ಕಾಂಗ್ರೆಸ್ ಹಿಂದೂ ವಿರೋಧಿಯೇ?

4 months ago

ಸ್ವಾತಂತ್ರ ಪೂರ್ವದಲ್ಲಿಯೇ ಮಹಾತ್ಮ ಗಾಂಧೀಜಿರವರು ಮತ್ತು ಅನೇಕ ಸಮಾಜ ಸುಧಾರಕರು ಅಸ್ಪೃಶ್ಯರಿಗೆ ದೇವಾಲಯದ ನಿಷೇಧದ ವಿರುದ್ಧ ಹೋರಾಟವನ್ನು ಮಾಡಿದವರು, ಕೆರೆಯ ನೀರನ್ನು, ಬಾವಿಯ ನೀರನ್ನು ಬಳಸಬಾರದೆಂದು ಬೆದರಿಕೆ ಹಾಕುತ್ತಿದ್ದ ವ್ಯಕ್ತಿಗಳ ವಿರುದ್ಧ ಹೋರಾಟವನ್ನು ಮಾಡಿದವರು, ಸಮಾಜದಲ್ಲಿ ಎಲ್ಲ ಜನರಿಗೂ ಸಮಾನ ಗೌರವದ ಸ್ವಾಭಿಮಾನದ ಬದುಕಿಗಾಗಿ ಧ್ವನಿಯನ್ನ ತೆಗೆದವರು ಹೇಗೆ ತಾನೆ ಹಿಂದೂ ವಿರೋಧಿಯಾಗುತ್ತಾರೆ.

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರವರ ಮೂಲಕ ಸಂವಿಧಾನವನ್ನು ರಚಿಸ ಅಸಮಾನತೆ ಮತ್ತು ಅಸ್ಪೃಶ್ಯತೆಯ ವಿರುದ್ಧ ಕಠಿಣ ವಾದಂತಹ ಕಾನೂನುಗಳನ್ನು ಜಾರಿಗೊಳಿಸುವಂತಹ ನಿಟ್ಟಿನಲ್ಲಿ ಶ್ರಮ ಪಟ್ಟಂತಹ ಕಾಂಗ್ರೆಸ್ಸಿನವರು ಹೇಗೆ ತಾನೇ ಹಿಂದೂ ವಿರೋಧಿ ಆಗುತ್ತಾರೆ.

ಉಳುವವನಿಗೆ ಭೂಮಿ ಎಂಬ ಕ್ರಾಂತಿಕಾರಿ ಯೋಜನೆಯನ್ನು ಹಲವರ ವಿರೋಧದ ನಡುವೆಯೂ ಜಾರಿಗೊಳಿಸಿ ಶೋಷಿತರು ಮತ್ತು ದಲಿತ ವರ್ಗದವರು ಲಕ್ಷಾಂತರ ಮಂದಿ ಭೂಮಿಯ ಮಾಲೀಕರಾಗಲು ದಿಟ್ಟತನವನ್ನ ತೋರಿಸಿದ ಕಾಂಗ್ರೆಸ್ ಹಿಂದೂ ವಿರೋಧಿ ಹೇಗೆ ತಾನೇ ಆಗುತ್ತಾರೆ.

ತಲೆಯ ಮೇಲೆ ಮಲವನ್ನು ಹೊರುವ ನೀಚ ರಾಕ್ಷಸಿ ಪದ್ಧತಿಯನ್ನು ರದ್ದುಗೊಳಿಸಿ ಜನರ ಸ್ವಾಭಿಮಾನವನ್ನು ಎತ್ತಿ ಹಿಡಿದಂತಹ ಕಾಂಗ್ರೆಸ್ ಹೇಗೆ ತಾನೇ ಹಿಂದೂವಿರೋಧಿ ಆಗುತ್ತಾರೆ.

ದಲಿತರು, ಹಿಂದುಳಿದ ವರ್ಗದವರು, ಶೋಷಿತ ಜನರು, ಮಹಿಳೆಯರು, ಮಕ್ಕಳು ಇವರುಗಳನ್ನ ತಲೆತಲಾಂತರದಿಂದ ಜೀತ ಪದ್ಧತಿಯ ಮೂಲಕ ಶೋಷಣೆ ಮಾಡುತ್ತಿದ್ದ ವ್ಯವಸ್ತೆಯ ವಿರುದ್ಧ ನಿಂತು ಜೀತ ಪದ್ಧತಿಯನ್ನು ನಿರ್ಮೂಲ ಮಾಡಿಕೊಟ್ಟ ಕಾಂಗ್ರೆಸ್ ಹೇಗೆ ತಾನೆ ಹಿಂದೂ ವಿರೋಧಿ ಆಗುತ್ತಾರೆ.

ಮಂಡಲ್ ಆಯೋಗವನ್ನು ರಚಿಸುವುದರ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗದವರಿಗೆ ಕೇಂದ್ರ ಸರ್ಕಾರಗಳಲ್ಲಿ ಮೀಸಲಾತಿಯನ್ನು ಕಲ್ಪಿಸಿ ಕೊಡುವ ಕನಸನ್ನು ಕಂಡ ಕಾಂಗ್ರೆಸ್ ಹೇಗೆ ತಾನೇ ಹಿಂದೂ ವಿರೋಧಿ ಆಗುತ್ತಾರೆ.

ಕರ್ನಾಟಕದಲ್ಲಿ ಹಾವನೂರು ವರದಿಯ ಮೂಲಕ ಹಿಂದುಳಿದ ವರ್ಗದವರಿಗೆ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಮತ್ತು ಹಕ್ಕುಗಳನ್ನ ಕಲ್ಪಿಸಿಕೊಟ್ಟ ಕಾಂಗ್ರೆಸ್ ಹೇಗೆ ತಾನೇ ಹಿಂದೂ ವಿರೋಧಿ ಆಗುತ್ತಾರೆ.

ಉನ್ನತ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ, ಸಿಇಟಿ ವ್ಯವಸ್ಥೆಯನ್ನು ಜಾರಿಗೆ ತಂದು, ಸಮಾಜದ ಎಲ್ಲ ವರ್ಗದ ಬಡವರಿಗೆ ಶೈಕ್ಷಣಿಕ ವಾದಂತಹ ಸೌಲತ್ತುಗಳನ್ನ ಮತ್ತು ಅವಕಾಶಗಳನ್ನು ಕಲ್ಪಿಸಿಕೊಟ್ಟ ಕಾಂಗ್ರೆಸ್ ಹೇಗೆ ತಾನೇ ಹಿಂದೂ ವಿರೋಧಿ ಆಗುತ್ತಾರೆ.

ಅಸ್ಪೃಶ್ಯತೆಯ ವಿರುದ್ಧ ಸದಾ ಕಾಲ ಹೋರಾಟವನ್ನು ಮಾಡಿ ಅನಿಷ್ಟ ಪದ್ದತಿಯನ್ನು ನಿರ್ಮೂಲನೆ ಮಾಡುವ ಸಲುವಾಗಿ ಕಾಲ ಕಾಲಕ್ಕೆ ಗಟ್ಟಿಯಾದಂತಹ ಧ್ವನಿಯನ್ನ ತೆಗೆದು ಆ ವರ್ಗದ ಜನರಿಗಾಗಿ ಸೌಕರ್ಯ ಸೌಲಭ್ಯಗಳನ್ನ ಕಲ್ಪಿಸಿಕೊಡಲು ಹಲವಾರು ಯೋಜನೆಗಳನ್ನ ರೂಪಿಸಿದ ಕಾಂಗ್ರೆಸ್ ಹೇಗೆ ತಾನೇ ಹಿಂದೂ ವಿರೋಧಿ ಆಗುತ್ತಾರೆ.

ಹಸಿದ ಹೊಟ್ಟೆಗೆ ಅನ್ನವನ್ನು, ವಾಸಿಸಲು ಮನೆಯನ್ನ, ಕುಡಿಯಲು ನೀರು, ವೈದ್ಯಕೀಯ ಸೌಲಭ್ಯ, ಶಿಕ್ಷಣಕ್ಕಾಗಿ ಶಾಲೆ, ಬಸ್ ನಿಲ್ದಾಣಗಳು, ರಸ್ತೆ, ಕೆರೆಗಳು, ಅಣೆಕಟ್ಟುಗಳು, ಕಾರ್ಖಾನೆಗಳು, ಇವುಗಳನ್ನ ಯಾವುದಾದರೂ ಒಂದು ವರ್ಗಕ್ಕೆ ಎಂದು ಸೀಮಿತಗೊಳಿಸಿ  ನಿರ್ಮಾಣ ಮಾಡಿದ್ದಾರೆಯೇ ಕಾಂಗ್ರೆಸ್ ಸರ್ಕಾರಗಳು.

ಹಸಿರು ಕ್ರಾಂತಿಯ ಮೂಲಕ, ಭಾರತ ದೇಶದ ಕೋಟಿ ಕೋಟಿ ಜನರ ಆಹಾರ ಅವಶ್ಯಕತೆಯನ್ನು ಪೂರೈಸಿ ಕೊಟ್ಟಂತಹ ಸಂದರ್ಭದಲ್ಲಿ ಯಾವುದೋ ಒಂದು ಧರ್ಮವನ್ನು ಉದ್ದೇಶವಾಗಿಟ್ಟುಕೊಂಡು ಯೋಜನೆಯನ್ನ ರೂಪಿಸಿ ಹಸಿರು ಕ್ರಾಂತಿಯನ್ನ ಮಾಡಿದ್ದಾರೆಯೇ ಕಾಂಗ್ರೆಸ್ ಪಕ್ಷ.

