ಬೆಂಗಳೂರು: ನೇರ-ನಿಷ್ಠುರ ನಡೆ ನುಡಿಯ, ಸದಾ ಸತ್ಯವನ್ನು ಹೇಳುವ ವಿಶೇಷ ಗುಣ ಬಂಗೇರ ಅವರದ್ದಾಗಿತ್ತು. ನಾನು ಮತ್ತು ವಸಂತ ಬಂಗೇರ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು. ಅವತ್ತಿನಿಂದ ಅವರ ಉಸಿರಿನ ಕೊನೆ ಗಳಿಗೆಯವರೆಗೂ ನನ್ನ ಸ್ನೇಹಿತರಾಗಿದ್ದರು. ಇವರ ಅಗಲಿಕೆ ನನಗೆ ಅಪಾರ ದುಃಖ ತಂದಿದೆ ಎಂದು ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದರು.
- ಹಾರಿಕಾ ಮಂಜುನಾಥ್ ವಿದೇಶಿ ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದಿದ್ದಾರೆಯೇ?
- ಪೌರ ಕಾರ್ಮಿಕರ ದಿರಿಸಿನಲ್ಲಿ ಡಿ ಕೆ ಶಿವಕುಮಾರ್
- ಹಾಸನದಲ್ಲಿ ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಸಮಾವೇಶ
- ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ: ಆರ್.ಅಶೋಕ
- ನಕಲಿ ಔಷಧಿ ತಯಾರಕರು, ಮಾರಾಟಗಾರರನ್ನು ಶಿಕ್ಷಿಸಿ
ಹಿರಿಯ ನಾಯಕ ವಸಂತ ಬಂಗೇರ ಅವರ ಉತ್ತರಕ್ರಿಯೆ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸತ್ಯ, ಬಡವರ ಪರ ಕಾಳಜಿ, ರಾಜಿರಹಿತ ಜನಪರ ಕೆಲಸಗಳ ಮೂಲಕ ತಮ್ಮ ವೈಯುಕ್ತಿಕ ಮತ್ತು ರಾಜಕೀಯ ಜೀವನವನ್ನು ಸಾರ್ಥಕಗೊಳಿಸಿಕೊಂಡ ಬಂಗೇರ ಅವರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದ್ದಾರೆ ಎಂದರು.
ಬಂಗೇರ ಅವರು ತಮ್ಮ ಬದುಕಿನುದ್ದಕ್ಕೂ ವಿಶ್ವಮಾನವ ಮೌಲ್ಯವನ್ನು ಪಾಲಿಸಿದರು. ಅವರು ನನ್ನ ಬಳಿಗೆ ಯಾವತ್ತೂ ವೈಯುಕ್ತಿಕ ಕೆಲಸಗಳಿಗಾಗಿ ಬಂದಿಲ್ಲ. ಬಂದಾಗಲೆಲ್ಲಾ ಜನರ ಕೆಲಸಗಳಿಗಾಗಿ ಬೇಡಿಕೆ ಇಟ್ಟಿದ್ದರು. ಐದು ಬಾರಿ ಶಾಸಕರಾದರೂ ಮಂತ್ರಿ ಆಗಲು ಯಾವತ್ತೂ ಸಣ್ಣ ಲಾಭಿ ಕೂಡ ನಡೆಸಿದವರಲ್ಲ. ಹೀಗಾಗಿ ಇವರು ಅತ್ಯಂತ ಮಾದರಿ ರಾಜಕೀಯ ನಾಯಕರಾಗಿದ್ದರು ಎಂದರು.
2023ರಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಮನವಿ ಮಾಡಿದರೂ ಅವರು ಒಪ್ಪಲಿಲ್ಲ. ಈ ಬಾರಿ ಸ್ಪರ್ಧಿಸಿದ್ದರೆ ಖಂಡಿತಾ ಗೆದ್ದು ಮಂತ್ರಿಯಾಗುತ್ತಿದ್ದರು. ಅವರು ಇಂದು ನಮ್ಮೊಂದಿಗಿಲ್ಲ ಎಂಬುದು ಅತ್ಯಂತ ನೋವಿನ ಸಂಗತಿ ಎಂದರು.
ವಸಂತ ಬಂಗೇರ ಅವರ ಸಾವಿನಿಂದ ರಾಜ್ಯ ರಾಜಕಾರಣ ಬಡವಾಗಿದೆ. ಅವರ ಆರೋಗ್ಯ ಚೇತರಿಸಿಕೊಳ್ಳುತ್ತದೆ, ಮತ್ತಷ್ಟು ಕಾಲ ನಮ್ಮ ಜೊತೆಗೆ ಇರುತ್ತಾರೆ ಎನ್ನುವ ಆಸೆ ಇತ್ತು. ಆದರೆ ನಮ್ಮನ್ನು ಅಗಲಿದ್ದಾರೆ, ಒಬ್ಬ ಪ್ರೀತಿಯ ಸ್ನೇಹಿತನನ್ನು ಕಳೆದುಕೊಂಡ ದುಃಖ ನನ್ನದು ಎಂದರು.




