ʼಕರ್ನಾಟಕದ ಅಳಿಯʼ ಎಂದು ಕರೆಯಿಸಿಕೊಳ್ಳುತ್ತಿರುವ ರಿಷಿ ಸುನಕ್ ಇಂಗ್ಲಂಡಿನ ಪ್ರಧಾನಿಯಾಗಿರುವುದಕ್ಕೆ ಬಹುತೇಕ ಭಾರತೀಯರಿಗೆ ಸಂತೋಷವಾಗುವುದು ಸಹಜವೇ ಆಗಿದೆ. ʼಬಹಳ ಕಾಲ ನಮ್ಮನ್ನು ಆಳಿದ ದೇಶವನ್ನು ನಾವೀಗ ಆಳಲು ಸುರುಮಾಡಿದ್ದೇವೆʼ ಎಂದೂ ಬಹಳ ಜನ ಭಾವಿಸಿಕೊಂಡಿದ್ದಾರೆ. ಈ ಭ್ರಮೆಯಿಂದ ಹೊರ ಬಂದಷ್ಟೂ ನಮಗೆ ಲಾಭವುಂಟು.
ಸುನಕ್ ಅವರ ಪೂರ್ವಜರ ಬಗ್ಗೆ ಈಗಾಗಲೇ ಬಹಳ ಜನ ಬರೆದಿದ್ದಾರೆ ಅವರ ತಂದೆಯ ಅಜ್ಜ ರಾಮದಾಸ್ ಸುನಕ್ ಅವರು ಅವಿಭಜಿತ ಭಾರತಕ್ಕೆ ಸೇರಿದ ಗುಜ್ರಾನ್ವಾಲಾದವರು. ಆ ಪ್ರದೇಶ ಈಗ ಪಾಕಿಸ್ಥಾನಕ್ಕೆ ಸೇರಿರುವುದರಿಂದ ಪಾಕಿಗಳೂ ಸುನಕ್ ಅವರನ್ನು ಬೆಂಬಲಿಸುತ್ತಿದ್ದಾರೆ. ರಾಮದಾಸ್ ಸುನಕ್ ಅವಿಭಜಿತ ಭಾರತದಿಂದ ಹೋದದ್ದು ಪೂರ್ವ ಆಫ್ರಿಕಾಕ್ಕೆ. ಸುನಕ್ ಅವರ ತಂದೆ ಇದ್ದುದು ಕೀನ್ಯಾದಲ್ಲಿ, ತಾಯಿ ಇದ್ದುದು ಟ್ಯಾಂಗನೀಕಾದಲ್ಲಿ. ಅಲ್ಲಿಂದ ಈ ದಂಪತಿಗಳು ೧೯೬೬ರಲ್ಲಿ ಬ್ರಿಟನ್‌ಗೆ ವಲಸೆ ಬಂದು ಹ್ಯಾಂಪ್‌ಶೈರ್‌ನ ಸೌತಾಂಪ್ಟನ್‌ನಲ್ಲಿ ನೆಲಸಿದರು. ಅಲ್ಲಿ ಸುನಕ್ ಜನಿಸಿದರು. ಸುನಕ್ ಅವರು ವಿಂಚೆಸ್ಟರ್, ಆಕ್ಸ್‌ಫರ್ಡ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಓದಿದರು. ಅಲ್ಲಿಯೇ ಅವರು ತನ್ನ ಭಾವಿ ಪತ್ನಿ ಅಕ್ಷತಾ ಮೂರ್ತಿ ಅವರನ್ನು ಭೇಟಿಯಾಗಿದ್ದರು. ಅನೇಕ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ದುಡಿದ ಅವರು ಇವತ್ತು ಬ್ರಿಟನ್‌ನ 222ನೇ ಶ್ರೀಮಂತ ವ್ಯಕ್ತಿಯೆಂದು ಪ್ರಸಿದ್ಧಿ ಪಡೆದಿದ್ದಾರೆ. ಮಾರುಕಟ್ಟೆಯ ವಿಸ್ತರಣೆಯನ್ನು ಗಮನದಲ್ಲಿರಿಸಿಕೊಂಡು ಸುನಕ್ ಬ್ರೆಕ್ಸಿಟ್ ಅನ್ನು ಬೆಂಬಲಿಸಿದ್ದರು. ಇಂಗ್ಲಂಡಿನಲ್ಲಿ ಅವರು ಹೌಸ್ ಆಫ್ ಕಾಮನ್ಸ್‌ನಲ್ಲಿ ಸಂಸದರಾಗಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿದಾಗ ಮರೆತು ಹೋಗಿದ್ದ ಭಾರತೀಯರಿಗೆ ಅವರು ಮತ್ತೆ ನೆನಪಾದರು. ಬಿಬಿಸಿಯಲ್ಲಿ ಸುನಕ್ ಮಾಡುತ್ತಿದ್ದ ಆಕರ್ಷಕ ಚರ್ಚೆಗಳನ್ನು ನಾನೂ ಕೇಳುತ್ತಿದ್ದೆ.
