ಮೊಸಳೆ ಕಣ್ಣೀರು: ಒಂದು apolitical ಬರಹ
ಯಾರಾದರು ವ್ಯಕ್ತಿ ನಾಟಕೀಯ ಮತ್ತು ಕಪಟ ತುಂಬಿದ ಶೋಕ, ಸಂತಾಪವನ್ನು ನಟಿಸಿದಾಗ ಸಾಮಾನ್ಯವಾಗಿ ನಾವು ಅದನ್ನು ‘ಮೊಸಳೆ ಕಣ್ಣೀರು’ ಎಂದು ಲೇವಡಿ ಮಾಡುತ್ತೇವೆ. ಅಷ್ಟರಮಟ್ಟಿಗೆ ಇದು ನಾಣ್ಣುಡಿಯಂತೆ ನಮ್ಮ ನಡುವೆ ಚಾಲ್ತಿಯಲ್ಲಿದೆ. ಅಷ್ಟಕ್ಕೂ ಇಂತದ್ದೊಂದು ನಾಣ್ಣುಡಿ ಹುಟ್ಟಿಕೊಂಡದ್ದು ಹೇಗೆ?
ಸಾಹಿತ್ಯಿಕವಾಗಿ ಇದರ ಮೂಲವನ್ನು ಹುಡುಕುತ್ತಾ ಹೋದಾಗ ೧೪೦೦ರಲ್ಲಿ ಪ್ರಕಟವಾದ “The Voyage and Travel of Sir John Mandeville,” ಎಂಬ ಕೃತಿಯಲ್ಲಿ ಈ ಬಗೆಯ ಉಲ್ಲೇಖ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತದೆ. ಅದರ ಒಂದು ಪ್ಯಾರಾದಲ್ಲಿ ಹೀಗೊಂದು ಸಾಲು ಬರುತ್ತದೆ, “….ಆ ಪ್ರದೇಶದಲ್ಲಿ ಸರ್ವೇಸಾಧಾರಣ ಎನ್ನುವಷ್ಟರ ಮಟ್ಟಿಗೆ ಮೊಸಳೆಗಳು ದೊಡ್ಡ ಸಂಖ್ಯೆಯಲ್ಲಿದ್ದವು. ಈ ಸರೀಸೃಪಗಳು ಮನುಷ್ಯರನ್ನೂ ಕೊಂದು ತಿನ್ನುತ್ತಿದ್ದವು. ಹಾಗೆ ತಿನ್ನುವಾಗ ಕಣ್ಣೀರು ಸುರಿಸುತ್ತಿದ್ದವು…”.
ಹೌದು, ಕೇವಲ ಮನುಷ್ಯನನ್ನಷ್ಟೇ ಅಲ್ಲ, ಯಾವುದೇ ಪ್ರಾಣಿಯನ್ನು ತಾನು ಬಲಿಹಾಕಿ ತಿನ್ನುವಾಗ ಮೊಸಳೆಗಳು ತಮ್ಮ ಕಣ್ಣಿಂದ ಧಾರಾಕಾರ ಕಣ್ಣೀರು ಸುರಿಸುತ್ತವೆ. ತನ್ನಿಂದ ಹತನಾದ ಆ ದೌರ್ಭಾಗ್ಯ ಪ್ರಾಣಿಯ ಸಾವಿಗೆ ತಿನ್ನುತ್ತಿರುವ ಮೊಸಳೆಯೇ ಶೋಕ ವ್ಯಕ್ತಪಡಿಸಿ ಅಳುತ್ತಿವೆಯೇನೊ ಎಂಬಂತೆ ಕಾಣುವುದರಿಂದ, ಮೊಸಳೆ ಕಣ್ಣೀರು ಎಂಬ ಕಪಟ ಶೋಕದ ನಾಣ್ಣುಡಿ ಜನ್ಮ ತಳೆದಿದೆ. ಹಾಗಾದರೆ ಮೊಸಳೆಗಳು ನಿಜಕ್ಕೂ ಅಳುತ್ತವೆಯೇ?
ಈ ಕುರಿತು ತಲೆಕೆಡಿಸಿಕೊಂಡ ಫ್ಲೋರಿಡಾ ಯೂನಿವರ್ಸಿಟಿಯ ಕೆಂಟ್ ವ್ಲೀಟ್ ಎಂಬ ಪ್ರಾಣಿಶಾಸ್ತ್ರಜ್ಞ ಪ್ರಯೋಗವೊಂದಕ್ಕೆ ಮುಂದಾದ. ಅವನು ಹೊರಹಾಕಿದ ಸತ್ಯವೇನೆಂದರೆ, ಮೊಸಳೆಗಳು ತಾವು ಅಹಾರ ತಿನ್ನುವಾಗ ನಿಜಕ್ಕೂ ಕಣ್ಣೀರು ಸುರಿಸುತ್ತವಂತೆ! ಆದರೆ, ತಾವು ತಿನ್ನುತ್ತಿರುವ ಪ್ರಾಣಿಯ ಆತ್ಮಕ್ಕೆ ಶೋಕ ಸಲ್ಲಿಸುವುದಕ್ಕಲ್ಲ, ಅವುಗಳ ದೇಹದೊಳಗಿರುವ ಅಂಗರಚನೆಯ ಕಾರಣಕ್ಕೆ.
ನಮಗೆಲ್ಲ ತಿಳಿದಿರುವಂತೆ ಮೊಸಳೆ ನೀರಿನಲ್ಲೆ ಹೆಚ್ಚು ಜೀವಿಸುವ ಪ್ರಾಣಿ. ಅದರಲ್ಲು ಅದರ ಕಣ್ಣುಗಳು ದೇಹದಿಂದ ಮೇಲಕ್ಕೆ ಉಬ್ಬಿಕೊಂಡಿರುತ್ತವೆ. ಯಾವುದೇ ಪ್ರಾಣಿಯಲ್ಲಾಗಲಿ, ಕಣ್ಣಿನ ಆರ್ದ್ರತೆಯನ್ನು ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ನೀರಿನಲ್ಲಿದ್ದಾಗ ಮೊಸಳೆಗೆ ಆ ಸಮಸ್ಯೆ ಇರುವುದಿಲ್ಲ. ಆದರೆ ನೀರಿನಿಂದ ಹೊರಬಂದಾಗ ಕಣ್ಣಿನ ತೇವಾಂಶವನ್ನು ಕಾಪಿಟ್ಟುಕೊಳ್ಳುವ ಸಲುವಾಗಿ ನಮಗಿರುವಂತೆಯೇ ನೀರು ಸ್ರವಿಸುವ ‘ಲ್ಯಾಕ್ರಿಮಲ್ ಗ್ರಂಥಿ’ಗಳು ಅವುಗಳ ಕಣ್ಣಿನಲ್ಲೂ ಇರುತ್ತವೆ.
ಒಂದು ವಿಶೇಷವೆಂದರೆ, ಮೊಸಳೆಯು ತನ್ನ ಭಕ್ಷ್ಯವನ್ನು ಸವಿಯುವಾಗ ಅದರ ದವಡೆಗಳು ಕದಲಾಡುವ ಸಮಯದಲ್ಲೂ ಈ ಗ್ರಂಥಿಗಳ ಮೇಲೆ ಪ್ರಚೋದನೆ ಉಂಟಾಗಿ ಕಣ್ಣೀರು ಹರಿಯಲಾರಂಭಿಸುತ್ತವೆ. ಅಲ್ಲದೇ, ಆಹಾರವನ್ನು ಕಿತ್ತು ತಿನ್ನುವಾಗ ಮೊಸಳೆಗಳು ಒಂದು ಬಗೆಯ ‘ಹಿಸ್ಸ್…..’ ಎಂಬ ಸದ್ದನ್ನು ಹೊರಡಿಸುತ್ತವೆ. ಆಗ ಅದರ ಮೂಗಿನ ಮೂಲಕ ಒಳನುಗ್ಗುವ ಗಾಳಿಯೂ ಸೈನಸ್ ಚೇಂಬರ್ ಗಳ ಮೇಲೆ ಒತ್ತಡ ಹಾಕಿ, ಆ ಒತ್ತಡ ಲ್ಯಾಕ್ರಿಮಲ್ ಗ್ರಂಥಿಯನ್ನು ಪ್ರಚೋದಿಸುವುದರಿಂದ ಕಣ್ಣೀರು ಮತ್ತಷ್ಟೂ ಧಾರಾಕಾರಗೊಳ್ಳುತ್ತವೆ. ಆಗ ಅಕ್ಷರಶಃ ಮೊಸಳೆ ಅಳುತ್ತಿರುವಂತೆಯೇ ಭಾಸವಾಗುತ್ತದೆ. ಅದನ್ನೇ ನಾವು ಮೊಸಳೆ ಕಣ್ಣೀರು ಎಂದು ಕರೀತಿವೆ.
ಆದರೆ ಮನುಷ್ಯ, ತನ್ನ ಲ್ಯಾಕ್ರಿಮಲ್ (ಕಣ್ಣೀರು) ಗ್ರಂಥಿಯನ್ನು ನಿಯಂತ್ರಿಸುವ ಶಕ್ತಿಯನ್ನು ದವಡೆಯಲ್ಲಾಗಲಿ, ಸೈನಸ್ ಚೇಂಬರ್ ಗಳಲ್ಲಾಗಲಿ ಇಟ್ಟುಕೊಳ್ಳದೆ ಡೈರೆಕ್ಟಾಗಿ ಮನಸ್ಸಿನಲ್ಲೇ ಬಚ್ಚಿಟ್ಟುಕೊಂಡಿದ್ದಾನೆ. ಹಾಗಾಗಿ ಬೇಕೆಂದಾಗ, ಕಣ್ಣೀರು ಸುರಿಸುವ ಕಪಟತೆ ಮನುಷ್ಯನ ಕೊಳಕುತನವೇ ಹೊರತು, ಪಾಪದ ಮೊಸಳೆಗಳದ್ದಲ್ಲ!
ಮಾಡುವ ಪಾಪಗಳನ್ನೆಲ್ಲ ಮಾಡಿ, ಕೊನೆಗೆ ಕಣ್ಣೀರು ಸುರಿಸುವ ನಾಟಕದ ಮೂಲಕ ಸಭ್ಯನಾಗುವ ಸೋಗು ಹಾಕುವ ಮನುಷ್ಯನೇ ನಿನಗಿದೋ ಧಿಕ್ಕಾರ….
– ಗಿರೀಶ್ ತಾಳಿಕಟ್ಟೆ



