ಕಟ್ಟಿಗೆಯಲ್ಲಿ ಅನಾವರಣಗೊಂಡಿರುವ ಸುಂದರ ಅರಮನೆ ಎಂಬ ಕೌತುಕ

1 year ago

ಭಾನುವಾರದ ‘ಪ್ರಜಾವಾಣಿ’ ಪುರವಣಿಯಲ್ಲಿ ‘ಸುಂದರ ಕಲಾ ಮ್ಯೂಸಿಯಂ ಸತ್ಯದ ಅಭಯಾರಣ್ಯ’ ಎಂಬ ಸುಂದರ ಲೇಖನ ಪ್ರಕಟಗೊಂಡಿದೆ. ಆ ಪ್ರವಾಸಿ ತಾಣದ ಬಗ್ಗೆ ನಾನೂ ಬರೆಯಬೇಕೆಂದುಕೊಂಡಿದ್ದೆ. ಅವರು ಬರೆದದ್ದು  ಔಚಿತ್ಯವಾದ ಮತ್ತು ಸುಂದರ ಲೇಖನ. ಲೇಖಕರು ಪ್ರೇಕ್ಷಣೀಯ ಸ್ಥಳಕ್ಕೆ ನ್ಯಾಯ ಒದಗಿಸಿ ಕೊಟ್ಟಿದ್ದಾರೆ. (ಆ ಪ್ರಕಟಿತ ಲೇಖನವನ್ನು ಓದುವುದರೊಂದಿಗೆ, ನನ್ನ ಈ ಲೇಖನವನ್ನು ಓದಿ)

ಸಿಂಗಾಪೂರ, ಮಲೇಶಿಯಾ, ಲಂಕಾವಿ ದ್ವೀಪಗಳ ಬಿಳಿ ಮರಳು, ನೀಲಿಸಮುದ್ರ ನನ್ನ ನೋಟದ ಹಸಿವನ್ನು ತಣಿಸಿರಲಿಲ್ಲ. ‘ದಿಲ್ ಮಾಂಗೇ ಮೋರ್’ ಎಂದು ಥಾಯ್ಲೆಂಡಿಗೆ ಬಂದಿಳಿದಿದ್ದೆವು.  ಯೂರೋಪ್, ಅಮೇರಿಕೆ, ಆಸ್ಟ್ರೇಲಿಯ ಮತ್ತು ಥೈಲ್ಯಾಂಡ್ ದೇಶಗಳ ಸಮುದ್ರ ತೀರಗಳು ಜಗತ್ತಿನ ಶ್ರೇಷ್ಠ ಸಮುದ್ರ ತೀರಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳಿಗಿಂತ ಮಯಾಮಿ, ಮತ್ತು ಬ್ರೆಜಿಲ್ ದೇಶಗಳ ಸಮುದ್ರ ತೀರಗಳು ಇನ್ನೂ ಸುಂದರವಾಗಿವೆ ಎನ್ನುತ್ತಾರೆ ಪ್ರವಾಸಿಗರು. ಅವುಗಳನ್ನು ನೋಡಬೇಕೆನ್ನುವ ನನ್ನ ಆಸೆಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.

ಇರಲಿ, ವಿಷಯಕ್ಕೆ ಬರುವೆ. ‘ಪಟ್ಟಾಯ’ ಎಂಬ ಥಾಯ್ಲೆಂಡ್ ದೇಶದ ಒಂದು ಪಟ್ಟಣ ‘ಫೇಮಸ್’ ಗಿಂತ ‘ನಟೋರಿಯಸ್’ ಎಂದೇ ಹೇಳಬಹುದು. ಈ ಹೇಳಿಕೆಯನ್ನು ಸುಳ್ಳಾಗಿಸುವ ಪ್ರಯತ್ನ ಮಾಡುವಂತಿದೆ ಥಾಯ್ ಗಳ ಕಾರ್ಯ. ‘ಪಟ್ಟಾಯದ ರಾತ್ರಿ’ ಗಳಿಗಿಂತಲು ಹಗಲುಗಳನ್ನು ಶ್ರೀಮಂತಗೊಳಿಸುವ ಪ್ರವಾಸಿ ತಾಣಗಳನ್ನು ಅವರು ಅಭಿವೃದ್ಧಿಪಡಿಸುತ್ತಿದ್ದಾರೆ. ಇವುಗಳಲ್ಲಿ ‘ದಿ ಸ್ಯಾಂಕ್ಚುರಿ ಆಫ್ ಟ್ರೂಥ್’ ಸಹ ಒಂದು.

