ಉರಿಗೌಡ, ನಂಜೇಗೌಡ ಮತ್ತು ಟಿಪ್ಪೂ ಸುಲ್ತಾನ್:
ಕರ್ನಾಟಕದ ಒಕ್ಕಲಿಗರ ಮನ ಗೆದ್ದರೆ ಬಿಜೆಪಿಗೆ ವಿಧಾನ ಸಭೆಯಲ್ಲಿ ನಿಚ್ಚಳ ಬಹುಮತ ದೊರಕುವುದು ಬಹಳ ಸುಲಭ. ಇದಕ್ಕಾಗಿ ಹಿಂದೆ, ಯಡಿಯೂರಪ್ಪ, ಜಗದೀಶ ಶೆಟ್ಟರ್, ಆರ್. ಅಶೋಕ್ ಮುಂತಾದವರು ಒಕ್ಕಲಿಗರಿಗೆ ಆಪ್ತನಾಗಿದ್ದ ಟಿಪ್ಪುವಿನ ಟೊಪ್ಪಿ ಧರಿಸಿ, ಕತ್ತಿ ಹಿಡಿದರು. ಆದರೆ ಒಕ್ಕಲಿಗರು ಈ ನಾಟಕಕ್ಕೆ ಮರುಳಾಗಲಿಲ್ಲ. ಕಾರಣ ಇದೀಗ ಉರಿಗೌಡ, ನಂಜೇ ಗೌಡರ ಕತೆಯನ್ನು ಹರಿಯಬಿಡಲಾಗಿದೆ.
ಮುಸ್ಲಿಂ ದ್ವೇಷಕ್ಕೆ ಪೂರಕವಾದ ಈ ಕಲ್ಪಿತ ಕತೆಗೆ ಒಕ್ಕಲಿಗರು ಬಲಿಯಾದರೆ ಆ ಇಡೀ ಸಮುದಾಯ ನೂರು ವರ್ಷಗಳಷ್ಟು ಹಿಂದಕ್ಕೆ ಸರಿಯುವುದರಲ್ಲಿ ಯಾವ ಅನುಮಾನವೂ ಬೇಡ.
ಟಿಪ್ಪುವಿನ ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳ ಹೆಚ್ಚು ಪ್ರಯೋಜನ ಪಡೆದವರು ಒಕ್ಕಲಿಗರು. ಅದು ರೇಶ್ಮೆ ಉದ್ಯಮ, ನೀರಿನ ಒದಗಣೆ, ಮಾರುಕಟ್ಟೆ ಸ್ಥಾಪನೆ, ರಸ್ತೆಗಳ ನಿರ್ಮಾಣ, ಕೃಷಿಗೆ ಸಾಲ ನೀಡಿಕೆ, ಕಬ್ಬು ಬೆಳೆಗೆ ಪ್ರೋತ್ಸಾಹ, ತೆಂಗು, ವೀಳ್ಯದೆಲೆ ಮತ್ತು ಮಾವಿನ ಕೃಷಿಗೆ ಅಪಾರ ಬೆಂಬಲ, ಕೆರೆಗಳ ನಿರ್ಮಾಣ ಇತ್ಯಾದಿಗಳಿಗೆ ಸಂಬಂಧಿಸಿದೆ.
ʼಕೃಷಿಕರು ನಾಡು ಕಟ್ಟುವ ಸೈನಿಕರುʼ ಎಂದು ಹೇಳುತ್ತಿದ್ದ ಟಿಪ್ಪೂವನ್ನು ದ್ವೇಷಿಸಲು ಒಕ್ಕಲಿಗರಿಗೆ ಕಾರಣಗಳೇ ಇಲ್ಲ. ರೈತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನ ಟಿಪ್ಪೂ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದ್ದ. ಟಿಪ್ಪೂವಿನ ಸೈನ್ಯದಲ್ಲಿ ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದರು.
ಹಳೆ ಮೈಸೂರು ಪ್ರದೇಶದಲ್ಲಿ ಒಕ್ಕಲಿಗರು ಕೃಷಿ ಮಾಡುತ್ತಾರೆ. ಕೃಷಿ ಉತ್ಪನ್ನಗಳನ್ನು ಮುಸ್ಲಿಮ್ ವ್ಯಾಪಾರಿಗಳಿಗೆ ಮಾರುತ್ತಾರೆ. ಈ ಸಂಬಂಧಗಳನ್ನು ಮುರಿದರೆ, ಒಕ್ಕಲಿಗರ ಆರ್ಥಿಕತೆಯೇ ಕುಸಿಯುತ್ತದೆ.
ಟಿಪ್ಪೂವಿನ ಆನಂತರ ಮೈಸೂರು ಪ್ರಾಂತ್ಯವನ್ನಾಳಿದ ಒಡೆಯರುಗಳು, ಅದರಲ್ಲೂ ಮುಖ್ಯವಾಗಿ ನಾಲ್ವಡಿಯವರು ಒಕ್ಕಲಿಗರ ಮತ್ತು ಮುಸ್ಲಿಮರ ಸೌಹಾರ್ದತೆಯನ್ನು ಹೆಚ್ಚಿಸಿದ್ದರಿಂದಾಗಿಯೇ ಅವರಿಗೆ ʼಮಾದರಿ ಮೈಸೂರನ್ನುʼ ಕಟ್ಟಲು ಸಾಧ್ಯವಾಯಿತು. ಒಕ್ಕಲಿಗರೇ ಹೆಚ್ಚಿರುವ ಸುಳ್ಯ ಪರಿಸರದಲ್ಲಿ ಗೌಡರು ಬೆಳೆವ ಅಡಿಕೆಗೆ ಹೆಚ್ಚು ಬೆಲೆ ನೀಡಿ ಖರೀದಿಸುವರು ಮುಸ್ಲಿಮರು.
ಹಳೇ ಮೈಸೂರು ಭಾಗದಿಂದ ಒಕ್ಕಲಿಗರು (ಮುಖ್ಯವಾಗಿ ಗಂಗಡಿಕಾರರು) ಹಾಸನದ ಕೆಂಚಮ್ಮನ ಹೊಸಕೋಟೆ, ಐಗೂರು, ಒಣಗೂರುಗಳತ್ತ ವಲಸೆ ಹೋಗಿ, ಅಲ್ಲಿಂದ ಸುಳ್ಯ ಪರಿಸರದತ್ತ ಚಲಿಸಿ , ಕುಮಾರಧಾರ ನದಿ ದಂಡೆಗಳಲ್ಲಿ ನೆಲೆಸಿದರು.
ಈ ಒಕ್ಕಲಿಗರು, ಟಿಪ್ಪು ಸತ್ತ ಕೇವಲ ೩೦ ವರ್ಷಗಳ ಆನಂತರ ಬ್ರಿಟಿಷರ ವಿರುದ್ಧ ಅತಿ ಮಹತ್ವದ ಹೋರಾಟವನ್ನು ಸಂಘಟಿಸಿದ್ದರು. ನಾಲ್ಕು ವರ್ಷಗಳ ಕಾಲ ನಡೆದ ( ೧೮೩೨-೧೮೩೬) ಈ ಹೋರಾಟದಲ್ಲಿ ಗೌಡರು ಮತ್ತು ಮುಸ್ಲಿಮರು ಜೊತೆಯಾಗಿಯೇ ಇದ್ದು ಕೆಲದಿನಗಳ ಮಟ್ಟಿಗಾದರೂ ಬ್ರಿಟಿಷರನ್ನು ಮಂಗಳೂರು ಪ್ರಾಂತ್ಯದಿಂದ ಹೊರದಬ್ಬುವಲ್ಲಿ ಯಶಸ್ವಿಯಾಗಿದ್ದರು.
ಒಕ್ಕಲಿಗರು ಕೋಮುವಾದಿಗಳಾದರೆ ಅವರ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ ಎಂಬುದು ಒಂದು ವಿಷಯವಾದರೆ, ಅವರು ಬ್ರಿಟಿಷರ ವಿರುದ್ಧ ನಿರ್ಣಾಯಕವಾಗಿ ಹೋರಾಡಿದ್ದರು ಎಂಬುದು ಎರಡನೇ ಅಂಶ.
ಒಕ್ಕಲಿಗರು ಬ್ರಿಟಿಷರ ಪರವಾಗಿದ್ದು ಟಿಪ್ಪೂವಿಗೆ ವಿರುದ್ಧವಾಗಿದ್ದರು ಎಂಬುದನ್ನು ನಂಬಲು ಯಾವುದೇ ಆಧಾರಗಳಿಲ್ಲ. ಕಲ್ಪಿತ ಕತೆಗಳಿಗೆ ಒಂದು ಸಮುದಾಯವನ್ನು ನಾಶಮಾಡಲೂ ಸಾಧ್ಯವಿಲ್ಲ.
– ಪ್ರೊ.ಪುರುಷೋತ್ತಮ ಬಿಳಿಮಲೆ, ಹಿರಿಯ ಜಾನಪದ ವಿದ್ವಾಂಸರು




