್ತ-ಬಿಲ್ವಾರ ಪುರಸ್ಕಾರವಾದ 1990ರ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿಗಳು ದೊರೆತವು. 1991ರಲ್ಲಿ ಶಿವರಾಮಕಾರಂತ ಪ್ರಶಸ್ತಿ, 1993ರಲ್ಲಿ ಜೀವವಿಜ್ಞಾನದ ಪರಿಸರ ಪ್ರಶಸ್ತಿ ಮತ್ತು ಈ ಎಲ್ಲವುಗಳಿಗೆ ಕಳಸವಿಟ್ಟಂತೆ ಎಂದು ನೆನಪು ಮಾಡಿಕೊಂಡರು.
ಕನ್ನಡ ಸಾಹಿತ್ಯಕ್ಕೆ ವಿಭಿನ್ನ ಆಯಾಮಗಳನ್ನು ಕೊಟ್ಟ ಸೃಜನಶೀಲ ಲೇಖಕರಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಪ್ರಮುಖರು. ಹಲವು ಬಗೆಯ ಆಸಕ್ತಿಗಳು, ವಿಭಿನ್ನ ಪ್ರಯೋಗಗಳು, ತಲಸ್ಪರ್ಶಿಯಾದ ಬದುಕಿನ ಶೋಧ, ದಿಟ್ಟ ವೈಚಾರಿಕ ನಿಲುವು ಮತ್ತು ಕಲಾತ್ಮಕ ಆಭಿವ್ಯಕ್ತಿ ಇವೆಲ್ಲ ತೇಜಸ್ವಿಯವರನ್ನು ಅನನ್ಯ ಲೇಖಕರನ್ನಾಗಿ ಮಾಡಿತ್ತು ಎಂದರು.
ತೇಜಸ್ವಿ ಅವರ ಅಭಿವ್ಯಕ್ತಿಯ ಹರಹೂ ವಿಸ್ತಾರವಾಗಿದೆ. ಕಥೆ, ಕವಿತೆ, ನಾಟಕ, ಕಾದಂಬರಿ, ವೈಚಾರಿಕ ಲೇಖನಗಳು, ಪರಿಸರ, ಶಿಕಾರಿ ಸಂಬಂಧಿತ ಬರಹಗಳು, ಇತಿಹಾಸ, ತತ್ವಜ್ಞಾನ, ಮಾನವಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ ಹೀಗೆ ಹಲವು ಜ್ಞಾನಶಾಖೆಗಳನ್ನು ಒಳಗೊಳ್ಳುವಂತೆ, ಅವುಗಳ ಸಂಬಂಧದ ಎಳೆಗಳನ್ನು ಹಿಡಿದು ಕೂಡಿಸುವಂತೆ ರಚಿಸಿದ್ದಾರೆ ಎಂದರು.
ಕನ್ನಡಕ್ಕೆ ಅಪರೂಪವೆನ್ನಿಸುವ ಬರಹಗಳಿಂದಲೇ ತೇಜಸ್ವಿಯವರು ವಿಭಿನ್ನ ಲೇಖಕರನ್ನಾಗಿ ಮಾಡಿದೆ. ಕರ್ವಾಲೊ, ಚಿದಂಬರ ರಹಸ್ಯ, ಕಿರುಗೂರಿನ ಗಯ್ಯಾಳಿಗಳು, ಜುಗಾರಿ ಕ್ರಾಸ್ ಮತ್ತು ಮಾಯಾಲೋಕ ಕೃತಿಗಳು, ಮೂಲಕ ಹೊಸ ದಿಗಂತದತ್ತ ತೇಜಸ್ವಿ ಅವರು ಹೆಜ್ಜೆ ಹಾಕಿ ಬಹಳ ದೂರ ಸಾಗಿದಕ್ಕೆ ಸಾಕ್ಷಿ ಹೇಳುತ್ತವೆ ಎಂದರು.
ತಮ್ಮ ಅವಧಿಯಲ್ಲಿ ದೂರದರ್ಶನದಲ್ಲಿ ʻಚಿದಂಬರ ರಹಸ್ಯʼ ಕಾದಂಬರಿ ಕುರಿತ ವಿಶೇಷ ಕಾರ್ಯಕ್ರಮವನ್ನು ಮಾಡಿದ್ದು, ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಆ ಕಾರ್ಯಕ್ರಮವನ್ನು ನಿರ್ದೇಶಿಸಿದ್ದರು ಎಂದರು.
