ಟಿಪ್ಪೂ ಮಗಳ ಮದುವೆಯೂ, ಅವನ ಸೈನಿಕರ ನಿಷ್ಠೆಯೂ, ಉರೀಗೌಡ-ನಂಜೇಗೌಡರ ಚರ್ಚೆಯೂ

3 years ago

1799 ಮೇ 4ರಂದು ನಾಲ್ಕನೇ ಆಂಗ್ಲೋ ಮೈಸೂರು ಕಾಳಗದಲ್ಲಿ ಟಿಪ್ಪೂ ಅಸುನೀಗಿದ ನಂತರ ಮೈಸೂರು ರಾಜ್ಯದ ಚಿತ್ರಣವೇ ಬದಲಾಗುತ್ತದೆ. ಆಗಿನ್ನೂ ಐದು ವರ್ಷದ ಪೋರನಾಗಿದ್ದ ಮೂರನೇ ಕೃಷ್ಣರಾಜ ಒಡೆಯರ್ ಅವರಿಗೆ ಪಟ್ಟಕಟ್ಟುವ ಬ್ರಿಟಿಷರು, ಹೈದರ್ ಮತ್ತು ಟಿಪ್ಪೂ ಇಬ್ಬರ ಬಳಿಯೂ ಸೇವೆ ಸಲ್ಲಿಸಿದ್ದ ಪೂರ್ಣಯ್ಯನವರನ್ನೇ ದಿವಾನರನ್ನಾಗಿ ನೇಮಕ ಮಾಡಿದರು!

ಸಾಮಾನ್ಯವಾಗಿ ತಮ್ಮ ವಿರೋಧಿ ರಾಜನ ಪರವಾಗಿ ಆಯಕಟ್ಟಿನ ಹುದ್ದೆಯಲ್ಲಿ ಕೆಲಸ ಮಾಡಿದ ಯಾರನ್ನೇ ಆಗಲಿ, ಮತ್ತೊಂದು ಪ್ರಭುತ್ವ ಅಧಿಕಾರಕ್ಕೇರುತ್ತಿದ್ದಂತೆಯೇ ಹುದ್ದೆಯಿಂದ ಕಿತ್ತು ಬಿಸಾಕುತ್ತೆ. ಯಾಕೆಂದರೆ ಅವರು ಪದಚ್ಯುತ ರಾಜನ/ಪ್ರಭುತ್ವದ ಪರವಾಗಿ ಕೆಲಸ ಮಾಡುತ್ತಾ, ತಮಗೆ ದ್ರೋಹ ಬಗೆಯಬಹುದೆಂಬ ಸಂಶಯದ ಮೇಲೆ. ಆದರೆ ಮೈಸೂರಿನ ವಿಚಾರದಲ್ಲಿ ಹಾಗಾಗಲಿಲ್ಲ. ಪ್ರಭುತ್ವ ಬದಲಾದರೂ, ಪೂರ್ಣಯ್ಯ ಮಾತ್ರ ಹುದ್ದೆಯಲ್ಲಿ ಮುಂದುವರಿದರು! ಇದು ಸಹಜವಾಗಿಯೇ ಪೂರ್ಣಯ್ಯನವರ ನಿಷ್ಠೆಯ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟಿಸುತ್ತದೆ.

ಅದೇನೆ ಇರಲಿ, ಹೊಸದಾಗಿ ಮೈಸೂರಿನ ಅರಸೊತ್ತಿಗೆ ಏರುವ ಒಡೆಯರ್ ನೇತೃತ್ವದ ಪ್ರಭುತ್ವದೊಟ್ಟಿಗೆ ಸಹಾಯಕ ಸೇನೆ ಪದ್ಧತಿಗೆ ಒಡಂಬಡಿಕೆ ಮಾಡಿಕೊಳ್ಳುವ ಈಸ್ಟ್ ಇಂಡಿಯಾ ಕಂಪನಿ, ಟಿಪ್ಪೂವಿನ ಕುಟುಂಬಸ್ಥರಿಂದ ಮುಂದೊಂದು ದಿನ ತಮ್ಮ ವಿರುದ್ಧ ದಂಗೆ ಭುಗಿಲೇಳುವ ಸಾಧ್ಯತೆಯನ್ನು ತಪ್ಪಿಸುವ ಸಲುವಾಗಿ, ಆ ಇಡೀ ಕುಟುಂಬವನ್ನು ವೆಲ್ಲೂರು ಕೋಟೆಯಲ್ಲಿ ಗೃಹಬಂಧನದಲ್ಲಿರಿಸುತ್ತದೆ. ಅಲ್ಲಿ ಬ್ರಿಟಿಷ್ ಸೇನೆಯ ಸರ್ಪಗಾವಲು ಇರುತ್ತದೆ. ಕರ್ನಲ್ ಸೇಂಟ್ ಜಾನ್ ಫ್ಯಾನ್‌ಕೋಟ್ ಎಂಬಾತ ಈ ಸೇನೆಯ ನೇತೃತ್ವ ವಹಿಸಿ, ಟಿಪ್ಪೂ ಕುಟುಂಬದ ಮೇಲೆ ನಿಗಾ ಇಟ್ಟಿರುತ್ತಾನೆ.

ಇಲ್ಲಿ ಒಂದು ಸಂಗತಿ ಗಮನಾರ್ಹ. ಹೈದರ್ ಮತ್ತು ಟಿಪ್ಪೂ ಇರುವವರೆಗೆ ಅವರ ಅಧೀನಕ್ಕೊಳಪಟ್ಟಿದ್ದ ಉತ್ತರದ ಧಾರವಾಡ, ಗದಗಿನಿಂದ ದಕ್ಷಿಣದ ಮಲಬಾರ್, ಕೃಷ್ಣಗಿರಿ, ಸೇಲಂ, ದಿಂಡಿಗಲ್‌ವರೆಗಿನ ವಿಶಾಲ ಮೈಸೂರು ಸಂಸ್ಥಾನದ ಮೇಲೆ ತಮ್ಮ ಅಧಿಪತ್ಯವನ್ನು ಸ್ಥಾಪಿಸಲು ಬ್ರಿಟಿಷರಿಗೆ ಅವಕಾಶ ಕೊಟ್ಟಿರಲಿಲ್ಲ. ಅದಾಗಲೇ ಬೆಂಗಾಳ, ಮದ್ರಾಸ್ ಪ್ರಾಂತ್ಯಗಳ ಮೇಲೆ ಪ್ರಭುತ್ವ ಸಾಧಿಸಿ, ಅಲ್ಲಿ ತಮ್ಮ ಕಾಯ್ದೆ ಕಾನೂನುಗಳನ್ನು ಹೇರಿದ್ದ ಬ್ರಿಟಿಷರಿಗೆ ಮೈಸೂರು ಸಂಸ್ಥಾನ ಅಬೇಧ್ಯವಾಗಿಯೇ ಉಳಿದಿತ್ತು. ಅಂದರೆ ಇಲ್ಲಿ ಅವರ ಯಾವ ಕಾಯ್ದೆಗಳೂ ಜಾರಿಯಲ್ಲಿರಲಿಲ್ಲ, ಅವರ ಸೇನೆಯ ಚಟುವಟಿಕೆಗೂ ಅವಕಾಶ ಇರಲಿಲ್ಲ. ಅರ್ಥಾತ್ ಈ ಭಾಗದ ಯಾರನ್ನೂ ಅವರು ತಮ್ಮ ಈಸ್ಟ್ ಇಂಡಿಯಾ ಸೇನೆಯ ಚಾಕರಿಗೆ ನೇಮಿಸಿಕೊಳ್ಳಲು ಅವಕಾಶವಿರಲಿಲ್ಲ. 1792ರ ಮೂರನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಟಿಪ್ಪೂ ಸೇನೆ ಸೋತು, ಶ್ರೀರಂಗಪಟ್ಟಣ ಒಪ್ಪಂದದ ಮೂಲಕ ಒಂದಷ್ಟು ಜಾಗವನ್ನು ಬ್ರಿಟಿಷರಿಗೂ, ಅವರ ಜೊತೆ ಕೈಜೋಡಿಸಿದ್ದ ಮರಾಠರು ಮತ್ತು ಹೈದ್ರಾಬಾದ್‌ನ ನಿಜಾಮರಿಗೆ ಬಿಟ್ಟುಕೊಡುವ ಸಮಯ ಬಂದಾಗಲೂ, ಟಿಪ್ಪೂ ತನ್ನ ಸೇನೆಯ ಸಂರಚನೆಗೆ ಧಕ್ಕೆ ತರುವಂತಹ ಯಾವುದೇ ಕರಾರಿಗೆ ಒಪ್ಪಿರಲಿಲ್ಲ.

ಆದರೆ 1798ರಲ್ಲಿ ಗೌರ್ನರ್ ಜನರಲ್ ಆಗಿ ಬಂದ ಲಾರ್ಡ್ ವೆಲ್ಲೆಸ್ಲಿಯು ಭಾರತೀಯ ರಾಜರುಗಳ ಸೇನಾ ಸಾಮರ್ಥ್ಯವನ್ನು ದುರ್ಬಲಗೊಳಿಸಿ, ಅವರನ್ನು ತಮ್ಮ ಅವಲಂಬಿತರನ್ನಾಗಿಸಿಕೊಳ್ಳುವ ಸಲುವಾಗಿ ಸಹಾಯಕ ಸೈನಿಕ ಪದ್ಧತಿಯನ್ನು ಜಾರಿಗೆ ತರುತ್ತಾನೆ. ಅದರ ಪ್ರಕಾರ ಭಾರತೀಯ ರಾಜನಾದವನು ತನ್ನ ಎದುರಾಳಿ ರಾಜರಿಂದ ರಕ್ಷಣೆ ಪಡೆಯಲು ಈಸ್ಟ್ ಇಂಡಿಯಾ ಕಂಪನಿಯ ಸೇನೆಗೆ ಇಂತಿಷ್ಟು ಹಣವನ್ನು ಸಂದಾಯ ಮಾಡಿ, ಅವರ ತುಕಡಿಯ ಸೇವೆ ಪಡೆದುಕೊಳ್ಳಬೇಕು; ರಾಜ್ಯದ ಆಡಳಿತದ ಆಗುಹೋಗುಗಳ ಮೇಲೆ ನಿಗಾ ಇಡಲು ಒಬ್ಬ ಬ್ರಿಟಿಷ್ ರೆಸಿಡೆಂಟ್ ಅಧಿಕಾರಿಯನ್ನು ನೇಮಕ ಮಾಡಿಕೊಳ್ಳಬೇಕು ಮತ್ತು ಆತ ಈಸ್ಟ್ ಇಂಡಿಯಾ ಕಂಪನಿಗೆ ವರದಿ ನೀಡುತ್ತಿರಬೇಕು; ಬ್ರಿಟಿಷರ ಅನುಮತಿಯಿಲ್ಲದೆ ಬೇರಾವುದೇ ಯುರೋಪಿಯನ್ ವ್ಯಕ್ತಿಯನ್ನು (ಡಚ್ಚರು, ಫ್ರೆಂಚರು) ತಮ್ಮ ಆಡಳಿತದ ಉಸ್ತುವಾರಿಗೆ ರಾಜ ನೇಮಿಸಿಕೊಳ್ಳಬಾರದು; ಬ್ರಿಟಿಷರ ಅನುಮತಿಯಿಲ್ಲದೆ ಬೇರೆ ರಾಜನ ಮೇಲೆ ಯುದ್ಧ ಘೋಷಿಸಬಾರದು… ಹೀಗೆ ನಾನಾ ಕರಾರುಗಳು ಅದರಲ್ಲಿದ್ದವು. ಅಂದರೆ ಭಾರತೀಯ ರಾಜರನ್ನು ತಮ್ಮ ಗುಲಾಮರನ್ನಾಗಿಸಿಕೊಳ್ಳುವ ಹುನ್ನಾರ ಅದರ ಹಿಂದಿತ್ತು. ಹೈದ್ರಾಬಾದಿನ ನಿಜಾಮ ಅದಕ್ಕೆ ಒಪ್ಪಿ ಸಹಿ ಕೂಡಾ ಹಾಕಿದ್ದ. ಆದರೆ ಟಿಪ್ಪೂ ಆ ಸಹಾಯಕ ಸೇನೆ ಒಡಂಬಡಿಕೆಗೆ ಸಹಿ ಹಾಕದೆ ಪ್ರತಿರೋಧ ತೋರಿದ. ಇದು ಬ್ರಿಟಿಷರ ಕಣ್ಣು ಕೆಂಪಗಾಗುವಂತೆ ಮಾಡಿತು. ಹಾಗಾಗಿ ತಮ್ಮ ಅಧೀನದಲ್ಲಿದ್ದ ತಿರುವಂಕೂರಿನ ರಾಜನನ್ನು ಬಳಸಿಕೊಂಡು, ಉದ್ದೇಶಪೂರ್ವಕವಾಗಿ ಟಿಪ್ಪೂವನ್ನು ಪ್ರಚೋದಿಸಿ ಆತನ ಮೇಲೆ ಯುದ್ಧ ಮಾಡುವಂತೆ ಮಾಡಿದರು. ಅದನ್ನೇ ನೆಪ ಮಾಡಿಕೊಂಡು, ಟಿಪ್ಪೂ ಶ್ರೀರಂಗಪಟ್ಟಣದ ಒಪ್ಪಂದ ಉಲ್ಲಂಘಿಸಿದ್ದಾನೆ ಎಂದು ಪುಕಾರೆಬ್ಬಿಸಿ ನಾಲ್ಕನೇ ಆಂಗ್ಲೋ ಮೈಸೂರು ಕಾಳಗಕ್ಕೆ ನಾಂದಿ ಹಾಡಿದರು. ಅದು ಟಿಪ್ಪೂವಿನ ಮರಣದೊಂದಿಗೆ ಮುಕ್ತಾಯವಾಯಿತು.

