ಕಾಂಗ್ರೆಸ್ ವಿಚಾರದಲ್ಲಿ ಮಾಧ್ಯಮದವರಿಗೆ ಜಾಣ ಕುರುಡು ಜಾಣ ಕಿವುಡು

2 years ago

ಶಕ್ತಿ ಯೋಜನೆ ಅಡಿಯಲ್ಲಿ ಪ್ರತಿದಿನ ಲಕ್ಷಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಆ ಮಹಿಳೆಯರ ಸಂತೋಷದ ಮಾತುಗಳು ಕಾಣುವುದೇ ಇಲ್ಲ. ಬದಲಿಗೆ ಯಾವುದೋ ಒಂದು ಸಣ್ಣ ಘಟನೆ ಮಾತ್ರ ಕಣ್ಣಿಗೆ ಬೀಳುತ್ತದೆ. ಅದನ್ನೇ ದೊಡ್ಡ ಸುದ್ದಿ ಮಾಡುತ್ತಾ ಯೋಜನೆಯ ಮೂಲ ಆಶಯವನ್ನು ಜನರ ಮನಸ್ಸಿನಿಂದ ಮರೆ ಮಾಚುವ ಸುದ್ದಿಗಳನ್ನಷ್ಟೇ ಬಿತ್ತರಿಸುತ್ತಿದ್ದೀರಿ.

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆದು ಬದುಕನ್ನ ಕಟ್ಟಿಕೊಳ್ಳುತ್ತಿರುವ ಸಹಸ್ರಾರು ಉದಾಹರಣೆಗಳಿದ್ದರೂ ಅವುಗಳನ್ನ ತೋರಿಸದೆ ಯಾವುದೋ ಒಂದು ತಿಂಗಳು ಯಾವುದೋ ಒಬ್ಬ ಮಹಿಳೆಗೆ ಹಣ ಬಂದಿಲ್ಲವೆಂದರೆ, ಅದರ ಹಿಂದಿರುವ ತಾಂತ್ರಿಕ ಅಂಶವನ್ನು ವಿಮರ್ಶಿಸದೆ ಇಡೀ ಯೋಜನೆಗೆ ಸರಿಯಾಗಿ ನಡೆಯುತ್ತಿಲ್ಲ ಎಂಬ ರೀತಿಯಲ್ಲಿ ಸುದ್ದಿ ಮಾಡುತ್ತಿದ್ದೀರಿ.

ಪ್ರತಿ ತಿಂಗಳು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಲಕ್ಷಾಂತರ ಮಂದಿಗೆ ಅವರ ಖಾತೆಗಳಿಗೆ ಹಣ ಪಾವತಿಯಾಗುತ್ತಿದ್ದರೂ ಇಲ್ಲಿಯೂ ಅಷ್ಟೇ ಯಾರೋ ಒಂದಷ್ಟು ಜನರಿಗೆ ಹಣ ಬಂದಿಲ್ಲವೆಂದರೆ ಇಡೀ ಯೋಜನೆಗೆ ಸರಿಯಿಲ್ಲ, ಇದು ಬೋಗಸ್ ಎನ್ನುವ ರೀತಿಯಲ್ಲಿ ನಕಾರಾತ್ಮಕವಾದಂತಹ ಸುದ್ದಿಯನ್ನು ಬಿತ್ತರಿಸುತ್ತಿದ್ದೀರಿ.

ಯಾವುದೇ ತಿಂಗಳು ಯಾವುದೇ ಸರ್ಕಾರಿ ನೌಕರರಿಗೆ ಸಂಬಳಕ್ಕೆ ತೊಂದರೆಯಾಗಿಲ್ಲ, ಯಾವುದೇ ಸಾಮಾಜಿಕ ಯೋಜನೆಗಳಿಗೆ ಹಣದ ಅಡಚಣೆಯಾಗಿಲ್ಲ, ಆದರೂ ಸಹ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಪದೇ ಪದೇ ಹೇಳುತ್ತಲೇ ಇರುತ್ತೀರಿ.

ಆದರೆ ಕೇಂದ್ರ ಸರ್ಕಾರ 10 ವರ್ಷಗಳ ಹಿಂದೆ 52 ಲಕ್ಷ ಕೋಟಿಗಳ ಸಾಲದಿಂದ ಇಂದು 190 ಲಕ್ಷ ಕೋಟಿ ಮೊತ್ತಕ್ಕೆ ಸಾಲವನ್ನ ಹೆಚ್ಚಿಸಿದ್ದರು, ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ ಎಂದು ಸಂಭ್ರಮಿಸುತ್ತೀರಿ.

ರೂಪಾಯಿಯ ಮೌಲ್ಯ ಡಾಲರನ್ನ ಮುಂದೆ 85 ರೂಪಾಯಿಗಳಿಗೆ ತಲುಪಿದ್ದರು ಆರ್ಥಿಕ ಪರಿಸ್ಥಿತಿ ಚನ್ನಾಗಿದೆ ಎನ್ನುತ್ತೀರಿ.

ಹಣದುಬ್ಬರ ಏರುತ್ತಿದ್ದರು ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದ್ದೆ ಎನ್ನುತ್ತೀರಿ‌. ಸಾಲದ ಮೇಲಿನ ಬಡ್ಡಿಯ ದರ ಏರಿಕೆಯಾಗುತ್ತಿದ್ದರು ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎನ್ನುತ್ತಿರಿ.

ಆಹಾರ ಪದಾರ್ಥಗಳ  ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರಿದರೂ ಆರ್ಥಿಕ ಪರಿಸ್ಥಿತಿ ಚನ್ನಾಗಿದೆ ಎನ್ನುತ್ತೀರಿ. ಸಾಲದ ಸುಳಿಗೆ ಸಿಕ್ಕಿ, ಪ್ರತಿದಿನವೂ ಹಲವಾರು ಕುಟುಂಬಗಳು ಸಾಮೂಹಿಕವಾಗಿ ಆತ್ಮಹತ್ಯೆಯ ದಾರಿಯನ್ನ ಹಿಡಿಯುತ್ತಿರುವ ಸುದ್ದಿ ಬಿತ್ತರಿಸುತ್ತಾ ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿದೆ ಎಂದು ಹೇಳುತ್ತಲೇ ಇದ್ದೀರಿ.

ಆದರೆ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಮಾತ್ರ ನಿಮ್ಮ ಕಣ್ಣಿಗೆ ತುಂಬಾ ಕೆಟ್ಟದಾಗಿ ಕಾಣುತ್ತದೆ.

ಇತ್ತೀಚಿಗೆ ಕಾವೇರಿ ಐದನೇ ಹಂತದ 55 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ನೀಡುವ ಯೋಜನೆ ಚಾಲನೆ ಆಯಿತು ಆದರೆ ಯಾವ ಮಾಧ್ಯಮದವರಿಗೂ ಇದು ಸುದ್ದಿಯೇ ಅಲ್ಲ.

ಕೆಲವು ತಿಂಗಳ ಹಿಂದೆ ಎತ್ತಿನಹೊಳೆ ಯೋಜನೆಯ ಪ್ರಥಮ ಹಂತದ ಕಾಮಗಾರಿ ಮುಗಿದು ಯೋಜನೆ ಅನುಷ್ಠಾನಕ್ಕೆ ಬಂದಿತು. ಇದು ನಿಮಗೆ ಸುದ್ದಿಯೇ ಆಗುವುದಿಲ್ಲ.

ತುಂಗಭದ್ರಾ ಅಣೆಕಟ್ಟಿನ ಗೇಟು ಕುಸಿದು ಬಿದ್ದು ಆಂಧ್ರಪ್ರದೇಶದ ನುರಿತ ತಜ್ಞರಿಂದ ಹಗಲು ರಾತ್ರಿ ನೂರಾರು ಜನ ಕಾರ್ಮಿಕರನ್ನು ಒಂದುಗೂಡಿಸಿ ಹೊಸದಾಗಿ ಗೇಟ್ ಅನ್ನ ಅಳವಡಿಸಿ ಹಲವಾರು ಟಿಎಂಸಿ ನೀರು ಪೋಲು ಆಗುವುದನ್ನು ತಪ್ಪಿಸಿದ್ದಾರೆ. ಈ ಉತ್ತಮ ಕಾರ್ಯ ಮಾಧ್ಯಮದವರಿಗೆ ಕಾಣುವುದೇ ಇಲ್ಲ .

ಆದರೆ ಜಮೀರ್ ಏನು ಹೇಳಿದರು, ಯತ್ನಾಳ್ ಏನು ಹೇಳಿದರು, ಅಶೋಕ್ ಏನು ಹೇಳಿದರು, ವಿಜಯೇಂದ್ರ ಏನು ಹೇಳಿದರು, ಧರ್ಮದ ಮಾತುಗಳು ಬರುತ್ತಿವೆ. ಇಂತಹ ಸುದ್ದಿಗಳನ್ನು ಮಾತ್ರ ಪ್ರತಿ ದಿನವೂ ಅಬ್ಬರಿಸುತ್ತ ಪ್ರಸಾರ ಮಾಡುತ್ತಲೇ ಇದ್ದೀರಿ.

ಜನರ ನಡುವೆ ಮನಸ್ಸನ್ನು ಬೆಸೆಯುವಂತಹ ಕಾರ್ಯವನ್ನು ಮಾಡಬೇಕಾದ ಮಾಧ್ಯಮಗಳು ಮನಸ್ಸುಗಳನ್ನು ಛಿದ್ರಗೊಳಿಸುವಂತಹ ರೀತಿಯಲ್ಲಿ ಸುದ್ದಿಗಳಿಗೆ ಧರ್ಮದ ಲೇಪನಗಳನ್ನು ಹಚ್ಚುತ್ತಾ ಮಾಧ್ಯಮದ ಮೂಲ ಆಶಯಗಳನ್ನು ಮರೆತು ನಡೆದುಕೊಳ್ಳುತ್ತಿದ್ದೀರಿ.

ಯಾವ ಸುದ್ದಿಗೆ ಎಷ್ಟು ಆದ್ಯತೆ ಕೊಡಬೇಕೆಂಬ ಲೆಕ್ಕವಿಲ್ಲದೆ ಕೊಲೆ, ಅತ್ಯಾಚಾರ, ಹಿಂಸೆ ಮುಂತಾದಂತಹ ಸುದ್ದಿಗಳನ್ನು ಧಾರವಾಹಿಗಳ ರೀತಿಯಲ್ಲಿ ಪ್ರತಿದಿನ ತೋರಿಸುತ್ತ ಜನರ ಮನಸ್ಸುಗಳು ಸುದ್ದಿ ನೋಡಬಾರದೆಂಬ ತೀರ್ಮಾನಕ್ಕೆ ಬರುವಂತೆ ಮಾಡಿದ್ದೀರಿ.

ಮಾಧ್ಯಮಗಳ, ಸುದ್ದಿ ಮಾಧ್ಯಮಗಳು, ಇದರ ಸುದ್ದಿ ವಾಚಕರು, ನಿರೂಪಕರು, ಸುದ್ದಿಯನ್ನ ಓದುವುದಿಲ್ಲ ನಿಷ್ಪಕ್ಷಪಾತ ವಿಶ್ಲೇಷಣೆಯನ್ನು ಮಾಡುವುದಿಲ್ಲ, ಕೇವಲ ಅಬ್ಬರಿಸುವುದು, ದೊಡ್ಡ ಧ್ವನಿಯಲ್ಲಿ ಮಾತನಾಡುವುದು, ಪಕ್ಷಪಾತದಿಂದ ಅಭಿಪ್ರಾಯಗಳನ್ನ ವ್ಯಕ್ತಪಡಿಸುವುದು ತಮ್ಮ ಗುರಿ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖವಾದ ಅಂಗ ತನ್ನ ಹಾದಿಯನ್ನ ತಪ್ಪುತ್ತಿದೆ ಎಂಬ ಅಭಿಪ್ರಾಯಕ್ಕೆ ಬಹುತೇಕ ಜನರು ಬಂದಿರುತ್ತಾರೆ.

ಕೋವಿಡ್ ಹಗರಣ ಇವರಿಗೆ ಧಾರವಾಹಿಗಳ ರೀತಿಯಲ್ಲಿ ತೋರಿಸಲು ಆಗುವುದಿಲ್ಲ, ದೇವರಾಜ್ ಅರಸು ಟರ್ಮಿನಲ್ ನಿಗಮದ ವ್ಯಾಪಕ ಭ್ರಷ್ಟಾಚಾರ ಗೊತ್ತೇ ಆಗಿರುವುದಿಲ್ಲ, ಪರುಶುರಾಮ ಪ್ರತಿಮೆಯ ಕಳಪೆ ಕಾಮಗಾರಿ ಸುದ್ದಿಯೇ ಆಗುವುದಿಲ್ಲ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply