ಧಮ್ಮ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ
ಪ್ಲಾಸ್ಟಿಕ್ ಬಳಕೆ ನಿಷೇಧದಿಂದ ಪರಿಸರ ಸಂರಕ್ಷಣೆ ಸಾಧ್ಯ: ತ್ಯಾಗರಾಜ್
ಚಿತ್ರದುರ್ಗ: ಪರಿಸರವನ್ನು ಸಂಪೂರ್ಣ ಹಾಳು ಮಾಡುತ್ತಿರುವ ಪ್ಲಾಸ್ಟಿಕ್ ನಿಷೇಧ ಮಾಡಿದರೆ ಉತ್ತಮ ಪರಿಸರ ಸಂರಕ್ಷಣೆ ಸಾಧ್ಯವೆಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ತ್ಯಾಗರಾಜ್ ಹೇಳಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಧಮ್ಮ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾ ಸಂಸ್ಥೆ, ಶಾಂತಿ ಮತ್ತು ಸೌಹಾರ್ದ ವೇದಿಕೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ವಿಶ್ವ ಪರಿಸರ ದಿನಾಚರಣೆ ಸಮಾರಂಭದಲ್ಲಿ ಸಸಿ ನೆಟ್ಟು ನಂತರ ಮಾತನಾಡಿದರು.
ಪರಿಸರ, ಶಬ್ದ, ವಾಯು ಮಾಲಿನ್ಯಗಳು ಜನತೆಯನ್ನು ಕಷ್ಟಕ್ಕೆ ಸಿಲುಕಿಸಿದ್ದು, ಪರಿಸರ ಸಂರಕ್ಷಣೆ ಆಗಬೇಕಾದರೆ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಮೂಲಕ ಪರಿಸರವನ್ನು ಕಾಪಾಡಿಕೊಳ್ಳುವುದು ಸೂಕ್ತವಾದದ್ದು ಎಂದರು.
ಪರಿಸರ ರಕ್ಷಣೆ ಕಾರ್ಯ ವರ್ಷಕ್ಕೂಮ್ಮೆ ಅಷ್ಟೇ ಮಾಡಿದರೆ ಸಾಲದು. ನಿತ್ಯ ನಿರಂತರವಾಗಿ ಸಸಿ ನೆಡುವ ಕಾರ್ಯಕ್ರಮಗಳು ಹಮ್ಮಿಕೊಳ್ಳ ಬೇಕೆಂದು ಸಲಹೆ ನೀಡಿದರು.
ಗಾಳಿ, ನೀರು ಮತ್ತು ಪರಿಸರ ಪರಿಶುದ್ಧವಾಗಬೇಕಾದರೆ ಪ್ಲಾಸ್ಟಿಕ್ ನಿಂದ ಮುಕ್ತಗೊಳಿಸಿದಾಗ ಮಾತ್ರ ಸಾಧ್ಯವೆಂದು ಹೇಳಿದರು.
ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ ಮಾತನಾಡಿ, ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರು ಸಂವಿಧಾನದಲ್ಲಿ ಪರಿಸರವನ್ನು ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಅನ್ನುವ ಮೂಲಕ ಕಾನೂನುಗಳನ್ನು ರೂಪಿಸಿಕೊಟ್ಟಿದ್ದಾರೆ ಎಂದರು.
ಪ್ರತಿಯೊಬ್ಬರು ಗಿಡಮರಗಳನ್ನು ಬೆಳೆಸಿ ಉಳಿಸಿಕೊಳ್ಳಲು ಮುಂದೆ ಬರಬೇಕು. ಧಮ್ಮ ಕೇಂದ್ರದಲ್ಲಿ ವಿಶ್ವ ಸಾಗರ್ ದಂಪತಿ ಪರಿಸರ ಸಂರಕ್ಷಣೆಗಾಗಿ ಹಗಲು-ಇರಳು ಶ್ರಮಿಸುತ್ತಿದ್ದು ನಿಜಕ್ಕೂ ಅವರ ಶ್ರಮ ಸಾರ್ಥಕತೆಯನ್ನು ಕಂಡುಕೊಂಡಿದೆ ಎಂದರು.
ಪತ್ರಕರ್ತ ಎಂ.ಎನ್.ಅಹೋಬಲಪತಿ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಗಣಿಗಾರಿಕೆಯಿಂದಾಗಿ ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತಿದ್ದು, ಹಾಗೆಯೇ ನಗರದ ಸಮೀಪದಲ್ಲಿ ನಗರಸಭೆಯಿಂದ ಕಸ ವಿಲೇವಾರಿ ಘಟಕ ಆರಂಭಿಸಿದ್ದು, ಕಳೆದ ಹತ್ತಾರು ವರ್ಷಗಳಿಂದ ಸಮರ್ಪಕವಾಗಿ ವಿಂಗಡಣೆ ಮಾಡುವ ವ್ಯವಸ್ಥೆಯನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಜನ ಇದನ್ನು ಪ್ರಶ್ನಿಸಿ ಹೋರಾಟ ಮಾಡುವ ಹಂತಕ್ಕೆ ತಲುಪಿದಾಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದರು.
ವಿಮುಕ್ತಿ ವಿದ್ಯಾ ಸಂಸ್ಥೆಯ ನಿರ್ದೇಶಕ ಆರ್.ವಿಶ್ವ ಸಾಗರ್ ಮಾತನಾಡಿ ಪರಿಸರ ಸಂರಕ್ಷಣೆಗಾಗಿ ಧಮ್ಮ ಕೇಂದ್ರದಲ್ಲಿ ನಿರಂತರ ಪ್ರಯತ್ನ ನಡೆದಿದೆ ಎಂದರು.
ವಿಮುಕ್ತಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಅನ್ನಪೂರ್ಣ ಮಾತನಾಡಿ ಚಿತ್ರದುರ್ಗದ ಸೌಂದರ್ಯ ಇರುವುದೇ ಬೆಟ್ಟಗುಡ್ಡಗಳಿಂದಾಗಿ. ಆದರೂ ಕೂಡ ಗುಡ್ಡಬೆಟ್ಟಗಳನ್ನು ನಾಶ ಮಾಡುವ ಮೂಲಕ ಪರಿಸರವನ್ನು ಹಾಳು ಮಾಡಲಾಗಿದೆ ಎಂದು ಖೇದ ವ್ಯಕ್ತಪಡಿಸಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಇತ್ತೀಚಿನ ಪ್ರಕೃತಿ ವಿಕೋಪಗಳಿಗೆ ಜಾಗತಿಕ ತಾಪಮಾನ ಕಾರಣವಾಗುತ್ತಿದ್ದು. ಗಿಡ, ಮರ, ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದೊಂದು ದಿನ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ನದಿ, ತೊರೆ, ಹಳ್ಳಕೊಳ್ಳ, ಕೆರೆ, ಕುಂಟೆ ಉಳಿಸಿಕೊಳ್ಳುವುದರೊಂದಿಗೆ ಪರಿಸರ ಉಳಿಸಿಕೊಳ್ಳಲು ಕಿಶೋರಿಯರು ರೂಪಕಗಳನ್ನು ಪ್ರಸ್ತುತಪಡಿಸಿದರು.
ಪರಿಸರ ದಿನಾಚರಣೆ ಸಮಾರಂಭದಲ್ಲಿ ಸಂಯೋಜಕರಾದ ನಾಗರತ್ನಮ್ಮ, ಬೀಬಿಜಾನ್, ಅರಣ್ಯ ಸಾಗರ್, ನಾಗಪ್ಪ ಮುಂತಾದವರು ಉಪಸ್ಥಿತರಿದ್ದರು.




