ಹರ್ಷಮಂದರ್ ನಿವಾಸದ ಮೇಲೆ ದಾಳಿ: ಮನುಷ್ಯತ್ವದ ಧ್ವನಿ ಕುಗ್ಗಿಸುವ ಹುನ್ನಾರ
ಮಿತ್ರರೇ, ಕಳೆದ ಎರಡು ದಿನಗಳಿಂದ ಮಂಡ್ಯದ ಘಟನೆ ಕುರಿತತೆ ಸಮಾನ ಮನಸ್ಕರ ಜೊತೆ ತೊಡಗಿಸಿಕೊಂಡಿದ್ದ ಕಾರಣ, ಕೇಂದ್ರ ಸರ್ಕಾರದ ಈ ಮೂರನೇ ದರ್ಜೆಯ ಕ್ರಿಯೆಯ ಬಗ್ಗೆ ಬರೆಯಲಾಗಿರಲಿಲ್ಲ. ಹರ್ಷ ಮಂದರ್, ಇಂಗ್ಲೀಷ್ ದಿನ ಪತ್ರಿಕೆ ಓದುವವರನ್ನು ಹೊರತುಪಡಿಸಿ, ಉಳಿದ ಕನ್ನಡಿಗರಿಗೆ ಅಪರಿಚಿತ ವ್ಯಕ್ತಿ. ಆದರೆ, ಇವರು ಇಂದಿನ ಕಲುಷಿತ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತದಲ್ಲಿ ದಿಟ್ಟ ಧ್ವನಿಯಲ್ಲಿ ಮಾತನಾಡುತ್ತಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಪ್ರಮುಖರು.
ವೃತ್ತಿಯಲ್ಲಿ ಐ.ಎ.ಎಸ್. ಅಧಿಕಾರಿಯಗಿ ಸೇವೆ ಸಲ್ಲಿಸುತ್ತಿದ್ದಾಗ, 20002ರ ಗೋದ್ರಾ ಘಟನೆಯಿಂದ ತತ್ತರಿಸಿದ ಅಮಾಯಕರ ಬದುಕನ್ನು ನೋಡಿದ ಹರ್ಷಮಂದರ್, ತಮ್ಮ ಹುದ್ದೆಗೆ ರಾಜಿನಾಮೆ ನೀಡಿ, ಅಂದಿನಿಂದ ಬಡವರ, ನೊಂದವರ ಕಣ್ಣೀರು ಒರೆಸುವ ಕ್ರಿಯೆಯಲ್ಲಿ ತಲ್ಲೀನರಾಗಿದ್ದಾರೆ.
ಅನೇಕ ಸ್ವಯಂ ಸೇವಾ ಸಂಘಟನೆಗಳಲ್ಲಿ ಮಾರ್ಗ ದರ್ಶಕರಾಗಿ ದುಡಿಯುತ್ತಿದ್ದಾರೆ. ವಿದೇಶದಿಂದ ದೇಣಿಗೆ ಸ್ವೀಕರಿಸಿದ ಆರೋಪದ ಮೇಲೆ ಆರ್ಥಿಕ ತನಿಖಾ ದಳ ಇವರ ನಿವಾಸದ ಮೇಲೆ ದಾಳಿ ಮಾಡಿದೆ. ಇಂದಿಗೂ ಸಹ ನೊಂದಣಿಯಾಗದ ಮತ್ತು ಮುಂದಿನ ವರ್ಷಕ್ಕೆ ನೂರು ವರ್ಷ ತುಂಬುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ನೂರಕ್ಕೂ ಹೆಚ್ಚು ಅಂಗ ಘಟಕಗಳಿಂದ ಹತ್ತೊಂಬತ್ತು ಸಾವಿರ ಕೋಟಿಗೂ ಹೆಚ್ಚು ಹಣವನ್ನು ವಿದೇಶಗಳಿಂದ ಸಂಗ್ರಹಿಸಿದೆ.