ಅದಾದ ಮೇಲೆಯೇ ಮೈಸೂರು ಸಂಸ್ಥಾನದ ನಾಗರೀಕರನ್ನು ಬ್ರಿಟಿಷರು ತಮ್ಮ ಸೇನೆಗೆ ನೇಮಕ ಮಾಡಿಕೊಳ್ಳಲು ಸಾಧ್ಯವಾದದ್ದು. ಟಿಪ್ಪೂ ಸೇನೆಯಲ್ಲಿ ಕೆಲಸ ಮಾಡಿದ್ದ ಬಹಳಷ್ಟು ಸಿಪಾಯಿಗಳು ಪ್ರಭುತ್ವದ ಅನಿವಾರ್ಯತೆಗೆ ಕಟ್ಟುಬಿದ್ದು ಬ್ರಿಟಿಷ್ ಸೇನೆಯಲ್ಲಿ ದಾಖಲಾದರು. ಆದರೂ ಟಿಪ್ಪೂ ಮೇಲಿದ್ದ ಅವರ ಗೌರವ ಕಡಿಮೆಯಾಗಿರಲಿಲ್ಲ. ಟಿಪ್ಪೂವಿನ ಕುಟುಂಬವನ್ನು ಗೃಹಬಂಧನದಲ್ಲಿರಿಸಿದ್ದು ಅವರಿಗೆಲ್ಲ ಸಿಟ್ಟು ತರಿಸಿತ್ತು. ಸಮಯಕ್ಕಾಗಿ ಕಾದಿದ್ದರು. ಅದೇ ವೇಳೆಗೆ, ಬ್ರಿಟಿಷರು ತಂದ ಸಮವಸ್ತ್ರ ನೀತಿ ಅವರ ಸಿಟ್ಟು ಆಕ್ರೋಶವಾಗಿ ಕ್ರೋಢೀಕರಣವಾಗಲು ನೆರವಾಯಿತು. ತಮ್ಮ ಸೇನೆಯಲ್ಲಿ ಶಿಸ್ತನ್ನು ಕಾಪಾಡುವ ಸಲುವಾಗಿ ಈಸ್ಟ್ ಇಂಡಿಯಾ ಕಂಪನಿಯ ಸಿಪಾಯಿಗಳಿಗೆ ಸಮವಸ್ತ್ರ ಜಾರಿಗೆ ತಂದರು. ಅದರ ಪ್ರಕಾರ, ಎಲ್ಲರೂ ಗಡ್ಡವನ್ನು ನೀಟಾಗಿ ಬೋಳಿಸಿಕೊಂಡು ಮುಖವನ್ನು ಶುಭ್ರವಾಗಿಟ್ಟುಕೊಳ್ಳಬೇಕು ಮತ್ತು ತಲೆಗೆ ತಾವು ನೀಡುವ ಟೊಪ್ಪಿಗೆಯನ್ನು ಧರಿಸಬೇಕು ಎಂಬ ನಿಯಮಗಳಿದ್ದವು. ಗಡ್ಡ ತೆಗೆಯುವ ವಿಚಾರ ಮುಸಲ್ಮಾನ ಸಿಪಾಯಿಗಳನ್ನು ಕೆರಳಿಸಿದರೆ, ತಲೆ ಮೇಲೆ ಟೊಪ್ಪಿಗೆ ಧರಿಸುವ ನಿಯಮ ಹಿಂದೂ, ಮುಸ್ಲಿಂ ಸಿಪಾಯಿಗಳಿಬ್ಬರನ್ನೂ ಕೆರಳಿಸಿತು. ಯಾಕೆಂದರೆ ಆ ಟೊಪ್ಪಿಗೆಯ ಮೇಲೆ ಬ್ರಿಟನ್ ಪ್ರಭುತ್ವದ ಸಂಕೇತವಾಗಿ ‘ಕ್ರಾಸ್ ಚಿಹ್ನೆಯಿತ್ತು. ತಮ್ಮನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಆಂಗ್ಲರು ಈ ಸಮವಸ್ತ್ರ ಹುನ್ನಾರ ಜಾರಿಗೆ ತಂದಿದ್ದಾರೆ ಅಂತ ಅವರೆಲ್ಲ ಬಂಡೆದ್ದರು. ಪ್ರತಿಭಟಿಸಿದ ಇಬ್ಬರು ಸೈನಿಕರನ್ನು (ಒಬ್ಬ ಹಿಂದೂ, ಒಬ್ಬ ಮುಸ್ಲಿಂ) ಮುದ್ರಾಸ್ ಪ್ರೆಸಿಡೆನ್ಸಿ ಹೆಡ್‌ಕ್ವಾರ್ಟರ್‌ಗೆ ಕರೆದೊಯ್ದು ಛಡಿ ಏಟಿನ ಶಿಕ್ಷೆ ನೀಡಿ, ಕೆಲಸದಿಂದ ಅಮಾನತ್ತು ಮಾಡಿದರು. ಉಳಿದ ಸೈನಿಕರನ್ನು ಅದರ ಮೂಲಕ ಬೆದರಿಸುವುದು ಬ್ರಿಟಿಷರ ಉದ್ದೇಶವಾಗಿತ್ತು. ಆದರೆ ಹಾಗಾಗದೆ, ಭಾರತೀಯ ಮೂಲದ ಸೈನಿಕರು ಇನ್ನಷ್ಟು ಆಕ್ರೋಶಗೊಂಡರು. ಸೇನೆಯೊಳಗೆ ದೇಶೀ ಮೂಲದ ಸೈನಿಕರಾದ ತಮಗೂ, ಯುರೋಪಿಯನ್ ಮೂಲದ ಸೈನಿಕರಿಗೂ ನಡುವೆ ತೋರುತ್ತಿದ್ದ ತಾರತಮ್ಯ ಕೂಡಾ ಈ ಸೈನಿಕರನ್ನು ಕೆರಳಿಸಿತು. ಆದರೆ ಆಸ್ಫೋಟಗೊಳ್ಳಲು ಅವಕಾಶ ಕೂಡಿಬಂದಿರಲಿಲ್ಲ.