ತುಸು ಹೆಚ್ಚೇ ಎನಿಸುವ ‘ಎಂಟ್ರಿ ಫೀ’ ತೆತ್ತು ಒಳ ಹೊಕ್ಕರೆ, ಸಮುದ್ರದ ಅಂಚಿನಲ್ಲಿ ನಿಂತಿರುವ ಹಳೆಯ ಚೈನಾ ಮಾದರಿಯ ಹಡಗು ಕಾಣುತ್ತದೆ. ಹಡಗಿನ ಹತ್ತಿರ ಹತ್ತಿರ ಹೋದಂತೆ ಆ ಹಡಗು ನೀರ ಬಿಟ್ಟು ನೆಲದ ಮೇಲಿರುವ ಕಟ್ಟಡವಾಗುತ್ತದೆ. ‘ಓ’ ಎಂಬ ಉದ್ಗಾರದೊಂದಿಗೆ ಇನ್ನಷ್ಟು ಮುಂದೆ ಹೋದರೆ ಅದು ಕಲ್ಲುಗಳಿಂದ ಕಟ್ಟಿದ ಅರಮನೆ ಎನಿಸುತ್ತದೆ. ಇನ್ನೂ ಹತ್ತಿರಕ್ಕೆ ಹೋದರೆ ಅದು ಕಲ್ಲಿನ ಅರಮನೆಯಲ್ಲ ಕಟ್ಟಿಗೆಯಲ್ಲಿ ಅನಾವರಣಗೊಂಡಿರುವ ಸುಂದರ ಅರಮನೆ ಎಂಬ ಕೌತುಕಕ್ಕೆ ತಳ್ಳುತ್ತದೆ.

ಸೌಥ್ ಈಸ್ಟ್ ಏಶಿಯಾದಲ್ಲಿ ‘ಬುದ್ಧ’  ಮತ್ತು ಅವನ ಧಮ್ಮ ಬಹಳ ಪ್ರಮುಖ. ಅವನ ದೇವಾಲಯಗಳ ಮಾದರಿಯಲ್ಲಿ ಕಟ್ಟಿದ ಸುಂದರ ಅರಮನೆಯಲ್ಲಿ ಅವನನ್ನು ಓಡಿಸಿ ಅವನ ಸ್ಥಳದಲ್ಲಿ ಹಿಂದೂ ದೇವತೆಗಳು ಆಕ್ರಮಿಸಿಕೊಂಡುಬಿಟ್ಟಿದ್ದಾರೆ.

ಭಾಷೆಗೆ ತಕ್ಕಂತೆ ಜನರನ್ನು ಒಟ್ಟುಗೂಡಿಸಿ ಒಳಗೆ ಕರೆತಂದ ಗೈಡ್ ಗಳು ಬ್ರಹ್ಮ, ವಿಷ್ಣು ಮಹೇಶ್ವರರ ಕಥೆಗಳನ್ನು ಹೇಳುತ್ತ ಪಂಚಭೂತಗಳ ಸತ್ಯ ದರ್ಶನ ಮಾಡಿಸುವ ಪ್ರಯತ್ನ ಮಾಡುತ್ತಾರೆ. ಇವರ ಮಾತುಗಳನ್ನು ಕೇಳಿಸಿಕೊಂಡರೂ ಕೇಳಿಸಿಕೊಳ್ಳದಂತೆ ಕಲೆಯನ್ನು ಸವಿಯುತ್ತಾ, ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ ಪ್ರವಾಸಿಗರು. ಒಂದು ಅದ್ಭುತವಾದ ಮರದ ಕೆತ್ತನೆಯನ್ನು ಕಲೆಯಲ್ಲಿ ಅನಾವರಣ ಮಾಡಿದ್ದಾರೆ ವಿಶ್ವದಾದ್ಯಂತ ಬಂದ ಪಂಚಾಳರು.

ಭಾರತದಲ್ಲಿ ನಾವು ಕಲ್ಲುಗಳಲ್ಲಿ ಕಲೆಯನ್ನು ಬಿಡಿಸಿದರೆ, ಇವರು ಕಂದು-ಕೆಂಪು ಮಿಶ್ರಿತ ಸಾಗುವಾನಿ, ಮಹಾಗನಿ, ಮತ್ತು ಸ್ಥಳೀಯ ಮೈಂಡಿಂಗ್, ಮೈಪಂಚೆಟ್ ಎಂಬ ಹೆಸರಿನ  ಮರದ ದಿಮ್ಮಿಗಳನ್ನು ಉಪಯೋಗಿಸಿ ಕಲಾಗುಚ್ಛವನ್ನು ಪ್ರವಾಸಿಗನ ಕೈಗಿಡುತ್ತಾರೆ. ಸುಮಾರು ನಾಲ್ವತ್ತು ವರ್ಷಗಳಿಂದ ಕೆತ್ತನೆ ನಡೆಯುತ್ತಿದೆಯಂತೆ. ಪಂಚಭೂತಗಳ ದೇವತೆಗಳ ಕೃಪಾಕಟಾಕ್ಷದಿಂದ ಕೆಲವು ಕಲಾಕೃತಿಗಳು ಬಣ್ಣ ಕಳೆದುಕೊಳ್ಳುತ್ತಲಿವೆ. ಮತ್ತು ತಲೆ ಮೇಲೆ ಬೀಳುತ್ತವೆ ಎನ್ನುವ ಭಯವನ್ನು ಹುಟ್ಟಿಸುತ್ತವೆ. ಅವುಗಳ ದುರಸ್ತಿ ಕಾರ್ಯದೊಂದಿಗೆ ಹೊಸ ಹೊಸ  ವಿನ್ಯಾಸಗಳು ಜೋಡಣೆಯಾಗುತ್ತಲೇ ಇವೆ.

