ಬೆಂಗಳೂರು: ರಾಜ್ಯದ ಜನತೆ ಮತ್ತು ರೈತರು ಬರಗಾಲದ ಸಂಕಷ್ಟದಲ್ಲಿ ಸಿಲುಕಿರುವಾಗ ವಿಶೇಷ ವಿಮಾನದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಆಪ್ತರ ಬಳಗ ದೌಲತ್ತು ಪ್ರದರ್ಶಿಸಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಕಳೆದ ಏಳು ತಿಂಗಳಿಂದ ಈಚೆಗೆ ಮುನ್ನೂರೈವತ್ತಕ್ಕೂ ಹೆಚ್ಚು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. 60 ಲಕ್ಷಕ್ಕೂ ಹೆಚ್ಚು ರೈತರ ಬೆಳೆದ ಬೆಳೆ ನಾಶವಾಗಿದೆ. ಹಿಂದೆಂದೂ ಕಂಡು ಕೇಳರಿಯದ ಬರಗಾಲ ರಾಜ್ಯವನ್ನು ಆವರಿಸಿದೆ. ಇಂತಹ ಸನ್ನಿವೇಶದಲ್ಲಿ ವೆಚ್ಚಕ್ಕೆ ಕಡಿವಾಣ ಹಾಕಿ ಮೇಲ್ಪಂಕ್ತಿ ಹಾಕಿಕೊಡಬೇಕಾದ ಮುಖ್ಯಮಂತ್ರಿಯವರು ವಿಶೇಷ ವಿಮಾನದಲ್ಲಿ ಹಾರಾಟ ಮಾಡಿ ಮೋಜು ಮಜಾ ಮಾಡುತ್ತಿದ್ದಾರೆ ಎಂದರು.
ಬರಗಾಲಕ್ಕೆ ಸಂಬಂಧಿಸಿದಂತೆ ಕೇಂದ್ರದ ನೆರವು ಕೋರಲು ದಿಲ್ಲಿಗೆ ಪ್ರಯಾಣ ಬೆಳೆಸಲು ಐಷಾರಾಮಿ ವಿಶೇಷ ವಿಮಾನದಲ್ಲಿ ಪ್ರಯಾಣಿಸಿದ್ದನ್ನು ಸಿಎಂ ಆಪ್ತ ಸಚಿವ ಜಮೀರ್ ಅಹಮದ್ ಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇವರಿಗೆ ರಾಜ್ಯದ ಜನ ಸಂಕಷ್ಟದಲ್ಲಿ ಇರುವ ಬಗ್ಗೆ ಪರಿಜ್ಞಾನವಿಲ್ಲ ಎಂದರು.
ತಾವೊಬ್ಬ ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಈಗ ಮಜಾವಾದಿ ಸಿದ್ದರಾಮಯ್ಯ ಆಗಿದ್ದಾರೆ. ಇವರು ಜಾರಿಗೊಳಿಸಿರುವ ಶಕ್ತಿ ಯೋಜನೆ ಪರಿಣಾಮವಾಗಿ ಮಕ್ಕಳು ಶಾಲೆಗೆ ಹೋಗಲು ಸರಿಯಾಗಿ ಬಸ್ ಬಾರದೆ ಜೆಸಿಬಿಗಳಲ್ಲಿ ಪ್ರಯಾಣಿಸುವ ಅಮಾನವೀಯ ಪರಿಸ್ಥಿತಿ ಗ್ರಾಮೀಣ ಭಾಗದಲ್ಲಿ ವರದಿಯಾಗಿವೆ. ಇಂತಹ ಸಮಯದಲ್ಲಿ ಇವರು ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸುವುದು ಎಷ್ಟು ಸರಿ? ಇದು ಬೇಕಿತ್ತೆ ಎಂದರು.
ಒಂದು ಕಡೆ ರೈತರು ಬರಗಾಲದಿಂದ ತತ್ತರಿಸಿದ್ದಾರೆ. ಕೋವಿಡ್ ಮಹಾಮಾರಿ ರಾಜ್ಯವನ್ನು ಆವರಿಸುವ ಆತಂಕ ಮತ್ತೊಂದೆಡೆ ಕಾಡುತ್ತಿದೆ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ವಿಶೇಷ ವಿಮಾನದಲ್ಲಿ ಹಾರಾಟ ಮಾಡಬೇಕಿತೇ? ಈ ದೌಲತ್ತು ಇಂತಹ ಸನ್ನಿವೇಶದಲ್ಲೀ ಬೇಕಾಗಿತ್ತೇ ? ಎಂದರು.