ಆದರೆ, ಭಾರತದ ಅರಣ್ಯದಲ್ಲಿ ಅತಂತ್ರರಾಗಿರುವ ಆದಿವಾಸಿಗಳ ಅಭಿವೃದ್ಧಿಗೆ, ದೇಶದ ಬಡವರು ಮತ್ತು ಅಲ್ಪಸಂಖ್ಯಾತರ ಮಕ್ಕಳು ಮತ್ತು ಅವರ ಶಿಕ್ಷಣ, ಆರೋಗ್ಯ ಹೀಗೆ ಹಲವಾರು ಆಯಾಮಗಳಲ್ಲಿ ದುಡಿಯುತ್ತಿರುವ ಸ್ವಯಂ ಸೇವಾ ಸಂಘಟನೆಗಳು ವಿದೇಶದಿಂದ ದೇಣಿಗೆ ಸ್ವೀಕರಿಸದಂತೆ ನಿರ್ಬಂಧ ಹೇರಲಾಗಿದೆ. ಈಗ ಧರ್ಮದ ಹೆಸರಿನಲ್ಲಿ ವಿಷ ಹರಡುವವರಿಗೆ ಮಾತ್ರ ದೇಣಿಗೆ ಪಡೆಯಲು ಅವಕಾಶ. ಕಣ್ಣಿಗೆ ರಾಚುವಂತಹ ಇಂತಹ ಕಹಿಸತ್ಯಗಳು ನಮ್ಮ ಮುಂದಿರುವಾಗ ಜನತೆಯ ಮುಂದೆ ಇಡಬೇಕಾದ ಮಾಧ್ಯಮಗಳು ಮೌನ ವಹಿಸಿವೆ. ಪತ್ರಿಕೋದ್ಯಮ ಕತ್ತೆ ಕಾಯುವ ಉದ್ಯೋಗಕ್ಕಿಂತ ಕೀಳಾಗಿದೆ. ಹಿಂದೆ ನಮ್ಮ ಹಳ್ಳಿಗಳಲ್ಲಿ ದಡ್ಡರನ್ನು ಮಡಿವಾಳರು ಕತ್ತೆ ಕಾಯಲಿಕ್ಕೆ ನೇಮಿಸಿ, ಅವರು ಕೆರೆ ಮತ್ತು ಕಾಲುವೆಯಲ್ಲಿ ಬಟ್ಟೆ ಒಗೆಯುತ್ತಿದ್ದರು.
ಹರ್ಷಮಂದರ್ ಅವರು ನಿರಂತರವಾಗಿ ಹಿಂದೂ ಇಂಗ್ಲಿಷ್ ದಿನಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದಾರೆ. 2018ರಿಂದ ಅವರ ಹಲವಾರು ಕೃತಿಗಳು ಸಹ ಹೊರಬಂದಿವೆ. ಹಸಿವು, ಅಪೌಷ್ಟಿಕತೆ, ಬಡತನ, ಹಾಗೂ ಈ ದೇಶದಲ್ಲಿ ಅಲ್ಪ ಸಂಖ್ಯಾತರಾಗಿ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂಬ ಏಕೈಕ ಕಾರಣಕ್ಕಾಗಿ ನಮ್ಮೊಡನೆ ಇದ್ದೂ ಇಲ್ಲದಂತೆ, ಪರಕೀಯರಂತೆ ಬದುಕುತ್ತಿರುವ ಮುಸ್ಲಿಂರ ಬಗ್ಗೆ ದೊಡ್ಡದಾಗಿ ಧ್ವನಿ ಎತ್ತಿದವರಲ್ಲಿ ಹರ್ಷ ಮಂದರ್ ಪ್ರಮುಖರು. ಆಸಕ್ತರು ಹಿಂದು ಪತ್ರಿಕೆಯ ಸಂಗ್ರಹದಲ್ಲಿರುವ ಇವರ ಅಂಕಣ ಬರಹಗಳನ್ನು ಗಮನಿಸಬಹುದು. 2016ರಲ್ಲಿ ಅವರು ಬರೆದಿದ್ದ ಒಂದು ಅಂಕಣ ಬರಹದ ಅನುವಾದ ಈ ಕೆಳಗಿನಂತಿದೆ ಗಮನಿಸಿ.
