ತಂಬಾಕು ಮುಕ್ತ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ, ಹಳ್ಳಿಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ, ಜನರಲ್ಲಿ ತಂಬಾಕು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಿ, ಇಡೀ ಹಳ್ಳಿಯನ್ನು ತಂಬಾಕು ಮುಕ್ತ ಹಳ್ಳಿಯನ್ನಾಗಿ ಘೋಷಿಸುವ ಹಾದಿಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತೀ ತಾಲೂಕಿನಿಂದ 2 ಹಳ್ಳಿಗಳಂತೆ ಒಟ್ಟು 24 ಹಳ್ಳಿಗಳಲ್ಲಿ ವಿವಿಧ ಕಾರ್ಯಚಟುವಟಿಕೆಗಳನ್ನು ಕೈಗೊಂಡಿದ್ದು, ಈ ಕಾರ್ಯದಲ್ಲಿ ಈಗಾಗಲೇ 4 ಹಳ್ಳಿಗಳು ಮಾರ್ಗಸೂಚಿಯನ್ವಯ ಎಲ್ಲಾ ಕಾರ್ಯಚಟುವಟಿಕೆಗಳನ್ನು ಸಂಪೂರ್ಣಗೊಳಿಸಿದ್ದು, ಘೋಷಣಾ ಪ್ರಕ್ರಿಯೆ ಮಾತ್ರ ಬಾಕಿಯಿದೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಉತ್ತರ ಕನ್ನಡ ಜಿಲ್ಲೆಯಲ್ಲಿ ತಂಬಾಕು ಮುಕ್ತ ಹಳ್ಳಿಗಳನ್ನಾಗಿ ರೂಪಿಸಲು, ಕಾರವಾರ ತಾಲೂಕಿನ ಹಣಕೋಣಜೂಗ ಮತ್ತು ಕಡಿಯೆ, ಅಂಕೋಲಾದ ಹೊಸಗದ್ದೆ ಮತ್ತು ಹೆಬ್ಬುಳ, ಕುಮಟಾದ ತೊಪ್ಪಲಗುತ್ತ ಮತ್ತು ಮಡಗಿಬೈಲು, ಹೊನ್ನಾವರದ ಕೆಳಗಿನ ಮಣ್ಣಿಗೆ ಮತ್ತು ಅಂಸಳ್ಳಿ, ಭಟ್ಕಳದ ಬಸ್ತಿಗಳ ಮಿಗ್ತೆ ಮತ್ತು ದೇವಸ್ಥಾನಗಳ ಮಿಗ್ತೆ, ಶಿರಸಿಯ ಸುಂಡಳ್ಳಿ ಮತ್ತು ಬುಗಡಿ, ಸಿದ್ದಾಪುರದ ಪಡವನಬೈಲು ಮತ್ತು ಚನಮಾವ, ಯಲ್ಲಾಪುರದ ಅಣಲಗಾರ ಮತ್ತು ಶೀಗೆಪಾಲ, ಮುಂಡಗೋಡದ ಅಟಬೈಲ್ ಮತ್ತು ಜನಗೇರಿ, ಹಳಿಯಾಳದ ಕ್ಯಾತನಗೇರಾ ಮತ್ತು ಸಂಕನಕೊಪ್ಪ, ದಾಂಡೇಲಿಯ ಹೆರೆಗಾಳಿ ಮತ್ತು ಕಲಬಾವಿ ಹಾಗೂ ಜೊಯಿಡಾದ ತುಳಸಗೇರಿ ಮತ್ತು ಕಾಟೇ ಗ್ರಾಮಗಳನ್ನು ಆಯ್ಕೆಮಾಡಿಕೊಂಡು ಎಲ್ಲಾ ಹಳ್ಳಿಗಳಲ್ಲಿ ತಂಬಾಕು ಮುಕ್ತ ಹಳ್ಳಿ ಮಾರ್ಗಸೂಚಿಯನ್ವಯ ಕಾರ್ಯಚಟುವಟಿಕೆಗಳನ್ನು ಕೈಗೊಂಡಿದ್ದು, ಈಗಾಗಲೇ ಸಂಪೂರ್ಣವಾಗಿ ಕಾರ್ಯಚಟುವಟಿಕೆಗಳನ್ನು ಪೂರ್ಣಗೊಳಿಸಿರುವ ಕಾರವಾರ ತಾಲೂಕಿನ ಹಣಕೋಣಜೂಗ ಮತ್ತು ಕಡಿಯೆ ಹಾಗೂ ಶಿರಸಿ ತಾಲೂಕಿನ ಸುಂಡಳ್ಳಿ ಮತ್ತು ಬುಗಡಿ ಗ್ರಾಮಗಳಿಗೆ ಜಿಲ್ಲಾ ಮತ್ತು ತಾಲೂಕು ಪರಿಶೀಲನಾ ತಂಡವು ಭೇಟಿ ನೀಡಿ, ಮೌಲ್ಯ ಮಾಪನ ನಡೆಸಿದ್ದು, ತಂಬಾಕು ಮುಕ್ತ ಹಳ್ಳಿ ಎಂಬ ಅಂತಿಮ ಘೋಷಣೆ ಮಾತ್ರ ಬಾಕಿಯಿದೆ.
ಯಾವುದೇ ಹಳ್ಳಿಯು ತಂಬಾಕು ಮುಕ್ತವಾಗಲು ನಿಗದಿತ ಮಾರ್ಗಸೂಚಿಗಳನ್ನು ಪಾಲಿಸಬೇಕಿದ್ದು, ಗ್ರಾಮ ಮಟ್ಟದಲ್ಲಿ ತಂಬಾಕು ನಿಯಂತ್ರಣ ಚಟುವಟಿಕೆಗಳಿಗಾಗಿ, ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಪಂಚಾಯತ ಸದಸ್ಯರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸ್ಥಳೀಯ ಪೊಲೀಸ್ ಸಿಬ್ಬಂದಿ, ಶಾಲಾ ಶಿಕ್ಷಕರು, ಗ್ರಾಮ ಲೆಕ್ಕ ಆಡಳಿತಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆ, ಸ್ವ-ಸಹಾಯ ಸಂಘ/ಯುವಕ ಸಂಘದ ಅಧ್ಯಕ್ಷರು/ ಪ್ರತಿನಿಧಿಗಳು ಹಾಗೂ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆಶಾ ಕಾರ್ಯಕರ್ತೆಯರನ್ನು ಒಳಗೊಂಡಂತೆ ಗ್ರಾಮ ಸಮನ್ವಯ ಸಮಿತಿ ರಚಿಸಬೇಕು.
ತಂಬಾಕು ಸೇವನೆ ನಿಯಂತ್ರಣದ ಕುರಿತು ಜನ ಆರೋಗ್ಯ ಸಮಿತಿ ಸಭೆಯ ಕಾರ್ಯಸೂಚಿಯಲ್ಲಿ ಮತ್ತು ಗ್ರಾಮಸಭೆಯ ಕಾರ್ಯಸೂಚಿಯಲ್ಲಿ ತಂಬಾಕು ಸೇವನೆ ನಿಯಂತ್ರಣದ ಕುರಿತು ವಿಷಯವನ್ನು ಸೇರ್ಪಡಿಸಿ, ಗ್ರಾಮದ ಪರಿಶೀಲನೆ ಹಾಗೂ ಗ್ರಾಮದ ಪ್ರಮುಖರಿಗೆ (ಪಂಚಾಯತ್ ಸದಸ್ಯರು, ಸ್ವಸಹಾಯ ಸಂಘ, ಯುವಕ ಸಂಘದ ಸದಸ್ಯರು, ಮಹಿಳೆಯರು, ರೈತರು ಹಾಗೂ ಮುಂತಾದವರಿಗೆ) ತಂಬಾಕು ಸೇವನೆಯಿಂದಾಗುವ ದುಷ್ಟರಿಣಾಮಗಳ ಕುರಿತು ಅರಿವು ಮೂಡಿಸಬೇಕು. ಮತ್ತು ತಂಬಾಕು ಮುಕ್ತ ಹಳ್ಳಿ ನಿರ್ಣಯವನ್ನು ಗ್ರಾಮ ಪಂಚಾಯತ್ ನಲ್ಲಿ ಅಂಗೀಕರಿಸಬೇಕು.
ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಗ್ರಾಮ ತಂಬಾಕು ನಿಯಂತ್ರಣ ರಾಯಭಾರಿಗಳನ್ನು ಆಯ್ಕೆ ಮಾಡಿಸಿ, ಗ್ರಾಮ ಮಟ್ಟದಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಪ್ರತಿ 6 ತಿಂಗಳಿಗೆ ಕನಿಷ್ಠ 2 ಚಟುವಟಿಕೆಗಳನ್ನು ಸಂಘಟಿಸಬೇಕು. (ಬೀದಿನಾಟಕ/ಭಾಷಣ /ಮಕ್ಕಳಿಂದ ಜಾಥಾ ಕಾರ್ಯಕ್ರಮ /ಮೈಕಿಂಗ್ ಮತ್ತು ಇತರೆ ಐ.ಇ.ಸಿ. ಚಟುವಟಿಕೆಗಳು) ಗ್ರಾಮದಲ್ಲಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು/ ತಂಬಾಕು ಸೇವನೆ ತ್ಯಜಿಸುವುದರಿಂದ ಉಂಟಾಗುವ ಪ್ರಯೋಜನಗಳು /ರಾಷ್ಟ್ರೀಯ ಸಹಾಯವಾಣಿ / ತಂಬಾಕು ವ್ಯಸನ ಮುಕ್ತ ಕೇಂದ್ರದ ಸೌಲಭ್ಯಗಳ ಕುರಿತು ಪ್ರಮುಖ ಸ್ಥಳಗಳಲ್ಲಿ (ಪೋಸ್ಟರ್ಸ್/ ಹೋರ್ಡಿಂಗ್ಸ್/ ಗೋಡೆಬರಹ, ಇತ್ಯಾದಿ) ಪ್ರದರ್ಶನ ಮಾಡಬೇಕು.
ಹಳ್ಳಿಯ ಪ್ರಮುಖ ಸ್ಥಳಗಳಲ್ಲಿ (ಸಾರ್ವಜನಿಕ ಸ್ಥಳಗಳು/ಬಸ್ ನಿಲ್ದಾಣಗಳು, ಇತ್ಯಾದಿ) “ತಂಬಾಕು ಮುಕ್ತ ವಲಯ” ಎಂಬ ನಾಮಫಲಕವನ್ನು ಸ್ಥಳೀಯ ಭಾಷೆಯಲ್ಲಿ ಪ್ರದರ್ಶಿಸಬೇಕು. ಸದರಿ ನಾಮಫಲಕಗಳಲ್ಲಿ ಹೆಸರು, ಹುದ್ದೆ ಮತ್ತು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು ಹಾಗೂ ಗ್ರಾಮದ ಎಲ್ಲ ಪ್ರಮುಖ ದ್ವಾರಗಳಲ್ಲಿ “ತಂಬಾಕು ಮುಕ್ತ ಗ್ರಾಮಕ್ಕೆ ಸ್ವಾಗತ” ಎಂಬ ನಾಮಫಲಕವನ್ನು ಪ್ರದರ್ಶಿಸಬೇಕು.
ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯ (ಬೀಡಿ, ಸಿಗರೇಟ್ ತುಂಡುಗಳು ಹಾಗೂ ಜಗಿಯುವ ತಂಬಾಕಿನ ಚೀಟಿಗಳು. ಪ್ಯಾಕೆಟ್ ಗಳು ಬಿದ್ದಿರುವುದು. ತಂಬಾಕು ಉತ್ಪನ್ನ ಸೇವಿಸಿ ಉಗುಳಿರುವುದು) ಯಾವುದೇ ಪುರಾವೆಗಳಿರಬಾರದು. ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಯಾವುದೇ ಪುರಾವೆಗಳು ಹಳ್ಳಿಯಲ್ಲಿ ಇರಬಾರದು. ಹಾಗೂ ಇವರಿಗೆ “ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿದೆ ಮತ್ತು ಕಾನೂನಿನ ಪ್ರಕಾರ ಶಿಕ್ಷಾರ್ಹ” ಎಂಬ ನಾಮಫಲಕವನ್ನು ಎಲ್ಲ ತಂಬಾಕು ಉತ್ಪನ್ನ ಮಾರಾಟ ಅಂಗಡಿಗಳಲ್ಲಿ ಪ್ರದರ್ಶಿಸಬೇಕು.
ತಂಬಾಕು ಮಾರಾಟ ಮಾಡುವ ಅಂಗಡಿಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಯಾವುದೇ ಜಾಹೀರಾತುಗಳು ಇರಬಾರದು. ಗ್ರಾಮದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು “ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ” ಎಂದು ಕಡ್ಡಾಯವಾಗಿ ಅನುಷ್ಠ್ಠಾನಗೊಂಡಿರಬೇಕು. ಈ ಎಲ್ಲಾ ಮಾರ್ಗಸೂಚಿಯನ್ವಯ ಕಾರ್ಯಚಟುವಟಿಕೆಗಳನ್ನು ಪೂರೈಸಿದ ಹಳ್ಳಿಗಳಿಗೆ ಜಿಲ್ಲಾ ಮತ್ತು ತಾಲೂಕು ಪರಿಶೀಲನಾ ತಂಡದ ಅಧಿಕಾರಿಗಳು ಭೇಟಿ ನೀಡಿ, ಮೌಲ್ಯ ಮಾಪನ ನಡೆಸಿ, ತಂಬಾಕು ಮುಕ್ತ ಹಳ್ಳಿಯನ್ನಾಗಿ ಘೋಷಣೆ ಮಾಡಲಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ತಂಬಾಕು ಉತ್ಪನ್ನಗಳ ದುಷ್ಪರಿಣಾಮಗಳ ಕುರಿತಂತೆ ವ್ಯಾಪಕ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಗ್ರಾಮಾಂತರ ಪ್ರದೇಶದಲ್ಲಿ ತಂಬಾಕು ಮುಕ್ತ ಹಳ್ಳಿಗಳನ್ನಾಗಿ ಮಾಡಲು ಪ್ರತೀ ತಾಲೂಕಿನಲ್ಲಿ 2 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದ್ದು, ಪ್ರಸ್ತುತ 4 ಹಳ್ಳಿಗಳು ತಂಬಾಕು ಮುಕ್ತ ಹಳ್ಳಿಗಳಾಗಿದ್ದು ಘೋಷಣೆ ಮಾತ್ರ ಬಾಕಿ ಉಳಿದಿದೆ. ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳನ್ನು ತಂಬಾಕು ಮುಕ್ತ ಪ್ರವಾಸಿ ತಾಣಗಳನ್ನಾಗಿ ಮಾಡಲು ಕ್ರಮ ಕೈಗೊಂಡಿದ್ದು, ಈಗಾಗಲೇ ಕಾರವಾರದ ಸಾಲು ಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಮತ್ತು ಹೊನ್ನಾವರ ತಾಲೂಕಿನ ಕಾಂಡ್ಲಾವನವನ್ನು ತಂಬಾಕು ಮುಕ್ತ ಪ್ರವಾಸಿ ತಾಣಗಳನ್ನಾಗಿ ಘೋಷಣೆ ಮಾಡಲಾಗಿದೆ.
– ಡಾ.ಅರ್ಚನಾ ನಾಯಕ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಉತ್ತರ ಕನ್ನಡ ಜಿಲ್ಲೆ



