5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ತರಗತಿ ಪ್ರವೇಶಿಸಲು ಅವಕಾಶ

2 years ago

ಬೆಂಗಳೂರು: ರಾಜ್ಯ ಪಠ್ಯಕ್ರಮದ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳ ಬೋರ್ಡ್ ಪರೀಕ್ಷೆ ಸಂಬಂಧ ಸರ್ಕಾರ ಮತ್ತು ಖಾಸಗಿ ಶಾಲೆಗಳ ನಡುವೆ ಕಾನೂನು ಹೋರಾಟದ ಬಿಕ್ಕಟ್ಟು ಮುಂದುವರೆದಿರುವ ಬೆನ್ನಲ್ಲೇ ಈ ವಿದ್ಯಾರ್ಥಿಗಳಿಗೆ ಮುಂದಿನ ತರಗತಿ ಪ್ರವೇಶಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ರಾಜ್ಯ ಸರ್ಕಾರ ನೂತನ ಪಠ್ಯಕ್ರಮ ಆಧರಿಸಿ ಈ ತರಗತಿಗಳಿಗೆ ಪರೀಕ್ಷೆ ನಡೆಸುವ ವಿಚಾರದಲ್ಲಿ ಸಾಕಷ್ಟು ಗೊಂದಲ ಉಂಟಾಯಿತು. ಪರೀಕ್ಷೆ ನಿರ್ಧಾರ ಪ್ರಶ್ನಿಸಿ ಹಲವರು ಕೋರ್ಟ್ ಮೊರೆ ಹೋದ ಪರಿಣಾಮ ಬಿಕ್ಕಟ್ಟು ಉಂಟಾಗಿದೆ.

ಕೋರ್ಟ್ ಆದೇಶದಂತೆ ಈ ತರಗತಿಗಳಿಗೆ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಆದರೆ, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಈ ಮೂರೂ ತರಗತಿಗಳಿಗೆ ನಡೆಸಿದ್ದ ಬೋರ್ಡ್ ಪರೀಕ್ಷಾ ಫಲಿತಾಂಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿ ಏಪ್ರಿಲ್ 8ರಂದು ಮಧ್ಯಂತರ ಆದೇಶ ಮಾಡಿದೆ. ಒಂದು ವೇಳೆ ಯಾವುದೇ ಶಾಲೆಗಳು ಫಲಿತಾಂಶ ಪ್ರಕಟಿಸಿದ್ದರೆ ಅದನ್ನು ತಡೆಹಿಡಿಯಲೂ ಸೂಚಿಸಿದೆ.

ಇದರಿಂದ ಈ ಮಕ್ಕಳ ಪೈಕಿ ವಸತಿ ಶಾಲೆಗಳಲ್ಲಿ ಪ್ರವೇಶ ಕೋರಿ ಅರ್ಜಿ ಸಲ್ಲಿಸುವವರಿಗೆ, ಬೇರೆ ಶಾಲೆಗೆ ವರ್ಗಾವಣೆ ಬಯಸುವವರಿಗೆ ಹಾಗೂ ಮುಂದಿನ ತರಗತಿಗಾಗಿ ಬೇರೆ ಶಾಲೆಗೆ ಸೇರಬೇಕಿರುವವರಿಗೆ ಹಾಲಿ ತರಗತಿಯ ಫಲಿತಾಂಶದ ಪ್ರಶ್ನೆ ಅಡ್ಡ ಬರುತ್ತಿದೆ. ಆ ಮಕ್ಕಳು ಮತ್ತು ಅವರ ಪೋಷಕರು ತೀವ್ರ ಆತಂಕ, ಗೊಂದಲಕ್ಕೆ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ ಹಲವು ದೂರುಗಳನ್ನು ಪರಿಶೀಲಿಸಿದ ಶಿಕ್ಷಣ ಇಲಾಖೆ ಇದೀಗ ಐದು ಎಂಟು ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಎಫ್ ಎ 1, ಎಫ್ಎ 2, ಎಫ್ ಎ 3 ಮತ್ತು ಎಫ್ ಎ 4 ನಲ್ಲಿ ಪಡೆದ ಅವರ ಮೌಲ್ಯಾಂಕನ ಆಧರಿಸಿ ಮುಂದಿನ ತರಗತಿಗಳಿಗೆ ಪ್ರವೇಶ ಕಲ್ಪಿಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ.

ಕೋಟ್ 5, 8 ಮತ್ತು 9ನೇ ತರಗತಿ ಬೋರ್ಡ್ ಪರೀಕ್ಷೆ ಫಲಿತಾಂಶ ವಿಚಾರ ನ್ಯಾಯಾಲಯದಲ್ಲಿದ್ದರೂ 9ನೇ ತರಗತಿವರೆಗೂ ಮಕ್ಕಳನ್ನು ಅನುತ್ತೀರ್ಣಗೊಳಿಸಲು ಈಗಿರುವ ಕಾನೂನಲ್ಲಿ ಅವಕಾಶವೇ ಇಲ್ಲದ ಕಾರಣ ಈ ಆದೇಶ ಹೊರಡಿಸಿದೆ.

Leave a Reply