ಕೊನೆಗೂ ಅದು ಒದಗಿ ಬಂದದ್ದು 10 ಜುಲೈ 1806ರಂದು, ಟಿಪ್ಪೂವಿನ ಕುಟುಂಬವನ್ನು ಗೃಹಬಂಧನದಲ್ಲಿಟ್ಟಿದ್ದ ವೆಲ್ಲೂರು ಕೋಟೆಯಲ್ಲಿ! ಅಂದರೆ ಟಿಪ್ಪೂ ಸತ್ತ ಏಳು ವರ್ಷಗಳ ನಂತರ. ಅವತ್ತು ಟಿಪ್ಪೂವಿನ ಮಗಳ ನಿಖಾ ನಡೆಯುತ್ತಿತ್ತು. ಆ ಸಮಾರಂಭದಲ್ಲಿ ಭಾಗಿಯಾಗುವ ನೆಪ ಮಾಡಿಕೊಂಡು, ಟಿಪ್ಪೂ ಸೇನೆಯಲ್ಲಿದ್ದ ಸೈನಿಕರೆಲ್ಲ ವೆಲ್ಲೂರಿನಲ್ಲಿ ಒಟ್ಟುಗೂಡಿದರು. ಟಿಪ್ಪೂವಿನ ಎರಡನೇ ಮಗ ಫತೇಹ್ ಹೈದರ್‌ನನ್ನು ಭೇಟಿಯಾದ ಆ ಸೈನಿಕರು, ಟಿಪ್ಪೂ ಮರಣ ನಂತರ ತಾವೆಲ್ಲ ಮತ್ತೆ ಒಂದುಗೂಡಲು ಈ ಅವಕಾಶ ಲಭಿಸಿದ್ದು, ಇದನ್ನು ಬಳಸಿಕೊಂಡು ಬ್ರಿಟಿಷರ ವಿರುದ್ಧ ದಂಗೆ ಏಳೋಣ ಎಂಬ ಸಲಹೆ ನೀಡುತ್ತಾರೆ. ಅವರ ಒತ್ತಾಯಕ್ಕೆ ಮಣಿಯುವ ಆತನೂ ಸಮ್ಮತಿ ಸೂಚಿಸುತ್ತಾನೆ. ಅವತ್ತು ಮಧ್ಯರಾತ್ರಿ ಆಗುವುದನ್ನೇ ಕಾದಿದ್ದ ಸೈನಿಕರು, ಒಮ್ಮೆಲೇ ಬ್ರಿಟಿಷ್ ಸಿಪಾಯಿಗಳು ತಂಗಿದ್ದ ಬಿಡಾರಗಳ ಮೇಲೆ ದಾಳಿ ಮಾಡಿ, ಕೈಗೆ ಸಿಕ್ಕ ಆಂಗ್ಲ ಸೈನಿಕರನ್ನು ಕೊಚ್ಚಿ ಹಾಕುತ್ತಾರೆ. ಸುಮಾರು ನೂರಕ್ಕೂ ಹೆಚ್ಚು ಬ್ರಿಟಿಷ್ ಸೈನಿಕರು ಹತರಾಗುತ್ತಾರೆ. ಅದರಲ್ಲಿ ಟಿಪ್ಪೂ ಕುಟುಂಬದ ಮೇಲೆ ನಿಗಾ ಇಡಲು ನೇಮಕವಾಗಿದ್ದ ಕರ್ನಲ್ ಜಾನ್ ಫಾಂಕೋಟ್ ಕೂಡಾ ಒಬ್ಬ! ನಸುಕಿನ ವೇಳೆಗೆ ಇಡೀ ಕೋಟೆಯ ಮೇಲೆ ಹತೋಟಿ ಸಾಧಿಸುವ ಟಿಪ್ಪೂ ಮಾಜಿ ಸೈನಿಕರು, ಫತೇಹ್ ಹೈದರ್‌ನ ನೇತೃತ್ವದಲ್ಲಿ ಕೋಟೆಯನ್ನು ಸ್ವಾಧೀನ ಪಡಿಸಿಕೊಂಡ ಘೋಷಣೆ ಮೊಳಗಿಸುತ್ತಾರೆ.

