ಬೆಂಗಳೂರು: ವಸತಿ ಮತ್ತು ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಸಿಎಂ ಸಿದ್ದರಾಮಯ್ಯ ಅವರ ಜತೆ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ ವಿಡಿಯೋ ಇದೀಗ ವಿವಾದಕ್ಕೆ ಕಾರಣವಾಗಿದೆ.
ದೆಹಲಿಯಿಂದ ಬೆಂಗಳೂರಿಗೆ ನಮ್ಮ ಹೆಮ್ಮೆಯ ನಾಯಕರು, ಸಿಎಂ ಸಿದ್ದರಾಮಯ್ಯ ಅವರ ಜೊತೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ ಸಂತಸದ ಕ್ಷಣಗಳು ಎಂದು ಜಮೀರ್ ಅಹ್ಮದ್ ಖಾನ್ ನಿನ್ನೆ ರಾತ್ರಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಮಾನ ಪ್ರಯಾಣದ ವಿಡಿಯೋವನ್ನು ಪೋಸ್ಟ್ ಮಾಡಿದ್ದರು.
ಜಮೀರ್ ಅಹ್ಮದ್ ಅವರು ಐಷಾರಾಮಿ ಚಾರ್ಟರ್ಡ್ ಫ್ಲೈಟ್ನಲ್ಲಿ ಉದ್ದನೆಯ ಸೋಫಾದಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಬಹುದು. ವಿಶೇಷ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜ್ ಕೂಡ ಇರುವುದು 32 ಸೆಕೆಂಡುಗಳ ವೀಡಿಯೊದಲ್ಲಿ ದಾಖಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಅವರ ಮೇಲೆ ಮುಗಿಬಿದ್ದಿದೆ. ರಾಜ್ಯದಲ್ಲಿ ಬರ ಬಂದು ಜನತೆ ಸಂಕಷ್ಟದಲ್ಲಿದ್ದರೆ ಮಜಾವಾದಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಆಪ್ತ ಜಮೀರ್ ಅಹ್ಮದ್ ಖಾನ್ ಆಡಂಬರಕ್ಕೇನೂ ಕಡಿಮೆ ಇಲ್ಲ ಎಂದು ಬಿಜೆಪಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದೆ.
ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಜನರ ದುಡ್ಡು ಆಕಾಶದಲ್ಲಿ ಜಾತ್ರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿ ಕಾರಿದ್ದಾರೆ. ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಬರಗಾಲದಿಂದ ಬೇಯುತ್ತಿದೆ, ರೈತರು ಆತ್ಮ ಹತ್ಯೆಗೆ ಶರಣಾಗುತ್ತಿದ್ದಾರೆ, ಸಾಮಾನ್ಯರ ಬದುಕು ಅಸಹನೀಯ ಪರಿಸ್ಥಿತಿ ತಲುಪಿದೆ, ಇಂಥಹ ಗಂಭೀರ ಪರಿಸ್ಥಿತಿಯಲ್ಲೂ ಶ್ರೀಮಂತಿಕೆಯ ದರ್ಪ ತೋರುವ, ಮೋಜು, ಮಸ್ತಿಯೇ ತನ್ನ ಜೀವನ ಶೈಲಿ ಎಂದು ಪ್ರದರ್ಶಿಸಿಕೊಳ್ಳುತ್ತಿರುವ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಜೊತೆ ಜನರ ತೆರಿಗೆ ಹಣ ವ್ಯಯಿಸಿ ಐಶಾರಾಮಿ ಜೆಟ್ ವಿಮಾನದಲ್ಲಿ ಪ್ರಯಾಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೋಜಿನ ಭಾಗವಾಗಿರುವುದು ಈ ರಾಜ್ಯದ ದೌರ್ಭಾಗ್ಯವಲ್ಲದೇ ಮತ್ತಿನ್ನೇನು ಅಲ್ಲ ಎಂದು ಕಿಡಿಕಾರಿದ್ದಾರೆ.
ಮುಖ್ಯಮಂತ್ರಿ ಮತ್ತಿತರರ ಮಂತ್ರಿಮಂಡಲದ ಸದಸ್ಯರ ಆಡಂಬರ, ವೈಭವದ ಪ್ರದರ್ಶನಗಳನ್ನು ನೋಡಿದರೆ ರೋಮ್ ದೊರೆ ನೀರೋ ಉಲ್ಲೇಖಿಸುತ್ತಾ ರಾಜ್ಯ ಬರದಿಂದ ತತ್ತರಿಸುತ್ತಿದ್ದರೆ ದೊರೆ ಆಕಾಶದಲ್ಲಿ ಓಲಾಡುತ್ತ ತೇಲುತ್ತಿದ್ದಾರೆ ಎಂದು ವರ್ಣಿಸಬಹುದಾಗಿದೆ ಎಂದು ಹರಿಹಾಯ್ದಿದ್ದಾರೆ.
ಈ ಕುರಿತ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರು ಯಾವುದರಲ್ಲಿ ತಿರುಗಾಡುತ್ತಾರೆ ಎಂದು ಬಿಜೆಪಿಯವರನ್ನು ಕೇಳಿ ಎಂದರು.
ಐಷಾರಾಮಿ ವಿಮಾನದಲ್ಲಿ ಒಬ್ಬರೇ ಓಡಾಡುತ್ತಾರಲ್ಲ. ಅದರ ಬಗ್ಗೆ ಬಿಜೆಪಿಯವರು ಏಕೆ ಉತ್ತರ ನೀಡುವುದಿಲ್ಲ? ಬಾಯಿಗೆ ಬಂದಂತೆ ಏನೋ ಮಾತನಾಡುವುದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.




