ಸರಕಾರಿ ಶಾಲೆಗಳ ಶೌಚಾಲಯದ ಸ್ವಚ್ಚತೆ ಯಾರ ಹೊಣೆ?

2 years ago

ಕೋಲಾರ ಜಿಲ್ಲೆಯ ಮಾಲೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಶೌಚದ ಗುಂಡಿಯನ್ನು ಶಾಲಾ ಮಕ್ಕಳಿಂದ ಕ್ಲೀನ್ ಮಾಡಿಸಿದ ಘಟನೆ ಮರೆಯುವ ಮುನ್ನವೇ ಡಿ.21 ರಂದು ಬೆಂಗಳೂರಿನ ಯಶವಂತಪುರದ ಹತ್ತಿರದ ಆಂದ್ರಹಳ್ಳಿ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ್ದು ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಶಾಲೆಗೆ ದೌಡಾಯಿಸಿ “ಶಾಲಾ ಮಕ್ಕಳ ದುರ್ಬಳಕೆ ತಡೆಗೆ ಸರಕಾರ ವಿಫಲ” ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದಾರೆ. ಈಗ ಶಾಲಾ ಶೌಚಾಲಯದ ಸುತ್ತ ಮಾಧ್ಯಮಗಳ ಅರಚಾಟ ಹಾಗೂ ರಾಜಕೀಯ ಕೆಸರೆರಚಾಟ ಶುರುವಾಗಿದೆ. ಸರಕಾರವು ಶಿಕ್ಷಣ ಇಲಾಖೆಯ ಮೂಲಕ ಆಯಾ ಶಾಲಾ ಮುಖ್ಯಸ್ಥರು ಹಾಗೂ ಕೆಲವು ಶಿಕ್ಷಕರ ಮೇಲೆ ಆರೋಪ ಹೊರೆಸಿ ಅಮಾನತ್ತು ಮಾಡಲಾಗಿದೆ. ದೂರು ಸಹ ದಾಖಲಿಸಿಕೊಂಡು ಎಫ್ ಐ ಆರ್ ಹಾಕಲಾಗಿದೆ.

ಹೌದು.. ತಪ್ಪು.. ಶಾಲಾ ಮಕ್ಕಳಿಂದ ಮಲದ ಗುಂಡಿ ಸ್ವಚ್ಛಗೊಳಿಸಿದ್ದು ತಪ್ಪು. ಶೌಚಾಲಯವನ್ನು ಕ್ಲೀನ್ ಮಾಡಿಸಲು ಮಕ್ಕಳನ್ನು ಬಳಸಿದ್ದು ಮಹಾ ತಪ್ಪು. ಇದೆಲ್ಲವೂ ತಪ್ಪು ಎನ್ನುವುದೇ ಆದರೆ ಶಾಲೆಗಳ ಶೌಚಾಲಯವನ್ನು ಸ್ವಚ್ಚಗೊಳಿಸುವ ಕೆಲಸವನ್ನು ಯಾರು ಮಾಡಬೇಕು? ಎನ್ನುವ ಪ್ರಶ್ನೆಗೆ ಉತ್ತರವನ್ನು ಯಾವ ಮಾಧ್ಯಮವೂ ಹೇಳುತ್ತಿಲ್ಲ. ರಾಜಕೀಯ ಪಕ್ಷಗಳೂ ಉತ್ತರಿಸುತ್ತಿಲ್ಲ. ಶೌಚಾಲಯ ಇರುವ ಶಾಲೆಗಳಲ್ಲಿ ಅದರ ನಿರ್ವಹಣೆಗೆ ಸರಕಾರ ಕೊಡಮಾಡುವ ವಾರ್ಷಿಕ ಮೊತ್ತ ಕೇವಲ ಎಂಟು ಸಾವಿರ ಮಾತ್ರ. ಇದರಲ್ಲಿ ನೀರಿನ ಬಿಲ್ ಕಟ್ಟಬೇಕು, ನಲ್ಲಿ ಪೈಪ್ ಕಮೋಡ್ ಗಳನ್ನೂ ರಿಪೇರಿ ಮಾಡಿಸಬೇಕು. ಯಾವುದೇ ಸರಕಾರಿ ಶಾಲೆಗೂ ಶೌಚಾಲಯ ಶುಚಿ ಮಾಡುವ ಕಾರ್ಮಿಕ ಸಿಬ್ಬಂದಿ ಇಲ್ಲ. ಎರಡು ವಾರಕ್ಕೊಮ್ಮೆಯಾದರೂ ಶೌಚಾಲಯ ಸ್ವಚ್ಚಗೊಳಿಸಲು ಹೊರಗಿನಿಂದ ಪೌರ ಕಾರ್ಮಿಕರನ್ನು ಕರೆತಂದರೆ ಕನಿಷ್ಟ 500 ರಿಂದ 1000 ರೂ. ಕೂಲಿ ಕೊಡಬೇಕು. ತಿಂಗಳಿಗೆ ಸಾವಿರ ರೂಪಾಯಿ ಅವರಿಗೆ ಕೊಟ್ಟರೆ ಹತ್ತು ತಿಂಗಳಿಗೆ ಹತ್ತು ಸಾವಿರ ಹಣ ಬೇಕಾಗುತ್ತದೆ. ಇನ್ನು ನೀರಿನ ಬಿಲ್ ಬೇರೆ ಕಟ್ಟಬೇಕು ಹಾಗೂ ರಿಪೇರಿ ಮಾಡಿಸಬೇಕು. ಇದನ್ನೆಲ್ಲಾ ಮಾಡಿಸಲು ಸರಕಾರ ಕೊಡುವ ಎಂಟು ಸಾವಿರ ಸಾಕಾಗುವುದಿಲ್ಲ. ಕಳೆದ ಜೂನ್ ತಿಂಗಳಿಂದ ಇಲ್ಲಿವರೆಗೂ ಈ ಹಣವನ್ನೂ ಸರಕಾರ ಬಿಡುಗಡೆ ಮಾಡಿಲ್ಲ. ಹಾಗಾದರೆ ಹಣ ಬರುವವರೆಗೂ ಟಾಯ್ಲೆಟ್ ನಿರ್ವಹಣೆ ಹೇಗೆ ಮಾಡಬೇಕು? ಯಾರು ಮಾಡಬೇಕು? ಪ್ರಶ್ನಿಸುವವರು ಯಾರು? ಉತ್ತರಿಸುವವರು ಯಾರು?

ಸರಕಾರಿ ಶಾಲೆಗಳಿಗೆ ಅಗತ್ಯವಾದ ಚಾಕ್ ಪೀಸ್, ಡಸ್ಟರ್, ಕಸಬರಿಗೆ ಗಳನ್ನು ಕೊಳ್ಳಲು ಇಲ್ಲಿವರೆಗೂ ಬಂದ ಯಾವುದೇ ಸರಕಾರಗಳು ನಿಯಮಿತವಾಗಿ ಹಣ ಬಿಡುಗಡೆ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಕರೆಂಟ್ ಬಿಲ್ ಕಟ್ಟಲೂ ಸರಕಾರಿ ಶಾಲೆಗಳಿಗೆ ಹಣ ಪಾವತಿ ಆಗುವುದಿಲ್ಲ. ಇನ್ನು ಶಾಲಾ ನಿರ್ವಹಣೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಎಲ್ಲಿಂದ ಶಿಕ್ಷಕರು ಹೊಂದಿಸಬೇಕು. ಶಾಲಾ ವ್ಯವಸ್ಥಾಪಕ ಕಮಿಟಿ ಅಂತಾ ಇದೆಯಲ್ಲಾ ಅದೂ ಕೂಡಾ ಶಾಲೆಗೆ ಹಣವನ್ನು ಕೊಡುವುದಿಲ್ಲ. ಸರಕಾರದ ಅನುದಾನವೂ ಸಮರ್ಪಕವಾಗಿಲ್ಲ. ಇಂತಹ ದುಸ್ತಿತಿಯಲ್ಲಿ ಸರಕಾರಿ ಶಾಲೆಯನ್ನು ಯಾರು ಹೇಗೆ ನಿರ್ವಹಣೆ ಮಾಡಬೇಕು?

