ಮೊದಲು ಶೇ.40 ಫೈಲ್, ಕೊರೋನಾ ಸಂದರ್ಭದ ಭ್ರಷ್ಟಚಾರದ ಬಗ್ಗೆ ಸಿನಿಮಾ ತೆಗೆಯಲಿ: ಡಿ.ಕೆ.ಶಿವಕುಮಾರ್

3 years ago

ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು‌ ರಣತಂತ್ರ ರೂಪಿಸುತ್ತಿರುವ ಪ್ರದೇಶ ಕಾಂಗ್ರೆಸ್, ತನ್ನ ಹಳೆಯ ಸಂಪ್ರದಾಯಕ್ಕೆ ಇತಿಶ್ರೀ‌ ಹಾಡಿದ್ದು ಚುನಾವಣೆ ವೇಳಾಪಟ್ಟಿ ಪ್ರಕಟಣೆಗೂ ಮುನ್ನವೇ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡಲಿದೆ.

ನೂತನ ಸಂವತ್ಸರಾರಂಭದ ಯುಗಾದಿಯಂದು ಕಾಂಗ್ರೆಸ್ ಹುರಿಯಾಳುಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ.

ಅಭ್ಯರ್ಥಿಗಳ ಆಯ್ಕೆ ಸಂಬಂಧ ಕಳೆದ ಮೂರು ತಿಂಗಳಿನಿಂದ ಹಲವು ಸುತ್ತಿನ ಕಸರತ್ತನ್ನು ನಡೆಸಿರುವ ಕಾಂಗ್ರೆಸ್ ಪಂಚಾಯತ್ ಮಟ್ಟದಿಂದ ಅಭಿಪ್ರಾಯ ಸಂಗ್ರಹಿಸಿದೆ. ಕ್ಷೇತ್ರ ಹಾಗೂ ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯಗಳನ್ನು ಕ್ರೋಢಿಕರಿಸಿದೆ. ರಾಜ್ಯ ಮಟ್ಟದಲ್ಲಿ ಚುನಾವಣಾ ಸಮಿತಿ, ರಾಷ್ಟ್ರೀಯ ಮಟ್ಟದ ಟಿಕೆಟ್ ಪರಿಶೀಲನಾ ಸಮಿತಿಗಳು 13ಕ್ಕೂ ಹೆಚ್ಚು ಸಭೆಗಳನ್ನು ನಡೆಸಿವೆ.

ಕಳೆದ ಶುಕ್ರವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿ 135 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯನ್ನು ಅಖೈರುಗೊಳಿಸಿದೆ. ಅದರ ಪ್ರಕಾರ ರಾಜ್ಯ ಸಮಿತಿ ಶಿಫಾರಸ್ಸು ಮಾಡಿರುವ ಒಂದೇ ಹೆಸರಿನ 75 ಕ್ಷೇತ್ರಗಳು ಹಾಗೂ ಹಾಲಿ ಶಾಸಕರಿದ್ದ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲೆ ಚುನಾವಣೆ ಅಧಿಸೂಚನೆಗೂ ಮೊದಲೇ ಟಿಕೆಟ್ ಘೋಷಣೆ ಮಾಡಿರುವ ಉದಾಹರಣೆಗಳು ಕಡಿಮೆ. ಈ ಬಾರಿ ಅಂತಹ ಸಾಹಸಕ್ಕೆ ಕಾಂಗ್ರೆಸ್ ಕೈ ಹಾಕಿದೆ.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ರಾಜ್ಯದವರೆ ಆಗಿರುವುದರಿಂದ ಒಂದು ವೇಳೆ ಬಂಡಾಯ ತೀವ್ರಗೊಂಡರೆ ಅದನ್ನು ಶಮನ ಮಾಡುವ ಬಲವಾದ ವಿಶ್ವಾಸ ಕಾಂಗ್ರೆಸ್‍ನಲ್ಲಿದೆ.

ಮಂಡ್ಯ ಜಿಲ್ಲೆಯ ಆದಿ ಚುಂಚನಗಿರಿ ಕ್ಷೇತ್ರದಲ್ಲಿ ಯುಗಾದಿ ಅಮವಾಸ್ಯೆ ಪೂಜೆ‌ ನೆರವೇರಿಸಿದ ನಂತರ ‌ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, 100ಕ್ಕೂ ಹೆಚ್ಚು ಜನರ ಮೊದಲ ಪಟ್ಟಿಯು ಬುಧವಾರ (ಮಾರ್ಚ್ 22 ರಂದು) ಬಿಡುಗಡೆಯಾಗಲಿದೆ. ಈ ವರ್ಷ ರಾಜ್ಯದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದೇನೆ’ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಬಯಸಿದ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶವಿದೆ. ಕೋಲಾರ, ವರುಣ, ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರ ಯಾವುದಾದರೂ ಆಯ್ಕೆ ಮಾಡಿಕೊಳ್ಳಲಿ. ಡಿ.ಕೆ.ಸುರೇಶ್‌ ಅವರಿಗೆ ಸಂಸದರಾಗಿಯೇ ಉಳಿಯುವ ಇಚ್ಛೆ ಇದೆ. ಯಾರೇ ಅಭ್ಯರ್ಥಿಯಾದರೂ ಡಿ.ಕೆ.ಶಿವಕುಮಾರ್‌, ಡಿ.ಕೆ.ಸುರೇಶ್‌ ಅವರೇ ಅಭ್ಯರ್ಥಿ ಎಂದು ಮತ ಕೇಳಿ ಗೆಲ್ಲಿಸಿಕೊಂಡು ಬರುತ್ತೇವೆ’ ಎಂದು ಹೇಳಿದರು.

