ಕರ್ನಾಟಕ ಬಂದ್‍ಗೆ ದಕ್ಷಿಣ ಕರ್ನಾಟಕದಲ್ಲಿ ವ್ಯಾಪಕ ಬೆಂಬಲ, ಉತ್ತರ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ

3 years ago

#Widespreadsupport #SouthKarnataka #NorthKarnataka #cauvery

ಬೆಂಗಳೂರು: ರಾಜ್ಯದಲ್ಲಿ ತೀವ್ರತರವಾದ ಬರಗಾಲ ಆವರಿಸಿದ್ದರೂ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಲಾಗುತ್ತಿದೆ ಎಂದು ಆರೋಪಿಸಿ, ಕನ್ನಡ ಒಕ್ಕೂಟ ಹಾಗೂ ರೈತಪರ ಸಂಘಟನೆಗಳು ಕರೆ ಕೊಟ್ಟಿದ್ದ ಅಖಂಡ ಕರ್ನಾಟಕ ಬಂದ್‍ಗೆ ದಕ್ಷಿಣ ಕರ್ನಾಟಕದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾದರೆ, ಉತ್ತರ ಕರ್ನಾಟಕದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ನಿಷೇದಾಜ್ಣೆಯನ್ನು ಲೆಕ್ಜಿಸದೆ ಪ್ರತಿಭಟನೆ ನಡೆಸಿದ ಹೋರಾಟಗಾರರು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದರು.

ಬಂದ್ ಕರೆಯ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದರೂ,ಕೆಲವೆಡೆ ದುಷ್ಕರ್ಮಿಗಳು ಬಸ್ಸುಗಳಿಗೆ ಕಲ್ಲುತೂರಿದ,ರಸ್ತೆ ಸಂಚಾರಕ್ಕೆ ಅಡ್ಡಿ ಪಡಿಸಿದ ಹಾಗೂ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲು ಯತ್ನಿಸಿದ ಸಣ್ಣ ಪುಟ್ಟ ಘಟನೆ ಹೊರತುಪಡಿಸಿ ಇಡಿ ಬಂದ್ ಶಾಂತಿಯುತವಾಗಿತ್ತು.

ಬಂದ್‍ಗೆ ಬೆಂಗಳೂರು, ಹಳೆ ಮೈಸೂರು ಭಾಗದ, ತುಮಕೂರು, ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿತ್ತು. ಆದರೆ ಮಧ್ಯ ಕರ್ನಾಟಕದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಕರಾವಳಿ ಜಿಲ್ಲೆಗಳಾದ ಉಡುಪಿ, ಮಗಳೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿತು.

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಬಂದ್‍ಗೆ ನೈತಿಕ ಬೆಂಬಲ ಕೊಡಲಾಗಿತ್ತಾದರೂ ಜನಜೀವನ ಎಂದಿನಂತೆ ಸಹಜ ಸ್ಥಿತಿಯಲ್ಲೇ ಇತ್ತು.

ಆಸ್ಪತ್ರೆ, ಔಷಧ ಅಂಗಡಿಗಳು, ಹಾಲಿನ ಬೂತ್, ಅಂಬ್ಯುಲೆನ್ಸ್, ಪೆಟ್ರೋಲ್ ಬಂಕ್, ಗ್ಯಾಸ್ ಅಂಗಡಿ ಮತ್ತಿತರ ಅಗತ್ಯ ಸೇವೆಯಲ್ಲಿ ಯಾವುದೇ ವ್ಯತ್ಯಯ ಕಂಡುಬರಲಿಲ್ಲ. ಉಳಿದಂತೆ ಆಟೋ, ಕ್ಯಾಬ್, ಸರಕು ವಾಹನಗಳು, ಖಾಸಗಿ ಬಸ್‍ಗಳು, ಥಿಯೇಟರ್, ಮಾಲ್‍ಗಳು, ಸೂಪರ್ ಮಾರ್ಕೆಟ್, ಬೀದಿ ಬದಿ ಅಂಗಡಿಗಳು, ಆಭರಣ ಅಂಗಡಿಗಳು, ಕೈಗಾರಿಕೆಗಳು ಮತ್ತಿತರ ಸಂಘಟನೆಗಳು ಬೆಂಬಲ ಕೊಟ್ಟಿದ್ದವು. ಕೆಲವು ಭಾಗಗಳಲ್ಲಿ ಹೊಟೇಲ್‍ಗಳು ಬೆಳಗಿನಿಂದಲೇ ಮುಚ್ಚಿದ್ದವು. ಉಳಿದ ಕಡೆ ಎಂದಿನಂತೆ ಕಾರ್ಯನಿರ್ವಹಿಸಿದ ದೃಶ್ಯ ಕಂಡು ಬಂದಿತು

ಬೆಂಗಳೂರು ಸ್ತಬ್ಧ: ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಂದ್‍ಗೆ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಆಟೋ, ಟ್ಯಾಕ್ಸಿ, ಓಲಾ, ಊಬರ್ ಸಂಚಾರ ವಿರಳವಾಗಿತ್ತು. ಸದಾ ಜನ ಸಂದಣಿಯಿಂದ ಕೂಡಿದ್ದ ಕೆಂಪೇಗೌಡ ಬಸ್ ನಿಲ್ದಾಣ, ಕೆಆರ್ ಮಾರುಕಟ್ಟೆ, ಶಾಂತಿ ನಗರ ಬಸ್ ನಿಲ್ದಾಣ ಮತ್ತಿತರ ಕಡೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ತಮಿಳುನಾಡಿನ ಅತ್ತಿಬೆಲೆ ಮತ್ತು ಹೊಸೂರಿನಿಂದ ಬರುತ್ತಿದ್ದ ಸುಮಾರು 50ಕ್ಕೂ ಹೆಚ್ಚು ಬಸ್‍ಗಳನ್ನು ಮಾರ್ಗಮಧ್ಯೆ ತಡೆ ಹಿಡಿಯಲಾಯಿತು.

ಹೈದರಾಬಾದ್‍ನಿಂದ ಬೆಂಗಳೂರಿಗೆ ಬರುತ್ತಿದ್ದ ಕೆಲ ಬಸ್‍ಗಳನ್ನು ದೊಡ್ಡಬಳ್ಳಾಪುರ, ಮಹಾರಾಷ್ಟ್ರದಿಂದ ಆಗಮಿಸುತ್ತಿದ್ದ ಬಸ್‍ಗಳನ್ನು ಬೆಳಗಾವಿ ಬಳಿ, ಕೆರಳದಿಂದ ಬರುತ್ತಿದ್ದ ವಾಹನಗಳನ್ನು ಗುಂಡ್ಲುಪೇಟೆ ಹಾಗೂ ತಮಿಳುನಾಡಿನಿಂದ ಬರುತ್ತಿದ್ದ ವಾಹನಗಳನ್ನು ಅತ್ತಿಬೆಲೆ ಮತ್ತು ಹೊಸೂರು ಚೆಕ್ ಪೋಸ್ಟ್ ಬಳಿ ತಡೆ ಹಿಡಿಯಲಾಯಿತು.

ಪುರಭವನದಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ನಡೆಸಲು ಮುಂದಾದ ಕನ್ನಡ ಚಳುವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ಶಿವರಾಮೇಗೌಡ ಸೇರಿದಂತೆ ಹಲವರು ಪ್ರತಿಭಟನೆ ನಡೆಸಲು ಮುಂದಾಗುತ್ತಿದ್ದಂತೆ ಪೊಲೀಸರು ಮಾರ್ಗಮಧ್ಯೆ ತಡೆದು ಅವರನ್ನು ವಶಕ್ಕೆ ಪಡೆದುಕೊಂಡರು.

ಬಂದ್​ ಹಿನ್ನಲೆಯಲ್ಲಿ ‌ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ರೌಡಿಗಳು ಸೇರಿ 150 ಮಂದಿಯನ್ನು ನಗರ ಪೊಲೀಸರು ವಶಕ್ಕೆ ಪಡೆದುಕೊಂಡು ಭದ್ರತೆಯನ್ನು ಬಿಗಿಗೊಳಿಸಿತ್ತು.

ಕಳೆದ 2016ರಲ್ಲಿ ಕಾವೇರಿ ನೀರಿಗಾಗಿ ನೀಡಿದ್ದ ಬಂದ್​ ವೇಳೆ ಗಲಾಟೆ ಮಾಡಿದ್ದವರು ಹಾಗೂ ಕೆಲ ರೌಡಿಶೀಟರ್​ಗಳ ಸೇರಿ 150 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. 2016ರಲ್ಲಿ ಕಾವೇರಿ ನೀರಿಗಾಗಿ ಕರೆ ನೀಡಿದ್ದ ಬಂದ್​​ ವೇಳೆ ಕಲ್ಲು ತೂರಿ, ಬೆಂಕಿ ಹಚ್ಚಿ ಗಲಾಟೆ ಮಾಡಿದ್ದರು. ಹೀಗಾಗಿ ಇಂದಿನ ಬಂದ್​​ ವೇಳೆ ಆ ರೀತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಿನ್ನೆ ರಾತ್ರಿ ಹಲವು ರೌಡಿಶೀಟರ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

ಚಿತ್ರರಂಗದ ಬೆಂಬಲ: ಕನ್ನಡ ಚಿತ್ರರಂಗದ ದಿಗ್ಗಜರು ಕೂಡ ಪ್ರತಿಭಟನೆ ನಡೆಸುವ ಮೂಲಕ ಹೋರಾಟಗಾರರಿಗೆ ನೈತಿಕ ಬೆಂಬಲ ಸೂಚಿಸಿದರು. ನಗರದ ಗುರುರಾಜ ಕಲ್ಯಾಣ ಮಂಟಪದ ಬಳಿ ನಡೆದ ಪ್ರತಿಭಟನೆಯಲ್ಲಿ ನಟರಾದ ಶಿವರಾಜ್‍ಕುಮಾರ್, ದರ್ಶನ್, ಶ್ರೀಮುರುಳಿ, ವಿಜಯರಾಘವೇಂದ್ರ, ಉಪೇಂದ್ರ, ಉಮಾಶ್ರೀ, ಶೃತಿ, ದುನಿಯಾ ವಿಜಿ, ಸಂಗೀತ ನಿರ್ದೇಶಕ ಹಂಸಲೇಖ ಸೇರಿದಂತೆ ಹಲವರು ಭಾಗಿಯಾಗಿ ಕಾವೇರಿ ಹೋರಾಟಕ್ಕೆ ಚಿತ್ರರಂಗ ಯಾವಾಗಲೂ ಸಿದ್ದವಾಗಿರುತ್ತದೆ ಎಂಬ ಅಭಯ ನೀಡಿದರು.

ವಿಮಾನ ನಿಲ್ದಾಣ ಮುತ್ತಿಗೆ ಯತ್ನ: ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದರಾದರೂ ಪೊಲೀಸರು ತಕ್ಷಣವೇ ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಮಾನ ನಿಲ್ದಾಣದ ಪ್ರಯಾಣಿಕರ ಆಗಮನದ ಗೇಟ್ ಬಳಿ ಕನ್ನಡದ ಬಾವುಟಗಳನ್ನು ಹಿಡಿದು ಕೇಂದ್ರ ಸರ್ಕಾರ ಮತ್ತು ತಮಿಳುನಾಡಿನ ವಿರುದ್ಧ ಘೋಷಣೆಗಳನ್ನು ಕೂಗಿದರು.

ಒಟ್ಟಾರೆ ಬಂದ್ ಶಾಂತಿಯುತವಾಗಿ, ಯಶಸ್ವಿಯಾಗಿ ಜರುಗಿದ್ದು, ಕಾವೇರಿಗಾಗಿ ನಾಡಿನ ವಿವಿಧ ಸಂಘಟನೆಗಳು ಒಗ್ಗಟಿನ ಹೋರಾಟವಾಗಿ ನಡೆಸುವ ಮೂಲಕ ಅನ್ಯಾಯವನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ನೀಡಿದವು.

Leave a Reply