“2016ರ ಬೇಸಿಗೆಯಲ್ಲಿ, ಭಾರತದ ಗ್ರಾಮೀಣ ನಿವಾಸಿಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಜನರು ಸತತ ಮೂರನೇ ವರ್ಷ ಬರಗಾಲದ ವಿರುದ್ಧ ಹೋರಾಡುತ್ತಿದ್ದಾರೆ. ಮಳೆ ವಿಫಲವಾದರೆ, ತಮ್ಮ ಬೆಳೆಗಳಿಗೆ ನೀರುಣಿಸಲು ಮುಖ್ಯವಾಗಿ ಮಳೆನೀರನ್ನು ಅವಲಂಬಿಸಿರುವ ರೈತರು – ಬಹುಪಾಲು ಇಳುವರಿ ಅಥವಾ ಕಡಿಮೆ ಇಳುವರಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಅಂತರ್ಜಲ ಕುಸಿದು ನದಿಗಳು ಮತ್ತು ಜಲಾಶಯಗಳು ಬತ್ತಿ ಹೋಗುವುದರೊಂದಿಗೆ ನೀರಾವರಿಯ ಮೇಲೆ ಅವಲಂಬಿತರಾದವರ ಬದುಕು ಶೋಚನೀಯವಾಗಿದೆ. 2014-15ರಲ್ಲಿ ಶೇಕಡಾ 0.2 ರಷ್ಟು. ಕಡಿಮೆಯಾದ ಕೃಷಿ ಬೆಳವಣಿಗೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಹವಾಮಾನ ಬದಲಾವಣೆಯ ಪರಿಣಾಮದಿಂದ ಯಾವ, ಚೇತರಿಕೆಯ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ಸ್ವಾತಂತ್ರ್ಯದ ನಂತರದ ಭಾರತದಲ್ಲಿ ಮೊದಲ ನಾಲ್ಕು ದಶಕಗಳಲ್ಲಿ ರಾಷ್ಟ್ರದ ಜವಾಬ್ದಾರಿಗಳ ಅನಾಸಕ್ತಿಯ ವಿಸ್ತರಣೆಯು ಪ್ರಜಾಪ್ರಭುತ್ವೀಕರಣ ಹೆಸರಿನಲ್ಲಿ ಅನೇಕ ರೀತಿಯ ಆರ್ಥಿಕ ಕೊರತೆಗಳಿಗೆ ಕಾರಣವಾಗಿದೆ. ದೇಶದ ಸಾರ್ವಜನಿಕ ನೀತಿಯು ಬರ ಮತ್ತು ಆಹಾರದ ಕೊರತೆಯಿಂದ ಸೃಷ್ಟಿಯಾದ ಸಮಸ್ಯೆಗಳಿಂದ ಹತಾಶರಾದ ಜನರನ್ನು ರಕ್ಷಿಸುವ ಪ್ರಯತ್ನ ಪ್ರಗತಿಪರ ದಿಕ್ಕುಗಳಲ್ಲಿ ಸಾಗಿದ್ದರೂ ಸಹ, ವಿರೋಧಾಭಾಸದ ಸಾರ್ವಜನಿಕ ನೀತಿಗಳು ಮತ್ತು ಸ್ವೀಕಾರಾರ್ಹವಲ್ಲದ ಅಂಶಗಳು ವಸಾಹತುಶಾಹಿ ಕಾಲದಿಂದಲೂ ಮುಂದುವರಿದಿವೆ. ಜಾಗತೀಕರಣದ ನಂತರ, ಭಾರತವು ಕ್ರಮೇಣ ತನ್ನ ಪಥವನ್ನು ಬದಲಿಸಿದೆ ಜೊತೆಗೆ ಬಡ ಮತ್ತು ಸಂಕಷ್ಟದ ನಾಗರಿಕರನ್ನು ಸಂಪೂರ್ಣವಾಗಿ ಕಡೆಗಣೆಸಿದೆ. ಕೆಲವು ಸಂದರ್ಭಗಳಲ್ಲಿ ಇಂದಿನ ಕೇಂದ್ರ ಸರ್ಕಾರದ ಆಡಳಿತ ವೈಖರಿಯು ವಸಾಹತುಶಾಹಿ ಆಡಳಿತಗಾರರಿಗಿಂತ ಹೆಚ್ಚು ಅಮಾನುಷವಾಗಿದೆ”
ಹರ್ಷ ಮಂದರ್ ಅವರ ಇಂತಹ ಪ್ರಾಮಾಣಿಕ ಮಾತುಗಳು ಆಳುವ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪದಂತೆ ಪರಿಣಮಿಸಿದೆ. ಇದರ ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಅತಿ ಹೆಚ್ಚು ಪ್ರತಿಭಟಿಸಿದವರು ಇವರು. ನವದೆಹಲಿಯ ಜಂತರ್ ಮಂತರ್ ನಲ್ಲಿ ದೊಡ್ಡ ನಾಗರೀಕರ ಪ್ರತಿಭಟನೆ ಮಾಡಿದರು. ಜೊತೆಗೆ ದೆಹಲಿಯ ಜಾಮಿಯ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಈ ಕುರಿತು ಭಾಷಣ ಮಾಡುತ್ತಿರುವಾಗ ಪೊಲೀಸರು ಲಗ್ಗೆ ಇಟ್ಟು ಅಶ್ರುವಾಯು ಮತ್ತು ಲಾಠಿ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ಚದುರಿಸಿದ್ದರು. ಸ್ವತಃ ಪ್ರಧಾನಿಯೇ ಹರ್ಷ ಮಂದರ್ ಅವರನ್ನು ನಗರ ನಕ್ಸಲ ಎಂದು ಹಂಗಿಸಿದ್ದುಂಟು.
ರೈತರು, ಕೃಷಿ ಕೂಲಿಮಾರ್ಮಿಕರು ಮತ್ತು ಬಡವರ ಬಗ್ಗೆ ಧ್ವನಿ ಎತ್ತುವವರೆಲ್ಲಾ ನಗರ ನಕ್ಸಲರು, ರಾಮನ ಬಗ್ಗೆ, ಮಂದಿರದ ಬಗ್ಗೆ, ಹಿಂದೂ ಧರ್ಮದ ರಕ್ಷಣೆಯ ಬಗ್ಗೆ ಮಾತನಾಡುವವರು ಮಾತ್ರ ಈ ದೇಶದಲ್ಲಿ ರಾಷ್ಟ್ರ ಭಕ್ತರು ಎಂಬ ನಿರ್ಣಯಕ್ಕೆ ಬರಲಾಗಿದೆ. ಮೂಲತಃ ಸಿಖ್ ಸಮುದಾಯಕ್ಕೆ ಸೇರಿದ ಹರ್ಷಮಂದರ್ ಅವರು “ಮನಮೋಹನ್ ಸಿಂಗ್ ಸರ್ಕಾರದ ಅತ್ಯಂತ ಶಕ್ತಿಶಾಲಿ ಕ್ಲಬ್” ಎಂದು ಪರಿಗಣಿಸಲಾದ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ 2010 ರಿಂದ 2012ರವರೆಗೆ ಸೋನಿಯಾ ಗಾಂಧಿಯವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಕ್ಕಾಗಿ ಮಂದರ್ ಅವರನ್ನು ಕಾಂಗ್ರೆಸ್ ಬಗ್ಗೆ ಸಹಾನುಭೂತಿ ಇರುವ ವ್ಯಕ್ತಿ ಎಂದು ಕರೆಯಲಾಗುತ್ತದೆ. 2018ರಲ್ಲಿ ಅವರು ರಚಿಸಿದ ಕೃತಿಯೊಂದರಲ್ಲಿ ಸೋನಿಯಾ ಗಾಂಧಿಯನ್ನು ಭಾರತದ ಬಡವರ ಚಾಂಪಿಯನ್ ಎಂದು ಕರೆದಿದ್ದರು. ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯಲ್ಲಿ ಸೋನಿಯಾ ಜೊತೆಗೂಡಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ನಂತರ ಅದು ಕಾಯ್ದೆಯಾಯಿತು.