ವೈವಿಧ್ಯಮಯ ಆಸಕ್ತಿ ಮತ್ತು ಬಗೆ ಬಗೆಯ ಪ್ರಯೋಗಗಳ ದೃಷ್ಟಿಯಿಂದ ನೋಡುವುದಾದರೆ ಶಿವರಾಮ ಕಾರಂತರನ್ನು ಬಿಟ್ಟರೆ, ಕನ್ನಡದಲ್ಲಿ ತೇಜಸ್ವಿ ಅವರಂಥ ಲೇಖಕರು ಇನ್ನೊಬ್ಬರಿಲ್ಲ ಬಣ್ಣಿಸಿದರು.
ತೇಜಸ್ವಿಯವರೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಮುಖ್ಯಸ್ಥ ಪ್ರೊ.ಎನ್.ಎಸ್.ಶ್ರೀಧರಮೂರ್ತಿ, ತೇಜಸ್ವಿಯವರ ʼತಬರನ ಕತೆʼ ಯನ್ನು ಗಿರೀಶ ಕಾಸರವಳ್ಳಿಯವರು ಚಲನಚಿತ್ರವಾಗಿಸಿದರು. ಇದಕ್ಕೆ ಸ್ವರ್ಣ ಕಮಲ ಪುರಸ್ಕಾರವೂ ಲಭಿಸಿತು. ಅವರ ʼಕುಬಿ ಮತ್ತು ಇಯಾಲʼವನ್ನು ಸುಂದರನಾಥ ಸುವರ್ಣ ಅವರು ಚಲನಚಿತ್ರವಾಗಿಸಿದರು. ಅವರ ʼಕರ್ವಾಲೋʼ ʻಚಿದಂಬರ ರಹಸ್ಯʼ ʻಕೃಷ್ಣೇಗೌಡರ ಆನೆʼ ʻಕಿರಗೂರಿನ ಗಯ್ಯಾಳಿʼಗಳು ರಂಗಭೂಮಿಯ ಮೇಲೆ ಜನಪ್ರಿಯತೆಯನ್ನು ಪಡೆದವು. ಮುಂದೆ ʼಕಿರಗೂರಿನ ಗಯ್ಯಾಳಿಯರುʼ ಸುಮನಾ ಕಿತ್ತೂರು ಬೆಳ್ಳಿತೆರೆಗೆ ತಂದರು. ಇತ್ತೀಚೆಗೆ ʼಡೇರ್ ಡೆವಿಲ್ ಮುಸ್ತಾಫಾʼ ಬಹು ಯಶಸ್ವಿ ಚಿತ್ರವಾಯಿತು. ಹೊಸ ಪೀಳಿಗೆಯ ಬರಹಗಾರರಿಗೆ ದಿಕ್ಸೂಚಿಯಂತಿದ್ದ ತೇಜಸ್ವಿಯವರು ವಿಜ್ಞಾನ, ಮಾಹಿತಿ, ತಂತ್ರಜ್ಞಾನದ ಕುರಿತೂ ವಿಪುಲವಾಗಿ ಬರೆದರು. ಮುಖ್ಯವಾಗಿ ಕನ್ನಡ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳಿಂದ ಹೊರ ತಂದು ವಿಶಾಲವಾದ ಬಯಲಿನಲ್ಲಿ ಅಡ್ಡಾಡುವಂತೆ ಮಾಡಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಲ್ಲುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ.ರಾಮಲಿಂಗ ಶೆಟ್ಟಿ ಮತ್ತು ಡಾ.ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷ ಡಾ. ಬಿ.ಎಮ್. ಪಟೇಲ್ ಪಾಂಡು, ವಿಶೇಷ ಕರ್ತವ್ಯಾಧಿಕಾರಿ ಚಿಕ್ಕತಿಮ್ಮಯ್ಯ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಬ್ಬಂದಿ ಪುಷ್ಪನಮನವನ್ನು ಸಲ್ಲಿಸಿದರು.




