ಎಲ್ಲ ಸರಕಾರಿ ಯೋಜನೆಗಳನ್ನು ಅರ್ಹರಿಗೆ ವಿಳಂಬವಿಲ್ಲದೆ ತಲುಪಿಸಿ: ಸಂತೋಷ ಲಾಡ್

2 years ago

ಧಾರವಾಡ: ಜಿಲ್ಲೆಯಲ್ಲಿ ಬೀಕರ ಬರಗಾಲದ ಛಾಯೆ ಕಾಣಿಸುತ್ತಿದ್ದು, ಗ್ರಾಮಮಟ್ಟದಲ್ಲಿ ಜಿಲ್ಲಾಡಳಿತ ಮತ್ತು ಸರಕಾರದ ಪ್ರತಿನಿಧಿಯಾಗಿ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲ ಜನಪರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಪ್ರಮಾಣಿಕವಾಗಿ ತಲುಪಿಸಬೇಕೆಂದು ಕಾರ್ಮಿಕ ಇಲಾಖೆ  ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಹೇಳಿದರು.

ಧಾರವಾಡ ತಹಸಿಲ್ದಾರ ಕಚೇರಿ ಆವರಣದಲ್ಲಿ ಧಾರವಾಡ ಶಹರ ಗ್ರಾಮ ಆಡಳಿತ ಅಧಿಕಾರಿಗಳ ನೂತನ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೆಲಸ ಒತ್ತಡ ಇರುವುದು ನಿಜ. ಆದರೆ ಜನಸಾಮಾನ್ಯರ ಬೇಡಿಕೆಗಳು ಹೆಚ್ಚಾಗಿರುವುದರಿಂದ ನಿರೀಕ್ಷೆಗೆ ತಕ್ಕಂತೆ ಆಡಳಿತ ಯಂತ್ರ ಕ್ರಿಯಾಶೀಲವಾಗಬೇಕು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಗತ್ಯವಿರುವ ಕಚೇರಿ ಹಾಗೂ ಇತರ ತಾಂತ್ರಿಕ ಅನುಕೂಲಗಳನ್ನು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಹಾಗೂ ಕಂದಾಯ ಇಲಾಖೆಯಿಂದ ಕಲ್ಪಿಸಲಾಗುತ್ತದೆ. ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳಿಗೆ  ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಎಲ್ಲರೂ ಸೇರಿ ಸಮರ್ಥವಾಗಿ ಎದುರಿಸಬೇಕು.ಎಲ್ಲ ಗ್ರಾಮ ಮಟ್ಟದ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಸ್ಥಳದಲ್ಲಿದ್ದು ಜಿಲ್ಲಾಧಿಕಾರಿಗಳಿಗೆ ತಹಸಿಲ್ದಾರರಿಗೆ ವಾಸ್ತವಿಕ ವರದಿ ನೀಡಬೇಕು. ಕುಡಿಯುವ ನೀರು, ಮೇವಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ ಪರಿಹರಿಸಬೇಕು ಎಂದು  ಹೇಳಿದರು.

ಲೋಕಸಭೆ ಚುನಾವಣೆ ನಂತರ ತಹಶಿಲ್ದಾರ ಕಚೇರಿ ಕಟ್ಟಡದ ದುರಸ್ತಿ ಬಗ್ಗೆ ಕ್ರಮವಹಿಸಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಭಾಗವಹಿಸಿದ್ದರು. ಸಚಿವರು ಮತ್ತು ಜಿಲ್ಲಾಧಿಕಾರಿಗಳು ಧಾರವಾಡ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡುವ ಸ್ಟೇಷನರಿ ಕಿಟ್ಟ್ ಗಳನ್ನು ಕೆಲವು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಚಿವರಿಗೆ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ 7ನೇ ವೇತನ ಆಯೋಗ ಜಾರಿ, ಓಪಿಸ್ ಜಾರಿ, ಲ್ಯಾಪಟಾಪ್, ರಿಸ್ಕ್ ಅಲೌನ್ಸ್, ಪ್ರಯಾಣ ಭತ್ಯೆ ಹೆಚ್ಚಳ, ಸೇವಾಭದ್ರತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಮನವಿಪತ್ರ ಸಲ್ಲಿಸಲಾಯಿತು.

ತಹಸಿಲ್ದಾರ ಡಾ.ಡಿ.ಎಚ್.ಹೂಗಾರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಆಡಳಿತ ಅಧಿಕಾರಿಗಳ ಧಾರವಾಡ ತಾಲೂಕು ಅಧ್ಯಕ್ಷ ವೆಂಕಟೇಶ ಹಟ್ಟಿಯವರ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ  ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ,  ಗ್ರೇಡ್ 2 ತಹಸಿಲ್ದಾರ ಹಣಮಂತ ಕೋಚ್ಚರಗಿ, ಉಪ ತಹಸಿಲ್ದಾರರಾದ ಎ.ಎಂ.ಮಂಗಳಗಟ್ಟಿ, ಎಸ್.ಸಿ.ಕುಲಕರ್ಣಿ, ಧಾರವಾಡ ತಹಶಿಲ್ದಾರ ಕಚೇರಿಯ ಶಿರಸ್ತೆದಾರರಾದ ರಮೇಶ ಬಂಡಿ, ಎಂ.ವಿ.ಮುರಗೋಡ, ವಿ.ಎಂ.ತಿತ್ತಿ, ವಿದ್ಯಾ ಡಿಸ್ಲೆ ಮತ್ತು ಕಂದಾಯ ನಿರೀಕ್ಷಕರಾದ ಗುರು ಸುಣಗಾರ, ಅಮರಗೋಳ, ಸಂಪತ್ತಕುಮಾರ ವಡೆಯರ ಹಾಗೂ ತಾಲೂಕಿನ ಎಲ್ಲ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ತಹಶಿಲ್ದಾರ ಕಚೇರಿ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Leave a Reply