ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮೊದಲ ಸ್ಥಾನ. ‘ಹರ ಮುನಿದರೆ ಗುರು ಕಾಯುವನು ಗುರುಮುನಿದರೆ ಹರ ಕಾಯನು’ ಎಂಬ ಮಾತು ಜನಜನಿತ. ಚರಿತ್ರೆ ಇತಿಹಾಸ ಪುರಾಣವನ್ನು ಅವಲೋಕಿಸಿದಾಗ ಗುರುವರ್ಯರಿಲ್ಲದೆ ಯಾವ ಸಾಮ್ರಾಜ್ಯದ ಸ್ಥಾಪನೆಯೂ ಆಗಲಿಲ್ಲ. ಗುರುವಿನ ಮಾರ್ಗದರ್ಶನ ಸರ್ವರಿಗೂ ಬೇಕು. ಗುರು ತೃಣಕ್ಕೆ ಸಮಾನ ಎಂಬುವರ ಅಧ್ಯಾಯ ಪರಿಪೂರ್ಣವಾಗಿದ್ದು ಕಡಿಮೆ. ಗುರುವಿಗೆ ದೇವರಿಗಿಂತ ಹೆಚ್ಚಿನ ಸ್ಥಾನವನ್ನು ಕಲ್ಪಿಸಿಕೊಂಡ ಭಾರತೀಯ ಪರಂಪರೆ ನಮ್ಮದು. ಗುರು ಎಂದರೆ ಮಾರ್ಗದಾತ, ಶಿಕ್ಷಕ, ಕಸವನ್ನು ಕಳೆದು ಹೊಸದನ್ನು ಗುಣಪಡಿಸುವ ವಿವೇಕಿ. ಸಕಲ ವಿಷಯಗಳ ಪಾರಂಗತ. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ದಾಸರ ವಾಣಿ ಸರ್ವಕಾಲಕ್ಕೂ ಮಾನ್ಯ. ಗುಲಾಮನಾಗುವುದೆಂದರೆ ಜೀತದಾಳ ಆಗುವುದಲ್ಲ, ಜ್ಞಾನಕ್ಕೆ ಸವಿನಯವಾಗಿ ಒಲಿಸಿಕೊಳ್ಳುವುದು, ಉಳಿಸಿಕೊಳ್ಳುವುದು ಬೆಳೆಸಿಕೊಳ್ಳುವುದು ಎಂದರ್ಥ. ಈ ನಿಟ್ಟಿನಲ್ಲಿ ಭಾರತೀಯ ತತ್ವಜ್ಞಾನವನ್ನು ವಿಶ್ವಕ್ಕೆ ಮತ್ತೊಮ್ಮೆ ಪ್ರಚುರ ಪಡಿಸಿದವರು ಶಿಕ್ಷಕ, ತತ್ವಜ್ಞಾನಿ, ಉಪ ಕುಲಪತಿ, ವಿದೇಶಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಾಯಭಾರಿ, ರಾಜಕಾರಣಿ, ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಶಿಕ್ಷಕರೊಬ್ಬರು ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿದಾಗ ರಾಷ್ಟ್ರೀಯ ಶಿಕ್ಷಕರ ಒಕ್ಕೂಟ ಸೆಪ್ಟೆಂಬರ್ 5 ಶಿಕ್ಷಕರ ದಿನವಾಗಿ ಆಚರಣೆ ಮಾಡಬೇಕು ಎಂದು ಜವಹರಲಾಲ್ ನೆಹರುರವರ ಸರ್ಕಾರವನ್ನು ಒತ್ತಾಯಿಸಿದರು. ಸರ್ಕಾರ ಶಿಕ್ಷಕರ ಈ ಬೇಡಿಕೆಯನ್ನು ಅಂಗೀಕರಿಸಿತು. 1962 ಸೆಪ್ಟೆಂಬರ್ 5 ರಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಶಿಕ್ಷಕರ ದಿನವೆಂದು ಆಚರಣೆ, ಮಾಡಲಾಗುತ್ತಿದೆ. ಶಿಕ್ಷಕರು ತಮ್ಮನ್ನ ತಾವು ಅರಿಯುವ, ಬೆಳೆಯುವ ಮಕ್ಕಳನ್ನು ಮತ್ತಷ್ಟು ಬೆಳಕಾಗುವಂತೆ ಮಾಡವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ. ಪ್ರತಿಯೊಬ್ಬ ಶಿಕ್ಷಕ ಮನೋವಿಜ್ಞಾನಿಯಾಗಿ,ತತ್ವಜ್ಞಾನಿಯಾಗಿ ಮಕ್ಕಳ ಮನಸ್ಸು ಓದುವ,ಚಿತ್ರ ಬಿಡಿಸುವ, ಅಕ್ಷರ ಮೂಡಿಸುವ ಕಲೆಗಾರ. ಇಂತಹ ಕಲೆಗಾರರಲ್ಲಿ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಶ್ರೇಯಸ್ಸು ಸರ್ವಪಲ್ಲಿ ರಾಧಾಕೃಷ್ಣನ್ ಅವರದು. ಇವರ ತಾರ್ಕಿಕ ಚಿಂತನೆಗೆ ತಲೆದೂಗದ ವಿಶ್ವ ನಾಯಕರಿಲ್ಲ. ಅಂತಹ ಕೆಲವೊಂದು ಸನ್ನಿವೇಶಗಳನ್ನು ಗ್ರಹಿಸೋಣ.
ರಾಧಾಕೃಷ್ಣನ್ ರಷ್ಯಾದ ರಾಯಭಾರಿಯಾಗಿ ಸ್ಟಾಲಿನ್ ಅವರ ಸ್ನೇಹ ಸಂಪಾದಿಸಿದರು.14 ಜನವರಿ 1950ರ ದಿನದಂದು
“ನೀವು ಯುದ್ಧದ ಬಗ್ಗೆ ವಿಚಾರಿಸದೆ ವಿಶ್ವಶಾಂತಿ ಗಾಗಿ ಪ್ರಯತ್ನಿಸಬೇಕು ಅದರಲ್ಲಿ ಮನಕುಲದ ಕಲ್ಯಾಣವಿದೆ” ಎಂದು ಸರ್ವಪಲ್ಲಿಯವರು ನುಡಿದಾಗ,
“ಪ್ರೊಫೆಸರರೇ ಅದು ನನ್ನೊಬ್ಬನನ್ನು ಅವಲಂಬಿಸಿಲ್ಲ ” ಎಂದು ಸ್ಟಾಲಿನ್ ಹೇಳಿದರು. “ಮಾರ್ಷಲ್ ಮಹಾಶಯರೇ ಕದನ ಉಂಟಾಗಲು ಇಬ್ಬರು ಬೇಕು ಆದರೆ ಅದನ್ನು ತಡೆಯಲು ಒಬ್ಬರು ಸಾಕು ” ಎಂಬ ರಾಧಾಕೃಷ್ಣ ಅವರು ಮಾತು ಸ್ಟಾಲಿನ್ ಅವರ ಹೃದಯ ತಟ್ಟಿತು. ತತ್ವಜ್ಞಾನಿಯ ವಿಶ್ವಶಾಂತಿಯ ಮಾತಿಗೆ ರಷ್ಯಾದ ಅಧ್ಯಕ್ಷರಲ್ಲಿ ಉತ್ತರ ಇರಲಿಲ್ಲ. ಹಾಗೆ ಮಾತನಾಡುತ್ತಾ ಸ್ಟಾಲಿನ್ ಅವರು,” ಉಳಿದ ರಾಯಭಾರಿಗಳು ಶಾಂತಿಯ ಬಗ್ಗೆ ಮಾತನಾಡುವಾಗ ಅವರು ಮನಸ್ಸಿನಲ್ಲಿ ಯುದ್ಧವನ್ನೇ ಉದ್ದೇಶಿಸಿರುತ್ತಾರೆ. ಆದರೆ ಪ್ರೊಫೆಸರ್ ನೀವು ಶಾಂತಿಯ ಪ್ರಸ್ತಾಪ ಮಾಡುವಾಗ ಅದನ್ನು ನೀವು ಮನಸಾರೆ ಬಯಸಿದಿರಿ ಎಂದು ನಾನು ಬಲ್ಲೆ” ಎಂದರು. ಈ ಪೂರ್ವದಲ್ಲಿ ರಾಯಭಾರಿಗಳಾಗಿದ್ದ ವಿಜಯಲಕ್ಷ್ಮಿ ಪಂಡಿತರಿಗೆ ರಷ್ಯಾದ ಅಧ್ಯಕ್ಷರನ್ನು ಮಾತನಾಡಿಸುವುದೇ ಆಗಿರಲಿಲ್ಲ. ಅದನ್ನು ಸಾಧಿಸಿದ ಶ್ರೇಯಸ್ಸು ಶಿಕ್ಷಕರದಾಯಿತು.
ಮತ್ತೊಮ್ಮೆ ಸ್ಟ್ಯಾಲಿನವರನ್ನು ಅವರ ಆಹ್ವಾನದ ಮೇರೆಗೆ ವಯಕ್ತಿಕವಾಗಿ ಭೇಟಿಯಾದಾಗ, ‘ನೀವು ಯೋಧರಾಗಿ ಪ್ರಖ್ಯಾತರಾದಂತೆ ಶಾಂತಿದೂತರಾಗಿ ಪ್ರಖ್ಯಾತರಾಗಬೇಕೆಂದು’ ಹಾರೈಸಿದರು. ಅದರ ಸಂಬಂಧವಾಗಿ ಅಶೋಕ ಕಳಿಂಗ ಯುದ್ಧದಲ್ಲಿ ಜಯಗಳಿಸಿ ತದನಂತರ ಸನ್ಯಾಸವನ್ನು ಸ್ವೀಕರಿಸಿದ ಕಥೆಯನ್ನು ಸ್ಟಾಲಿನ್ ಅವರಿಗೆ ಮನವರಿಕೆ ಮಾಡಿಕೊಡಬೇಕಾಯಿತು. ಇದರಿಂದ ಪರಿವರ್ತನೆ ಹೊಂದಿದ ಮಾರ್ಷಲ್ ‘ ಪ್ರೊಫೆಸರ್ ಪ್ರಪಂಚದ ಎಲ್ಲಾ ಜನರು ನನ್ನನ್ನು ರಾಕ್ಷಸನೆಂದು ತಿಳಿದಿದ್ದಾರೆ, ನಾನು ಒಬ್ಬ ಮನುಷ್ಯನನ್ನು ತಿಳಿದವರು ನೀವೊಬ್ಬರೇ ‘ ಎಂದು ನುಡಿದು ತನ್ಮಯರಾದರು.
1915ರಲ್ಲಿ ರಾಧಾಕೃಷ್ಣನ್ ಮೊದಲಬಾರಿ ಗಾಂಧೀಜಿಯವರನ್ನು ಕಂಡಾಗ ನಡೆದ ಚರ್ಚೆ ಹೀಗಿದೆ. ಗಾಂಧೀಜಿಯವರು ಮಾಂಸ ಆಹಾರವನ್ನು ಅಪಥ್ಯವೆಂದು ಬಗೆಯುತ್ತ,ಹಾಲು ವರ್ಜ್ಯವಾದುದೆಂದರು. ಹಾಲು ಮಾಂಸದಿಂದ ಉತ್ಪತ್ತಿಯಾದ್ದರಿಂದ ಅದು ಮಾಂಸಹಾರವನ್ನು ಸಾಧಿಸಿದರು. ಇದನ್ನು ವಿರೋಧಿಸಿದ ರಾಧಾಕೃಷ್ಣರು, “ಹಾಗಿದ್ದರೆ ನಾವೆಲ್ಲರೂ ಮಾಂಸಾಹಾರಿಗಳು ಏಕೆಂದರೆ ನಾವೆಲ್ಲ ತಾಯಿ ಹಾಲು ಸೇವಿಸಿದವರು” ಎಂಬ ಮಾತಿಗೆ ಗಾಂಧೀಜಿಯಲ್ಲಿ ಉತ್ತರವಿರಲಿಲ್ಲ. ಇಂತಹ ತರ್ಕದ ಚಾಕಚಕ್ಯತೆ ರಾಧಾಕೃಷ್ಣನ್ ಅವರದಾಗಿತ್ತು. ಆಗತಾನೇ ಗಾಂಧೀಜಿ, ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಬಂದಿದ್ದರು. ಹಾಗೆ ಗಾಂಧೀಜಿ ಮಾತಾಡುತ್ತ ವೈದ್ಯಕೀಯ ಚಿಕಿತ್ಸೆ ಕುರಿತಾಗಿ, ವೈದ್ಯರ ಅವಶ್ಯಕತೆ ಇರಬೇಕಿಲ್ಲ ವೈದ್ಯಕೀಯ ನೆರವಿಲ್ಲದೆ ಸಾವಿರಾರು ಕಾಡು ಪ್ರಾಣಿಗಳು ಅರಣ್ಯದಲ್ಲಿ ಬದುಕಿಲ್ಲವೇ’ ಎಂಬ ಮಾತಿಗೆ ಪ್ರತಿಯಾಗಿ ರಾಧಾಕೃಷ್ಣನ್ ಅವರು,’ ವೈದ್ಯರ ನೆರವಿಲ್ಲದೆ ಸಾವಿರಾರು ಪ್ರಾಣಿಗಳು ಅಡವಿಯಲ್ಲಿ ಸತ್ತಿಲ್ಲವೇ?’ ಎಂದಾಗ ಗಾಂಧಿ ಅದನ್ನು ನೀವೇ ಹೇಗೆ ಬಲ್ಲಿರಿ ಎಂದರು. ಅದಕ್ಕೆ ರಾಧಾಕೃಷ್ಣನ್ ಅವರು ‘ಅದನ್ನು ನೀವು ಹೇಗೆ ಬಲ್ಲಿರಿ’ ಎಂದು ಮರು ಪ್ರಶ್ನಿಸಿದರು. ಈ ರೀತಿಯ ತರ್ಕ ಶಿಕ್ಷಕರಿಂದ ಮಾತ್ರ ಸಾಧ್ಯ ಎಂಬುದನ್ನು ಮನಗಾಣಿಸಿದ ಶ್ರೇಯಸ್ಸು ರಾಧಾಕೃಷ್ಣನ್ ರದು.
ಹೀಗೆ ವಿಶ್ವದ ಹಲವು ಮಹಾ ನಾಯಕರಿಗೆ ಪೌರಾತ್ಯ ಹಾಗೂ ಪಾಶ್ಚಿಮಾತ್ಯದ ತತ್ವಜ್ಞಾನವನ್ನು ಸರಳೀಕರಣಗೊಳಿಸಿದ ಮೊದಲಿಗರೆನ್ನಬಹುದು. ಏಕೆಂದರೆ ಪಶ್ಚಿಮದ ಚಿಂತಕರಾದ ಬರ್ಗಿಸನ್, ವಿಲಿಯಮ್ ಜೋನ್ಸ್, ರಸಲ್ ಮೊದಲಾದವರ ವಿಚಾರಗಳನ್ನು ಉಪನಿಷತ್ತುಗಳು ವಿತರಿಸಿದ ತತ್ವಗಳ ಹಿನ್ನೆಲೆಯಲ್ಲಿ ವಿವರಿಸಿದರು. ಅವರು ಮಾತನಾಡುವವರು ಯಾವುದೇ ಟಿಪ್ಪಣಿಗಳನ್ನು ಇಟ್ಟುಕೊಳ್ಳುತ್ತಿರಲಿಲ್ಲ. ಮಕ್ಕಳಿಗೆ ಪಾಠ ಹೇಳುವಾಗ, ಅದು ಚರ್ಚೆಯೊಂದಿಗೆ ಆರಂಭವಾಗುತಿತ್ತು. ಚರ್ಚೆ ಅಗೋಚರ ಅಭೌತಿಕ ಅಸಮಾನ್ಯ ವಿಷಯಗಳನ್ನು ತೆರೆದುಕೊಳ್ಳುವಂತೆ ಮಾಡುತ್ತಿತ್ತು. ಅವರು ಉತ್ಪನ್ನಕ್ಕಿಂತ ಪ್ರಕ್ರಿಯೆಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಡುತ್ತಿದ್ದರು. ಇದು ನಮ್ಮ ಶಿಕ್ಷಕರ ಜವಾಬ್ದಾರಿ. ಮಗು ಕಲಿಯಲಿಲ್ಲ ಎಂದು ಬೇಸರ ಪಡದೆ ಮಗು ಕಲಿಯುವ ವಿಧಾನಗಳನ್ನು ಕಂಡುಕೊಳ್ಳುವ ಪ್ರಕ್ರಿಯೆಗೆ ಹೆಚ್ಚು ಹೊತ್ತು ಕೊಡಬೇಕೆಂಬುದನ್ನು ಮನಗಾಣಿಸಿದರು. ಯಶಸ್ವಿ ಶಿಕ್ಷಕರ ಮೊದಲ ಲಕ್ಷಣವೆಂದರೆ ವಿದ್ಯಾರ್ಥಿಗಳಲ್ಲಿ ಪ್ರೀತಿಯನ್ನು ಬಿತ್ತುವುದು ಎಂದು ನಂಬಿದ್ದರು. ಶಿಕ್ಷಕ ಇಲ್ಲಿ ಶ್ರೀಕೃಷ್ಣನಾದರೆ, ವಿದ್ಯಾರ್ಥಿ ಅರ್ಜುನನಾಗಬೇಕು, ಏಕಲವ್ಯನು ಆಗಬೇಕು ಎಂಬುದನ್ನು ಪ್ರತಿಯೊಬ್ಬ ಶಿಕ್ಷಕರು, ವಿದ್ಯಾರ್ಥಿಗಳು ಅರಿಯುವಂತಾಗಲಿ .
ಸರ್ವರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
– ಡಾ. ರಾಜೇಂದ್ರಕುಮಾರ್ ಕೆ ಮುದ್ನಾಳ್, ಶಿಕ್ಷಕರು, ಸಂಶೋಧಕರು, ಯಾದಗಿರಿ