ಆದರೆ ಈ ರಾತ್ರಿ ಕಾರ್ಯನಿಮಿತ್ತ ಕೋಟೆಯಿಂದ ಹೊರಗಿದ್ದ ಮೇಜರ್ ಕೂಪ್ಸ್ ಎಂಬಾತ ಸೈನಿಕರ ಈ ದಂಗೆಯನ್ನು ದೂರದಿಂದಲೇ ಗಮನಿಸಿ, ಆರ್ಕಾಟ್‌ನಲ್ಲಿರುವ ಈಸ್ಟ್ ಇಂಡಿಯಾ ಸೇನಾ ಕೇಂದ್ರಕ್ಕೆ ಸುದ್ದಿ ಮುಟ್ಟಿಸಿದ್ದ. ಕೂಡಲೇ ರಾಬರ್ಟ್ ರೋಲೋ ಜಿಲೆಪ್ಸಿ ನೇತೃತ್ವದಲ್ಲಿ ಬ್ರಿಟಿಷ್ ಸೇನೆ ವೆಲ್ಲೂರು ಕೋಟೆಯ ಮೇಲೆ ದಾಳಿ ಮಾಡುತ್ತದೆ. ಬಿಗಿಯಾಗಿ ಮುಚ್ಚಲಾದ ಕೋಟೆಯ ಬಾಗಿಲುಗಳನ್ನು ತೆರೆಯಲಾಗದೆ ಹಗ್ಗಗಳ ಮೂಲಕ ಕೋಟೆಯ ಗೋಡೆಯನ್ನೇರಿ ಒಳಪ್ರವೇಶಿಸುವ ಜಿಲೆಪ್ಸಿಯ ಸೇನೆ, ಬಂಡೆದ್ದ ಟಿಪ್ಪೂ ಮಾಜಿ ಸೈನಿಕರನ್ನು ದಾರುಣವಾಗಿ ಕೊಲೆಗೊಯ್ಯುತ್ತದೆ. ದಾಖಲೆಗಳ ಪ್ರಕಾರ 350 ಸೈನಿಕರನ್ನು ಬ್ರಿಟಿಷ್ ಸೇನೆ ಕೊಂದುಹಾಕಿತ್ತು. ಆದರೆ ವಿಚಾರಣೆಯ ನಂತರ ಶಿಕ್ಷೆಯ ರೂಪದಲ್ಲಿ ಗಲ್ಲಿಗೇರಿಸಿದವರನ್ನು, ಗುಂಡು ಹಾರಿಸಿ ಕೊಂದವರನ್ನು ಪರಿಗಣಿಸಿದರೆ ಸುಮಾರು 1000ಕ್ಕೂ ಹೆಚ್ಚು ಟಿಪ್ಪೂ ಮಾಜಿ ಸೈನಿಕರನ್ನು ಹತ್ಯೆ ಮಾಡಲಾಗಿತ್ತು. ಮಧ್ಯಾಹ್ನದ ಹೊತ್ತಿಗೆ ಇಡೀ ದಂಗೆಯನ್ನು ಹಿಮ್ಮೆಟ್ಟಿಸಿದ್ದ ಜಿಲೆಪ್ಸಿಯ ಬ್ರಿಟಿಷ್ ಸೇನೆ, ಟಿಪ್ಪೂವಿನ ಕುಟುಂಬವನ್ನು ಬಂಧಿಸುತ್ತದೆ.

ವಿಚಾರಣೆಯ ನಂತರ, ಟಿಪ್ಪೂವಿನ ಕುಟುಂಬ ಮೈಸೂರಿನ ಸಂಸ್ಥಾನದ ಆಸುಪಾಸಿನಲ್ಲಿದ್ದರೆ, ಮುಂದೊಂದು ದಿನ ತಮಗೆ ಅಪಾಯ ತಪ್ಪಿದ್ದಲ್ಲ ಎಂಬ ತೀರ್ಮಾನಕ್ಕೆ ಬಂದು, ಅವರನ್ನು ದೂರದ ಕೊಲ್ಕತ್ತಾಕ್ಕೆ ಸ್ಥಳಾಂತರಿಸಿ, ಅಲ್ಲಿ ಗೃಹಬಂಧನದಲ್ಲಿರಿಸುತ್ತಾರೆ. ಟಿಪ್ಪೂ ಮಾಜಿ ಸೈನಿಕರ ನೇತೃತ್ವದಲ್ಲಿ ನಡೆದ ಈ ದಂಗೆ ಮತ್ತಷ್ಟು ಉಲ್ಬಣವಾಗದಂತೆ ತಡೆಗಟ್ಟುವ ಸಲುವಾಗಿ ಬ್ರಿಟಿಷರು ತಮ್ಮ ಸಮವಸ್ತ್ರ ನೀತಿಯನ್ನು ವಾಪಾಸು ತೆಗೆದುಕೊಂಡು, ಸೈನಿಕರೊಳಗೆ ಆಕ್ರೋಶ ತಣ್ಣಗಾಗುವಂತೆ ಮಾಡಿದ್ದರು. ಇದು 1806ರಲ್ಲಿ ವೆಲ್ಲೂರು ಕೋಟೆಯಲ್ಲಿ ನಡೆದ ಟಿಪ್ಪೂ ಸೈನಿಕರ ದಂಗೆಯ ಸಾರಾಂಶ.

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ನಾವೆಲ್ಲ ಗುರುತಿಸುವ 1857ರ ಸಿಪಾಯಿ ದಂಗೆಗೂ ಅರ್ಧ ಶತಮಾನಗಳ ಹಿಂದೆ ಬ್ರಿಟಿಷರ ವಿರುದ್ಧ ನಡೆದಿದ್ದ ವೆಲ್ಲೂರಿನ ಸಿಪಾಯಿ ದಂಗೆ ಇತಿಹಾಸದ ಪುಟಗಳಲ್ಲಿ ಅಷ್ಟಾಗಿ ಬೆಳಕಿಗೆ ಬರಲಿಲ್ಲ ಎನ್ನುವುದು ಎಷ್ಟು ಸತ್ಯವೋ, ಕೇವಲ ಒಂದೇ ದಿನದಲ್ಲಿ ಕರಗಿಹೋದ ಈ ದಂಗೆಗೆ ‘ಟಿಪ್ಪೂವಿನ ನಾಮಬಲವೇ ಮೂಲ ಇಂಧನವಾಗಿತ್ತು’ ಎನ್ನುವುದು ಅಷ್ಟೇ ಸತ್ಯ.

ಈಗ ಕೋಮುವಾದಿಗಳು ಭುಗಿಲೆಬ್ಬಿಸಿರುವ ಉರೀಗೌಡ, ನಂಜೇಗೌಡ ಪಾತ್ರಗಳ ಗದ್ದಲಕ್ಕೆ ಬರುವುದಾದರೆ, ವೆಲ್ಲೂರು ದಂಗೆಯಲ್ಲಿ ಎರಡು ಸಂಗತಿಗಳು ಸ್ಪಷ್ಟವಾಗುತ್ತವೆ. ಉರಿಗೌಡ, ನಂಜೇಗೌಡರು ಬ್ರಿಟಿಷರ ಪರವಾಗಿ ಕೆಲಸ ಮಾಡಿದವರಲ್ಲ. ಯಾಕೆಂದರೆ ಸಹಾಯಕ ಸೇನೆ ಪದ್ಧತಿಯನ್ನು ಒಪ್ಪದ ಟಿಪ್ಪೂವಿನ ಮೈಸೂರು ಸಂಸ್ಥಾನದ ಯಾವುದೇ ವ್ಯಕ್ತಿಯನ್ನು ಬ್ರಿಟಿಷರು ತಮ್ಮ ಸೇನೆಗೆ ನೇಮಕ ಮಾಡಿಕೊಳ್ಳುವ ಅವಕಾಶವೇ ಇರಲಿಲ್ಲ. ಅದು ಸಾಧ್ಯವಾದದ್ದು ಟಿಪ್ಪೂವಿನ ಮರಣದ ನಂತರ. ಹಾಗಾಗಿ ಅವರು ಬ್ರಿಟಿಷ್ ಸೇನೆಯ ಸಿಪಾಯಿಗಳಲ್ಲ. ಒಂದೊಮ್ಮೆ ಉರೀಗೌಡ, ನಂಜೇಗೌಡರು ಟಿಪ್ಪೂವಿನ ಸೇನೆಯಲ್ಲಿದ್ದರು ಅಂತ ಪರಿಗಣಿಸಿದರೂ, ಟಿಪ್ಪೂವಿನ ಸೈನಿಕರು ತಮ್ಮ ಖಾವಂದನ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದರೆ ವಿನಾ, ಅವನಿಗೆ ದ್ರೋಹ ಬಗೆದು ಕೊಲ್ಲುವಷ್ಟು ಸಂಚು ಟಿಪ್ಪೂವಿನ ಸೇನೆಯಲ್ಲಿ ಇರಲಿಲ್ಲ ಎನ್ನುವುದು ಆತ ಸತ್ತ ಏಳು ವರ್ಷಗಳ ನಂತರ ಮಾಜಿ ಸೈನಿಕರು, ಆತನ ಕುಟುಂಬದ ನೇತೃತ್ವದಲ್ಲಿ ನಡೆಸಿದ ಈ ವೆಲ್ಲೂರು ದಂಗೆಯಿಂದ ಸಾಬೀತಾಗುತ್ತದೆ.

ಅಕಸ್ಮಾತ್ ಉರೀಗೌಡ, ನಂಜೇಗೌಡ ಎಂಬ ವ್ಯಕ್ತಿಗಳು ನಿಜಕ್ಕೂ ಬದುಕಿದ್ದೇ ಆಗಿದ್ದಲ್ಲಿ, ಅವರು ವೆಲ್ಲೂರು ದಂಗೆಯಲ್ಲಿ ಹತರಾದ ಟಿಪ್ಪೂ-ನಿಷ್ಠ ಬಂಡಾಯ ಸೇನೆಯಲ್ಲಿದ್ದು, ಬ್ರಿಟಿಷರ ವಿರುದ್ಧ ಹೋರಾಡಿ ಹತರಾದ ಹುತಾತ್ಮರಾಗಿರುತ್ತಾರೆಯೇ ಹೊರತು ಟಿಪ್ಪೂವನ್ನೇ ಕೊಂದ ರಾಜದ್ರೋಹಿಗಳಾಗಿರುವುದಿಲ್ಲ!

– ಮಾಚಯ್ಯ ಎಂ ಹಿಪ್ಪರಗಿ

Leave a Reply