ಹಿಜಬ್ ಸುತ್ತಮುತ್ತ ನಡೆದ ಚರ್ಚೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು ಹೇಳಿದ್ದೇನು?

2 years ago

ಬೆಂಗಳೂರು: ಹಿಜಬ್ ನಿಷೇಧ ಆದೇಶವನ್ನು ಇನ್ನೂ ವಾಪಸ್ ಪಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿದ್ದರಾಮಯ್ಯ ಹಿಜಬ್ ನಿಷೇಧ ಆದೇಶ ಹಿಂಪಡೆಯಲು ಸೂಚನೆ ನೀಡಿರುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರ ಶಾಲಾಕಾಲೇಜುಗಳಲ್ಲಿ ಹಿಜಬ್ ಧರಿಸುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶ ವಾಪಸ್ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿತ್ತು. ಸರ್ಕಾರದ ನಿರ್ಧಾರವನ್ನು ಕೇಳಿದ್ದ ಬಿಜೆಪಿ ನಾಯಕರು ಕೆರಳಿ ಹೇಳಿಕೆಗಳನ್ನು ನೀಡುತ್ತಿದ್ದರು.

ಸಿದ್ದು ಹೇಳಿಕೆ ವಿರೋಧಿಸಿ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಿಜಬ್ಗೆ ಅವಕಾಶ ಮಾಡಿಕೊಡುವುದಾಗಿ ಹೇಳುವ ಮೂಲಕ ಶಿಕ್ಷಣ ಕ್ಷೇತ್ರವನ್ನು ಕಲುಷಿತಗೊಳಿಸುವ ಕೆಲಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದರು.

ಮುಖ್ಯಮಂತ್ರಿಯವರಿಂದ ಇಂತಹ ಹೇಳಿಕೆಯನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಕನಿಷ್ಠಪಕ್ಷ ಶಾಲಾಕಾಲೇಜುಗಳಿಗೆ ಹೋಗುವ ಮಕ್ಕಳನ್ನು ರಾಜಕೀಯದಿಂದ ದೂರ ಇಡುವ ಕೆಲಸ ಮಾಡಬೇಕಿತ್ತು ಎಂದರು.

ಒಂದೆಡೆ ಹಿಜಬ್ಗೆ ಅವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಾರೆ. ಮತ್ತೊಂದು ಕಡೆ ಸರ್ಕಾರ ಪರೀಕ್ಷೆಗೆ ಹೋಗುವ ವಿದ್ಯಾರ್ಥಿ, ವಿದ್ಯಾರ್ಥಿನಿಯರ, ತಾಯಂದಿರ ತಾಳಿ, ಕಾಲುಂಗುರ ತೆಗೆದಿಟ್ಟು ಹೋಗಲು ತಿಳಿಸುತ್ತದೆ. ರಾಜ್ಯ ಸರಕಾರದ ಈ ನಡವಳಿಕೆ ನಿಜವಾಗಿಯೂ ತಲೆತಗ್ಗಿಸುವಂಥದ್ದು ಎಂದರು.

ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಲ್ಪಸಂಖ್ಯಾತ ಮಹಿಳೆಯರನ್ನು ಕೂಡ ದೇಶದ ಜನತೆ ಗೌರವದಿಂದ ಕಾಣಬೇಕು. ಪ್ರತಿಯೊಬ್ಬ ಅಲ್ಪಸಂಖ್ಯಾತ ಮಹಿಳೆಯೂ ಗೌರವ, ಸ್ವಾಭಿಮಾನದಿಂದ ಬಾಳಿ ಬದುಕಬೇಕೆಂಬ ದೃಷ್ಟಿಕೋನದೊಂದಿಗೆ ತ್ರಿವಳಿ ತಲಾಖ್ನ್ನು ರದ್ದು ಮಾಡಿದ್ದಾರೆ. ನೀವೇನು ಮಾಡಿದ್ದೀರಿ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಹತಾಶೆಯಿಂದ ಸಮಾಜ ಸಮಾಜದ ಮಧ್ಯೆ, ಧರ್ಮ ಧರ್ಮದ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಮಾಡುತ್ತಿದೆ. ಸರಕಾರದ ಒಡೆದಾಳುವ ನೀತಿಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಇದರ ಬೆನ್ನಲ್ಲೇ ರಾಜ್ಯದಲ್ಲಿ ಹಿಜಾಬ್ ನಿಷೇಧ ಆಗಿಯೇ ಇಲ್ಲ ಎಂದು ಹೇಳಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಎಲ್ಲಿ ಡ್ರೆಸ್ ಕೋಡ್ ಇದೆ ಅಲ್ಲಿ ಮಾತ್ರ ನಿಷೇಧವಿದೆ. ಮಹಿಳೆಯರು ಎಲ್ಲಿ ಬೇಕು ಅಲ್ಲಿ ಹಾಕಿಕೊಂಡು ಓಡಾಡುತ್ತಿದ್ದಾರೆ. ಹಿಜಾಬ್ ನಿಷೇಧ ಆಗಿಯೇ ಇಲ್ಲ ಎಂದು ತಮ್ಮ ಸರ್ಕಾರದ ನಿರ್ಧಾರ ಕುರಿತು ಪ್ರತಿಕ್ರಿಯಿಸಿದ್ದಾರೆ.

1984ರಲ್ಲಿ ಸಮಗ್ರ ಶಿಕ್ಷಣ ಕಾಯ್ದೆ ಅಡಿ ಡ್ರೆಸ್ ಕೊಡ್ ಮಾಡಲಾಗಿದ್ದು, ಅದನ್ನು ಹಿಂದೆ ಪಡೆಯುವ ಮಾತನಾಡಿದ್ದಾರೆ. ಈಗಾಗಲೇ ಕೊರ್ಟ್ನಲ್ಲಿ ಪ್ರಕರಣ ಇದೆ. ರಾಜಕೀಯ ಕಾರಣಕ್ಕೆ ಹಿಜಬ್ ಪ್ರಸ್ತಾಪ ಮಾಡಿದ್ದಾರೆ. ಇದನ್ನು ಖಂಡಿಸುತ್ತೇನೆ ಎಂದರು.

ರಾಜ್ಯದಲ್ಲಿ ಬರ ಇದೆ. ಮಹಿಳೆಯರಿಗೆ ರಕ್ಷಣೆ ಇಲ್ಲ. ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ತೊಳೆಸುವ ಮಟ್ಟಕ್ಕೆ ಇಳಿದಿದೆ. ಬರ ಇದೆ ಇದೆಲ್ಲ ಮರೆತು ರಾಜ್ಯದ ಜನರ ದಾರಿ ತಪ್ಪಿಸಲು ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಶಾಲಾ ಮಕ್ಕಳಲ್ಲಿ ಒಡಕುಂಟು ಮಾಡುವ ಉದ್ದೇಶ ಇದರಲ್ಲಿದೆ ಎಂದರು.

ಭವಿಷ್ಯದಲ್ಲಿ ಇದು ದೊಡ್ಡ ಮಟ್ಟದ ಪರಿಣಾಮ ಬೀರುತ್ತದೆ. ಮಕ್ಕಳಲ್ಲಿ ತಾವು ಯಾವ ಧರ್ಮಕ್ಕೆ ಸೇರಿದ್ದೇವೆ ಎಂದು ಬೀಜ ಬಿತ್ತುವ ಪ್ರಯತ್ನ ನಡೆಯುತ್ತಿದೆ. ಹಿಜಬ್ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇರಾಕ್ ಇರಾನ್ನಲ್ಲಿ ಮಹಿಳೆಯರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಾರೆ. ಸುಪ್ರಿಂಕೋರ್ಟ್ನಲ್ಲಿ ಪ್ರಕರಣ ಇದ್ದಾಗ ಈ ಬಗ್ಗೆ ಹೇಳಿಕೆ ನೀಡುವ ಅಗತ್ಯ ಏನಿತ್ತು ಎಂದರು.