ಬಾಬುರಾವ್ ಚಿಂಚನಸೂರು ಈಗಾಗಲೇ ಬಿಜೆಪಿಯ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಆಗಿದೆ, ನನ್ನ ಬಳಿ ಮಾತನಾಡಿದ್ದಾರೆ. ಅವರು ಈ ಮೊದಲು ಕಾಂಗ್ರೆಸ್‍ನಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದರು. ಪಕ್ಷ ದೊಡ್ಡ ಸ್ಥಾನ ಕೊಟ್ಟು ಬೆಳೆಸಿತ್ತು. ಈಗ ಮತ್ತೆ ಕಾಂಗ್ರೆಸ್‍ಗೆ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸ್ತಿ ಆಗಲಿದ್ದಾರೆ ಎಂದರು.

ಉರಿಗೌಡ ಮತ್ತು ನಂಜೇಗೌಡ ಎಂಬ ಕಾಲ್ಪನಿಕ ವ್ಯಕ್ತಿಗಳ ಮೂಲಕ ಒಕ್ಕಲಿಗ ಸಮುದಾಯಕ್ಕೆ ಕಳಂಕ ತರಲು ಬಿಜೆಪಿಯವರು ಹೊರಟಿದ್ದಾರೆ. ನಾವು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವ ಕಾರಣಕ್ಕೂ ಬಿಡೋದಿಲ್ಲ ಎಂದು ಎಚ್ಚರಿಸಿದರು.

ಬಿಜೆಪಿ ನಾಯಕರಿಗೆ ಶ್ರೀಗಳು ಬುದ್ದಿ ಹೇಳುವ ಅವಶ್ಯಕತೆ ಇಲ್ಲ, ಈ ಸಮಾಜ ಯಾರನ್ನು ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ. ಬಿಜೆಪಿಯ ಸಿ.ಟಿ.ರವಿ, ಅಶ್ವಥ ನಾರಾಯಣ, ಶೋಭಾ ಕರಂದ್ಲಾಜೆ ಹೊಸ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಮುನಿರತ್ನ ಒಬ್ಬ ಬ್ಯುಸಿನೆಸ್ ಮ್ಯಾನ್. ಆತ ನೂರಾರು ಸಿನಿಮಾ ಮಾಡಿಕೊಳ್ಳಲಿ. ಒಕ್ಕಲಿಗರಿಗೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ಇದೆ. ಒಕ್ಕಲಿಗರ ಸಮುದಾಯಕ್ಕೆ ಕಳಂಕ ತರುವ ಕೆಲಸ ಮಾಡುವ ಕೆಲವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಇದು ಸಮುದಾಯದ ಸ್ವಾಭಿಮಾನದ ಪ್ರಶ್ನೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮರೆಮಾಚಲು ಕಥೆ ಕಟ್ಟುತ್ತಿದ್ದಾರೆ. ಜನರ ಬದುಕಿನ ಬಗ್ಗೆ ಯೋಚಿಸಬೇಕು. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದರ ಬಗ್ಗೆ ಮಾತಾಡಬೇಕು. ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಬೇಕು ಅದನ್ನು ಬಿಟ್ಟು ಕಾಲ್ಪನಿಕ ಕತೆಗಳ ಮೂಲಕ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡಬಾರದಿತ್ತು ಎಂದರು.

ಸಮುದಾಯದ ವಿರುದ್ಧ ನಡೆಯುತ್ತಿರುವ ಹುನ್ನಾರವನ್ನು ಪ್ರತಿಭಟಿಸಬೇಕಿದೆ. ಅದಕ್ಕೆ ಶ್ರೀ ಮಠದ ಸ್ವಾಮಿಗಳು ನೇತೃತ್ವ ವಹಿಸಬೇಕು. ಹೋರಾಟದ ಸ್ವರೂಪ ನಿರ್ಧರಿಸಬೇಕು ಎಂದು ಮನವಿ ಮಾಡಿದರು.

ಪಕ್ಷದ ಅಧ್ಯಕ್ಷನಾಗಿ ನಾನೇ ಖುದ್ದು ಹೋರಾಟ ನಡೆಸುತ್ತೇನೆ. ಉರಿಗೌಡ, ನಂಜೇಗೌಡ ಅನ್ನೋರು ಯಾರೂ ಇಲ್ಲ. ಮೊದಲು ಶೇ.40 ಫೈಲ್, ಕೊರೋನಾ ಸಂದರ್ಭದಲ್ಲಿನ ಭ್ರಷ್ಟಚಾರದ ಬಗ್ಗೆ ಸಿನಿಮಾ ತೆಗೆಯಲಿ. ಈ ಬಗ್ಗೆ ಎರಡು ಸಿನಿಮಾ ತೆಗೆದರೆ ಸಾಕು ಎಂದು ಲೇವಡಿ ಮಾಡಿದರು.

Leave a Reply