ಹೈನುಗಾರಿಕೆಯ ಮೂಲಕ ಕೋಟಿ ಕೋಟಿ ಗ್ರಾಮೀಣ ಪ್ರದೇಶದ ಜನರ ಆರ್ಥಿಕ ಬದುಕಿಗೆ ಚೈತನ್ಯವನ್ನು ತುಂಬಿದ ಕ್ಷೀರಕ್ರಾಂತಿಯ ಯೋಜನೆಯ ರೂಪಿಸುವ ಸಂದರ್ಭದಲ್ಲಿ ಯಾವುದಾದರೂ ಒಂದು ಧರ್ಮದ ಉದ್ದೇಶವಿತ್ತೆ ಕಾಂಗ್ರೆಸ್ ಪಕ್ಷಕ್ಕೆ.

ಆರ್ಥಿಕ ಉದಾರೀಕರಣ, ವಿಶ್ವ ಬಂಡವಾಳ ಹೂಡಿಕೆ, ಖಾಸಗೀಕರಣ ಇವುಗಳ ಮೂಲಕ ದೇಶದ ಅರ್ಥವ್ಯವಸ್ಥೆಯನ್ನು ಬದಲಾಯಿಸಿದ ಹಿನ್ನೆಲೆಯಲ್ಲಿ ಕೋಟಿ ಕೋಟಿ ಉದ್ಯೋಗಗಳು ಸೃಷ್ಟಿಯಾಯಿತು. ಈ ಯೋಜನೆಗಳ ಹಿಂದೆ ಯಾವುದಾದರೂ ಒಂದು ಧರ್ಮದ ಪ್ರಗತಿಯ ಉದ್ದೇಶವಿತ್ತೆ ಕಾಂಗ್ರೆಸ್ ಪಕ್ಷಕ್ಕೆ.

ಧಾರ್ಮಿಕ ದತ್ತಿ ಇಲಾಖೆಯ ಕರ್ನಾಟಕದಲ್ಲಿ ಶಕ್ತಿಶಾಲಿಯನ್ನಾಗಿಸಿ ದೇವಾಲಯಗಳ ಅಭಿವೃದ್ಧಿಗೆ, ಅರ್ಚಕರ ಬದುಕಿನ ಸುಧಾರಣೆಗೆ, ಹಲವಾರು ಯೋಜನೆಗಳನ್ನು ರೂಪಿಸಿರುವ ಸರ್ಕಾರ ಹಿಂದೂ ವಿರೋಧಿಯೇ.

ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತವಾಗಿ ಮಹಿಳೆಯರು ಪ್ರಯಾಣಿಸುವ ವೇಳೆಯಲ್ಲಿ ಯಾರಿಗಾದರೂ ಯಾವುದಾದರೂ ಒಂದು ಧರ್ಮದ ಪ್ರಶ್ನೆಯನ್ನ ಕೇಳಿದ್ದಾರೆಯೇ ಸರ್ಕಾರ.

ಗೃಹಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ವಿದ್ಯುತ್ ನೀಡುವ ಸಂದರ್ಭದಲ್ಲಿ ಯಾವ ಜಾತಿಯ ಮನೆಯಲ್ಲಿ ಬೆಳಕು ಮೂಡಿದೆ ಎಂದು ತಾರತಮ್ಯ ಮಾಡಿದ್ದೇವೆಯೇ ಸರ್ಕಾರ.

ಭಾಗ್ಯಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿಗಳನ್ನು ನೀಡುವ ಸಂದರ್ಭದಲ್ಲಿ ಯಾವುದಾದರೂ ಧರ್ಮ ಮತ್ತು ಜಾತಿಯ ತಾರತಮ್ಯ ಮಾಡಲಾಗಿದೆಯೇ ಸರ್ಕಾರದಲ್ಲಿ.

ವಿದ್ಯಾಸಿರಿ ಯೋಜನೆ ಅಡಿಯಲ್ಲಿ ಹಾಸ್ಟೆಲ್ ಸೌಲಭ್ಯ ದೊರೆಯದ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನ ನೀಡುವ ಸರ್ಕಾರ ಹೇಗೆ ತಾನೆ ಹಿಂದೂ ವಿರೋಧಿ ಆಗುತ್ತದೆ.

ದಲಿತರು ದೇವಾಲಯದ ಪ್ರವೇಶವನ್ನ ವಿರೋಧಿಸಿದವರು, ಕೆರೆಯ ನೀರನ್ನು ಬಳಸಬಾರದೆಂದು ನಿಷೇಧವನ್ನು ಹಾಕಿದವರು, ಬಾವಿಯ ನೀರನ್ನು ಕುಡಿಯ ಬಾರದೆಂದು ದೂರವಿಟ್ಟವರು, ಅಕ್ಷರ ಕಲಿಯಬಾರದೆಂದು ಶಾಲೆಯಿಂದ ಹೊರಗಟ್ಟಿದವರು, ಮೈ ಮೇಲೆ ಬಟ್ಟೆ ಧರಿಸಿ ದಂತೆ ಹಿಂಸಿಸಿದವರು, ಅಸ್ಪೃಶ್ಯತೆಯ ಆಚರಣೆಗೆ ಪ್ರೋತ್ಸಾಹಿಸಿದವರು, ಮೂಡ ನಂಬಿಕೆಗಳ ಉತ್ತೇಜಿಸಿದವರು, ದೇವರು ಧರ್ಮ ತಮ್ಮ ಆಸ್ತಿಯೆಂದು ದುಡಿಯುವ ಜನರನ್ನ ದೂರವಿಟ್ಟವರು, ಇಂತಹ ಕೃತ್ಯಗಳಿಗೆ ಪ್ರೋತ್ಸಾಹ ನೀಡಿದವರು, ಊಟದಲ್ಲಿ, ನೋಟದಲ್ಲಿ ಭೇದವನ್ನ ಎಣಿಸಿದವರು, ಇಂದು ಬರುತ್ತಿದ್ದಾರೆ ಧರ್ಮದ ಉದ್ದಾರಕರಾಗಿ, ಭಾಷಣಗಳನ್ನು ಮಾಡುತ್ತಿದ್ದಾರೆ ವೇದಿಕೆಗಳನ್ನ ಏರಿ,

ಬಡವರ ಮನೆಯ ಮಕ್ಕಳನ್ನು ಮುಂದೆ ಬಿಟ್ಟು ಅವರನ್ನು ಆಯುಧಗಳನ್ನಾಗಿಸಿಕೊಂಡು ಪ್ರಚೋದಿಸಿ ತಮ್ಮ ಮಕ್ಕಳಿಗೆ ವಿದೇಶಗಳಲ್ಲಿ ಉನ್ನತ ಶಿಕ್ಷಣವನ್ನ ಕಲ್ಪಿಸಿ ಕೊಡುತ್ತಾ, ಅವರಿಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟು, ಮುಗ್ಧ ಜನರನ್ನು ಪಕ್ಷೋದಿಸುತ್ತಿರುವವರು ಹಿಂದೂ ರಕ್ಷಕರೇ,

ಹಸಿದವರಿಗೆ ಅನ್ನ ಕೊಟ್ಟಾಗ, ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟಾಗ, ವಾಸಿಸಲು ಸೂರು ಕೊಟ್ಟಾಗ, ಕಲಿಯಲು ಶಾಲೆ ಕೊಟ್ಟಾಗ, ಆರೋಗ್ಯಕ್ಕೆ ಆಸ್ಪತ್ರೆಗಳು ನಿರ್ಮಿಸಿದಾಗ, ಸಂಚಾರಕ್ಕೆ ರಸ್ತೆಗಳು ನಿರ್ಮಿಸಿದಾಗ, ಹೊಲಗದ್ದೆಗಳಿಗೆ ನೀರು ಹರಿಯಲು ಕಾಲುವೆಗಳ, ಅಣೆಕಟ್ಟುಗಳು ಕಟ್ಟಿದಾಗ, ಉಳಿಯುತ್ತದೆ, ಬದುಕಿನ ಧರ್ಮ, ಮಾನವ ಧರ್ಮ,

ಮಾನವ ಧರ್ಮವನ್ನು ನಂಬಿರುವ ಕಾಂಗ್ರೆಸ್ ಪಕ್ಷಕ್ಕೆ ಎಲ್ಲ ಧರ್ಮದ ಬಡವರು ಎಲ್ಲ ಧರ್ಮದ ಶೋಷಿತರು ಒಂದೇ

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವವರು ಹಿಂದೂ ಧರ್ಮದಲ್ಲಿನ ಶೋಷಿತರು ಮತ್ತು ಧ್ವನಿ ಇಲ್ಲದ ಜನರಿಗಾಗಿ ಶತ ,ಶತಮಾನದಿಂದ ಏನು ಮಾಡಿದ್ದಾರೆ ಎನ್ನುವುದನ್ನು ಪ್ರಶ್ನಿಸುವ ಕಾಲ ಬಂದಿದೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply