ಬಿಜೆಪಿಗರೇ ಪಾಕ್ – ಭಾರತ ನಡುವಿನ ಪಂದ್ಯ ರದ್ದು ಮಾಡಿಸಲು ಹೇಳುವಿರಾ?

8 months ago

ಎಲ್ಲದಕ್ಕೂ ಆರ್ಭಟಿಸುವ ಬಿಜೆಪಿಯವರಿಗೆ ಅಮಿತ್ ಶಾ ಸುಪುತ್ರನಿಗೆ ಹೇಳಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಪಂದ್ಯವನ್ನು ರದ್ದು ಮಾಡಿಸಲು ಬಾಯಿಗೆ ಏನಾಗಿದೆ?

ಬಿಜೆಪಿಯ ನಾಯಕರುಗಳು ಸದಾ ತಮ್ಮ ಜೊತೆಯಲ್ಲಿ ಬೆಂಕಿ ಪಟ್ಟಣವನ್ನು ಇಟ್ಟುಕೊಂಡೆ ಓಡಾಡುವಂತೆ ವರ್ತಿಸುತ್ತಿದ್ದಾರೆ. ಪ್ರತಿದಿನವೂ ಇವರಿಗೆ ಸಾಬರು ಮತ್ತು ಪಾಕಿಸ್ತಾನ ಈ ಪದಗಳನ್ನು ಆಡದಿದ್ದರೆ ನಿದ್ದೆಯೇ ಬರುವುದಿಲ್ಲ. ಇವರ ಆರ್ಭಟ ಮತ್ತು ಅರಚಾಟ ಎಲ್ಲವೂ ಇಂತಹ ವಿಚಾರಗಳಿಗೆ ಮಾತ್ರವೇ ಸೀಮಿತ.

ಬಾಯಿ ತೆಗೆದರೆ ಕೋಮು ಸಂಘರ್ಷದ ಮಾತುಗಳನ್ನಾಡುವ, ಬಿಜೆಪಿಯ ಮಹಾನ್ ನಾಯಕರುಗಳಿಗೆ ಪಾಕಿಸ್ತಾನ ಮತ್ತು ಭಾರತದ ನಡುವೆ ಏಷ್ಯಾ ಕಪ್ ನಲ್ಲಿ ನಡೆಯುತ್ತಿರುವ ಪಂದ್ಯವನ್ನ ನಿಲ್ಲಿಸಲು ಇವರ ಸರ್ವೋಚ್ಛ ನಾಯಕರಾದ ಅಮಿತ್ ಶಾ ಅವರ ಸುಪುತ್ರ ಹಾಗೂ ಕ್ರಿಕೆಟ್ ಮಂಡಳಿಯ ನೇತಾರ ಇವರಿಗೆ ಹೇಳಿ ನಿಲ್ಲಿಸಲು ಆಗುತ್ತಿಲ್ಲ. ಕಡೆಯ ಪಕ್ಷ ಈ ಪಂದ್ಯವನ್ನು ಆಡಬೇಡಿ, ಎಂದು ಹೇಳಲು ಧೈರ್ಯವೂ ಇಲ್ಲ.

ಬಾಯಿ ಬಿಟ್ಟರೆ ಪಾಕಿಸ್ತಾನದ ವಿರುದ್ಧ ಮಾತನಾಡುವ ನಿಮಗೆ ಕ್ರಿಕೆಟ್ ಪಂದ್ಯ ಆಡುವುದು ಸರಿಯೇ, ನಮ್ಮ ಮುಗ್ಧ ಜನರು ಮತ್ತು ನಾಗರಿಕರು ಹಾಗೂ ನಮ್ಮ ಸೈನಿಕರ ಸಾವುಗಳಿಗೆ ಬೆಲೆಯೇ ಇಲ್ಲವೇ?

ಬಿಜೆಪಿಯವರು ಏನು ಮಾಡಿದರು ಸರಿಯೇ, ಬೇರೆಯವರು ಮಾಡಿದರೆ ಮಾತ್ರ ತಪ್ಪು. 1971ರ ಪಾಕಿಸ್ತಾನ ಮತ್ತು ಭಾರತದ ನಡುವಿನ ಯುದ್ಧದ ನಂತರ ಆ ದೇಶದೊಂದಿಗೆ ನಮ್ಮ ದೇಶ ಎಲ್ಲ ರೀತಿಯ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಬಂಧಗಳನ್ನು ಕಡಿದುಕೊಂಡಿತ್ತು. ಆದರೆ 1977ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಶ್ರೀ ಮುರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದ ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು ಮತ್ತೆ ಎರಡು ದೇಶಗಳ ನಡುವಿನ ಸಂಬಂಧವನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕ್ರಿಕೆಟ್ ಪಂದ್ಯಗಳನ್ನ ಪರಸ್ಪರ ಆರಂಭಿಸಿದರು.

ತದನಂತರ ಇವರು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಎರಡು ದೇಶಗಳ ಬಾಂಧವ್ಯ ಸುಧಾರಣೆಯ ಹಿನ್ನೆಲೆಯಲ್ಲಿ ಲಾಹೋರಿಗೆ ಬಸ್ ಬಿಟ್ಟರು. ಮುಂದುವರೆದು ಹಾಲಿ ಪ್ರಧಾನಿಗಳು ಪಾಕಿಸ್ತಾನದ ಪ್ರಧಾನಿಯವರ ಕುಟುಂಬದ ವೈಯಕ್ತಿಕ ಕಾರ್ಯಕ್ರಮದಲ್ಲೂ ಪಾಲಗೊಂಡಿದ್ದರು.

ಇವೆಲ್ಲ ಸತ್ಯವನ್ನು ಬಿಟ್ಟು ಎಲ್ಲದಕ್ಕೂ ಕಾಂಗ್ರೆಸ್ ಕಾರಣ, ಕಾಂಗ್ರೆಸ್ಸಿಗರು ಪಾಕಿಸ್ತಾನದ ಪರ ಎಂಬ ರೀತಿಯಲ್ಲಿ ಸದಾ ಸುದ್ದಿಯನ್ನು ಮಾಡುವ ಸಲುವಾಗಿಯೇ ಮಾತನಾಡುವ ಬಿಜೆಪಿಯ ನಾಯಕರಿಗೆ ನಿಜ ಕ್ಕೂ ತಾಕತ್ತು ಅನ್ನುವುದು ಇದ್ದರೆ ಕೂಡಲೇ ಅಮಿತ್ ಶಾ ರವರ ಸುಪುತ್ರರಿಗೆ ಹೇಳಿ ಭಾರತ ಮತ್ತು ನಮ್ಮ ಶತ್ರು ರಾಷ್ಟ್ರವಾಗಿರುವ ಪಾಕಿಸ್ತಾನದ ಜೊತೆಗೇನೆ ಕ್ರೀಡಾ ಸಂಬಂಧವನ್ನು ಕಳೆದುಕೊಳ್ಳುವಂತೆ ಒತ್ತಡವನ್ನು ಹೇರಿ, ಜೊತೆಗೆ ಈ ವಿಚಾರದಲ್ಲಿ ಮೌನ ವಹಿಸಿರುವ ನಮ್ಮ ಬಿಜೆಪಿ ಕೃಪಾಪೋಷಿತ ಸುದ್ದಿ ಮಾಧ್ಯಮದ ಮೇಧಾವಿಗಳು ತಮ್ಮ ಬಾಯಿ ತೆಗೆದು ತಾವು ತಮ್ಮ ಧ್ವನಿಯನ್ನು ಈ ನಿಟ್ಟಿನಲ್ಲಿ ಸೇರಿಸಿ.

ಎಲ್ಲ ವಿಚಾರದಲ್ಲೂ ಕೋಮು ಭಾವನೆಯನ್ನು ಕೆದಕುವ ಮತ್ತು ಅದಕ್ಕೆ ಧರ್ಮದ ಬಣ್ಣವನ್ನು ಹಚ್ಚುವ ಇಂತಹ ಮನಸ್ಥಿತಿಯ ಜನಗಳ ಮಾತುಗಳಿಗೆ ಮನ್ನಣೆ ನೀಡುವಂತಹ ನಮ್ಮ ಬಿಜೆಪಿ ಕೃಪಾಪೋಷಿತ ಸುದ್ದಿ ಮಾಧ್ಯಮಗಳ ಪ್ರಮುಖರಿಗೆ ಪತ್ರಿಕಾ ಧರ್ಮದ ಕೊರತೆ ಎದ್ದು ಕಾಣುತ್ತದೆ.

ಧರ್ಮಸ್ಥಳದ ವಿಚಾರದಲ್ಲಿ ರಾಜ್ಯ ಸರ್ಕಾರ ಎಸ್ಐಟಿ ರಚನೆಯನ್ನು ಮಾಡಿದಾಗ ಸ್ವಾಗತಿಸಿದಂತಹ ಬಿಜೆಪಿಯವರು, ತನಿಖೆ ಒಂದು ಹಂತಕ್ಕೆ ಬಂದು ಅಪರಾಧಿಗಳೆಲ್ಲರೂ ಬಹುತೇಕ ಇವರ ಬೆಂಬಲಿಗ ಸಂಘಟನೆಯ ವ್ಯಕ್ತಿಗಳೇ ಎನ್ನುವ ಸೂಚನೆ ದೊರೆಯುತ್ತಿದ್ದಂತೆ,, ಈ ಸಂಚಿನ ರೂವಾರಿಗಳೆಲ್ಲ ಇವರ ಸಿದ್ಧಾಂತವನ್ನು ಒಪ್ಪಿರುವ ಅಂಗ ಸಂಸ್ಥೆವರೇ ಎಂದು ಅರಿವಾಗುತ್ತಿದ್ದಂತೆ, ಎಸ್ಐಟಿ ವಿಚಾರದಲ್ಲಿ ಅಪಸ್ವರವನ್ನು ತೆಗೆಯುತ್ತ ಇದನ್ನು ಎನ್ ಐ ಎಗೆ ಒಪ್ಪಿಸಬೇಕೆಂದು ಒತ್ತಡ ಹಾಕುತ್ತಿದ್ದಾರೆ. ಎಲ್ಲ ಪ್ರಕರಣವನ್ನು ಸಿಬಿಐಗೆ ಇಲ್ಲವೇ ಎನ್ಐಗೆ ಕೊಡುವುದಾದರೆ ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಬೇಡ ನಮ್ಮ ಐಪಿಎಸ್ ಅಧಿಕಾರಿಗಳು ಬೇಕಿಲ್ಲ.

ದೇಶದಲ್ಲಿ ನಮ್ಮ ರಾಜ್ಯದಲ್ಲಿರುವಷ್ಟು ದಕ್ಷ ಮತ್ತು ಚುರುಕುತನದ ತನಿಖೆಯ ಅನುಭವವುಳ್ಳ ಅಧಿಕಾರಿಗಳು ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಹಲವಾರು ಪ್ರಕರಣಗಳಲ್ಲಿ ನಮ್ಮ ಅಧಿಕಾರಿಗಳು ಆರೋಪವನ್ನು ಸಾಬೀತುಪಡಿಸುವಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಹಲವಾರು ನ್ಯಾಯಾಲಯಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹೀಗಿದ್ದರೂ ಎಸ್ಐಟಿ ವಿಚಾರದಲ್ಲಿ ಅನಾವಶ್ಯಕವಾದಂತಹ ಅಪಸ್ವರವನ್ನೇಕೆ ತೆಗೆಯುತ್ತೀರಿ? ತನಿಖೆ ಪೂರ್ಣವಾಗಿ ನಡೆಯಲಿ, ಸತ್ಯ ಹೊರಬರಲಿ, ಇದರಲ್ಲಿ ಯಾರ ಪಾತ್ರ ಇದೆ, ಸಂಚಿನ ರೂವಾರಿಗಳು ಯಾವ ಜಿಲ್ಲೆಯವರು ಎನ್ನುವುದು ತಿಳಿಯಲಿ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply