ಸಿದ್ದರಾಮಯ್ಯ ಕುರ್ಚಿ ಬಿಡುವುದರ ಕುರಿತು ಸತೀಶ್ ಜಾರಕಿಹೊಳಿ ಹೇಳಿದ್ದೇನು?

6 months ago

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಉಪಹಾರಕೂಟದ ಮೂಲಕ ಅಧಿಕಾರ ಹಸ್ತಾಂತರ ಕುರಿತಾದ ವಿಚಾರಕ್ಕೆ ಇತಿಶ್ರೀ ಹಾಡಿದ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಬಿಡುವುದು ಖಚಿತ. ಅದು 30 ತಿಂಗಳಾದ ನಂತರ ಆಗಬಹುದು ಅಥವಾ ಸ್ವಲ್ಪ ಸಮಯದ ನಂತರವೂ ಆಗಬಹುದು. ಅವರು ಅಧಿಕಾರ ಬಿಡುವುದಂತೂ ನಿಶ್ಚಿತ. ಆದರೆ, ಅದು ಯಾವಾಗ ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಅಧಿಕಾರ ಹಸ್ತಾಂತರ ವಿಚಾರ ಬಗೆಹರಿದಂತಾಗಿದೆ. ಎಲ್ಲರೂ ಹೈಕಮಾಂಡ್ ತೀರ್ಮಾನವನ್ನು ಎದುರು ನೋಡುತ್ತಿದ್ದೇವೆ ನಾವು ಒತ್ತಡ ಹೇರುವುದಿಲ್ಲ ಎಂದರು.

ಅಧಿಕಾರ ಮತ್ತು ರಾಜಕೀಯ ಯಾರಿಗೂ ಶಾಶ್ವತವಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈರಾಗ್ಯದ ಕುರಿತಾದ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಹೇಳಿರುವುದು ನಿಜ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಅವರು ತಮ್ಮ ಕುರ್ಚಿಯನ್ನು ಬಿಡಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಅದು ಯಾವಾಗ ಬೇಕಾದರೂ ಆಗಬಹುದು. ಅವಧಿ ಮುಗಿದ ನಂತರವಾದರೂ ಅವರ ಕುರ್ಚಿ ಬಿಡಬೇಕಲ್ಲ ಎಂದರು.

ಮುಖ್ಯಮಂತ್ರಿ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ಇದನ್ನು ಯಾವ ರೀತಿ ಹೈಕಮಾಂಡ್ ಬಗೆಹರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಪಕ್ಷದ ಕಾರ್ಯಕರ್ತರು ಒಳ್ಳೆಯ ವಾತಾವರಣದಲ್ಲಿ ಎಲ್ಲವೂ ಇತ್ಯರ್ಥವಾಗಬೇಕು ಎಂದು ಬಯಸುತ್ತಿದ್ದಾರೆ ಎಂದರು.

Leave a Reply