ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕುರಿತು ಬಿಜೆಪಿ, ಜೆಡಿಎಸ್ ಪ್ರತಿಕ್ರಿಯೆ ಏನು?

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಿದ್ದತೆ ನಡೆಸಿರುವ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ,
ಪದವೀಧರರು ಹಾಗೂ ಡಿಪ್ಲೊಮಾ ಮಾಡಿದವರಿಗೆ ಮಾಶಾಸನ ನೀಡುವ ಗ್ಯಾರಂಟಿ ಘೋಷಣೆಗೆ ಬಿಜೆಪಿ ಮತ್ತು ಜೆಡಿಎಸ್ ತಿರುಗೇಟು ನೀಡಿವೆ.

ಇಂತಹ ‌ಘೋಷಣೆಗೆ ಯಾವುದೇ ಬೆಲೆ ಇಲ್ಲ ಎಂದು ಲೇವಡಿ ಮಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದಕ್ಕೆ ಬೇಕಾಗುವ ಸಂಪನ್ಮೂಲ ಎಲ್ಲಿಂದ ತರುತ್ತೀರಾ‌ ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ಎಲ್ಲಿದೆ? ಯಾವ ರಾಜ್ಯದಲ್ಲಿ ಅನುಷ್ಠಾನ ಮಾಡಲಾಗಿದೆ, ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದವರೇ ಘೋಷಣೆ ಮಾಡಿದ ಯೋಜನೆಗಳು ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿ 4ನೇ ಗ್ಯಾರಂಟಿ ಯೋಜನೆಗೆ ಬೆಲೆ ಇಲ್ಲ ಎಂದು ಕುಹುಕವಾಡಿದರು.

ಈ ಯೋಜನೆ ಅನುಷ್ಠಾನ ಮಾಡಲು ಸಾವಿರಾರು ಕೋಟಿ ರೂ. ಬೇಕು. ಇಷ್ಟೊಂದು ಹಣವನ್ನು ಒಂದೇ ಯೋಜನೆಗೆ ಅನುಷ್ಠಾನ ಮಾಡಿದರೆ ಬೇರೆ ಬೇರೆ ಯೋಜನೆಗಳಿಗೆ ಹಣ ತರುವುದು ಎಲ್ಲಿಂದ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನವರು ಘೋಷಣೆಗಳನ್ನು ನೋಡಿದರೆ ಬಜೆಟ್‍ನ ಹಣ ಸಾಕಾಗುವುದಿಲ್ಲ. ಹೆಚ್ಚೆಂದರೆ ಸರ್ಕಾರಿ ಸಂಬಳ ಕೊಡುವುದಕ್ಕೂ ಕಷ್ಟವಾಗುತ್ತದೆ. ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಖಚಿತವಾಗಿರುವುದರಿಂದ ಜನರಲ್ಲಿ ಗೊಂದಲ ಉಂಟುಮಾಡಲು ಈ ರೀತಿಯ ಸುಳ್ಳು ಭರವಸೆ ಕೊಡುತ್ತಾರೆ. ಬಿಜೆಪಿ ಮೇಲೆ ಅವರಿಗೆ ತುಂಬ ಭಯ ಇದೆ ಎಂದು ಹೇಳಿದರು.

ವಿಸಿಟಿಂಗ್ ಕಾರ್ಡ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರತಿಕ್ರಿಯಿಸಿ, ಕಾಂಗ್ರೆಸ್ ನ ಘೋಷಣೆ ಈಡೇರುವುದಿಲ್ಲ. ಛತ್ತೀಸ್ ಗಡದಲ್ಲಿ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಒಂದು ಸಾವಿರ ರೂ. ನೀಡುವುದಾಗಿ ಹೇಳಿದ್ದರು. ನಾಲ್ಕು ವರ್ಷ ನೀಡದೆ, ಕೊನೆ ವರ್ಷ ಕೊಡಲು ಓಡಾಡಿದರು. ಈ ರೀತಿ ಜನರನ್ನು ಯಾಮಾರಿಸುತ್ತಾರೆ. ಅದು ಗ್ಯಾರಂಟಿ ಕಾರ್ಡ್ ಅಲ್ಲ, ಬರೀ ವಿಸಿಟಿಂಗ್ ಕಾರ್ಡ್ ಎಂದು ಆಪಾದಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು, ಬೋಗಸ್ ಕಾರ್ಡ್ ಬಗ್ಗೆ ಮಾತನಾಡುತ್ತಿದ್ದಾರೆ. ಬೇರೆ ಬೇರೆ ರಾಜ್ಯಗಳಲ್ಲಿ ಈ ರೀತಿ ಆಶ್ವಾಸನೆಗಳನ್ನು ನೀಡಿದ್ದು, ಇಂದಿಗೂ ಈಡೇರಿಸಿಲ್ಲ. ಇದು ಅವರ ಟ್ರ್ಯಾಕ್ ರೆಕಾರ್ಡ್ . ರಾಜಸ್ಥಾನ, ಛತ್ತೀಸ್‍ಗಡದಲ್ಲಿ ಘೋಷಣೆ ಮಾಡಿದ್ದನ್ನೇ ಅವರು ಈಡೇರಿಸಿಲ್ಲ ಎಂದರು.

ಡೂಪ್ಲಿಕೇಟ್ ಕಾರ್ಡ್: ಜೆಡಿಎಸ್ ನಾಯಕ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಅದು ಗ್ಯಾರಂಟಿ ಕಾರ್ಡ್ ಅಲ್ಲ ಡೂಪ್ಲಿಕೇಟ್ ಕಾರ್ಡ್ ಎಂದು ವ್ಯಂಗ್ಯವಾಡಿದರು.

ಮಾಧ್ಯಮಗಳ ಜತೆ ಮಾತನಾಡಿದ ಅವರು, ಆ ಗ್ಯಾರಂಟಿ ಕಾರ್ಡ್ ಗಳಿಗೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸಹಿ ಬೇರೆ ಹಾಕಿದ್ದಾರೆ. ಅವರ ಈ ಎಲ್ಲಾ ಯೋಜನೆಗಳಿಗೆ 25 ಸಾವಿರ ಕೋಟಿ ಬೇಕು. ಆ ಹಣವನ್ನು ಎಲ್ಲಿಂದ ಹೊಂದಿಸುತ್ತಾರೆ ಎಂದು ಪ್ರಶ್ನಿಸಿದರು.

ಪಂಚರತ್ನ ಯೋಜನೆ ಜಾರಿಗೆ 2.50 ಲಕ್ಷ ಕೋಟಿ ರೂ. ಹಣ ಬೇಕು. ಈ ಹಣ ಹೊಂದಿಸುವುದು ನನಗೆ ಕಷ್ಟವಿಲ್ಲ. ಸಾಲ ಮನ್ನಾಕ್ಕೆ 25 ಸಾವಿರ ಕೋಟಿ ರೂ. ಹೊಂದಿಸಿದ ದಾಖಲೆ ನನ್ನದು. ನನ್ನ ಗುರಿ, ಕನಸು ಸಾಕಾರಗೊಳಿಸಲು ಅವಕಾಶ ಇದೆ. ಆದರೆ, ಕಾಂಗ್ರೆಸ್ ಗ್ಯಾರಂಟಿ ಹಾಗಿಲ್ಲ, ಅವರು ಅಧಿಕಾರಕ್ಕೆ ಬರುವ ಗ್ಯಾರಂಟಿಯೇ ಇಲ್ಲ. ಆದರೂ ಕಾಂಗ್ರೆಸ್ ನಾಯಕರು ನಾಲ್ಕನೇ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.

Leave a Reply