ಈ ವಿವಾದಗಳ ನಡುವೆ ಸ್ಪಷ್ಟೀಕರಣ ನೀಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಹಿಜಬ್ ವಿಚಾರದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಸಿಗುವಂತೆ, ಯಾರಿಗೂ ತೊಂದರೆಯಾಗದಂತೆ ಕಾನೂನಿನ ಇತಿಮಿತಿಯಲ್ಲಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ರೀತಿಯ ಆಲೋಚನೆಗಳನ್ನು ಮಾಡಿಯೇ ಹೇಳಿಕೆ ನೀಡಿರುತ್ತಾರೆ. ನಾನು ಅವರೊಂದಿಗೆ ಚರ್ಚೆ ಮಾಡುತ್ತೇನೆ. ಮುಖ್ಯಮಂತ್ರಿಯವರ ಹೇಳಿಕೆ ಜೊತೆಯಲ್ಲೇ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾನು ಪಂಚೆ ಹಾಕುತ್ತೇನೆ. ಉಡುಗೆ-ತೊಡುಗೆಗಳು ಭಿನ್ನವಾಗಿರುತ್ತವೆ.ಆಹಾರ ಪದ್ಧತಿಯಲ್ಲೂ ಅದೇ ರೀತಿಯ ವಿಭಿನ್ನತೆ ಇರುತ್ತವೆ. ಅದು ಅವರ ಸ್ವಾತಂತ್ರ್ಯ. ಅದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿಯವರೇ ಹೇಳಿದ್ದಾರೆ ಎಂದರು.

ಇದು ಶಿಕ್ಷಣ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ನ್ಯಾಯಾಂಗ ಹಾಗೂ ಇತರ ವ್ಯವಸ್ಥೆಯಿಂದಲೂ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಹಾಗಾಗಿ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ನಂತರ ಪ್ರತಿಕ್ರಿಯೆ ನೀಡುವುದಾಗಿ ಹೇಳಿದರು.

ಹಿಜಬ್ ನಿಷೇಧ ಹೇರಿದ್ದ ಬಿಜೆಪಿಯನ್ನು ಜನ ಸೋಲಿಸಿದ್ದಾರೆ. ನಮ್ಮನ್ನು ಗೆಲ್ಲಿಸಿದ್ದಾರೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡುವುದು ನಮ್ಮ ಕರ್ತವ್ಯ. ಇದು ಸೂಕ್ಷ್ಮ ವಿಚಾರ ಆಗಿರುವುದರಿಂದ ರಾಜಕೀಯ ಮಾಡುವ ಅಗತ್ಯವಿಲ್ಲ ಎಂದರು.

ಈ ಗೊಂದಲದ ನಡುವೆ ಸ್ಪಷ್ಟೀಕರಣ ನೀಡಿರುವ ಸಿದ್ದರಾಮಯ್ಯ, ಹಿಜಬ್ ನಿಷೇಧ ಆದೇಶ ವಾಪಸ್ ಪಡೆಯುವ ಕುರಿತಂತೆ ಸರ್ಕಾರ ಇನ್ನೂ ತೀರ್ಮಾನ ಪ್ರಕಟಿಸಿಲ್ಲ ಎಂದರು.

ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಶುಕ್ರವಾರ ಮೈಸೂರಿನ ಕವಲಂದೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾರೋ ಒಬ್ಬರು ಈ ಬಗ್ಗೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಹಿಜಬ್ ನಿಷೇಧ ವಾಪಾಸ್ ಬಗ್ಗೆ ಯೋಚನೆ ಮಾಡಿದ್ದೀವಿ. ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

Leave a Reply