ಪ್ರತಿ ಸರಕಾರಿ ಶಾಲೆಗೂ ಶೌಚಾಲಯ ಇರಬೇಕು ಎನ್ನುವುದು ಸಾಮಾನ್ಯ ಬೇಡಿಕೆ. ಶೌಚಾಲಯಗಳಿಲ್ಲದ ಬೇಕಾದಷ್ಟು ಸರಕಾರಿ ಶಾಲೆಗಳು ಈ ನಾಡಿನಲ್ಲಿವೆ. ಶೌಚಾಲಯವಿದ್ದರೂ ನೀರಿನ ಅಭಾವದಿಂದಾಗಿ ಬಹುತೇಕ ಶಾಲೆಗಳಲ್ಲಿ ಅವು ಕಾರ್ಯ ನಿರ್ವಹಿಸುತ್ತಿಲ್ಲ. ಶೌಚಾಲಯಗಳು ಕಾರ್ಯನಿರ್ವಹಿಸುವ ಶಾಲೆಗಳಲ್ಲಿ ಅವುಗಳನ್ನು ಸ್ವಚ್ಚಗೊಳಿಸಲು ಸಿಬ್ಬಂದಿಗಳಿಲ್ಲ. ಸ್ವಚ್ಚಗೊಳಿಸಲು ಕಾರ್ಮಿಕರನ್ನು ಕರೆತರಬೇಕೆಂದರೆ ಅವರಿಗೆ ಕೂಲಿ ಕೊಡಲು ಹಣವಿಲ್ಲ. ಸರಕಾರಿ ಶಾಲೆಗಳ ದುಸ್ಥಿತಿ ಹೀಗಿರಬೇಕಾದರೆ ಟಾಯ್ಲಟ್ ನ್ನು ಶಿಕ್ಷಕರು ಸ್ವಚ್ಚಗೊಳಿಸಬೇಕು ಇಲ್ಲವೇ ಶಾಲಾ ಆಡಳಿತ ಸಮಿತಿಯವರು ಸಿದ್ದರಾಗಬೇಕು. ಅದು ಸಾಧ್ಯವಿಲ್ಲದ ಕೆಲಸ. ಹೀಗಾಗಿ ಅನಿವಾರ್ಯವಾಗಿ ಮಕ್ಕಳ ಕೈಗೆ ಫಿನೈಲ್ ಹಾಗೂ ಪೊರಕೆ ಕೊಟ್ಟು ಶೌಚಾಲಯವನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಅದಕ್ಕಾಗಿ ಕೆಲವು ಶಾಲೆಗಳಲ್ಲಿ ಸ್ವಚ್ಚತೆಗೆ ಬದಲಾಗಿ ಹೆಚ್ಚುವರಿಯಾಗಿ ಚಕ್ಕಿಯನ್ನೋ ಬಾಳೆಹಣ್ಣನ್ನೋ ಮೊಟ್ಟೆಯನ್ನೋ ಕೊಡುವ ಆಮಿಷವನ್ನು ಮಕ್ಕಳಿಗೆ ಒಡ್ಡಲಾಗುತ್ತಿದೆ. ಹಲವಾರು ಶಾಲೆಗಳಲ್ಲಿ ಮುಖ್ಯ ಶಿಕ್ಷಕರುಗಳೇ ಮೂಗು ಮುಚ್ಚಿಕೊಂಡು ಶೌಚಾಲಯವನ್ನು ಸ್ವಚ್ಚಗೊಳಿಸುತ್ತಾರೆ. ಶಿಕ್ಷಕರು ಪೌರಕಾರ್ಮಿಕರ ಕೆಲಸ ಮಾಡುವಾಗ ಸದ್ದು ಮಾಡದ ಮಾಧ್ಯಮಗಳು ಮಕ್ಕಳು ಸ್ವಚ್ಚಗೊಳಿಸಿದಾಗ ಅಮಾನವೀಯ ಎಂದು ಕೂಗುವುದರಲ್ಲಿ ಅದ್ಯಾವ ಮಾನವೀಯತೆ ಇದೆ.

ಸಮಸ್ಯೆ ಇರುವುದು ಸರಕಾರದಲ್ಲಿ. ಪ್ರತಿಯೊಂದು ಸರಕಾರಿ ಶಾಲೆಗಳ ನಿರ್ವಹಣೆಗೆ ಸಾಕಷ್ಟು ಅನುದಾನವನ್ನು ಸರಿಯಾದ ಸಮಯಕ್ಕೆ ಕೊಟ್ಟಿದ್ದರೆ, ಶೌಚಾಲಯಗಳ ಸ್ವಚ್ಛತೆಗೆ ಹೆಚ್ಚುವರಿಯಾಗಿ ಕಾರ್ಮಿಕ ಸಿಬ್ಬಂದಿಯನ್ನು ನೇಮಿಸಿದ್ದರೆ ಹೀಗೆ ಶಿಕ್ಷಕರೇ ಶಾಲಾ ಶೌಚಾಲಯದ ಸ್ವಚ್ಚತೆ ಮಾಡುವ ಇಲ್ಲವೇ ಅದಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಅಗತ್ಯವೇ ಬರುತ್ತಿರಲಿಲ್ಲ. ಈ ರೀತಿಯ ಘಟನೆಗಳೂ ಸುದ್ದಿಯಾಗುತ್ತಿರಲಿಲ್ಲ. ಸವಲತ್ತುಗಳನ್ನು ಕೊಟ್ಟ ನಂತರವೂ ಮಕ್ಕಳನ್ನು ಹೀಗೆ ದುರ್ಬಳಕೆ ಮಾಡಿಕೊಂಡಿದ್ದೇ ಆದರೆ ಅದಕ್ಕೆ ಕಾರಣರಾದ ಶಿಕ್ಷಕರ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಆದರೆ ಯಾವುದೇ ಅನುದಾನ ಅನುಕೂಲತೆಗಳನ್ನು ಕೊಡದೇ ಸರಕಾರಿ ಶಾಲೆಗಳನ್ನು ಬೇಕಾಬಿಟ್ಟಿ ನಡೆಸುವ ಸರಕಾರಗಳೇ ಈ ರೀತಿಯ ಘಟನೆಗಳ ಹೊಣೆಯನ್ನು ಹೊರಬೇಕಾಗಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಶಾಲೆಗೆ ಬೇಕಾದ ಸವಲತ್ತುಗಳನ್ನು ಒದಗಿಸಿಕೊಡಬೇಕು ಇಲ್ಲವೇ ಶಿಕ್ಷೆಗೆ ಒಳಗಾಗಬೇಕು. ಸರಕಾರ ಹಾಗೂ ಅಧಿಕಾರಿಗಳು ಹೊರಬೇಕಾದ ಹೊಣೆಯನ್ನು ಪಾಪದ ಶಿಕ್ಷಕರ ಮೇಲೆ ಹಾಕಿ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುವ ಸರಕಾರದ ಪ್ರಯತ್ನ ಆತ್ಮವಂಚಕತನದ್ದಾಗಿದೆ.

ಅದೆಷ್ಟೋ ಸರಕಾರಿ ಶಾಲೆಗಳಿಗೆ ಗಟ್ಟಿಯಾದ ಕಟ್ಟಡಗಳೇ ಇಲ್ಲ. ಸುಣ್ಣ ಬಣ್ಣಗಳಿಗೂ ಹಣವಿಲ್ಲ. ಸರಕಾರಿ ಶಾಲೆಗಳ ಶಿಕ್ಷಕರು ವಿದ್ಯೆ ಕಲಿಸುವುದಕ್ಕಿಂತಾ ಹೆಚ್ಚಾಗಿ ಬಿಸಿಯೂಟ, ಗಣತಿಯಂತಹ ಕಾರ್ಯಗಳಲ್ಲೇ ತೊಡಗಿಕೊಳ್ಳುವಂತೆ ಸರಕಾರ ಬಳಸಿಕೊಳ್ಳುತ್ತಿದೆ. ಶಾಲೆಯ ಒಳ ಹೊರಗಿನ ಸ್ವಚ್ಚತೆ ಮತ್ತು ಶೌಚಾಲಯದ ಸುಚಿತ್ವವೂ ಮುಖ್ಯ ಶಿಕ್ಷಕರ ಹೆಗಲೇರಿದೆ.

ಈ ಸಮಸ್ಯೆಗಳ ಬಗ್ಗೆ ಕನಿಷ್ಟ ಅರಿವೂ ಇರದ ಸುದ್ದಿ ಮಾಧ್ಯಮಗಳು ಶಿಕ್ಷಕರ ಬೇಜವಾಬ್ದಾರಿತನದ ಬಗ್ಗೆ ಬಾಯಿಬಡಿದುಕೊಳ್ಳುತ್ತವೆ. ಮಕ್ಕಳನ್ನು ಸ್ವಚ್ಚತೆಗೆ ಬಳಸಿದ್ದಕ್ಕೆ ಪೋಷಕರು ಸಿಟ್ಟಿಗೇಳುತ್ತಾರೆ. ಈ ಪಕ್ಷ ಆ ಪಕ್ಷದ ಮೇಲೆ, ಆ ಪಕ್ಷ ಈ ಪಕ್ಷದ ಮೇಲೆ ಆರೋಪ ಮಾಡುತ್ತಾ ಗದ್ದಲವೆಬ್ಬಿಸುತ್ತವೆ. ಶಾಸಕಾಂಗಕ್ಕಾಗಲೀ ಕಾರ್ಯಾಂಗಕ್ಕಾಗಲಿ ಇಲ್ಲವೇ ಮಾಧ್ಯಮಾಂಗಕ್ಕಾಗಲಿ ನಿಜವಾದ ಸಮಸ್ಯೆಗಳ ಬಗ್ಗೆ ಅರಿವಿಲ್ಲ. ಅರಿವಿದ್ದರೂ ಅವುಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ. ಹೀಗಾಗಿ ಸರಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳು ದಾಖಲಾಗದೇ ಹಲವಾರು ಶಾಲೆಗಳನ್ನೇ ಮುಚ್ಚುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಿಜವಾಗಿ ಕಾರಣರಾದವರು ಸರಕಾರಿ ಶಾಲೆಗಳನ್ನು ದುರ್ಬಲಗೊಳಿಸಿ ಖಾಸಗಿ ಶಾಲೆಗಳಿಗೆ ಅನುಕೂಲ ಮಾಡಿಕೊಡಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶ್ರಮಿಸುತ್ತಿದ್ದಾರೆ. ಅತೀ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ನಾಗರೀಕ ಸಮಾಜದಲ್ಲಿ ಶಿಕ್ಷಣ ಎನ್ನುವುದು ಎಲ್ಲರ ಮೂಲಭೂತ ಹಕ್ಕಾಗಬೇಕಿತ್ತು ಆದರೆ ಅದು ಸಂವಿಧಾನದಲ್ಲಿ ಮಾತ್ರ ಉಲ್ಲೇಖವಾಗಿದೆ. ಎಲ್ಲರಿಗೂ ಏಕರೂಪದ ಸಮಾನ ಶಿಕ್ಷಣ ನೀತಿ ಎಲ್ಲಿಯವರೆಗೂ ಜಾರಿಗೆ ಬರುವುದಿಲ್ಲವೋ ಅಲ್ಲಿಯವರೆಗೂ ವಿದ್ಯೆ ಎನ್ನುವುದು ಮಾರಾಟದ ಸರಕಾಗುತ್ತದೆ. ಉಳ್ಳವರು ಕೊಂಡುಕೊಳ್ಳುತ್ತಾರೆ, ಇಲ್ಲದವರು ವಂಚಿತರಾಗುತ್ತಾರೆ. ಇದೇ ಈ ನಮ್ಮ ಬಂಡವಾಳಶಾಹಿ ಪ್ರಜಾಪ್ರಭುತ್ವದ ಹಿಡನ್ ಅಜೆಂಡಾ ಆಗಿದೆ. ಶೌಚಾಲಯಗಳ ಸ್ವಚ್ಚತೆಗೂ ಅನುದಾನ ಒದಗಿಸದ ಸರಕಾರಿ ವ್ಯವಸ್ಥೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಸಮಾನವಾದ ಉಚಿತ ಚಿಕಿತ್ಸೆ ಹಾಗೂ ಶಿಕ್ಷಣ ಆಳುವ ಪ್ರಭುತ್ವದ ಮೊದಲ ಆದ್ಯತೆಯಾಗುವವರೆಗೂ ಇಂತಹ ಅಮಾನವೀಯ ಘಟನೆಗಳು ಸುದ್ದಿಯಾಗುತ್ತಲೇ ಇರುತ್ತವೆ. ಸುದ್ದಿ ಮಾಧ್ಯಮಗಳಿಗೆ ಆಹಾರ ವದಗುತ್ತಲೇ ಇರುತ್ತದೆ.

ಸರಕಾರದ ಅನುದಾನ ಅನುಕೂಲತೆಗಳು ಸಿಗದೇ ಇದ್ದರೆ ಅದಕ್ಕಾಗಿ ಯಾವ ಶಾಲೆಯೂ ಕಾಯ್ತಾ ಕೂಡುವುದಿಲ್ಲ. ಸ್ವಚ್ಚತೆಗಾಗಿ ತನ್ನದೇ ಆದ ವ್ಯವಸ್ಥೆ ರೂಪಿಸಿಕೊಳ್ಳಲೇ ಬೇಕಾಗುತ್ತದೆ. ಶಾಲೆಯ ಶಿಕ್ಷಕರ ನೇತೃತ್ವದಲ್ಲಿ ತರಗತಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಲಾಗುತ್ತದೆ. ಆಯಾ ಗುಂಪುಗಳಿಗೆ ಸರದಿ ಪದ್ದತಿಯಲ್ಲಿ ಕಸ ಗುಡಿಸುವುದು, ಗಿಡಗಳಿಗೆ ನೀರು ಹಾಕುವುದು, ಶೌಚಾಲಯಗಳನ್ನು ಶುಚಿಗೊಳಿಸುವುದು, ಉಪಹಾರ ಊಟ ಬಡಿಸುವುದು ಇಂತಹ ಕೆಲಸಗಳನ್ನು ಹಂಚಲಾಗುತ್ತದೆ. ಸರಕಾರಿ ಶಾಲೆಯಲ್ಲಿ ಓದಿದ ಬಹುತೇಕರು ಈ ಕೆಲಸಗಳನ್ನು ಮಾಡುತ್ತಲೇ ಶಿಕ್ಷಣ ಕಲಿತಿದ್ದಾರೆ. ಎಲ್ಲಾ ಮಠ ಮಾನ್ಯದ ಮಾಲೀಕತ್ವದ ಶಾಲೆಗಳಲ್ಲೂ ವಿದ್ಯಾರ್ಥಿಗಳ ಶ್ರಮದಾನ ರೂಢಿಯಲ್ಲಿದೆ. ಇಂತಹ ಸಂದರ್ಭದಲ್ಲೇ ವಿದ್ಯಾರ್ಥಿಗಳು ಕೂಡಿ ಕೆಲಸ ಮಾಡುವ, ಶ್ರಮಸಂಸ್ಕೃತಿಯನ್ನು ಕಲಿತುಕೊಳ್ಳುತ್ತಾರೆ. ಪರಿಸರ ಪ್ರಜ್ಞೆಯನ್ನು ಬೆಳೆಸಿಕೊಂಡು, ಶಿಸ್ತು ಹಾಗೂ ಸ್ವಚ್ಚತೆಯ ಮಹತ್ವವನ್ನು ಪ್ರಾಯೋಗಿಕವಾಗಿ ಅನುಭವಿಸಿ ಕಲಿಯುತ್ತಾರೆ. ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗಿಂತ ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳಲ್ಲಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಮನೋಭಾವ ಹೆಚ್ಚಾಗಿರುತ್ತದೆ. ಪರಿಸರದ ಬಗ್ಗೆ ಕಾಳಜಿ ಹಾಗೂ ಸ್ವಚ್ಚತೆಯ ಬಗ್ಗೆ ಕಳಕಳಿಯೂ ಇರುತ್ತದೆ. ಇದನ್ನು ಬೆಳೆಸುವ ಕೆಲಸವನ್ನು ಸರಕಾರಿ ಶಾಲೆಯ ಸಾಮೂಹಿಕ ಶ್ರಮ ಸಂಸ್ಕೃತಿ ಮಾಡುತ್ತದೆ. ಹೀಗಾಗಿ ಈ ಸುದ್ದಿ ಮಾಧ್ಯಮಗಳು ಊಳಿಡುವಂತೆ ವಿದ್ಯಾರ್ಥಿಗಳು ತಮ್ಮ ಶಾಲೆಯ ಸ್ವಚ್ಚತೆ ಮಾಡಿದರೆ ಅದು ಅಮಾನವೀಯವೂ ಅಲ್ಲಾ, ಅದನ್ನು ಮಾಡಿಸಿದವರು ಅಪರಾಧಿಗಳೂ ಅಲ್ಲ. ಹಿಂದೆ ಇದ್ದ ಗುರುಕುಲ ಶಿಕ್ಷಣ ಪದ್ದತಿಯಲ್ಲಿ ಸ್ವಚ್ಚತೆ ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಗಳ ಕರ್ತವ್ಯವಾಗಿತ್ತು. ಸ್ವತಃ ಮಹಾತ್ಮಾ ಗಾಂಧೀಜಿಯವರೇ ಶೌಚವನ್ನು ಸ್ವಚ್ಚಗೊಳಿಸಲು ಮುಂದಾದರು ಹಾಗೂ ಅದಕ್ಕಾಗಿ ಜೊತೆಗೆ ಇರುವವರನ್ನೂ ಪ್ರೇರೇಪಿಸಿದರು. ಇದು ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದೆ. ಯಾವುದೇ ಜಾತಿ ಮತಗಳ ತಾರತಮ್ಯವಿಲ್ಲದೇ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಸ್ವಚ್ಚತಾ ಕೆಲಸಗಳನ್ನು ಹಂಚಿಕೊಂಡು ಮಾಡುವ ಮೂಲಕ ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನು ಕಲಿಯಬೇಕಿದೆ.

ಶೌಚಾಲಯವನ್ನು ಸ್ವಚ್ಚಗೊಳಿಸುವುದು ಕೀಳೆಂಬ ಭಾವನೆಯೇ ಸರಿಯಲ್ಲ. ಹಾಗಂತ ಶೌಚಾಲಯದ ಗುಂಡಿಯನ್ನು ಮಕ್ಕಳಿಂದ ಸ್ವಚ್ಚಗೊಳಿಸುವುದು ಸರಿಯಲ್ಲ. ಶೌಚಾಲಯದ ಸ್ವಚ್ಚತೆಯನ್ನು ಕೇವಲ ಒಂದು ನಿರ್ದಿಷ್ಟ ಸಮುದಾಯದ ಮಕ್ಕಳಿಂದ ಮಾಡಿಸಿದರೆ ಅದು ಮಾನವೀಯತೆಯಲ್ಲ.

ಸುದ್ದಿ ಮಾಧ್ಯಮಗಳನ್ನು ಬಿಡಿ, ತಮ್ಮ ಮಕ್ಕಳಿಗೆ ವಿದ್ಯೆ ಕಲಿಸುವ ಶಿಕ್ಷಕರ ಮೇಲೆ ಪೋಷಕರು ಸಿಟ್ಟಿಗೆದ್ದಿದ್ದಾರೆ. ತಮ್ಮ ಮಕ್ಕಳನ್ನು ಶೌಚಾಲಯದ ಸ್ವಚ್ಚತೆಗೆ ಬಳಸಿದ್ದು ಶಿಕ್ಷಕರ ಮಹಾಪರಾಧವೆಂದು ಆರೋಪಿಸುತ್ತಿದ್ದಾರೆ. ಈ ಪೋಷಕರ ಕೋಪ ಇರಬೇಕಾದದ್ದು ಶಾಲೆಗೆ ಸಕಾಲದಲ್ಲಿ ಸವಲತ್ತು ಒದಗಿಸದ ಸರಕಾರದ ಮೇಲೆಯೇ ಹೊರತು ಶಿಕ್ಷಕರ ಮೇಲಲ್ಲ. ವಿದ್ಯಾರ್ಥಿಗಳ ಮೇಲೆ ಅತೀವ ಕಾಳಜಿ ತೋರಿಸುವುದೇನೋ ಸರಿ. ಆದರೆ ಅನೇಕ ಅಡೆತಡೆ ಅತಿರೇಕಗಳ ನಡುವೆಯೂ ಮಕ್ಕಳಿಗೆ ವಿದ್ಯಾಭ್ಯಾಸ ಹೇಳಿಕೊಡುವ, ಶೌಚಾಲಯವನ್ನು ಸ್ವಚ್ಚಗೊಳಿಸುವ, ಎಷ್ಟೋ ಸಲ ತಮ್ಮ ಸಂಬಳದ ಹಣದಲ್ಲಿ ಶಾಲೆಯನ್ನು ನಿರ್ವಹಿಸುವ ಶಿಕ್ಷಕರ ಬಗ್ಗೆ ಯಾಕೆ ಈ ಪೋಷಕರಿಗೆ, ರಾಜಕೀಯ ಪಕ್ಷದವರಿಗೆ, ಸುದ್ದಿ ಮಾಧ್ಯಮಗಳಿಗೆ ಅನುಕಂಪ ಇಲ್ಲ. ಹೋಗಲಿ ಸರಕಾರಿ ನೌಕರರ ಸಂಘಗಳು, ಸರಕಾರಿ ಶಿಕ್ಷಕರ ಸಂಘಗಳು ಇದ್ದಾವಲ್ಲಾ, ಇವು ಯಾಕೆ ಶಿಕ್ಷಕರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಶಾಲೆಗೆ ಅಗತ್ಯವಾದ ಅನುದಾನ ಅನುಕೂಲತೆಗಳನ್ನು ಸಕಾಲಕ್ಕೆ ಒದಗಿಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿಲ್ಲ. ಗುರು ದೇವೋಭವ ಎಂದು ಬಾಯಲ್ಲಿ ಹೇಳುವ ಈ ಸಮಾಜವು ಗುರುಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನಿಂದಿಸುವುದು ಯಾವ ನ್ಯಾಯ? ಸಮಾಜದ ಈ ಆತ್ಮವಂಚಕ ಪ್ರವೃತ್ತಿಗೆ ಕೊನೆ ಇಲ್ಲವಾ? ಆತ್ಮವೇ ಇಲ್ಲದ ಸರಕಾರಿ ವ್ಯವಸ್ಥೆಗೆ ಕನಿಷ್ಟ ಮಾನವೀಯತೆಯೂ ಇಲ್ಲವಾ? ಎಲ್ಲಾ ಸೂಕ್ಷ್ಮತೆಗಳನ್ನು ಕಳೆದುಕೊಂಡ ಸುದ್ದಿ ಮಾಧ್ಯಮಗಳಿಗೆ ಸಮಸ್ಯೆಗಳ ಮೂಲವನ್ನು ಹುಡುಕುವ ತಾಳ್ಮೆ ಇಲ್ಲವಾ? ಕೆಸರಾಟದಲ್ಲಿ ತೊಡಗಿರುವ ರಾಜಕಾರಣಿಗಳು ಸರಕಾರಿ ಶಾಲೆಗಳಲ್ಲಿ ಓದೇ ಇಲ್ವಾ? ಕೇಳಲು ಪ್ರಶ್ನೆಗಳು ನೂರಿವೆ. ಉತ್ತರಿಸಬೇಕಾದವರು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ನಿರತರಾಗಿದ್ದಾರೆ. ಮಾಧ್ಯಮಗಳು ಪೈಪೋಟಿಗೆ ಬಿದ್ದು ನಕಾರಾತ್ಮಕ ಸುದ್ದಿ ಬಿತ್ತರಿಸುತ್ತಿವೆ. ಈ ಎಲ್ಲಾ ಕಾರಣಗಳಿಂದಾಗಿ ಸರಕಾರಿ ಶಾಲೆಗಳು ಅವನತಿಯತ್ತ ಸಾಗುತ್ತಿವೆ.

  • ಶಶಿಕಾಂತ ಯಡಹಳ್ಳಿ, ಹಿರಿಯ ರಂಗಕರ್ಮಿ

Leave a Reply