ಈ ಖಂಡಾಂತರಗಳ ವಲಸೆ ಮತ್ತು ಶ್ರೀಮಂತಿಕೆಯ ಹೆಚ್ಚಳದ ಗುರಿಯಲ್ಲಿ ರಾಷ್ಟ್ರೀಯತೆ ಬಹಳ ತೆಳುವಾಗಿರುತ್ತದೆ. ಭಾರತದಲ್ಲಿ ಇವತ್ತು ಶ್ರೀಮಂತರಾಗಿರುವವರಲ್ಲಿ ಹೆಚ್ಚಿನವರು ಈಗಾಗಲೇ ವಿದೇಶಗಳಲ್ಲಿ ಮನೆಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಏನಾದರೂ ತೊಂದರೆಯಾದರೆ ಅವರು ಆರಾಮವಾಗಿ ದೇಶ ಬಿಟ್ಟು ಅಲ್ಲಿ ಹೋಗಿ ನೆಲೆಸುತ್ತಾರೆ. ರಾಷ್ಟ್ರೀಯತೆಯ ಬಗ್ಗೆ ಬಹಳ ಮಾತಾಡುವವರು ತಮ್ಮ ಮಕ್ಕಳು ವಿದೇಶದಲ್ಲಿಯೇ ಇರುವಂತೆ ನೋಡಿಕೊಳ್ಳುತ್ತಾರೆ. ಇದು ಜಾಗತೀಕರಣದ ಫಲ. ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಮಾರುಕಟ್ಟೆಯ ನೀತಿಗಳು ಜಗತ್ತನ್ನು ಆಳುತ್ತಿರುವಾಗ ಬಂಡವಾಳ ಹೂಡಿದವರು ಒಂದೇ ದೇಶಕ್ಕೆ ಅಂಟಿಕೊಂಡಿರುವುದಕ್ಕೆ ಸಾಧ್ಯವೇ ಇಲ್ಲ. ತಾಂತ್ರಿಕತೆಯ ಅಂತಾರಾಷ್ಟ್ರೀಯಕರಣವು ದುಡ್ಡಿದ್ದವರು ವಿಶ್ವದ ಯಾವ ಮೂಲೆಯಲ್ಲದಾರೂ ಬದುಕುವಂತೆ ಮಾಡಿದೆ. ಉನ್ನತ ಶಿಕ್ಷಣದ ಜಾಗತೀಕರಣದ ಪರವಾಗಿ ಯುನೆಸ್ಕೋ ಮತ್ತು ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಸಂಸ್ಥೆಯು ಜಂಟಿಯಾಗಿ ಕೆಲಸ ಮಾಡುತ್ತಿದೆ. ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಜರಾತಿ , ಮತ್ತು ದೇಶೀಯ ಮತ್ತು ವಿದೇಶೀಯ ವಿದ್ಯಾಲಯಗಳು ಒಟ್ಟಿಗೆ ಕೆಲಸ ಮಾಡುವ ಅವಳಿ ಕಾರ್ಯಕ್ರಮಗಳು ಇವತ್ತು ನಮ್ಮಲ್ಲಯೂ ಚಾಲ್ತಿಗೆ ಬಂದಿವೆ. ಇದರಿಂದಾಗಿ ಶಿಕ್ಷಣವು ಇವತ್ತು ಒಂದು ರಾಜ್ಯದ, ಒಂದು ವಿಶ್ವವಿದ್ಯಾಲಯದ, ಅಥವಾ ಒಂದು ದೇಶದ ಗಡಿಗೆ ಸೀಮಿತವಾಗಿ ಉಳಿಯದೆ ‘ಸೀಮಾತೀತವಾಗಿದೆ. ಇಂಥ ಬೆಳವಣಿಗೆಗಳ ಪರಿಣಾಮವಾಗಿ ವಿವಿಧ ಖಂಡಗಳಲ್ಲಿ ಓಡಾಡುವ ಅಂತರರಾಷ್ಟ್ರೀಯ ಪ್ರಜೆಗಳು ನಿರ್ಮಾಣವಾಗುತ್ತಿದ್ದಾರೆ. ಸುನಕ್ ಅವರು ಅಂತ ಒಬ್ಬ ಪ್ರಜೆ. ಅವರು ಅಂತಿಮವಾಗಿ ಯಾವುದೇ ದೇಶವನ್ನು ಬಂಡವಾಳ ಹೂಡಿಕೆ ಮತ್ತು ಲಾಭದ ದೃಷ್ಟಿಯಿಂದ ಮಾತ್ರ ನೋಡುತ್ತಾರೆ. ಅಂಥ ಕಡೆ ರಾಷ್ಟ್ರೀಯತೆಯ ಚೌಕಟ್ಟು ತುಂಬ ದುರ್ಬಲವಾಗಿರುತ್ತದೆ.
ಸುನಕ್ ಬಗ್ಗೆ ಹೆಮ್ಮೆ ಪಡಲು ತೊಂದರೆಯಿಲ್ಲ. ಆದರೆ ಅದರಿಂದ ಭಾರತಕ್ಕೆ ವಿಶೇಷ ಲಾಭವೇನೂ ಆಗದು.
– ಪ್ರೊ.ಪುರುಷೋತ್ತಮ ಬಿಳಿಮಲೆ, ಜಾನಪದ ವಿದ್ವಾಂಸರು