ಶಿವನ ಇನ್ನೊಂದು ಹೆಸರಿನ ಈಶಾನ್ಯನು ನಾಲ್ಕು ದಿಕ್ಕುಗಳನ್ನು ನೋಡುವಂತೆ ಇವರೂ ಸಹ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಹಜಾರಗಳನ್ನು ಮಾಡಿ ಶಿವನ ಪರಿವಾರವನ್ನು ಸೃಷ್ಟಿಸಿದ್ದಾರೆ. ಉತ್ತರದಲ್ಲಿ ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಹಿಂದೂ ದೇವರ ಮೂರ್ತಿಗಳನ್ನು ಸ್ಥಾಪಿಸಿದರೆ, ದಕ್ಷಿಣದಲ್ಲಿ ಪಂಚಭೂತಗಳ ದೇವತೆಗಳನ್ನು ಚಿತ್ರಿಸುತ್ತಾರೆ. ಪೂರ್ವದಿಕ್ಕಿಗೆ ಲೌಕಿಕ ಜಗತ್ತಿಗೆ ಮರಳುತ್ತ ಕೌಟುಂಬಿಕತೆಯನ್ನು ಕಟ್ಟಿಕೊಡುತ್ತಾರೆ. ಇನ್ನೊಂದು ಬದಿಯಲ್ಲಿ ಎಲ್ಲರ ಅಧಿಪತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಚಿತ್ರಿಸಿ, ಪ್ರವಾಸಿಗರನ್ನು ವಿಸ್ಮಯಗೊಳಿಸುತ್ತಾರೆ. 

ಇವರು ಏನೇ ಹೇಳಿದರೂ ಒಟ್ಟಾರೆಯಾಗಿ ಅದ್ಭುತವಾದ ಮರದ ಕೆತ್ತನೆಯ ಕಲೆ ಬಿಡಿಸಿ ಮೂರ್ತಿಗಳನ್ನು ಕೆತ್ತಿ ಅವುಗಳ ಸೌಂದರ್ಯಕ್ಕೆ ಚ್ಯುತಿ ಬರದಂತೆ ಮಳೆಗಳಿಲ್ಲದೆ ಜೋಡಿಸಿದ ರೀತಿ ನೋಡುಗರನ್ನು ವಿಸ್ಮಯಗೊಳಿಸುತ್ತದೆ.

ಇವರು ಹಿಂದೂ ಫ್ಯಾಂಟಸಿಯನ್ನು ಚಿತ್ರಿಸುತ್ತಾರೋ ಅಥವಾ ಹಿಂದೂ ಧರ್ಮದ ದೇವತೆಗಳನ್ನು ಪ್ರದರ್ಶಿಸಿ ವ್ಯಾಪಾರ ಮಾಡುತ್ತಾರೋ ತಿಳಿಯದು. ಒಂದಂತು ಸತ್ಯ ಪ್ರವಾಸಿಗನನ್ನು  ಫ್ಯಾಂಟಸಿ ಲೋಕದಲ್ಲಿ ತಳ್ಳಿ  ೬-೭ ತಾಸುಗಳನ್ನು ಕಳೆಯಲು ಸಹಾಯ ಮಾಡುವುದಂತೂ ಗ್ಯಾರಂಟಿ.

ಮೂಲ ಕಟ್ಟಡದ ನೂರು ಮೀಟರ್ ಅಂತರದಲ್ಲಿ ಸಮುದ್ರದ ಅಂಚಿನಲ್ಲಿ ಇನ್ನೊಂದು ಸುಂದರವಾದ ಚಿಕ್ಕ ಆಲಯವಿದೆ. ಅಲ್ಲಿ ಕುಳಿತು ಸಮುದ್ರದ ಅಲೆಗಳನ್ನು ಎಣಿಸಬಹುದು. ಮೂಲ ಕಟ್ಟಡದ ಎದುರಿನಲ್ಲಿ ಬಾಹುಬಲಿ ಖ್ಯಾತಿಯ ನ್ಯಾಯ ಗಂಟೆಯಿದೆ. ಅದೆ ಖ್ಯಾತಿಯ ಬೃಹತ್ ನಗಾರಿಯೊಂದು ವಿಶಿಷ್ಟ ಶಬ್ದದ ತರಂಗಗಳನ್ನು ತೇಲಿಸಿ ಕಿವಿಗಳಿಗೆ  ವಿಶಿಷ್ಟ ಅನುಭವ ನೀಡುತ್ತದೆ. ಇವೆಲ್ಲವೂ ಈ ಸ್ಥಳಕ್ಕೆ ಇನ್ನೊಂದಿಷ್ಟು ಮೆರಗು ಹಾಗೂ ತೂಕವನ್ನು ಒದಗಿಸುತ್ತವೆ.

– ಜಿ ಬಿ ಪಾಟೀಲ್, ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply