ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ೩ ಕೋಟಿ ರೂ. ಅನುದಾನ ಸಿ.ಎಂ ಬೊಮ್ಮಾಯಿ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳು: ಡಾ. ಮಹೇಶ ಜೋಶಿ

3 years ago

ಬೆಂಗಳೂರು: ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕಾಗಿ ಸರಕಾರ ೩ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕನ್ನಡಿರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸಮಸ್ತ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ತು ಗೌರವದಿಂದ ಅಭಿನಂದಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ೩ ಕೋಟಿ ರೂ ಅನುದಾನ ಸರ್ಕಾರ ನೀಡಬೇಕು, ಎನ್ನುವ ಬೇಡಿಕೆಯನ್ನು ಸಿಎಂ ಅವರ ಬಳಿ ಕನ್ನಡ ಸಾಹಿತ್ಯ ಪರಿಷತ್ತು ಮಂಡಿಸಿತ್ತು. ಪರಿಷತ್ತಿನ ಬೇಡಿಕೆಗೆ ತಕ್ಷಣದಲ್ಲಿ ಸ್ಪಂದಿಸಿ, ಹಾವೇರಿಯಲ್ಲಿ ನಡೆದ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಭಾಷಣದಲ್ಲಿ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಸರಕಾರದಿಂದ ೩ ಕೋಟಿ ರೂ ಅನುದಾನ ಕೊಡುವ ವಾಗ್ದಾನವನ್ನು ನೀಡಿದ್ದರು ಎಂದಿದ್ದಾರೆ.

ಸದ್ಯ ಕೊಟ್ಟ ಮಾತಿನಂತೆ ಹಾವೇರಿಯಲ್ಲಿ ನಿಮಾರ್ಣಮಾಡಲಾಗುವ ಕನ್ನಡ ಸಾಹಿತ್ಯ ಭವನಕ್ಕೆ ೩ ಕೋಟಿ ರೂ. ಸರಕಾರದಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸಾಹಿತ್ಯ ಭವನ ನಿರ್ಮಾಣಮಾಡಲು ಈಗಾಗಲೇ ಪರಿಷತ್ತು ಜಾಗ ನೊಂದಣಿ ಮಾಡಿಕೊಂಡಿದ್ದು, ಸದ್ಯದಲ್ಲಿಯೇ ಕಟ್ಟಡ ನಿರ್ಮಾಣದ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಹಾವೇರಿ ಸಮ್ಮೇಳನದಲ್ಲಿ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ -೨೦೨೨ʼನ್ನು ಕಾನೂನು ಮಾಡಬೇಕು ಎನ್ನುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ʻಕನ್ನಡ ಬಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨ʼನ್ನು ಸದನದಲ್ಲಿ ಮಂಡಿಸಿ ಕಾನೂನು ಮಾಡುವ ಭರವಸೆ ನೀಡಿದ್ದರು. ಅವರು ನೀಡಿದ್ದ ಭರವಸೆಯಂತೆ ʻಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-೨೦೨೨ʼ ನ್ನು ಕಾನೂನು ಮಾಡಿ ನಾಡಿನಲ್ಲಿ ಕನ್ನಡ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ಈ ಕಾನೂನಿನ ಮೂಲಕ ಕನ್ನಡವನ್ನು ಸಮಗ್ರವಾಗಿ ಜಾರಿ ಮಾಡುವುದರ ಜೊತೆ ಕನ್ನಡಿಗರ ಬಹು ದಿನದ ಕನಸಾಗಿರುವ ಕನ್ನಡವನ್ನು ಅನ್ನದ ಭಾಷೆಯಾಗಿ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ ಹಾವೇರಿಯ ನಡೆದ ೮೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ʻಮೂರನೆಯ ವಿಶ್ವಕನ್ನಡ ಸಮ್ಮೇಳನʼ ವನ್ನು ದಾವಣಗೆರೆಯಲ್ಲಿ ಆಯೋಜಿಸುವ ಪ್ರಸ್ತಾಪವನ್ನು ಮಾಡಿದ್ದರು. ಅವರು ಹೇಳಿದ ಮಾತಿನಂತೆ ಈ ಬಾರಿಯ ಆಯವ್ಯದಲ್ಲಿ ದಾವಣಗೆರೆಯಲ್ಲಿ ʻಮೂರನೆಯ ವಿಶ್ವ ಕನ್ನಡ ಸಮ್ಮೇಳನʼವನ್ನು ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಸೇರಿ ಸರ್ಕಾರ ನಡೆಸಲು ಅಧಿಕೃತ ಘೊಷಣೆ ಮಾಡಿರುವುದು ಮುಖ್ಯಮಂತ್ರಿಗಳಿಗೆ ಕನ್ನಡ ಭಾಷೆಯ ಮೇಲಿರುವ ಅಭಿಮಾನ ಹಾಗೂ ಕೊಟ್ಟ ಮಾತನ್ನು ನಡೆಸಿಕೊಡುವ ಛಲಗಾರಿಕೆ ಎತ್ತಿ ತೋರಿಸುತ್ತದೆ ಎಂದಿದ್ದಾರೆ.

ಕೊಟ್ಟ ಮಾತನ್ನು ಉಳಿಸಿಕೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾಡಿನ ಸಮಸ್ತ ಕನ್ನಡಿಗರ ಪರವಾಗಿ ಕನ್ನಡದ ಅಸ್ಮಿತೆಯ ಎಲ್ಲ ಸಂಘ ಸಂಸ್ಥೆಗಳ ಮಾತ್ರ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಪೂರ್ವಕ ಅಭಿನಂದಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply