ಬೆಂಗಳೂರು: ಮಾಜಿ ಸಂಸದ ಹಾಗೂ ಕಾಂಗ್ರೆಸ್ ಪ್ರಭಾವಿ ನಾಯಕ ಡಿ.ಕೆ.ಸುರೇಶ್ ಅವರ ಸಹೋದರಿ ಎಂದು ಚಿನ್ನದ ವ್ಯಾಪಾರಿಯನ್ನು ನಂಬಿಸಿದ ಮಹಿಳೆಯೊಬ್ಬರು ಬರೋಬ್ಬರಿ 9.82 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದಾರೆ. ಈ ಸಂಬಂಧ ಚಿನ್ನದ ವ್ಯಾಪಾರಿ ನೀಡಿದ ದೂರು ಆಧರಿಸಿ ಬೆಂಗಳೂರಿನ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲೀಕರಾದ ವನಿತಾ ಎಸ್.ಐತಾಳ್ ಅವರನ್ನು ಪರಿಚಯ ಮಾಡಿಕೊಂಡ ಐಶ್ವರ್ಯಾ ಗೌಡ ಎಂಬ ಮಹಿಳೆ ತಾನು ಮಾಜಿ ಸಂಸದರ ಸಹೋದರಿ, ನನಗೆ ಅನೇಕ ರಾಜಕೀಯ ನಾಯಕರ ಪರಿಚಯವಿದೆ ಎಂದಿದ್ದಾರೆ.
ತಮ್ಮ ಪರಿಚಿತರ ಮೂಲಕ ನಿಮಗೆ ಸಾಕಷ್ಟು ಗಿರಾಕಿಗಳನ್ನು ಕೊಡುತ್ತೇನೆ. ದೊಡ್ಡ ಪ್ರಮಾಣದಲ್ಲಿ ಅವರು ಚಿನ್ನಾಭರಣ ಖರೀದಿ ಮಾಡುತ್ತಾರೆ ಎಂದು ಹೇಳಿ ನಂಬಿಸಿದ್ದಾರೆ. ಬಳಿಕ ಐಶ್ವರ್ಯಾ ಗೌಡ, ತನ್ನ ಪತಿ ಹರೀಶ್ ಅವರೊಂದಿಗೆ ವನಿತಾ ಅವರನ್ನು ಭೇಟಿ ಮಾಡಿದ್ದಾರೆ. ನಂತರ ಸಾಲದ ರೂಪದಲ್ಲಿ ಚಿನ್ನ ಪಡೆದು ಆರಂಭದಲ್ಲಿ ಕೆಲ ಬಾರಿ ಹಣ ನೀಡಿದ್ದಾರೆ.
ಈ ರೀತಿ ನಂಬಿಕೆ ಸಂಪಾದಿಸಿದ ದಂಪತಿ ಬಳಿಕ 2023ರ ಅಕ್ಟೋಬರ್ನಿಂದ 2024 ಏಪ್ರಿಲ್ವರೆಗೆ ಹಂತಹಂತವಾಗಿ ಪಡೆದಿದ್ದ ಒಟ್ಟು 14 ಕೆ.ಜಿ 660 ಗ್ರಾಂ ಚಿನ್ನ ಸಾಲದ ರೂಪದಲ್ಲಿ ಪಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಹಣ ನೀಡಿಲ್ಲ. ಹಣ ಕೇಳಿದಾಗ ಸದ್ಯಕ್ಕೆ ಹಣವಿಲ್ಲ ಎಂದಿದ್ದ ಆರೋಪಿಗಳು, 2024ರ ಜುಲೈವರೆಗೂ ಸಮಯಾವಕಾಶ ಕೇಳಿದ್ದಾರೆ. ಜೊತೆಗೆ ಪಡೆದಿದ್ದ ಚಿನ್ನಕ್ಕೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ.
ಕಾಲಾವಕಾಶ ಮುಗಿದ ಬಳಿಕ ಹಣ ವಾಪಾಸ್ ಕೇಳಿದಾಗ, ಧರ್ಮೇಂದ್ರ ಎಂಬ ಸಿನಿಮಾ ನಟನ ಮೂಲಕ ಕರೆ ಮಾಡಿಸಿ ಸಂಸದರ ಧ್ವನಿಯಲ್ಲಿ ಮಾತನಾಡಿಸಿದ್ದಾರೆ. ಹಣ ಕೇಳಿದರೆ ಧರ್ಮೇಂದ್ರನನ್ನು ಕಳುಹಿಸಿ ಕೊಲೆ ಮಾಡಿಸುವುದಾಗಿ ಬೆದರಿಸಿದ್ದಾರೆ. ಅಲ್ಲದೇ ಧರ್ಮೇಂದ್ರ ಅವರನ್ನು ಅಂಗಡಿಗೆ ಕಳುಹಿಸಿ ಬೆದರಿಸಿದ್ದಾರೆ ಎಂದು ಇದೀಗ ವನಿತಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಚಂದ್ರಾ ಲೇಔಟ್ ಠಾಣೆ ಪೊಲೀಸರು ಐಶ್ವರ್ಯ, ಆಕೆಯ ಪತಿ ಹರೀಶ್ ಕೆ.ಎನ್ ಹಾಗೂ ನಟ ಧರ್ಮೇಂದ್ರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ನಾವು ಮುಂಬೈ, ಬೆಂಗಳೂರಿನ ವಿವಿಧ ಚಿನ್ನದ ವ್ಯಾಪಾರಿಗಳಿಂದ ಚಿನ್ನಾಭರಣ ಪಡೆದು ಆರೋಪಿಗಳಿಗೆ ನೀಡಿದ್ದೆವು. ಆದರೆ, ಆರೋಪಿಗಳು ಇನ್ನೂ ಹಣ ನೀಡದಿರುವುದರಿಂದ ನಮಗೆ ದೈನಂದಿನ ವ್ಯವಹಾರ ನಡೆಸುವುದು ಕಷ್ಟವಾಗಿದೆ ಎಂದು ಚಂದ್ರಾಲೇಔಟ್ ಠಾಣೆಗೆ ವನಿತಾ ಅವರು ದೂರು ನೀಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.