ಹರ್ಷ ಮಂದರ್ 2002ರ ಗೋದ್ರಾ ಗಲಭೆಯಿಂದ ನೊಂದು ಬೇಸತ್ತು ತಮ್ಮ ಐ.ಎ.ಎಸ್. ಅಧಿಕಾರಿ ಹುದ್ದೆಗೆ ರಾಜಿನಾಮೆ ನೀಡಿದರು. ಈ ದೇಶದ ಆಡಳಿತ ಹೇಗೆ ನಡೆಯುತ್ತದೆ ಎಂಬುದನ್ನು ಅವರು ಇಂದಿರಾ ಗಾಂಧಿ ಹತ್ಯೆಯ ಸಂಬಂಧ ತಮ್ಮ ಅನುಭವವನ್ನು ದಾಖಲಿಸಿದ್ದಾರೆ. ಅವರು ಆಗತಾನೆ ಐ.ಎ.ಎಸ್. ಮುಗಿಸಿ ಅಧಿಕಾರಿಯಾಗಿ ನೇಮಕವಾಗಿದ್ದರು. “ನಾನು ನೋಡಿದ ಭಯಾನಕತೆಯನ್ನು ನನಗೆ ನಂಬಲಾಗಲಿಲ್ಲ. ನಾನು ಮೊದಲ ಬಾರಿಗೆ ಗಲಭೆಯನ್ನು ನೋಡಿದೆ, ಮತ್ತು ಅದು ನನಗೆ ಜೀವಮಾನದ ಗಾಯವನ್ನು ಉಂಟುಮಾಡಿತು. ನಾನು ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಹೇಳುತ್ತಿದ್ದೆ. ಆದರೆ, ಅವರು ನಿರಾಕರಿಸಿದರು, ನಮಗೆ ಆದೇಶವಿದೆ ಎಂದು ಹೇಳಿದರು. ಸೈನ್ಯಕ್ಕೆ ಕರೆ ಮಾಡಲು ನನಗೆ ಅಧಿಕಾರವಿದೆ ಎಂದು ನಾನು ನೆನಪಿಸಿಕೊಂಡೆ, ಅದನ್ನು ನಾನು ಮಾಡಿದೆ” ಎಂದು ದಾಖಲಿಸಿರುವ ಹರ್ಷ ಮಂದರ್ ನಂತರ ಗೋದ್ರಾ ಗಲಭೆಯಿಂದ ಮನ ನೊಂದು ಹುದ್ದೆಗೆ ರಾಜಿನಾಮೆ ನೀಡಿದರು.
ಬಡವರ ಪಾಲಿಗೆ ಆಸರೆಯಾಗಿರುವ ಹರ್ಷಮಂದರ್, ಈಗ ಆಡಳಿತಾರೂಢ ಬಿ.ಜೆ.ಪಿ. ಸರ್ಕಾರಕ್ಕೆ ದೇಶ ದ್ರೋಹಿಯಾಗಿದ್ದಾರೆ. ಇದು ನಮ್ಮ ಭಾರತ.
- ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



