ಎರಡನೇ ಹಂತದಲ್ಲಿ ಉಳಿದ ʼವಿಎʼಗಳಿಗೂ ಕಚೇರಿ ಭಾಗ್ಯ
ಒಂದೇ ಸೂರಿನ ಅಡಿ ಎಲ್ಲಾ ಅಧಿಕಾರಿಗಳು ಜನರಿಗೆ ಲಭ್ಯ
ಬಿಟ್ಟುಹೋದ ಹಾಡಿ ಹಟ್ಟಿ ತಾಂಡ ಗುರುತಿಸಲು ಸೂಚನೆ
ವರ್ಷದೊಳಗೆ ಇನ್ನೂ 1 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ
ಬೆಂಗಳೂರು: ಹಲವು ವರ್ಷಗಳಿಂದ ಕಚೇರಿಗಳಿಲ್ಲದೆ ಪರಿತಪಿಸುತ್ತಿದ್ದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೊನೆಗೂ ಕಚೇರಿ ಭಾಗ್ಯ ಲಭ್ಯವಾಗಲಿದೆ. ರಾಜ್ಯಾದ್ಯಂತ ಲಭ್ಯವಿರುವ ಗ್ರಾಮ ಪಂಚಾಯತ್ ಕಾರ್ಯಾಲಯಗಳಲ್ಲೇ ಮುಂದಿನ 15 ದಿನಗಳಲ್ಲಿ ಕನಿಷ್ಟ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ನೂತನ ಕಚೇರಿ ನೀಡಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ (ಸಿಇಓ) ಗಡುವು ನೀಡಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ವಿಕಾಸಸೌಧದಿಂದ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಸಭೆ ನಡೆಸಿದ ಅವರು, “ಜನ ಸಾಮಾನ್ಯರು ಹಾಗೂ ಪ್ರತಿನಿಧಿಗಳೇ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ ಎಂದು ದೂರು ನೀಡುತ್ತಿದ್ದಾರೆ. ಅವರಿಗೆ ಸ್ವಂತದ್ದೊಂದು ಕಚೇರಿ ಇಲ್ಲದ ಕಾರಣ ಸಾರ್ವಜನಿಕರ ಅಗತ್ಯತೆಗಳಿಗೆ ಸ್ಪಂದಿಸಲಾಗುತ್ತಿಲ್ಲ. ಅಲ್ಲದೆ, ತಮಗೊಂದು ಕಚೇರಿ ನೀಡುವಂತೆ ಗ್ರಾಮ ಆಡಳಿತ ಅಧಿಕಾರಿಗಳೂ ಹಲವು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದಾರೆ. ಹೀಗಾಗಿ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೂ ಕಚೇರಿ ನೀಡಲೇಬೇಕು ಎಂಬ ವಿಚಾರದಲ್ಲಿ ಸರ್ಕಾರ ಬದ್ಧವಾಗಿದೆ” ಎಂದು ತಿಳಿಸಿದರು.
ರಾಜ್ಯಾದ್ಯಂತ ಕಂದಾಯ ವೃತ್ತಗಳಲ್ಲಿ 5944 ಗ್ರಾಮ ಆಡಳಿತ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಗ್ರಾಮ ಪಂಚಾಯತ್ ಕಾರ್ಯಾಲಯದ ಆವರಣದಲ್ಲೇ ಕನಿಷ್ಟ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಕಚೇರಿ ನಿರ್ಮಿಸುವಷ್ಟು ಸ್ಥಳಾವಕಾಶ ಇದೆ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳೂ ಹಾಗೂ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮುಂದಿನ 15 ದಿನಗಳಲ್ಲಿ ಈ ಸಂಬಂಧ ಕಾರ್ಯ ಪ್ರವೃತ್ತರಾಗಬೇಕು. ಉಳಿದ ಅಧಿಕಾರಿಗಳಿಗೆ ಮುಂದಿನ ಹಂತದಲ್ಲಿ ಗ್ರಾಮ ಪಂಚಾಯತ್ ಆವರಣದಲ್ಲೇ ನೂತನ ಕಟ್ಟಡಗಳನ್ನು ನಿರ್ಮಿಸಿ ಕಚೇರಿ ತೆರೆಯಬೇಕು” ಎಂದು ಸೂಚಿಸಿದರು.
“ಎಲ್ಲಾ ಅಧಿಕಾರಿಗಳೂ ಒಂದೇ ಸೂರಿನ ಅಡಿ ಜನರ ಕೈಗೆ ಸಿಗುವಂತಿರಬೇಕು ಎಂಬುದೇ ಸರ್ಕಾರದ ಉದ್ದೇಶ. ಇದೇ ಕಾರಣಕ್ಕೆ ಪಂಚಾಯತ್ ಕಾರ್ಯಾಲಯದಲ್ಲೇ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗಳನ್ನು ತೆರೆಯಲಾಗುತ್ತಿದೆ. ಹೀಗಾಗಿ ಸ್ಥಳಾವಕಾಶ ಇದ್ದರೆ ಒಂದೇ ಪಂಚಾಯತ್ ಕಾರ್ಯಾಲಯದಲ್ಲಿ ಇಬ್ಬರು ʼವಿಎʼ ಗಳಿಗೂ ಕಚೇರಿ ನೀಡಿ ” ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಬಿಟ್ಟುಹೋದ ಕಂದಾಯ ಗ್ರಾಮಗಳನ್ನು ಗುರುತಿಸಿ: ಅಧಿಕಾರಿಗಳ ಕಣ್ತಪ್ಪಿನಿಂದ ಪಟ್ಟಿಯಿಂದ ಬಿಟ್ಟುಹೋಗಿರುವ ಹಾಡಿ, ಹಟ್ಟಿ, ತಾಂಡ, ಗೊಲ್ಲರ ಹಟ್ಟಿ ಗಳನ್ನು ಗುರುತಿಸಿ ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಗಮನ ಸೆಳೆದ ಅವರು, “ಕಂದಾಯ ಗ್ರಾಮಗಳ ಘೋಷಣೆ ಬಡವರ ಕೆಲಸ. ಬಡವರ ಕೆಲಸ ಮಾಡಲು ಅಧಿಕಾರಿಗಳು ಅಸಡ್ಡೆ ತೋರುವುದು ಸರಿಯಲ್ಲ” ಎಂದು ಅಸಮಾಧಾನ ಹೊರಹಾಕಿದರು.
“ಹಾಡಿ ಹಟ್ಟಿ ತಾಂಡಾಗಳು ಗ್ರಾಮದ ಜೊತೆ ಹೊಂದಿಕೊಂಡಿದ್ದರೆ ಅವುಗಳಿಗೆ ಅಂತಹ ಜನ ವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮ ಸ್ಥಾನ-ಮಾನ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ 2016 ರ ಸುತ್ತೋಲೆ ಇದೆ. ಅಧಿಕಾರಿಗಳು ಇದೇ ಕಾರಣವನ್ನು ಮುಂದಿಟ್ಟು ಹಾಡಿ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನ-ಮಾನ ನೀಡದಿರುವುದು ಸರಿಯಲ್ಲ. ಕಂದಾಯ ಗ್ರಾಮಗಳಿಗೆ ಸಂಬಂಧಿಸಿದಂತೆ 2016ರ ಸುತ್ತೋಲೆಯನ್ನೇ ಪರಿಗಣಿಸುವ ಅಧಿಕಾರಿಗಳು, 2017 ಮತ್ತು 2019 ರ ಹೊಸ ಸುತ್ತೋಲೆಯನ್ನು ಏಕೆ ಓದುವುದಿಲ್ಲ. ಆ ಸುತ್ತೋಲೆಯಲ್ಲಿ ಗ್ರಾಮದ ಜೊತೆ ಹೊಂದಿಕೊಂಡಿದ್ದರೂ ಸಹ ತಾಂಡಾ, ಹಟ್ಟಿಗಳಿಗೆ ಕಂದಾಯ ಗ್ರಾಮ ಸ್ಥಾನಮಾನ ನೀಡಲು ಅವಕಾಶ ನೀಡಲಾಗಿದೆ. ಆದರೆ, ಅಧಿಕಾರಿಗಳು ಇದನ್ನು ಏಕೆ ಪರಿಗಣಿಸುವುದಿಲ್ಲ” ಎಂದು ಸಭೆಯಲ್ಲೇ ಬೇಸರ ವ್ಯಕ್ತಪಡಿಸಿದರು.
