ಆರೋಗ್ಯಕರ ಜೀವನಕ್ಕೆ ಸ್ವಚ್ಛ ಪರಿಸರ ಅಗತ್ಯ
ಚಿತ್ರದುರ್ಗ: ಆರೋಗ್ಯಕರ ಜೀವನಕ್ಕೆ ಸ್ವಚ್ಛವಾದ ಪರಿಸರ ಅಗತ್ಯ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರಾದ ಸಿ.ಎಸ್.ಗಾಯತ್ರಿ ಹೇಳಿದರು.
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
ಚಿತ್ರದುರ್ಗ ತಾಲ್ಲೂಕಿನ ಮದಕರಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಆರೋಗ್ಯದಿಂದ ಇರಬೇಕಾದರೆ ನಮ್ಮ ಮನೆ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇರಬೇಕು. ಸ್ವಚ್ಛ ಪರಿಸರ ನಿರ್ಮಾಣಕ್ಕೆ ನಾಗರಿಕರು ಸಹಕರಿಸಬೇಕು ಎಂದರು.
ಹೆಚ್ಚಿನ ಪ್ಲಾಸ್ಟಿಕ್ ಬಳಕೆಯಿಂದಾಗಿ ವಾತಾವರಣ ಕಲುಷಿತವಾಗುತ್ತಿದ್ದು, ಈ ಬಾರಿಯ ಪರಿಸರ ದಿನಾಚರಣೆಯ ಉದ್ದೇಶ ಪ್ಲಾಸ್ಟಿಕ್ ಮುಕ್ತ ಗ್ರಾಮಗಳನ್ನಾಗಿ ಮಾಡುವುದಾಗಿದೆ. ಪ್ಲಾಸ್ಟಿಕ್‍ನಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಮತ್ತು ಮರು ಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಎಂಬ ಎರಡು ವಿಧವಿದ್ದು, ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸಲಾಗಿದೆ ಎಂದು ತಿಳಿಸಿದ ಅವರು, ಒಣ ಕಸ ಮತ್ತು ಹಸಿ ಕಸ ವಿಂಗಡಿಸಿ ಗ್ರಾಮ ಪಂಚಾಯಿತಿಯ ಸ್ವಚ್ಛ ವಾಹಿನಿಗೆ ನೀಡಲು ಮನವಿ ಮಾಡಿದರು.
ಚಿತ್ರ ಡಾನ್ ಬಾಸ್ಕೋ ಸಂಸ್ಥೆಯ ಮಹಂತೇಶ್ ಮಾತನಾಡಿ, ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಕೊನೆಗೊಳಿಸುವ ಬಗ್ಗೆ ಹಾಗೂ ಸಾವಯವ ಕೃಷಿ, ಪೌಷ್ಟಿಕ ಆಹಾರ ಸೇವನೆ, ಶಾಲಾ ಉದ್ಯಾನವನ, ಕೈತೋಟದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಜಾಥಾ, ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಮದಕರಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯ, ಸದಸ್ಯರಾದ ಸ್ವಾಮಿ, ನವೀನ್, ರಂಜಿತ್, ಮಂಜುಳಾ, ಯಶೋಧ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್, ಸ್ವಚ್ಛ ಭಾರತ ಮಿಷನ್ (ಗ್ರಾ) ಜಿಲ್ಲಾ ಐಇಸಿ ಸಮಾಲೋಚಕ ಬಿ.ಸಿ.ನಾಗರಾಜ್, ಎಸ್‍ಡಬ್ಲ್ಯೂಎಂ ಸಮಾಲೋಚಕರಾದ ಪ್ರವೀಳಾ, ಶಾಲಾ ಮುಖ್ಯಶಿಕ್ಷಕರಾದ ರೇಖಾ, ಆರೋಗ್ಯ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಮಹಿಳೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.




