ಬೊಮ್ಮಾಯಿ ಮಂಡಿಸಿರುವ ಆಯವ್ಯಯ ಪತ್ರ ಸುಳ್ಳಿನ ಕಂತೆಯಂತೆ ಕಾಣಿಸುತ್ತಿದೆ: ಸಿದ್ದರಾಮಯ್ಯ

3 years ago

ಬೆಂಗಳೂರು: ಪ್ರಣಾಳಿಕೆಗಳಲ್ಲಿನ ಭರವಸೆಗಳ ಬಗ್ಗೆ ಸದನದಲ್ಲಿ ಪೂರ್ಣಪ್ರಮಾಣದ ಚರ್ಚೆಯಾಗಲಿ. ನನ್ನ ಈ ಸವಾಲನ್ನು ಬಿಜೆಪಿ ಸರ್ಕಾರ ಸ್ವೀಕರಿಸಿ, ಚರ್ಚೆಗೆ ಬಂದರೆ ನಾನು ಸದಾ ಸಿದ್ಧನಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಸದನದಲ್ಲಿ ಮಾತಾಡಿದ ಅವರು, ಭಾರತೀಯ ಜನತಾ ಪಕ್ಷ ತನ್ನ ಪ್ರಣಾಳಿಕೆಯ ಶೇಕಡಾ 90ರಷ್ಟು ಭರವಸೆಗಳನ್ನು ಕಳೆದ ನಾಲ್ಕು ವರ್ಷಗಳಿಂದ ಈಡೇರಿಸಿಲ್ಲ, ನಮ್ಮ ಸರ್ಕಾರ ಪಕ್ಷದ ಪ್ರಣಾಳಿಕೆಯಲ್ಲಿನ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದೆ. ಸಭಾಧ್ಯಕ್ಷರು ಅವಕಾಶ ನೀಡಿದರೆ ಈ ಎರಡು ಪ್ರಣಾಳಿಕೆಗಳ ಬಗ್ಗೆ ಚರ್ಚೆಗೆ ನಾನು ಸಿದ್ದನಿದ್ದೇನೆ ಎಂದರು.

ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾಗ ಸಾಂವಿಧಾನಿಕ ಸಂಪ್ರದಾಯದ ಪ್ರಮಾಣದ ಜೊತೆ ಇನ್ನೊಂದು ಪ್ರಮಾಣ ಮಾಡಿದ್ದೆ. ಅದು ನುಡಿದಂತೆ ನಡೆಯುತ್ತೇನೆ ಎನ್ನುವ ಪ್ರಮಾಣ. ಆ ಪ್ರಮಾಣದಂತೆಯೇ ನಾನು ನಡೆದುಕೊಂಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ನಾನು ಮಂಡಿಸಿದ್ದ ಆರೂ ಬಜೆಟ್ ನಮ್ಮ ಆಡಳಿತದಂತೆಯೇ ಪಾರದರ್ಶಕವಾಗಿತ್ತು ಮತ್ತು ಜನತೆಗೆ ಉತ್ತರದಾಯಿಯಾಗಿತ್ತು. ನಮ್ಮ ಐದು ವರ್ಷಗಳ ಸರ್ಕಾರ ವ್ಯಯ ಮಾಡಿದ್ದ ಜನರ ತೆರಿಗೆ ಹಣದ ಪೈಸೆಪೈಸೆ ಲೆಕ್ಕವನ್ನು ಅದೇ ಜನತೆಗೆ ಒಪ್ಪಿಸಿದ್ದೇನೆ. ಜನರಿಗೆ ಸುಳ್ಳು ಹೇಳಿರಲಿಲ್ಲ ಎಂದರು,

ಯಾವುದೇ ಆಯವ್ಯಯ ಪತ್ರದ ಆತ್ಮ- ಉತ್ತರದಾಯಿತ್ವ ಮತ್ತು ಪಾರದರ್ಶಕತೆ. ಈ ಎರಡು ಮಾನದಂಡಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿರುವ ಆಯವ್ಯಯ ಪತ್ರವನ್ನು ನೋಡಿದರೆ ಇದು ಸುಳ್ಳಿನ ಕಂತೆಯಂತೆ ಕಾಣಿಸುತ್ತಿದೆ. ಕಳೆದ ಬಜೆಟ್ ನಲ್ಲಿ ಸರ್ಕಾರ 206 ಹೊಸ ಕಾರ್ಯಕ್ರಮಗಳನ್ನು ಹೇಳಿತ್ತು, ಅದರಲ್ಲಿ ಸುಮಾರು 57 ಕಾರ್ಯಕ್ರಮಗಳನ್ನು ಇವತ್ತಿನ ವರೆಗೆ ಜಾರಿಗೆ ಕೊಡಲು ಆಗಿಲ್ಲ. ಜನವರಿ ಅಂತ್ಯದವರೆಗೆ ಬಜೆಟ್ ನಲ್ಲಿ ತೋರಿಸಿದ ಹಣದಲ್ಲಿ ಖರ್ಚಾದದ್ದು ಕೇವಲ 56% ಮಾತ್ರ. ಒಂದು ತಿಂಗಳಲ್ಲಿ 44% ಹಣ ಖರ್ಚು ಮಾಡಲು ಆಗುತ್ತಾ? ಎಂದರು

2018-19ರ ನನ್ನ ಕೊನೆಯ ಬಜೆಟ್ ನಲ್ಲಿ ಹಿಂದಿನ ಐದು ವರ್ಷಗಳ ಸಾಧನೆಗಳ ಸಂಪೂರ್ಣ ವಿವರಗಳನ್ನು ನೀಡಿದ್ದೆ. ಸದನದಲ್ಲಿ ಮಂಡಿಸಿರುವ ಆ ವಿವರ ಅಧಿಕೃತ ದಾಖಲೆಯಾಗಿದೆ. ಈಗ ಮುಖ್ಯಮಂತ್ರಿಗಳು ನಮ್ಮ ಪ್ರಣಾಳಿಕೆಯ ಭರವಸೆಗಳಲ್ಲಿ ಶೇಕಡಾ 30ರಷ್ಟು ಜಾರಿಗೆ ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಸರ್ಕಾರ ಮಂಡಿಸುವ ಆಯವ್ಯಯ ಎಂದರೆ ಅದು ಅಂಕಿ ಅಂಶಗಳ ಕಸರತ್ತು ಅಲ್ಲ, ಸರಳವಾಗಿ ಹೇಳುವುದಾದರೆ ಇದು ರಾಜ್ಯದ ಪ್ರತಿಯೊಬ್ಬ ಪ್ರಜೆಯ ನಿತ್ಯದ ಬದುಕಿನ ಲೆಕ್ಕ, ಅವನ ಮನೆಯ ಆಯವ್ಯಯದ ಲೆಕ್ಕ.. ಇದರಲ್ಲಿ ಹಿಂದಿನ ಸಾಧನೆಯ ಲೆಕ್ಕವೂ ಇರಬೇಕು, ಮುಂದಿನ ಯೋಜನೆಗಳ ವಿವರವೂ ಇರಬೇಕು ಎಂದರು.

ರಾಜ್ಯದ ಬೊಕ್ಕಸದಲ್ಲಿರುವುದು ಜನರ ಬೆವರಗಳಿಕೆಯ ತೆರಿಗೆ ಹಣ. ವರಮಾನ ತೆರಿಗೆ ನೀಡುವವರು ಮಾತ್ರ ತೆರಿಗೆದಾರರು ಎನ್ನುವ ತಪ್ಪು ಕಲ್ಪನೆ ನಮ್ಮಲ್ಲಿ ಬಹಳಷ್ಟು ಜನರಲ್ಲಿದೆ, ಒಬ್ಬ ಬಡವ ಖರೀದಿಸುವ ಒಂದು ಬೆಂಕಿಪೆಟ್ಟಿಗೆ, ಮಕ್ಕಳಿಗೆ ಖರೀದಿಸುವ ಒಂದೈದು ರೂಪಾಯಿಯ ಬಿಸ್ಕಿಟ್ ಪೊಟ್ಟಣದ ಬೆಲೆಯಲ್ಲಿಯೂ ತೆರಿಗೆ ಸೇರಿರುತ್ತದೆ ಎನ್ನುವುದನ್ನು ನಾವು ಮರೆಯಬಾರದು. ಆದ್ದರಿಂದ ಆಯವ್ಯಯ ಪತ್ರ ಮಂಡಿಸುವ ಸರ್ಕಾರಕ್ಕೆ ಸೂಟುಬೂಟುದಾರಿಗಳ ಜೊತೆಯಲ್ಲಿ ಹರಕಲು ಬಟ್ಟೆಯ ಬಡವನೂ ನೆನಪಲ್ಲಿ ಇರಬೇಕು ಎಂದು ಹೇಳಿದರು.

Leave a Reply