“ಇನ್ನೂ 2016ರ ಸುತ್ತೋಲೆಯಲ್ಲೂ ಸಹ ʼದಾಖಲೆ ರಹಿತ ಜನವಸತಿ ಪ್ರದೇಶ ನಗರ ಸ್ಥಳೀಯ ವ್ಯಾಪ್ತಿಗೆ ಒಳಪಟ್ಟಿದ್ದರೆ ಕಂದಾಯ ಗ್ರಾಮ ಎಂದು ಘೋಷಿಸುವಂತಿಲ್ಲ. ಆದಾಗ್ಯೂ ನಿವಾಸಿಗಳಿಗೆ ಹಕ್ಕುಪತ್ರ ಇಲ್ಲದಿದ್ದಲ್ಲಿ ಬಡಾವಣೆ/ ಕಂದಾಯ ಗ್ರಾಮ ಅಥವಾ ಉಪಗ್ರಾಮ ಎಂದು ಘೋಷಿಸಬಹುದು. ಈ ಬಗ್ಗೆ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬಹುದುʼ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ, ಅಧಿಕಾರಿಗಳು ಇಂತಹ ವಿಚಾರಗಳ ಬಗ್ಗೆ ಗಮನವಹಿಸದಿರುವುದು ವಿಷಾದನೀಯ. ಅಧಿಕಾರಿಗಳು ಮಾಡುವ ತಪ್ಪಿಗೆ ನಾವು ಸದನದಲ್ಲಿ ಬಂಜಾರ ಮತ್ತು ಗೊಲ್ಲರ ಸಮಾಜದ ಶಾಸಕರ ಮಾತಿನ ದಾಳಿಗೆ ತುತ್ತಾಗಬೇಕಿದೆ” ಎಂದರು.
“ಕಳೆದ ತಿಂಗಳು ಹೋಸಪೇಟೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ 1.11 ಲಕ್ಷ ಹಾಡಿ, ಹಟ್ಟಿ, ತಾಂಡ ನಿವಾಸಿಗಳಿಗೆ ಸರ್ಕಾರ ಹಕ್ಕುಪತ್ರ ನೀಡಿದೆ. ಈ ಕೆಲಸವನ್ನು ಸಂಪೂರ್ಣವಾಗಿ ಮುಗಿಸಬೇಕು ಮುಂದಿನ ವರ್ಷದೊಳಗೆ ಕನಿಷ್ಟ ಇನ್ನೂ 1 ಲಕ್ಷ ಜನರಿಗೆ ಹಕ್ಕುಪತ್ರ ನೀಡಬೇಕು ಎಂಬುದು ಸರ್ಕಾರದ ಗುರಿ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರೂ ಸಹ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಅಧಿಕಾರಿಗಳು ಇನ್ನಾದರೂ ಆಸಕ್ತಿ ವಹಿಸಿ ʼತಾಂಡಾ ನಿಗಮʼ ಹಾಗೂ ʼಜಲ ಜೀವನ್ ಮಿಷನ್ʼ ನಿಂದ ಪಟ್ಟಿ ತರಿಸಿಕೊಂಡು ತಾಳೆ ನೋಡಿ, ಬಿಟ್ಟುಹೋಗಿರುವ ಜನವಸತಿ ಪ್ರದೇಶಗಳನ್ನು ಗುರುತಿಸಿ ಕಂದಾಯ ಗ್ರಾಮಗಳು ಎಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿ” ಎಂದು ತಿಳಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಹಾಗೂ ಕಂದಾಯ ಆಯುಕ್ತ ಸುನೀಲ್ ಕುಮಾರ್ ಉಪಸ್ಥಿತರಿದ್ದರು.




