ಬೆಂಗಳೂರಿನಲ್ಲಿ 9ನೆ ಸ್ವರಮೇಧಾ ಸಂಗೀತೋತ್ಸವ

3 months ago

ಬೆಂಗಳೂರು: ನಗರದ ರಾಜರಾಜೇಶ್ವರಿನಗರದಲ್ಲಿರುವ ಡಾ.ಚಿನ್ಮಯ ರಾವ್ ಸಂಸ್ಥಾಪಿಸಿರುವ ಸ್ವರಮೇಧಾ ಸಂಸ್ಥೆಯ ಒಂಬತ್ತನೆಯ ವರ್ಷದ ಸ್ವರಮೇಧಾ ಸಂಗೀತೋತ್ಸವ ಈ ವಾರಾಂತ್ಯ ಶನಿವಾರದಂದು ಬೆಂಗಳೂರಿನ ಉತ್ತರಹಳ್ಳಿ ಕೆಂಗೇರಿ ಮುಖ್ಯರಸ್ತೆಯಲ್ಲಿರುವ ಬಿ.ಜಿ.ಎಸ್ ಒಳಾಂಗಣ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

“ಸ್ವರಮೇಧಾ ಸಂಗೀತೋತ್ಸವ 2024-25“ಎಂಬ ಶೀರ್ಷಿಕೆಯಡಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ನೆಲೆಸಿರುವ ಸ್ವರಮೇಧಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನವನ್ನು ಮಾಡಲಿದ್ದಾರೆ.

ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯಾಲಯದ ಜ್ಯೂನಿಯರ್, ಸೀನಿಯರ್ ಹಾಗೂ ವಿದ್ವತ್ ವಿಭಾಗದ ನೂರಾರು ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳು ನಡೆಯಲಿದೆ. ತ್ಯಾಗರಾಜರ ಸಾದಿಂಚನೆ ಹಾಗೂ ಎಂದರೋ ಮಹಾನುಭಾವುಲು ಈ ಎರಡು ಪಂಚರತ್ನ ಕೃತಿಗಳನ್ನು ಸ್ವರಮೇಧಾ ಸಂಗೀತ ಶಾಲೆಯ 75 ವಿದ್ಯಾರ್ಥಿಗಳು ಏಕಕಂಠದಲ್ಲಿ ಏಕಕಾಲದಲ್ಲಿ ಹಾಡುವ ಮೂಲಕ ಹೊಸ ದಾಖಲೆಯೊಂದನ್ನು ಬರೆಯಲಿದ್ದಾರೆ.

ಸಂಜೆ 4 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಕುಂಬಳಗೋಡು ಶಾಖಾಮಠದ ಶ್ರೀ ಪ್ರಕಾಶನಾಥ ಸ್ವಾಮೀಜಿ ದಿವ್ಯಸಾನ್ನಿಧ್ಯ ವಹಿಸಲಿದ್ದಾರೆ.

ಬೆಂಗಳೂರಿನ 90 ವರ್ಷದ ಹಿರಿಯ ವೇಣುವಾದಕ ವಿದ್ವಾನ್ ಬಿ.ಜಿ ಶ್ರೀನಿವಾಸ ಅವರಿಗೆ “ಸ್ವರಮೇಧಾ ಸಂಗೀತರತ್ನ” ಪ್ರಶಸ್ತಿಯನ್ನೂ, ಕರ್ನಾಟಕದ ಜನಪ್ರಿಯ ಸ್ಯಾಕ್ಸೋಫೋನ್ ವಾದಕ ವಿದ್ವಾನ್ ಶ್ರೀಧರ್ ಸಾಗರ್ ಅವರಿಗೆ “ಸ್ವರಮೇಧಾ ಸಂಗೀತವಿಭೂಷಣ” ಪ್ರಶಸ್ತಿಯನ್ನೂ ಹಾಗೂ ಸುಪ್ರಸಿದ್ಧ “ಕಾಂತಾರ” ಚಿತ್ರದ ಸುಪ್ರಸಿದ್ಧ “ವರಾಹ ರೂಪಂ” ಗೀತೆಯನ್ನು ಹಾಡಿರುವ ದಕ್ಷಿಣ ಭಾರತದ ಪ್ರಖ್ಯಾತ ಹಿನ್ನೆಲೆ ಗಾಯಕ ಸಂಗೀತ ವಿದ್ವಾನ್ ಶ್ರೀ ಸಾಯಿ ವಿಘ್ನೇಶ್ ಅವರಿಗೆ “ಸ್ವರಮೇಧಾ ಸಂಗೀತಶ್ರೀ” ಬಿರುದನ್ನು ನೀಡಿ ಸನ್ಮಾನಿಸಲಾಗುತ್ತಿದೆ.

ಮುಖ್ಯ ಅತಿಥಿಗಳಾಗಿ ಚನ್ನೇನಹಳ್ಳಿಯ ವೇದ ವಿಜ್ನಾನ ಗುರುಕುಲದ ಸಂಸ್ಥಾಪಕರಾದ ಪ್ರೊಫೆಸರ್ ಡಾ.ರಾಮಚಂದ್ರ ಭಟ್ ಕೋಟೆಮನೆ, ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿಯಾದ ಹಯಗ್ರೀವಾಚಾರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ. ಸಿ.ಎನ್ ಮಂಜುನಾಥ್, ಮಾಜಿ ವಸತಿ ಸಚಿವ ಹಾಗೂ ವಿಜಯನಗರ ಕ್ಷೇತ್ರದ ಹಾಲಿ ಶಾಸಕ ಎಂ ಕೃಷ್ಣಪ್ಪ ಹಾಗೂ ಗೊವಿಂದರಾಜನಗರದ ಜನಪ್ರಿಯ ಶಾಸಕ ಪ್ರಿಯಾಕೃಷ್ಣ ಅವರು ಆಗಮಿಸಲಿದ್ದಾರೆ.

ಸಮಾಜಸೇವಕರಾದ ಪಟ್ಟಣಗೆರೆ ಜಯಣ್ಣ, ಗೋಸೇವಕರಾದ ಮಹೇಂದ್ರ ಮುನ್ನೋಟ್, ಉದ್ಯಮಿ ರಾಜೇಶ್ ಬಾಬು, ಅಂಕಿ ರೆಡ್ಡಿ ಸ್ವರಮೇಧಾ ಸಂಸ್ಥಾಪಕರಾದಡಾ. ಚಿನ್ಮಯ ಎಂ.ರಾವ್, ಸ್ವರಮೇಧಾ ಸಂಸ್ಥೆಯ ಅಧ್ಯಕ್ಷ ಲೆಕ್ಕ ಪರಿಶೋಧಕ ಸಿ.ಎ ಭರತ್ ರಾವ್ ಕೆ.ಎಸ್ ಹಾಗೂ ಸ್ವರಮೇಧಾ ಸಂಸ್ಥೆಯ ಟ್ರಸ್ಟಿಗಳಾದ ಶೀಲಾ ಸಿ ರಾವ್ ಅವರು ಈ ಸಂದರ್ಭದಲ್ಲಿ ವೇದಿಕೆಯಲ್ಲಿರಲಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತದ ವ್ಯಾಪಕ ಪ್ರಸಾರದ ಉದ್ದೇಶದಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುವ ಕಾರಣ ಬಹುಜನರು ಆಗಮಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸ್ವರಮೇಧಾ ಸಂಸ್ಥಾಪಕ ಡಾ. ಚಿನ್ಮಯ ಎಂ.ರಾವ್ ಸಮಸ್ತ ಸಂಗೀತಾಭಿಮಾನಿಗಳನ್ನು ಆಹ್ವಾನಿಸಿದ್ದಾರೆ.

ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿಯ ಕಿರುಪರಿಚಯ :

ವಿಶ್ವದಾಖಲೆ ವಿಜೇತ ಯುವ ಸಂಗೀತ ನಿರ್ದೇಶಕ ಹಾಗೂ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಕಲಾವಿದ ಡಾ. ಚಿನ್ಮಯ ಎಂ.ರಾವ್ ವಿಶ್ವಶಾಂತಿಗಾಗಿ ಸಂಗೀತ ಎಂಬ ವಿಶೇಷ ಪರಿಕಲ್ಪನೆಯೊಂದಿಗೆ 2015ರಲ್ಲಿ ಸಾಗರ ತಾಲೂಕಿನ ಆನಂದಪುರ ಸಮೀಪದ ಹೊನಗೋಡಿನಲ್ಲಿ ಸಂಸ್ಥಾಪಿಸಲ್ಪಟ್ಟ ಸಂಸ್ಥೆಯೇ ಸ್ವರಮೇಧಾ ಇಂಟರ್ ನ್ಯಾಷನಲ್ ಮ್ಯೂಸಿಕ್ ಅಕಾಡೆಮಿ. ಕಳೆದ ಒಂಬತ್ತು ವರ್ಷಗಳಿಂದ ದೇಶ ವಿದೇಶಗಳಲ್ಲಿರುವ ನೂರಾರು ವಿದ್ಯಾರ್ಥಿಗಳಿಗೆ ಸ್ವತಹ ಡಾ. ಚಿನ್ಮಯ ರಾವ್ ಅವರೇ ಸಂಗೀತ ಪಾಠವನ್ನು ಮಾಡುತ್ತಿದ್ದಾರೆ. ಸಂಸ್ಥೆಯ ಪ್ರಾಂಶುಪಾಲಕರಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ವಿಶೇಷವಾಗಿ ಯುವಪೀಳಿಗೆಗೆ ಹಸ್ತಾಂತರಿಸುತ್ತಿದ್ದಾರೆ. ಯುವಪೀಳಿಗೆಯನ್ನು ಶಾಸ್ತ್ರೀಯ ಸಂಗೀತದ ಸಾಧನೆಯತ್ತ ಕೊಂಡೊಯ್ಯಲು ಸಂಸ್ಥೆ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

Leave a Reply