ಡಿ ಕೆ ಶಿವಕುಮಾರ್ – ಸತೀಶ್ ಜಾರಕಿಹೊಳಿ ಭೇಟಿ

5 months ago

ಬೆಂಗಳೂರು: ಅಧಿಕಾರ ಹಸ್ತಾಂತರ ವಿಚಾರವಾಗಿ ಸದ್ದಿಲ್ಲದೆ ಕಾರ್ಯತಂತ್ರ ನಡೆಸುತ್ತಿರುವ ಡಿಸಿಎಂ ಡಿ ಕೆ ಶಿವಕುಮಾರ್ ಇದೀಗ ಹೈಕಮಾಂಡ್ ನತ್ತ ಬೆರಳು ತೋರಿಸುತ್ತಲೇ ಶಾಸಕರು ಸಚಿವರ ಬೆಂಬಲ ಕ್ರೂಡೀಕರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಮಾತುಕತೆ ನಡೆಸಿದ ನಂತರ ಶಿವಕುಮಾರ್ ಅವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಇದಕ್ಕೂ ಮೊದಲು ಅವರು ಕಾಂಗ್ರೆಸ್ ಕಾರ್ಯಕರ್ತರ ಸಮಿತಿ ಸದಸ್ಯ ಹಾಗೂ ಹಿರಿಯ ಮಂತ್ರಿ ಕೆ.ಜೆ. ಜಾರ್ಜ್ ಅವರ ಜೊತೆ ಮಾತುಕತೆ ನಡೆಸಿದ್ದರು. ಈ ಮೂವರು ಮಂತ್ರಿಗಳು ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವುದು ವಿಶೇಷ. ಅದರಲ್ಲೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಗಾಗಿ ಪಟ್ಟು ಹಿಡಿದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಜೊತೆ ಡಿ ಕೆ ಶಿವಕುಮಾರ್ ನಡೆಸಿರುವ ಮಾತುಕತೆ ಗಮನ ಸೆಳೆದಿದೆ.

ಈ ಮಾತುಕತೆಯ ಸಮಯದಲ್ಲಿ ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಕುರಿತು ತಾವು ಮುಖ್ಯಮಂತ್ರಿಯಾಗಲು ನನಗೆ ನಿಮ್ಮ ಸಹಕಾರ ಬೇಕಾಗಿದೆ. ನಾನು ಮುಖ್ಯಮಂತ್ರಿಯಾದ ತಕ್ಷಣ ಕೆಪಿಸಿಸಿ ಅಧ್ಯಕ್ಷ ಸ್ಥಾನ ದೊರೆಯಲಿದ್ದು, ಆ ಹುದ್ದೆಗೆ ನಿಮ್ಮನ್ನು ನೇಮಿಸುವಂತೆ ಹೈಕಮಾಂಡಿಗೆ ಮನವಿ ಮಾಡುತ್ತೇನೆ ಎಂದು ಹೇಳಿರುವುದಾಗಿ ಗೊತ್ತಾಗಿದೆ.

ತಾವು ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತದ ಕಡೆ ಗಮನಹರಿಸಿದರೆ ನೀವು ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಕಡೆ ಗಮನಹರಿಸುವ ಮೂಲಕ ಪಕ್ಷ ಮತ್ತು ಸರ್ಕಾರಕ್ಕೆ ಹೊಸ ವರ್ಚಸ್ಸು ತಂದು ಕೊಡಬಹುದಾಗಿದೆ. ಇದಕ್ಕಾಗಿ ನಾವಿಬ್ಬರೂ ಒಟ್ಟಿಗೆ ಕೆಲಸ ಮಾಡಬೇಕು ಎಂದು ಪ್ರತಿಪಾದಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಜಾರಕಿಹೊಳಿ ಅವರು ಈ ವಿಷಯದಲ್ಲಿ ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿರುವುದಾಗಿ ತಿಳಿದು ಬಂದಿದೆ.

ಇನ್ನೂ ಈ ಮಾತುಕತೆಯ ಕುರಿತಂತೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಸತೀಶ್ ಜಾರಕಿಹೊಳಿ, ತಾವು ಪಕ್ಷ ಸಂಘಟನೆ ಚುನಾವಣೆ ಸರ್ಕಾರದ ಕಾರ್ಯವೈಖರಿ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ಹೇಳಿದಂತೆ ನಾವು ಕೇಳುತ್ತೇವೆ ಎಂದರು.

ಎಲ್ಲರಿಗೂ ಇರುವಂತೆ ಶಿವಕುಮಾರ್ ಅವರಿಗೆ ಆಸೆಯಿದೆ. ಅವರು ಮುಖ್ಯಮಂತ್ರಿ ಆಗಬೇಕು ಎನ್ನುತ್ತಿದ್ದಾರೆ. ಈಗಾಗಲೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಎಂದು ಹೈಕಮಾಂಡ್ ತೀರ್ಮಾನಿಸಿ ಪ್ರಕಟಿಸಿದೆ. ಈಗ ಗೊಂದಲ ಉಂಟಾಗಿದ್ದು, ಹೈಕಮಾಂಡ್ ಇದನ್ನು ಬಗೆಹರಿಸುವ ಕೆಲಸ ಮಾಡಬೇಕು ಎಂದರು.

ಈ ವಿಚಾರವಾಗಿ ತಮ್ಮ ನಿಲುವು ತಿಳಿಸಲು ಸಮಯ ಕೊಡುವಂತೆ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದೇನೆ. ಅವರು ಅವಕಾಶ ನೀಡಿದರೆ ಭೇಟಿಯಾಗಿ ಎಲ್ಲ ವಿಚಾರವನ್ನು ಹೇಳುತ್ತೇನೆ. ಸಹಜವಾಗಿ ಡಿ ಕೆ ಶಿವಕುಮಾರ್ ಅವರು ಎಲ್ಲರ ಅಭಿಪ್ರಾಯ ಕೇಳಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಈಗಾಗಲೇ ಅವರು ಎಲ್ಲ ಶಾಸಕರು ಮಂತ್ರಿಗಳ ಜೊತೆ ಮಾತನಾಡಿದ್ದಾರೆ. ಬಹುಷಃ ನಾನೇ ಕೊನೆಯವನು ಇರಬೇಕು ಎಂದರು.

ಈ ನಡುವೆ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಚರ್ಚೆ ನಡೆಸಲು ಸತೀಶ್ ಜಾರಕಿಹೊಳಿ ಅವರು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಔತಣ ಕೂಟವನ್ನು ರದ್ದುಪಡಿಸಿದ್ದಾರೆ.ದಲಿತ ಸಮುದಾಯದ ಶಾಸಕರು ಮತ್ತು ಮಂತ್ರಿಗಳಿಗೆ ಜಾರಕಿಹೊಳಿ ಅವರು ಔತಣಕೂಟ ಏರ್ಪಡಿಸಿದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಜೊತೆಗಿನ ಮಾತುಕತೆಯ ನಂತರ ಈ ಸಭೆಯನ್ನು ರದ್ದು ಪಡಿಸಲು ತೀರ್ಮಾನಿಸಿದ್ದಾರೆ ಎಂದು ಗೊತ್ತಾಗಿದೆ.

Leave a Reply