ದಲಿತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವೇನು?

2 years ago

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಸಾಂಸ್ಥಿಕ ದೌರ್ಜನ್ಯ ಮತ್ತು ತಾರತಮ್ಯದ ಕಾರಣ ತಮ್ಮ ಮಕ್ಕಳನ್ನು ಕಳೆದುಕೊಂಡ ಅಬೇದ ತಾಡ್ವಿ ಮತ್ತು ರಾಧಿಕಾ ವೇಮುಲ ಅವರು ಐದು ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ನಲ್ಲಿ 700 ಪುಟಗಳ ಅಫಿಡವಿಟ್ ಸಲ್ಲಿಸಿದ್ದರು.

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ತಾರತಮ್ಯದ ಕುರಿತು ಉತ್ತರದಾಯಿತ್ವವನ್ನು ನಿರ್ಧರಿಸಬೇಕು, ಜಾತಿ ಆಧಾರಿತ ತಾರತಮ್ಯದ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತಹ ವ್ಯವಸ್ಥೆ ರೂಪಿಸಬೇಕು ಎಂದು ಅರ್ಜಿಯಲ್ಲಿ ವಿವರಿಸಿದ್ದರು. ಪಾಯಲ್ ತಾಡ್ವಿ ಮತ್ತು ರೋಹಿತ್ ವೇಮುಲ ಮಾತ್ರವಲ್ಲದೆ ಇತರ ಅನೇಕ ದಲಿತ ವಿದ್ಯಾರ್ಥಿಗಳು ಸಾಂಸ್ಥಿಕ ಹತ್ಯೆಗೆ ಒಳಗಾಗಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಈ ವಿಷಯ ಗಂಭೀರ ಸ್ವರೂಪವಾಗಿದೆ ಎಂದು ಹೇಳಿದೆ. ಆದರೆ ಇದಕ್ಕೆ ತಾರ್ಕಿಕ ಅಂತ್ಯ ಹೇಳುವ ಕಕ್ಕುಲತೆ, ಕಾಳಜಿ ಪ್ರದರ್ಶಿಸಲಿಲ್ಲ.

ಇದಕ್ಕೆ ಉತ್ತರವಾಗಿ ತನಿಖೆ ನಡೆಸಲು ಯುಜಿಸಿ ಒಂಬತ್ತು ಸದಸ್ಯರ ಸಮಿತಿ ನೇಮಕ ಮಾಡಿತ್ತು.

ಕಳೆದ ಐದು ವರ್ಷಗಳಲ್ಲಿ ಈ ಸಮಿತಿ ಕೇವಲ ಮೂರು ಬಾರಿ ಸಭೆ ಸೇರಿದೆ. ಈ ಸಮಿತಿಗೆ ಸದಸ್ಯರನ್ನು ಇದುವರೆಗಿನ ಅವರ ಅನುಭವ ಮತ್ತು ಕಾರ್ಯದಕ್ಷತೆ ಆಧರಿಸಿ ಆಯ್ಕೆ ಮಾಡಲಿಲ್ಲ. ಬದಲಿಗೆ ಅವರ ರಾಜಕೀಯ ಒಲವನ್ನು ಆಧರಿಸಲಾಗಿದೆ. ಉದಾಹರಣೆಗೆ ಸಮಿತಿಯ ಮುಖ್ಯಸ್ಥರಾದ ಶೈಲೇಶ್ ಜಾಲ ಭಟ್ನಾಗರ್ ವಿವಿಯ ಉಪ ಕುಲಪತಿಗಳಾಗುವುದಕ್ಕೂ ಮೊದಲು ಎಬಿವಿಪಿಯ ಉಪಾಧ್ಯಕ್ಷರಾಗಿದ್ದರು.

ಮತ್ತೊಬ್ಬ ಸದಸ್ಯರಾದ ವಿಜಯಶಂಕರ್ ಮಿಶ್ರಾ ಸತ್ಯವತಿ ಕಾಲೇಜಿನ ಪ್ರಾಂಶುಪಾಲರಾಗಿದ್ದ ಸಂದರ್ಭದಲ್ಲಿ ಮೀಸಲಾತಿ ರೋಸ್ಟರ್ ನೀತಿಯನ್ನು ಪಾಲಿಸಲಿಲ್ಲ ಎನ್ನುವ ಆರೋಪವಿದೆ. ಪ. ಜಾತಿ, ಪ. ಪಂಗಡದ ಉದ್ಯೋಗಿಗಳು ನಿವೃತ್ತರಾದ ನಂತರ ಮರಳಿ ನೇಮಕಾತಿ ಮಾಡುವಾಗ ಹೊರಡಿಸಿದ ಸುತ್ತೋಲೆಯಲ್ಲಿ ಉದ್ದೇಶಪೂರ್ವಕವಾಗಿ ಅದು ಮೀಸಲು ಹುದ್ದೆ ಎಂದು ಹೇಳುತ್ತಿರಲಿಲ್ಲ.

ಒಟ್ಟಾರೆಯಾಗಿ ಜಾತಿ ತಾರತಮ್ಯ ಮತ್ತು ದೌರ್ಜನ್ಯದ ಕುರಿತು ತನಿಖೆ ನಡೆಸಲು ಈ ಸಮಿತಿಯ ಸದಸ್ಯರಿಗೆ ಯಾವುದೇ ಅನುಭವ, ಅರ್ಹತೆಯಿಲ್ಲ ವಿಶ್ವಾಸಾರ್ಹತೆ ಪ್ರಶ್ನಾರ್ಹವಾಗಿದೆ. ಇವರು ಸಲ್ಲಿಸುವ ಅಂತಿಮ ವರದಿಯ ನ್ಯಾಯಪರತೆಯೂ ಅನುಮಾನಾಸ್ಪದವಾಗಿದೆ.

ಹಾಗಿದ್ದ ಪಕ್ಷದಲ್ಲಿ ಉನ್ನತ ಶಿಕ್ಷಣದಲ್ಲಿ ಸಾಂಸ್ಥಿಕ ಹತ್ಯೆಗಳಿಗೆ ಕೊನೆ ಎಂದು? ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದರೂ ಯಾವುದೇ ಪರಿಹಾರ ಸಿಗಲಿಲ್ಲ ಎಂದರೆ ದಲಿತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವೇನು?

ಈ ಯಕ್ಷ ಪ್ರಶ್ನೆಯನ್ನು ಯಾರಿಗೆ ಕೇಳಬೇಕು, ಯಾರು ಉತ್ತರಿಸುತ್ತಾರೆ ಎನ್ನುವುದೇ ಗೊತ್ತಿಲ್ಲದಂತಹ ಅರಾಜಕ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ

– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply